

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಂಧನ ಪ್ರಕ್ರಿಯೆಯನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿತು. ಆದರೆ ಪ್ರಕರಣದಲ್ಲಿ ತನ್ನ ಬಂಧನವನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಜ್ರಿವಾಲ್ ಮಾಡಿದ ಮನವಿಯ ಮೇರೆಗೆ ನ್ಯಾಯಾಲಯವು ಇಡಿ ಮತ್ತು ಕಕ್ಷಿದಾರರಿಗೆ ನೋಟಿಸ್ ಜಾರಿ ಮಾಡಿತು.
ಏಪ್ರಿಲ್ 24 ರೊಳಗೆ ಅರ್ಜಿಗೆ ಉತ್ತರವನ್ನು ಸಲ್ಲಿಸುವಂತೆ ಪೀಠವು ಇಡಿಗೆ ಸೂಚಿಸಿತು. ಏಪ್ರಿಲ್ 29 ರಿಂದ ಪ್ರಾರಂಭವಾಗುವ ವಾರದಲ್ಲಿ ಈ ವಿಷಯದ ವಿಚಾರಣೆ ನಡೆಯಲಿದೆ ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ತಿಳಿಸಿದೆ.
ಇದು ಅವರ ಚುನಾವಣಾ ಪ್ರಚಾರದ ಮೇಲೆ ಪರಿಣಾಮ ಬೀರಲಿದೆ ಎಂದು ಕೇಜ್ರವಾಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರೂ ಇಡಿ ಆಕ್ಷೇಪ ವ್ಯಕ್ತಪಡಿಸಿತು. ಸಿಂಘ್ವಿ ಅರ್ಜಿಯನ್ನು ಮೊದಲೇ ಪರಿಗಣಿಸುವಂತೆ ಮನವಿ ಮಾಡಿದರೂ ನ್ಯಾಯಾಲಯ ಅದನ್ನು ಸ್ವೀಕರಿಸಲಿಲ್ಲ.
ಇಡಿ ಬಂಧನದ ವಿರುದ್ಧ ಕೇಜಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ ನಂತರ ಕೇಜಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಬಂಧನ ಮತ್ತು ರಿಮಾಂಡ್ ಕಾನೂನುಬದ್ಧವಾಗಿದೆ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು. ಕೇಜಿವಾಲ್ ವಿರುದ್ಧ ಪಿತೂರಿಯ ಪುರಾವೆಗಳಿವೆ. ಕೇಜಿವಾಲ್ ಅವರಿಗೆ ಮುಖ್ಯಮಂತ್ರಿಯಾಗಿ ವಿಶೇಷ ಗೌರವ ನೀಡಲಾಗುವುದಿಲ್ಲ ಮತ್ತು ನ್ಯಾಯಾಲಯದ ಮೊದಲ ಆದ್ಯತೆ ಕಾನೂನು, ರಾಜಕೀಯವಲ್ಲ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿತ್ತು.
ಬಂಧನ ಅವಧಿ ವಿಸ್ತರಣೆ: ಏತನ್ಮಧ್ಯೆ, ಕೇಜಿವಾಲ್ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ರೋಸ್ ಅವೆನ್ಯೂ ನ್ಯಾಯಾಲಯವು ಈ ತಿಂಗಳ 23 ರವರೆಗೆ ವಿಸ್ತರಿಸಿದೆ.