ಏಕದಿನ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಆಸ್ಟ್ರೇಲಿಯಾ; ಟೀಂ ಇಂಡಿಯಾ ಬಳಿಕ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರ

Australia Team
Published on

ಕ್ಯಾನ್​ಬೆರಾ: ಇಲ್ಲಿನ ಮನುಕಾ ಓವಲ್​ನಲ್ಲಿ ನಡೆಯುತ್ತೊರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಆಸ್ಟ್ರೇಲಿಯಾ ತಂಡವು ಹೊಸ ಸಾಧನೆ ಒಂದನ್ನು ಮಾಡಿದೆ. ಇದಕ್ಕೂ ಮುನ್ನ ಭಾರತ ತಂಡ ಮಾತ್ರ ಈ ಸಾಧನೆ ಮಾಡಿತ್ತು. ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಆಸ್ಟ್ರೇಲಿಯಾ ಕೂಡ ಈ ಸಾಧನೆ ಮಾಡಿದ ಎರಡನೇ ತಂಡವೆನ್ನಿಸಿದೆ.

2022 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಭಾರತ ತಂಡವು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 1000 ಪಂದ್ಯಗಳನ್ನಾಡಿದ ಮೊದಲ ತಂಡ ಎನಿಸಿಕೊಂಡಿತು. ಇದೀಗ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ದ್ವಿತೀಯ ಸ್ಥಾನ ಅಲಂಕರಿಸಿದೆ. ಭಾರತ (1055 ಪಂದ್ಯಗಳು) ಮತ್ತು ಆಸ್ಟ್ರೇಲಿಯಾ (1000 ಪಂದ್ಯಗಳು) ಹೊರತುಪಡಿಸಿ ಬೇರೆ ಯಾವುದೇ ತಂಡ ಏಕದಿನ ಕ್ರಿಕೆಟ್​ನಲ್ಲಿ ಸಾವಿರ ಪಂದ್ಯಗಳನ್ನಾಡಿರುವ ಸಾಧನೆಯನ್ನು ಮಾಡಿಲ್ಲ.

970 ಏಕದಿನ ಪಂದ್ಯಗಳನ್ನು ಆಡುವ ಮೂಲಕ ಪಾಕಿಸ್ತಾನ ತಂಡವು ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ. 912 ಏಕದಿನ ಪಂದ್ಯಗಳನ್ನು ಆಡುವ ಮೂಲಕ ಶ್ರೀಲಂಕಾ ತಂಡ ನಾಲ್ಕನೇ ಸ್ಥಾನದಲ್ಲಿದೆ.

ವೆಸ್ಟ್ ಇಂಡೀಸ್ ವಿರುದ್ಧ ಸಾವಿರನೇ ಪಂದ್ಯವಾಡಿದ ಆಸ್ಟ್ರೇಲಿಯಾ ತಂಡ ಅಮೋಘ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 24.1 ಓವರ್​ಗಳಲ್ಲಿ 86 ರನ್​ಗಳಿಸಿ ಆಲೌಟ್ ಆಗಿತ್ತು. 87 ರನ್​ಗಳ ಸುಲಭ ಗುರಿ ಪಡೆದ ಆಸ್ಟ್ರೇಲಿಯಾ ತಂಡವು 6.5 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸಾವಿರನೇ ಪಂದ್ಯವನ್ನು ಸ್ಮರಣೀಯವಾಗಿರಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net