

ಬೆಂಗಳೂರು: ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್ನ ವಾರಾಂತ್ಯದ ಮೊದಲ ವಾರದ ಪಂಚಾಯಿತಿ ಕಟ್ಟೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ನಟ, ನಿರೂಪಕ ಕಿಚ್ಚ ಸುದೀಪ್ ಬಿಗ್ ಮನೆಯ ಬಿಗ್ ಸ್ಪರ್ಧಿಗಳಿಗೆ ತಮ್ಮ ಖಡಕ್ ಮಾತಲ್ಲೇ ಅವರವರ ತಪ್ಪುಗಳನ್ನು ಅರ್ಥೈಸಿ, ಆಟವನ್ನು ಅದ್ಬುತವಾಗಿ ಆಡಿದವರಿಗೆ ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದರು. ಇದೀಗ ಎರಡನೇ ವಾರಕ್ಕೆ ಕಾಲಿಟ್ಟ ಸ್ಪರ್ಧಿಗಳು ಎರಡು ತಂಡಗಳಾಗಿ ವಿಂಗಡನೆಯಾಗಿದ್ದು, ಟಾಸ್ಕ್ ಮೂಲಕ ಅಸಲಿ ಆಟಕ್ಕೆ ಹೆಜ್ಜೆಯಿಟ್ಟಿದ್ದಾರೆ.
ವಾರದ ಮೊದಲ ದಿನವಾದ ಸೋಮವಾರ ಎಲಿಮಿನೇಟ್ ಆಗಲು ನಾಮಿನೇಟ್ ಆದ ಸದಸ್ಯರನ್ನು ಉಳಿಸಿಕೊಳ್ಳಲು ಮನೆಯವರಿಗೆ ಟಾಸ್ಕ್ ಕೊಟ್ಟಿದ್ದ ಬಿಗ್ ಬಾಸ್, ತದನಂತರ ಮನೆಯ ಒಟ್ಟು ಸದಸ್ಯರನ್ನು ಎರಡು ತಂಡಗಳನ್ನಾಗಿ ರೂಪಿಸಿದರು. ‘ರಣಶಕ್ತಿ’ ತಂಡಕ್ಕೆ ಕಾರ್ತಿಕ್ ನಾಯಕನಾದರೆ, ‘ಮಾಣಿಕ್ಯ’ ತಂಡಕ್ಕೆ ವಿನಯ್ ಕ್ಯಾಪ್ಟನ್ ಆಗಿ ಆಟವಾಡಿದರು. ಎರಡು ತಂಡಗಳ ನಡುವೆ ನಡೆದ ನೇರ ಹಣಾಹಣಿಯಲ್ಲಿ ವಿನಯ್ ನೇತೃತ್ವದ ಮಾಣಿಕ್ಯ ತಂಡ ಜಯಭೇರಿಯಾಯಿತು.
ಟಾಸ್ಕ್ ನಡುವೆ ನಡೆಯದ ಮಾತಿನ ಜಟಾಪಟಿ ಟಾಸ್ಕ್ ಮುಗಿದ ಮೇಲೆ ಕ್ಯಾಪ್ಟನ್ ವಿನಯ್ ಮತ್ತು ಸಂಗೀತ ಶೃಂಗೇರಿ ನಡುವೆ ನಡೆಯಿತು. ಒಂದು ಹೇಳಿಕೆಯಲ್ಲಿ ಪ್ರಾರಂಭಗೊಂಡ ಮಾತಿನ ಸಮರ, ತೀವ್ರ ವಾಗ್ವಾದಕ್ಕೆ ತಿರುಗಿತು. ವಿನಯ್ ನಿಮ್ಮ ಧ್ವನಿ ಬೆದರಿಕೆ ರೀತಿಯಿದೆ ಎಂದು ನೇರವಾಗಿ ಹೇಳಿದ ಸಂಗೀತಾಗೆ ವಿನಯ್ ಖಡಕ್ ಆಗಿ ಉತ್ತರಿಸಿದರು. ಈ ಘಟನೆಯ ಬಳಿಕ ರಣಶಕ್ತಿ ತಂಡದ ಸದಸ್ಯರ ನಡುವೆಯೇ ಭಿನ್ನಾಭಿಪ್ರಾಯ ಮೂಡಿದ್ದು, ಒಬ್ಬರನೊಬ್ಬರು ದೂಷಿಸಿ ಮಾತನಾಡುತ್ತಿದ್ದಾರೆ.
ಸದ್ಯ ಈ ಮನಸ್ತಾಪ, ಭಿನ್ನಾಭಿಪ್ರಾಯಗಳು ಹೀಗೆ ಮುಂದುವರೆದರೆ ಈ ವಾರದ ಮುಂದಿನ ಟಾಸ್ಕ್ಗಳನ್ನು ಹೇಗೆ ಆಡಲಿದ್ದಾರೆ? ಒಗ್ಗಟಿನಿಂದ ಗೆಲುವು ಪಡೆಯಲಿದ್ದಾರ ಎಂಬುದನ್ನು ಕಾದು ನೋಡಬೇಕಿದೆ.