

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ವಸವಿನ್ಯಾಸಕಿ, 40ಕ್ಕೂ ಅಧಿಕ ಕಾದಂಬರಿಗಳನ್ನು ಬರೆದಿರುವ ಲೇಖಕಿ ದೇವಿಕಾ ಜನಿತ್ರಿ ನಿರ್ದೇಶನದ ಮೊದಲ ಸಿನಿಮಾ ‘ಚಿಕ್ಕಿಯ ಮೂಗುತಿ’. ಅವರೇ ಬರೆದಿದ್ದ ‘ಚಿಕ್ಕಿಯ ಮೂಗುತಿ’ ಕಾದಂಬರಿ ಆಧಾರಿತ ಚಿತ್ರವಿದು. ನಿರ್ದೇಶನದ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ದೇವಿಕಾ ಅವರೇ ನಿಭಾಯಿಸಿದ್ದಾರೆ. ಇತ್ತೀಚೆಗಷ್ಟೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.
ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಹೆಣ್ಣು ಮಕ್ಕಳ ಮೇಲಿನ ಶೋಷಣೆ, ಅದರ ವಿರುದ್ಧದ ಹೋರಾಟದ ಸುತ್ತ ಕಥೆ ಸಾಗುತ್ತದೆ. ತಾರಾ ಅನುರಾಧಾ, ಶ್ವೇತಾ ಶ್ರೀವಾತ್ಸವ್, ಭವಾನಿ ಪ್ರಕಾಶ್, ಅವಿನಾಶ್, ತಬಲ ನಾಣಿ, ರಂಗಾಯಣ ರಘು, ಭರತ್ ಬೋಪಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಟಿ ತಾರಾ, ‘ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದಂತೆ ಈ ಸಿನಿಮಾದಲ್ಲೂ ಮಹಿಳೆಯರಿಗೆ ಮೀಸಲಾತಿ ಇದೆ. ಬಹುತೇಕ ಹೆಣ್ಣು ಮಕ್ಕಳೆ ಸೇರಿ ಮಾಡಿರುವ ಸಿನಿಮಾ, ಅದ್ಭತವಾಗಿ ಮೂಡಿಬಂದಿದೆ. ದೇವಿಕಾ ಅವರ ಮೊದಲು ಸಿನಿಮಾ ಅಂತ ಅನಿಸುವುದೇ ಇಲ್ಲ’ ಎಂದರು.
ನಟಿ ಶ್ವೇತಾ ಶ್ರೀವಾತ್ಸವ್, ‘ಮಗುವಿಗೆ ಜನ್ಮ ನೀಡಿದ ಬಳಿಕ ನಟಿಸಿದ ಮೊದಲ ಚಿತ್ರವಿದು’ ಎಂದು ಹೇಳಿಕೊಂಡರು. ಸದ್ಯ ‘ಚಿಕ್ಕಿಯ ಮೂಗುತಿ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗಿದ್ದು, ಕೆಲವು ದಿನಗಳಲ್ಲಿ ತೆರೆಗೆ ತರುವ ಆಲೋಚನೆ ಚಿತ್ರತಂಡದ್ದು.