

ಜೈಪುರ: ರಾಜಸ್ಥಾನದಲ್ಲಿ ರಾಜಕೀಯ ಮೇಲಾಟ ಮುಂದುವರಿದಿದೆ ಹಾಗೂ ರೆಸಾರ್ಟ್ ರಾಜಕೀಯ ಶುರುವಾಗಿದೆ. ಸಿಎಂ ಅಶೋಕ್ ಗೆಹ್ಲೋಟ್ ತನ್ನ ಬೆಂಬಲಿಗ ಶಾಸಕರೊಂದಿಗೆ ರೆಸಾರ್ಟ್ನಲ್ಲಿ ಬೀಡುಬಿಟ್ಟಿದ್ದಾರೆ.
ಈ ನಡುವೆ, ಕಾಂಗ್ರೆಸ್ ಆಯೋಜಿಸಿದ್ದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ ಶಾಸಕರು ಅಶೋಕ್ ಗೆಹ್ಲೋಟ್ ನೇತೃತ್ವಕ್ಕೆ ಬೆಂಬಲ ಸೂಚಿಸಿದ್ದಾರೆ. ಇವರೆಲ್ಲರೂ ಸಿಎಂ ಜತೆಗೆ ನಾವಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಸಂಖ್ಯಾಬಲ ಲೆಕ್ಕಾಚಾರ ಶುರುವಾಗುತ್ತಿದ್ದಂತೆ, ಬಂಡಾಯ ನಾಯಕ ಸಚಿನ್ ಪೈಲಟ್ ಬಣ ನೇರವಾಗಿ ಸಿಎಂ ಅಶೋಕ್ ಗೆಹ್ಲೋಟ್ಗೆ ಸವಾಲು ಹಾಕಿದೆ. ಒಂದು ವೇಳೆ ನಿಮ್ಮ ಬಳಿ ಬಹುಮತ ಸಾಬೀತುಪಡಿಸುವಷ್ಟು ರಾಜ್ಯಪಾಲರ ಬಳಿ ಹೋಗಿ ಅವರ ಎದುರಿನಲ್ಲಿ ಬಹುಮತ ಪ್ರದರ್ಶಿಸಿ ಎಂದು ಸಚಿನ್ ಪೈಲಟ್ ಪರ ಶಾಸಕರು ಹೇಳಿದ್ದಾರೆ.
ಪ್ರಜಾಪ್ರಭುತ್ವದ ನಿರ್ಣಯವನ್ನೇ ಧಿಕ್ಕರಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಇದು 8 ಕೋಟಿ ರಾಜಸ್ಥಾನೀಯರಿಗೆ ಮಾಡುತ್ತಿರುವ ಅವಮಾನ ಎಂದು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ 20 ಶಾಸಕರು ಹಾಜರಾಗಿರಲಿಲ್ಲ ಎಂದು ಹೇಳಲಾಗಿದೆ.
ಈ ನಡುವೆ, ಸಚಿನ್ ಪೈಲಟ್ಗೆ ಬೆಂಬಲ ಸೂಚಿಸಿ ದೆಹಲಿ ಹೊರವಲಯದ ರೆಸಾರ್ಟ್ನಲ್ಲಿ ಬೀಡುಬಿಟ್ಟಿದ್ದ ಕೆಲ ಶಾಸಕರು ಜೈಪುರಕ್ಕೆ ಮರಳಿದ್ದಾರೆ. ಇದು ಪೈಲಟ್ಗೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಹೀಗಿದ್ದರೂ ಅಶೋಕ್ ಗೆಹ್ಲೋಟ್ ಬಣಕ್ಕೆ ಬಹುಮತ ಸಾಬೀತುಪಡಿಸುವಷ್ಟು ಸಂಖ್ಯಾಬಲವಿಲ್ಲ ಎಂದೇ ಪೈಲಟ್ ಬೆಂಬಲಿಗರು ಹೇಳುತ್ತಿದ್ದಾರೆ.