ಮಹಿಳೆಯ ವೇಷದಲ್ಲಿ ಬಿನ್ ಲಾಡೆನ್‌ ಎಸ್ಕೇಪ್... ಸ್ಫೋಟಕ ಸಂಗತಿ ಬಿಚ್ಚಿಟ್ಟ ಅಮೆರಿಕದ ಮಾಜಿ ಸಿಐಎ ಅಧಿಕಾರಿ! Osama bin Laden ​

Osama bin Laden
Published on

ನವದೆಹಲಿ: ಅಂತಾರಾಷ್ಟ್ರೀಯ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ ( Osama bin Laden ) ಗೆ ಸಂಬಂಧಿಸಿದ ಸುದ್ದಿಯೊಂದು ಇದೀಗ ಭಾರಿ ಸಂಚಲನ ಮೂಡಿಸಿದೆ. 2001, ಸೆಪ್ಟೆಂಬರ್ 11 ರಲ್ಲಿ ಅಮೆರಿಕದ ಮೇಲೆ ಭೀಕರ ಭಯೋತ್ಪಾದಕ ದಾಳಿ ನಡೆಸಿದ ಬಳಿಕ ಮೋಸ್ಟ್ ವಾಂಟೆಡ್ ಉಗ್ರನಾಗಿ ಗುರುತಿಸಿಕೊಂಡಿದ್ದ ಅಲ್ ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಒಮ್ಮೆ ಟೋರಾ ಬೋರಾ ಪರ್ವತಗಳಿಂದ ಮಹಿಳೆಯ ವೇಷದಲ್ಲಿ ತಪ್ಪಿಸಿಕೊಂಡಿದ್ದ ಎಂದು ಅಮೆರಿಕ ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ)ಯ ಮಾಜಿ ಅಧಿಕಾರಿ ಜಾನ್ ಕಿರಿಯಾಕೌ ಇತ್ತೀಚೆಗಷ್ಟೇ ಬಹಿರಂಗಪಡಿಸಿದ್ದಾರೆ.

ಎಎನ್​ಐ ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಜಾನ್ ಕಿರಿಯಾಕೌ, ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಮಹಿಳೆಯ ವೇಷ ಧರಿಸಿ ಒಮ್ಮೆ ಟೋರಾ ಬೋರಾದಿಂದ ತಪ್ಪಿಸಿಕೊಂಡಿದ್ದ. ಇದಕ್ಕೆ ಅಲ್ ಖೈದಾ ಕಾರ್ಯಕರ್ತನೊಬ್ಬ ಸಹಾಯ ಮಾಡಿದ್ದ. ಆ ಕಾರ್ಯಕರ್ತ ಯುಎಸ್​ ಸೇನೆಯ ಸೆಂಟ್ರಲ್ ಕಮಾಂಡರ್‌ಗೆ ಅನುವಾದಕನಾಗಿ ಕೆಲಸ ಮಾಡುತ್ತಿದ್ದ. ಅಮೆರಿಕ ಸೇನೆಗೆ ನುಸುಳಿದ್ದ ಆತ ವಾಸ್ತವವಾಗಿ ಅಲ್​ ಖೈದಾ ಕಾರ್ಯಕರ್ತನೆಂಬುದು ಗೊತ್ತಿರಲಿಲ್ಲ ಎಂದು ಕಿರಿಯಾಕೌ ಹೇಳಿದ್ದಾರೆ. ಅಂದಹಾಗೆ, ಕಿರಿಯಾಕೌ ಅವರು ಸುಮಾರು 15 ವರ್ಷಗಳ ಕಾಲ ಅಮೆರಿಕ ಕೇಂದ್ರ ಗುಪ್ತಚರ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಪಾಕಿಸ್ತಾನದಲ್ಲಿ ಸಿಐಎ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಮುಖ್ಯಸ್ಥರೂ ಆಗಿದ್ದರು.

2001 ಸೆ. 11ರಂದು ಅಮೆರಿಕದ ಮೇಲೆ ಅಲ್​ಖೈದಾ ನಡೆಸಿದ ದಾಳಿಯ ನಂತರ, ಅಮೆರಿಕ ತುಂಬಾ ಸಂಯಮದಿಂದ ವರ್ತಿಸಿತು ಮತ್ತು ಅಫ್ಘಾನಿಸ್ತಾನದಲ್ಲಿ ಬಾಂಬ್ ದಾಳಿ ನಡೆಸಲು ತಿಂಗಳುಗಟ್ಟಲೆ ತಾಳ್ಮೆಯಿಂದ ಕಾಯಿತು. ಈ ಹಂತದಲ್ಲಿಯೇ ಅಲ್ ಖೈದಾ ಕಾರ್ಯಕರ್ತ ಅನುವಾದಕನಾಗಿ ಅಮೆರಿಕ ಸೇನೆಗೆ ನುಸುಳಿದ್ದ. ಟೋರಾ ಬೋರಾ ಪರ್ವತಗಳ ಮೇಲೆ ಅಮೆರಿಕ ದಾಳಿ ನಡೆಸಿದಾಗ ಬಿನ್ ಲಾಡೆನ್ ತಪ್ಪಿಸಿಕೊಳ್ಳಲು ಈತನೇ ಅವಕಾಶ ಮಾಡಿಕೊಟ್ಟನು. ಆ ಸಮಯದಲ್ಲಿ ಬಿನ್ ಲಾಡೆನ್ ಮಹಿಳೆಯ ವೇಷ ಧರಿಸಿ ಕತ್ತಲೆಯ ಮರೆಯಲ್ಲಿ ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಪಾಕಿಸ್ತಾನಕ್ಕೆ ಪರಾರಿಯಾಗಿದ್ದ ಎಂದು ಕಿರಿಯಾಕೌ ಹೇಳಿದ್ದಾರೆ.

ಇನ್ನು ಬಿನ್​ ಲಾಡೆನ್ ಪರಾರಿಯಾದ ಬಳಿಕ ಅಮೆರಿಕದ ಭಯೋತ್ಪಾದನಾ ನಿಗ್ರಹದ ಗಮನವು ಪಾಕಿಸ್ತಾನದ ಕಡೆಗೆ ಬದಲಾಯಿತು. ಆ ಸಂದರ್ಭದಲ್ಲಿ, ಆಗಿನ ಪಾಕಿಸ್ತಾನಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರೊಂದಿಗೆ ಮಾತುಕತೆ ಸಹ ನಡೆಸಲಾಯಿತು. ಈ ವೇಳೆ ಮುಷರಫ್​, ಅಮೆರಿಕದಿಂದ ಆರ್ಥಿಕ ಮತ್ತು ಮಿಲಿಟರಿ ಸಹಾಯಕ್ಕೆ ಬದಲಾಗಿ ದೇಶದಲ್ಲಿ ಅಮೆರಿಕದ ಕಾರ್ಯಾಚರಣೆಗಳಿಗೆ ಅವಕಾಶ ನೀಡಿದರು. ಅದೇ ಸಮಯದಲ್ಲಿ, ಪಾಕಿಸ್ತಾನಿ ಗುಂಪು ಲಷ್ಕರ್-ಇ-ತೊಯ್ಬಾ ಮತ್ತು ಅಲ್-ಖೈದಾ ನಡುವಿನ ಸಂಪರ್ಕವನ್ನು ಸಿಐಎ ಗುರುತಿಸಿತು. ಇದು ಅಮೆರಿಕದ ಗುಪ್ತಚರ ವ್ಯವಹಾರಗಳಲ್ಲಿ ಒಂದು ಮೈಲಿಗಲ್ಲು ಎಂದು ಕಿರಿಯಾಕೌ ಅವರು ಹೇಳಿದರು.

ಇದೇ ವೇಳೆ ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಮಾತನಾಡಿದ ಜಾನ್ ಕಿರಿಯಾಕೌ, 2002ರಲ್ಲಿ, ಯುಎಸ್ ಗುಪ್ತಚರ ಸಂಸ್ಥೆಗಳಿಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಭೀತಿ ಇತ್ತು. ಏಕೆಂದರೆ, ಆ ಸಮಯದಲ್ಲಿ ಭಾರತದಲ್ಲಿ ಸಂಸತ್ತಿನ ಮೇಲೆ ನಡೆದ ದಾಳಿ ಮತ್ತು ಆಪರೇಷನ್ ಪರಾಕ್ರಮ್​ನಿಂದ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಈ ಸನ್ನಿವೇಶವನ್ನು ಗಂಭೀರವಾಗಿ ಪರಿಗಣಿಸಿ, ನಾವು ನಮ್ಮ ಅಮೆರಿಕನ್ ಕುಟುಂಬಗಳನ್ನು ಇಸ್ಲಾಮಾಬಾದ್‌ನಿಂದ ಸ್ಥಳಾಂತರಿಸಿದ್ದೆವು. ಆ ಸಮಯದಲ್ಲಿ, ವಾಷಿಂಗ್ಟನ್‌ನ ಗಮನವು ಅಲ್-ಖೈದಾ ಮತ್ತು ಅಫ್ಘಾನಿಸ್ತಾನದ ಮೇಲೆ ಮಾತ್ರ ಇತ್ತು. ಹೀಗಾಗಿ, ಭಾರತದ ಬಗ್ಗೆ ನಾವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಲಿಲ್ಲ ಎಂದು ತಿಳಿಸಿದರು.

2008ರ ಮುಂಬೈ ದಾಳಿಯ ಬಗ್ಗೆ ಮಾತನಾಡಿದ ಕಿರಿಯಾಕೌ, ಪಾಕಿಸ್ತಾನ ಬೆಂಬಲಿತ ಕಾಶ್ಮೀರಿ ಭಯೋತ್ಪಾದಕ ಗುಂಪುಗಳು ಈ ದಾಳಿಯ ಹಿಂದೆ ಇವೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ನಂಬುತ್ತವೆ. ಪಾಕಿಸ್ತಾನ, ಭಾರತದಲ್ಲಿ ಭಯೋತ್ಪಾದನೆಯನ್ನು ಹರಡುತ್ತಿದೆ. ಸಂಸತ್ತು ಮತ್ತು ಮುಂಬೈ ದಾಳಿಯ ನಂತರ ಭಾರತ ಕೂಡ ಸಂಯಮವನ್ನು ತೋರಿಸಿದೆ. ಆದರೆ, ಈಗ ಭಾರತದ ಕಾರ್ಯತಂತ್ರ ಬದಲಾಗಿದೆ. ಯುದ್ಧ ಬಂದಾಗಲೆಲ್ಲಾ ಪಾಕಿಸ್ತಾನ, ಭಾರತ ಮುಂದೆ ಸೋಲಬೇಕಾಗುತ್ತದೆ ಎಂದು ಎಚ್ಚರಿಸಿದ ಕಿರಿಯಾಕೌ, ಭಾರತೀಯರನ್ನು ನಿರಂತರವಾಗಿ ಪ್ರಚೋದಿಸುವುದರಲ್ಲಿ ಅರ್ಥವಿಲ್ಲ ಎಂದರು.

ಅಂದಹಾಗೆ, ಒಸಾಮಾ ಬಿನ್ ಲಾಡೆನ್​ನನ್ನು ಅಂತಿಮವಾಗಿ 2011ರ ಮೇ 2ರಂದು ಪಾಕಿಸ್ತಾನದ ಅಬ್ಬೊಟ್ಟಾಬಾದ್‌ನಲ್ಲಿ ಅಮೆರಿಕದ ನೌಕಾಪಡೆಯ SEAL ತಂಡ ನಡೆಸಿದ 'ಆಪರೇಷನ್ ನೆಪ್ಚೂನ್ ಸ್ಪಿಯರ್' ಕಾರ್ಯಾಚರಣೆಯಲ್ಲಿ ಹತ್ಯೆಯಾದರು. ಆ ಸಮಯದಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರು ಈ ಸುದ್ದಿಯನ್ನು ಘೋಷಿಸಿದರು. ಬಿನ್​ ಲಾಡೆನ್​ ದೇಹವನ್ನು ಅರಬ್ಬೀ ಸಮುದ್ರದಲ್ಲಿ ಎಸೆಯಲಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net