

ಇಂದೋರ್: ಐಸಿಸಿ ಮಹಿಳಾ ಏಕದಿನ ವಿಶ್ವಕಪ್-2025 ಟೂರ್ನಮೆಂಟ್ ಆಡಲು ಭಾರತಕ್ಕೆ ಆಗಮಿಸಿರುವ ಆಸ್ಟ್ರೇಲಿಯಾದ ( Cricket Australia ) ಮಹಿಳಾ ಕ್ರಿಕೆಟಿಗರಿಗೆ ಮಧ್ಯಪ್ರದೇಶದ ಇಂದೋರ್ನಲ್ಲಿ ಕಹಿ ಅನುಭವವಾಗಿದೆ. ಬೈಕ್ ಸವಾರನೊಬ್ಬ ಇಬ್ಬರು ಆಟಗಾರ್ತಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ವಾಸ್ತವವಾಗಿ ನಡೆದಿದ್ದೇನೆಂದರೆ, ಆಸ್ಟ್ರೇಲಿಯಾದ ಮಹಿಳಾ ತಂಡ ಪಂದ್ಯವನ್ನಾಡಲು ಮಧ್ಯಪ್ರದೇಶದ ಇಂದೋರ್‌ಗೆ ತೆರಳಿದೆ. ಈ ಸಂದರ್ಭದಲ್ಲಿ, ಗುರುವಾರ (ಅ.23) ಇಬ್ಬರು ಮಹಿಳಾ ಕ್ರಿಕೆಟಿಗರು ತಾವು ತಂಗಿದ್ದ ರಾಡಿಸನ್ ಬ್ಲೂ ಹೋಟೆಲ್ ಬಳಿಯ ಕೆಫೆಗೆ ಕಾಲ್ನಡಿಗೆಯಲ್ಲಿ ಹೋಗಿದ್ದರು. ಈ ವೇಳೆ ಇಂದೋರ್ನ ಖಜ್ರಾನಾ ರಸ್ತೆಯಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್ ಮೂಲಕ ಅಶ್ಲೀಲ ಸನ್ನೆಗಳನ್ನು ಮಾಡುತ್ತಾ ಅವರನ್ನು ಹಿಂಬಾಲಿಸಿದ್ದಾನೆ. ಅಲ್ಲದೆ, ಇಬ್ಬರಲ್ಲಿ ಓರ್ವ ಆಟಗಾರ್ತಿಯ ತೋಳನ್ನು ಹಿಡಿದು ಎಳೆಯಲು ಸಹ ಆರೋಪಿ ಪ್ರಯತ್ನಿಸಿದ್ದಾನೆ. ಅಷ್ಟರಲ್ಲಿ, ಎಚ್ಚೆತ್ತುಕೊಂಡ ಆಟಗಾರ್ತಿಯರು ತಮ್ಮ ತಂಡದ ಭದ್ರತಾ ವ್ಯವಸ್ಥಾಪಕ ಡ್ಯಾನಿ ಸಿಮ್ಮನ್ಸ್‌ಗೆ ತುರ್ತು ಸಂದೇಶ ಕಳುಹಿಸಿದ್ದಾರೆ.
ಇದಾದ ತಕ್ಷಣ ಸಿಮನ್ಸ್ ಅವರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಶಂಕಿತನನ್ನು ಗುರುತಿಸಲಾಗಿದೆ. ಆರೋಪಿಯನ್ನು ಖಜ್ರಾನಾದ 30 ವರ್ಷದ ಅಕೀಲ್ ಎಂದು ಪತ್ತೆಹಚ್ಚಲಾಗಿದ್ದು, ಆತನನ್ನು ಬಂಧಿಸಲಾಗಿದೆ.
ಈ ವಿಷಯದ ಬಗ್ಗೆ ಮಾತನಾಡಿದ ಡ್ಯಾನಿ ಸಿಮ್ಮನ್ಸ್, ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ, ನಮ್ಮ ಆಟಗಾರ್ತಿಯರು ಹತ್ತಿರದ ಕೆಫೆಗೆ ಹೋದರು. ಸ್ವಲ್ಪ ಸಮಯದ ನಂತರ, ಅವರು ನನಗೆ ತುರ್ತು ಸಂದೇಶವನ್ನು ಕಳುಹಿಸಿದರು. ಒಬ್ಬ ವ್ಯಕ್ತಿ ಅವರನ್ನು ಹಿಂಬಾಲಿಸುತ್ತಿದ್ದಾನೆ ಮತ್ತು ಅವರನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಿದರು. ನಾವು ತಕ್ಷಣ ಪ್ರತಿಕ್ರಿಯಿಸಿ ಅವರನ್ನು ಸುರಕ್ಷಿತವಾಗಿ ಮರಳಿ ಕರೆತಂದೆವು. ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದ್ದಾನೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ಪೊಲೀಸರು, ನಾವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 74 ಮತ್ತು 78 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ನಾವು ಆರೋಪಿಯನ್ನು ತ್ವರಿತವಾಗಿ ಗುರುತಿಸಲು ಸಾಧ್ಯವಾಯಿತು ಎಂದರು.
ಇನ್ನು ಟೂರ್ನಿಯ ವಿಚಾರಕ್ಕೆ ಬರುವುದಾದರೆ, ಸೆಪ್ಟೆಂಬರ್ 30 ರಂದು ಪ್ರಾರಂಭವಾದ ಮಹಿಳಾ ಏಕದಿನ ವಿಶ್ವಕಪ್, ನವೆಂಬರ್ 2 ರಂದು ನಡೆಯುವ ಫೈನಲ್‌ನೊಂದಿಗೆ ಮುಕ್ತಾಯವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಈ ಮೆಗಾ ಟೂರ್ನಮೆಂಟ್‌ನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಭಾರತ ಸೆಮಿಫೈನಲ್ ತಲುಪಿವೆ. (ಏಜೆನ್ಸೀಸ್)