ಕರ್ನೂಲ್ ಬಸ್ ದುರಂತ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್​: ಅಪಘಾತಕ್ಕೀಡಾದ ಬೈಕ್​ ಸವಾರನಿಂದಲೇ ದೂರು ದಾಖಲು! Kurnool Bus Accident

Kurnool Bus Accident
Published on

Kurnool Bus Accident : ಕರ್ನೂಲ್ ಬಸ್ ದುರಂತ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಅಪಘಾತಕ್ಕೆ ಕಾರಣವಾದ ಬೈಕ್​ನಲ್ಲಿದ್ದ ಮತ್ತೊಬ್ಬ ಸವಾರ ಎರ್ರಿಸ್ವಾಮಿ ದೂರು ದಾಖಲಿಸಿದ್ದು, ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಸ್​ ಅಪಘಾತಕ್ಕೂ ಮುನ್ನ, ಬೈಕ್ ಸವಾರ ಮತ್ತು ಇನ್ನೊಬ್ಬ ವ್ಯಕ್ತಿ ಪೆಟ್ರೋಲ್ ಪಂಪ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವ ವಿಡಿಯೋ ಬೆಳಕಿಗೆ ಬಂದಿತು. ಆ ಸಮಯದಲ್ಲಿ ಅವರಿಬ್ಬರು ಮದ್ಯದ ಅಮಲಿನಲ್ಲಿದ್ದರು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ, ತನಿಖೆ ನಡೆಸಿದ ಪೊಲೀಸರು ಬೈಕ್‌ನಿಂದ ಬಿದ್ದು ಸಾವಿಗೀಡಾದ ವ್ಯಕ್ತಿಯನ್ನು ಕರ್ನೂಲ್​ ಜಿಲ್ಲೆಯ ಪ್ರಜಾ ನಗರದ ನಿವಾಸಿ ಶಿವಶಂಕರ್ ಎಂದು ಗುರುತಿಸಿದರು. ಶಿವಶಂಕರ್ ಜೊತೆ ಬೈಕ್‌ನಲ್ಲಿದ್ದ ಮತ್ತೊಬ್ಬ ಯುವಕನನ್ನು ಎರ್ರಿಸ್ವಾಮಿ ಎಂದು ಪತ್ತೆಹಚ್ಚಲಾಯಿತು. ಬಳಿಕ ಪೊಲೀಸರು ಎರ್ರಿಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅಪಘಾತದ ಅಸಲಿ ಕಾರಣ ಬಹಿರಂಗವಾಯಿತು.

ಎರ್ರಿಸ್ವಾಮಿ ನೀಡಿರುವ ದೂರಿನ ಪ್ರಕಾರ, ಶಿವಶಂಕರ್ ನಿರ್ಲಕ್ಷ್ಯದಿಂದಲೇ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆಯಿತು. ಬಸ್ ಅಪಘಾತಕ್ಕೂ ಮುನ್ನವೇ ಬೈಕ್ ಅಪಘಾತ ಸಂಭವಿಸಿತು. ಶಿವಶಂಕರ್ ಮತ್ತು ನಾನು ಮದ್ಯಪಾನ ಮಾಡಿದ್ದೆವು. ಮದ್ಯದ ಅಮಲಿನಲ್ಲಿ ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆಯಿತು. ಈ ವೇಳೆ ಶಿವಶಂಕರ್ ಸ್ಥಳದಲ್ಲೇ ಮೃತಪಟ್ಟನು. ನಾನು ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದೆ. ಆದರೆ, ಶಿವಶಂಕರ್​ನ ಮೃತ ದೇಹವನ್ನು ಪಕ್ಕಕ್ಕೆ ಸರಿಸಲು ಪ್ರಯತ್ನಿಸಿದೆ. ಈ ವೇಳೆ ನಮ್ಮ ಬೈಕ್‌ಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದಾಗ, ಬೈಕ್​ ರಸ್ತೆಯ ಮಧ್ಯದಲ್ಲಿ ಬಿದ್ದಿತು. ಇದರಿಂದಾಗಿ, ಬಸ್ ಬೈಕನ್ನು ಎಳೆದೊಯ್ದಿತು. ಸ್ವಲ್ಪ ಸಮಯದ ನಂತರ, ಬಸ್ ಬೆಂಕಿಗೆ ಆಹುತಿಯಾಯಿತು ಮತ್ತು ಅಪಘಾತ ಸಂಭವಿಸಿತು ಎಂದು ಎರ್ರಿಸ್ವಾಮಿ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಎಫ್‌ಐಆರ್ ಪ್ರತಿಯಲ್ಲಿ ಚಾಲಕನ ಅಜಾಗರೂಕ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಇಬ್ಬರ ಹೆಸರನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಪೊಲೀಸರು ಖಾಸಗಿ ಬಸ್ ಚಾಲಕನನ್ನು ಎ 1 ಮತ್ತು ಅದರ ಮಾಲೀಕರನ್ನು ಎ 2 ಎಂದು ಸೇರಿಸಿದ್ದಾರೆ.

ಏನಿದು ಘಟನೆ?

ಶುಕ್ರವಾರ (ಅ.24) ಮುಂಜಾನೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನತೇಕೂರಿನಲ್ಲಿ ಭೀಕರ ಅಪಘಾತಕ್ಕೀಡಾಯಿತು. ರಸ್ತೆ ಮೇಲೆ ಬಿದ್ದಿದ್ದ ಬೈಕ್​ಗೆ ಡಿಕ್ಕಿ ಹೊಡೆದ ಬಳಿಕ ಬಸ್,​ ಬೈಕನ್ನು ಸುಮಾರು 300 ಮೀಟರ್‌ಗಳಷ್ಟು ಎಳೆದುಕೊಂಡು ಹೋಗಿದೆ. ಈ ವೇಳೆ ಬೆಂಕಿಯ ಕಿಡಿ ಹರಡಿ, ಇಡೀ ಬಸ್ ಬೆಂಕಿಗೆ ಆಹುತಿಯಾಯಿತು. ಈ ಅಪಘಾತದಲ್ಲಿ ಇಬ್ಬರು ಮಕ್ಕಳು ಮತ್ತು ಆರು ಮಹಿಳೆಯರು ಸೇರಿದಂತೆ ಒಟ್ಟು 19 ಜನರು ಸಜೀವ ದಹನವಾದರು. ಅಪಘಾತದ ಸಮಯದಲ್ಲಿ ಇಬ್ಬರು ಚಾಲಕರು ಮತ್ತು ನಾಲ್ವರು ಮಕ್ಕಳು ಸೇರಿದಂತೆ ಒಟ್ಟು 46 ಜನರು ಬಸ್‌ನಲ್ಲಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net