ಗೆಹ್ಲೋಟ್​ ಬೆಂಬಲಿಗರಿರುವ ರೆಸಾರ್ಟ್​ನಲ್ಲಿ ಐಷಾರಾಮಕ್ಕೇನೂ ಕೊರತೆಯಿಲ್ಲ...!

fairmont resort
Published on

ಜೈಪುರ: ಸಿಎಂ ಅಶೋಕ್​ ಗೆಹ್ಲೋಟ್​ ಅಧಿಕೃತ ನಿವಾಸದಿಂದ 25 ಕಿ.ಮೀ. ದೂರದಲ್ಲಿದೆ ಬೆಂಬಲಿಗ ಶಾಸಕರು ಬೀಡುಬಿಟ್ಟಿರುವ ಫೇರ್​ಮೌಂಟ್​ ರೆಸಾರ್ಟ್​.

ದೆಹಲಿ- ಜೈಪುರ ರಸ್ತೆಯಲ್ಲಿರುವ ರೆಸಾರ್ಟ್​ನಲ್ಲಿ ಐಷಾರಾಮಕ್ಕೇನೂ ಕೊರತೆಯಿಲ್ಲ. ಮೊಘಲ್ ಶೈಲಿಯ ಅರಮನೆಗಳ ಮಾದರಿಯಲ್ಲಿಯೇ ಇದು ನಿರ್ಮಿಸಲ್ಪಟ್ಟಿದೆ. ಜತೆಗೆ, ಗ್ರಾಹಕರಿಗೆ ಅತ್ಯಂತ ವೈಭವೋಪೇತ, ಪಂಚಾತಾರಾ ಸೇವೆಗಳು ಇಲ್ಲಿವೆ.

ಈ ರೆಸಾರ್ಟ್​ನಲ್ಲಿ 245ಕ್ಕೂ ಅಧಿಕ ರೂಮ್​ಗಳಿದ್ದು, ಕಾಂಗ್ರೆಸ್​ನ 100ಕ್ಕೂ ಅಧಿಕ ಶಾಸಕರು ಇಲ್ಲಿದ್ದಾರೆ ಎಂದು ಹೇಳಲಾಗಿದೆ. ​ಇಲ್ಲಿನ ಸಾಮಾನ್ಯ ಕೊಠಡಿಯ ಬಾಡಿಗೆ ಪ್ರತಿದಿನಕ್ಕೆ 8,500 ರೂ.ಗಳಿಂದ ಆರಂಭವಾಗುತ್ತದೆ ಎಂದು ರೆಸಾರ್ಟ್​ನ ವೆಬ್​ಸೈಟ್​ನಲ್ಲಿ ಹೇಳಲಾಗಿದೆ.

ಪ್ರವಾಸಿಗರ ದಟ್ಟಣೆ ಹೆಚ್ಚಿರುವ ದಿನಗಳಲ್ಲಿ ಈ ಮೊತ್ತ ಎರಡು ಅಥವಾ ಮೂರು ಪಟ್ಟು ಹೆಚ್ಚಾಗುತ್ತದೆ. ಕೋವಿಡ್​ ಕಾರಣದಿಂದಾಗಿ ಬಹುತೇಕ ಪಂಚತಾರಾ ಹೋಟೆಲ್​ಗಳಲ್ಲೂ ಬಾಡಿಗೆಯನ್ನು ಗಣನೀಯವಾಗಿ ಕೆಳಗಿಳಿಸಲಾಗಿದೆ. ವಾರಾಂತ್ಯದವರೆಗೆ ಕೊಠಡಿ ಲಭ್ಯವಿಲ್ಲ ಎಂದು ವೆಬ್​ಸೈಟ್​ನಲ್ಲಿ ಮಾಹಿತಿ ನೀಡಲಾಗಿದೆ.

ಅತ್ಯಂತ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಈ ರೆಸಾರ್ಟ್​ನಲ್ಲಿ ಸ್ವಿಮ್ಮಿಂಗ್​ ಪೂಲ್​, ಸ್ಪಾ, ರೆಸ್ಟೋರಂಟ್​, ಬಾರ್​ ಸೇವೆಗಳಿವೆ. ವಿವಿಧ ಹೊರಾಂಗಣ ಚಟುವಟಿಕೆಗಳಿಗೂ ಅವಕಾಶವಿದೆ. ಗ್ರಾಹಕರಿಲ್ಲದೇ ಕಂಗೆಟ್ಟಿರುವ ಹೋಟೆಲ್​​ ಉದ್ಯಮಕ್ಕೆ ಈ ರೆಸಾರ್ಟ್​ ರಾಜಕೀಯ ಕೊಂಚ ರಿಲೀಫ್​ ನೀಡಬಹುದೇನೋ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net