

ಹಾಡುವುದು ಅನಿವಾರ್ಯ ಕರ್ಮ ನನಗೆ
****
ಬದುಕೆನ್ನುವುದೊಂದು ನಿಗೂಢ ಸುರಂಗ. ಕತ್ತಲೆಯಲ್ಲಿ ತಡಕಾಡುತ್ತ ಸಾಗುತ್ತಿರುತ್ತೇವೆ. ಸುರಂಗದ ಇನ್ನೊಂದು ತುದಿಯಲ್ಲಿ ಏನಿದೆ ಎಂಬುದು ನಮ್ಮ ಗ್ರಹಿಕೆಗೆ ನಿಲುಕದ್ದು. ಬೆಳಕಿನ ಹುಡುಕಾಟದಲ್ಲಿ ಸಾಗುತ್ತಿರುತ್ತೇವೆ.
ಬದುಕೊಂದು ಪುಸ್ತಕವೆನ್ನಬಹುದಾದರೆ, ಅನೇಕರ ಪಾಲಿಗೆ ಏನನ್ನೂ ಬರೆಯದ ಖಾಲಿ ಹಾಳೆಗಳು. ಪುಸ್ತಕಗಳೆಂದ ಮೇಲೆ ಒಳ್ಳೆಯದು, ಕೆಟ್ಟದ್ದು, ರಮ್ಯ, ರೋಚಕ, ಭಯಾನಕ, ನಿಗೂಢ... ಇನ್ನೂ ಹತ್ತಾರು ಬಗೆ ಇರಲೇಬೇಕು. ಯಾರ ಬದುಕು ಯಾವ ವರ್ಗಕ್ಕೆ ಸೇರಿದ್ದೆನ್ನುವುದು ಅವರವರ ಬದುಕಿನ ರೀತಿಗೆ ಬಿಟ್ಟಿದ್ದು. ಕೆಲವು ಪುಸ್ತಕಗಳಿರುತ್ತವೆ. ಕಥಾವಸ್ತು ಅದ್ಭುತ, ನಿರೂಪಣೆ ರೋಚಕ. ಆದರೂ, ಪೂರ್ಣ ಪುಸ್ತಕವನ್ನು ಓದಿದ ಮೇಲೂ ಮನಸ್ಸಿನಲ್ಲಿ ಉಳಿಯುವುದು ಗ್ರಹಿಕೆಗೆ ನಿಲುಕದ ಇನ್ನೂ ಏನೋ ಇದೆಯೆಂಬ ಕೌತುಕ... ಮಹೇಂದ್ರ ಸಿಂಗ್ ಧೋನಿ ಜೀವನ ಕೂಡ ಇಂಥ ನಿಗೂಢ ಕಲಾಕೃತಿಯೇ. ಅವರ ಜೀವನ ಮೇಲ್ನೋಟಕ್ಕೆ ಅದೆಷ್ಟೇ ಸರಳ, ತೆರೆದ ಪುಸ್ತಕದಂತಿದ್ದರೂ, ಗೆರೆಗಳ ನಡುವಿನ ಅರ್ಥ ಯಾರಿಗೂ ಅರ್ಥವಾಗದಂಥದ್ದು. ಧೋನಿ ಎಷ್ಟು ಸರಳವೋ ಅಷ್ಟೇ ನಿಗೂಢ.
ಇಪ್ಪತ್ತು ವರ್ಷಗಳೆನ್ನುವುದು ಬದುಕಿನಲ್ಲಿ ಬಹುದೊಡ್ಡ ಅವಧಿ. ಈ ಕಾಲಘಟ್ಟದಲ್ಲಿ ಒಬ್ಬ ವ್ಯಕ್ತಿ ಹಿಮಾಲಯದೆತ್ತರಕ್ಕೆ ಬೆಳೆಯಬಹುದು, ಹೇಳಹೆಸರಿಲ್ಲದಂತೆ ನಾಶವಾಗಿ ಹೋಗಲೂಬಹುದು. ಹೊಸ ಶತಮಾನದ ಮೊದಲ ಇಪ್ಪತ್ತು ವರ್ಷಗಳಲ್ಲಿ ಧೋನಿ ತಮ್ಮದೇ ಒಂದು ವಿಸ್ತಾರ ಜಗತ್ತನ್ನು ಕಟ್ಟಿಕೊಂಡರು. ಭಾರತದಂಥ ದೇಶದಲ್ಲಿ ಪ್ರತಿಯೊಬ್ಬ ಮಕ್ಕಳು ಕಾಣುವಂಥ ಹಗಲುಗನಸನ್ನೇ ಧೋನಿ ಕೂಡ ಕಂಡರು. ಕನಸಿನ ಹಿಂದೆ ಓಡಿದರು, ಎಡವಿದರು, ಬಿದ್ದು ಬಿದ್ದು ಮೇಲೆದ್ದರು. ಕೋಟಿ ಕನಸುಗಳ ಪ್ರತಿನಿಧಿಯಾಗಿ ಮಹಾಯುದ್ಧದಲ್ಲಿ ಗೆದ್ದರು. ಗೆದ್ದ ಮೇಲೂ ಜಗತ್ತಿಗೆ ಸಂಭ್ರಮವನ್ನು ಬಿಟ್ಟುಕೊಟ್ಟು ತಾವು ಹಳೆಯ ಧೋನಿಯಾಗೇ ಉಳಿದರು. ಅದೇ ನಿರ್ಲಿಪ್ತ, ಶಾಂತ ಮಹಾಮೌನಿಯಾಗುಳಿದರು. ಇದನ್ನೂ ಓದಿ: ಸಂನ್ಯಾಸಿಯ ಆದರ್ಶ ಸ್ವಂತ ಮುಕ್ತಿ ಮತ್ತು ಜಗತ್ತಿನ ಹಿತ
ಮನಸ್ಸಿನ ಹೊಯ್ದಾಟಗಳನ್ನು ಯಾವತ್ತೂ ಮುಖದ ಗೆರೆಗಳಲ್ಲಿ ಬಿಟ್ಟುಕೊಟ್ಟವರಲ್ಲ ಅವರು. ಆರಂಭದ ದಿನಗಳಲ್ಲಿ ಧೋನಿ ಹೇರ್ಸ್ಟೈಲ್ ಹೊಸ ಟ್ರೆಂಡ್. ಪಾಕಿಸ್ತಾನದ ಅಧ್ಯಕ್ಷ ಜನರಲ್ ಮುಷರ್ರಫ್ವರೆಗೆ ಎಲ್ಲರೂ ಅವರ ಕೇಶವಿನ್ಯಾಸದ ಅಭಿಮಾನಿಗಳೇ. ಆದರೆ, ಧೋನಿಯೆಂದರೆ, ವಿಶಿಷ್ಟ ಹೇರ್ಸ್ಟೈಲ್ ಅಷ್ಟೇ ಅಲ್ಲ. ತೋರಿಕೆಯ ಗಿಮಿಕ್ಗಳಿಗೆ ಜೋತು ಬಿದ್ದವರಲ್ಲವೇ ಅಲ್ಲ ಅವರು. ತಲೆಗೂದಲು ಗಿಡ್ಡಗೊಂಡ ಮೇಲೂ ಧೋನಿ ಆಟಗಾರನಾಗಿ ಎತ್ತರಕ್ಕೆ ಬೆಳೆದರು. ದಿನಕ್ಕೆ ಐದು ಲೀಟರ್ ಹಾಲು ಕುಡಿಯುತ್ತಾರಂತೆ! ಧೋನಿ ಆರಂಭದ ದಿನಗಳ ದಂತಕಥೆಗಳಲ್ಲಿ ಇದೂ ಒಂದು. ಆದರೆ, ಅಷ್ಟೊಂದು ಹಾಲು ಕುಡಿಯುವ ಮಕ್ಕಳೆಲ್ಲರೂ ಧೋನಿ ಆಗುವುದಿಲ್ಲ. ಸ್ವಾರಸ್ಯಕರ ಪ್ರಸಂಗಗಳಿಂದ ಕಥಾನಾಯಕ ಬೆಳೆಯುವುದಿಲ್ಲ. ತನ್ನೊಳಗಿನ ಗಟ್ಟಿತನದಿಂದ ಬೆಳೆಯುತ್ತಾನೆ.
ಬದುಕಿನ ಪಯಣದಲ್ಲಿ ವಿಧಿಯೆನ್ನುವುದು ಅನೇಕ ರೋಚಕ ತಿರುವುಗಳನ್ನು ಎದುರು ನಿಲ್ಲಿಸುತ್ತದೆ. ವಿಲಕ್ಷಣ ಸವಾಲುಗಳನ್ನೊಡ್ಡುತ್ತದೆ. ಹೆಜ್ಜೆಹೆಜ್ಜೆಗೂ ಪರೀಕ್ಷಿಸುತ್ತದೆ... ಅನಿರೀಕ್ಷಿತ ಅವಕಾಶಗಳನ್ನು ಸೃಷ್ಟಿಸಿ ಸಾಮರ್ಥ್ಯ ನಿರೂಪಿಸುವಂತೆ ಆಹ್ವಾನಿಸುತ್ತದೆ. ಇಂಥ ತಿರುವು, ಸವಾಲು, ಪರೀಕ್ಷೆ, ಅವಕಾಶಗಳನ್ನು ನಾವೆಷ್ಟು ವಿಶೇಷವಾಗಿಸಿಕೊಳ್ಳುತ್ತೇವೆ ಎನ್ನುವುದು ನಮ್ಮ ಅಂತಃಸತ್ವವನ್ನು ಅವಲಂಬಿಸಿರುತ್ತದೆ. ಹುಟ್ಟಿದ ಮಕ್ಕಳೆಲ್ಲ ಸಚಿನ್ ತೆಂಡುಲ್ಕರ್ ಆಗುವುದಿಲ್ಲ. ಹಾಗಾಗಿ ವಿದ್ಯಾಭ್ಯಾಸದಲ್ಲಿ ಹೊಂದಾಣಿಕೆ ಮಾಡಿಕೊಂಡು ಆಟದ ಮೈದಾನದಲ್ಲಿ ಹೊತ್ತು ಕಳೆಯುತ್ತೇನೆಂದರೆ ಯಾವ ತಂದೆತಾಯಿಯೂ ಏಕಾಏಕಿ ಒಪ್ಪುವುದಿಲ್ಲ. ಇಂಥ ಸಂದರ್ಭದಲ್ಲಿ ದೃಢಮನಸ್ಸೊಂದು ಇಲ್ಲದಿದ್ದರೆ, ಗುರಿಯ ಕಡೆಗೆ ಸ್ಪಷ್ಟತೆ ಇರದಿದ್ದರೆ, ಬದ್ಧತೆ, ಸಮರ್ಪಣಾ ಮನೋಭಾವ ಇರದಿದ್ದರೆ, ಧೋನಿ ಮತ್ತೋರ್ವ ಗೋನಿಯಾಗಿ ಯಾವಾಗಲೋ ಮಾಯವಾಗಿರುತ್ತಿದ್ದರು. ಜೂನಿಯರ್ ಕ್ರಿಕೆಟ್ ದಿನಗಳಿಂದ, ಆ.15ರ ಸಂಜೆ 19.29ರ ಕ್ಷಣದವರೆಗೆ ಮಹೇಂದ್ರ ಸಿಂಗ್ ಧೋನಿ ಯಾವಾಗಲೂ ವಿಶೇಷವೇ. ಅದೇ ಅವರ ಐಡೆಂಟಿಟಿ. ಜನರ ಕಣ್ಣಿಗೆ ಅವರ ನಿರ್ಧಾರಗಳು ಸದಾ ನಿಗೂಢ. ಪರಿಣಾಮಗಳು ಮಾತ್ರ ಪವಾಡ. ಇದನ್ನೂ ಓದಿ: ಸವ್ಯಸಾಚಿ ಅಂಕಣ: ಅಹಂಕಾರ ಅಳಿಯಲಿ ಹೊಸ ವರ್ಷ ಕನಸುಗಳು ಸಾಕಾರವಾಗಲಿ
ಭಾರತೀಯ ಕ್ರಿಕೆಟ್ನಲ್ಲಿ ಶ್ರೇಷ್ಠ ಆಟಗಾರರಿಗೆ ಕೊರತೆಯೆಂಬುದು ಇಲ್ಲವೇ ಇಲ್ಲ. ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ರಂಥ ಶ್ರೇಷ್ಠ ಬ್ಯಾಟ್ಸ್ಮನ್ಗಳು ಪ್ರತಿಷ್ಠಾಪಿತರಾಗಿದ್ದ ಬ್ಯಾಟಿಂಗ್ ಕ್ರಮಾಂಕದಲ್ಲಿ ಧೋನಿ ಅದೃಷ್ಟ ಪರೀಕ್ಷೆಗೆ ಆಗಮಿಸಿದ್ದರು. ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮರಂಥ ಸಮಕಾಲೀನರು, ತದನಂತರ ಬಂದ ಬ್ಯಾಟಿಂಗ್ ಪ್ರವೀಣರ ನಡುವೆಯೇ ಧೋನಿ ಶ್ರೇಷ್ಠರಾಗಿ ಉಳಿದರು, ಬೆಳೆದರು. ಧೋನಿ ಯಾವತ್ತೂ ರನ್ಗಳಿಗಾಗಿ ಆಡಲಿಲ್ಲ, ಶತಕ ಬಾರಿಸಲೇಬೇಕೆಂಬ ಹಟದಿಂದ ಕ್ರೀಸಿಗಿಳಿಯಲಿಲ್ಲ. ಯಾರದ್ದೋ ದಾಖಲೆ ಮುರಿಯಬೇಕೆಂಬ ಧಾವಂತವೂ ಇರಲಿಲ್ಲ. ಬದಲಿಗೆ ಪ್ರತೀ ಪಂದ್ಯವನ್ನೂ ಫಲಿತಾಂಶಕ್ಕಾಗಿ ಆಡಿದರು. ಪ್ರತೀ ಪಂದ್ಯ, ಇನಿಂಗ್ಸ್ನಲ್ಲಿ ಆ ದಿನದ ಪರಿಸ್ಥಿತಿಗೆ ಅನುಗುಣವಾಗಿ ಆಡಿದರು. ಅವಕಾಶ ದೊರೆತಾಗ ಎದುರಾಳಿಗಳನ್ನು ಪುಡಿಗಟ್ಟುವ ದೈತ್ಯ ಆಟ ಪ್ರದರ್ಶಿಸಿದ ಧೋನಿ, ಅಗತ್ಯಬಿದ್ದಾಗ ಗಂಟೆಗಟ್ಟಲೆ ಹಲ್ಲುಕಚ್ಚಿ ಆಡಿ ವಿಕೆಟ್ ಕಾಪಾಡಿಕೊಂಡಿದ್ದೂ ಉಂಟು. ರನ್ ಗುರಿ ಬೆನ್ನಟ್ಟುವ ಸಂದರ್ಭದಲ್ಲಿ ಧೋನಿ ಯಾವತ್ತೂ ತಮ್ಮದೊಂದು ಅರ್ಧ ಶತಕ ಆಗಿಬಿಡಲಿ, ಶತಕ ಪೂರೈಸಿಬಿಡಲಿ ಎಂದು ಕಾಯಲಿಲ್ಲ. ಎದುರಾಳಿ ತಂಡ ಯಾವುದೇ ಇರಲಿ, ಬೌಲರ್ಗಳು ಯಾರೇ ಇರಲಿ, 23 ಎಸೆತಗಳಲ್ಲಿ 48 ರನ್ಗಳ ಟಾರ್ಗೆಟ್ ಇರಲಿ... ಧೋನಿ ಕ್ರೀಸಿನಲ್ಲಿರುವವರೆಗೂ ಭಾರತಕ್ಕೆ ಸೋಲಿನ ಭೀತಿ ಇರುತ್ತಿರಲಿಲ್ಲ. ಕನಿಷ್ಠ ಎಸೆತಗಳಲ್ಲಿ ಗರಿಷ್ಠ ರನ್ ಅಗತ್ಯವಿರುವ ಸಂದರ್ಭದಲ್ಲಿ ಧೋನಿ ಹೆಲಿಕಾಪ್ಟರ್ ಸಿಕ್ಸರ್ಗಳ ಮೂಲಕ ಗರ್ಜಿಸುತ್ತಿದ್ದರು. ಅದೇ ಟೆಸ್ಟ್ ಪಂದ್ಯ ಉಳಿಸಿಕೊಳ್ಳಬೇಕಾದ ಹೋರಾಟದಲ್ಲಿ ಗಂಟೆಗಟ್ಟಲೆ ನಿಂತು ಇನಿಂಗ್ಸ್ ಕಟ್ಟುತ್ತಿದ್ದರು. ಇದನ್ನೂ ಓದಿ: ಸವ್ಯಸಾಚಿ ಅಂಕಣ: ಅದೃಷ್ಟದ ಹುಡುಕಾಟ ಮನೀಷ್ ಪಾಂಡೆ ಪರದಾಟ
ಕ್ರಿಕೆಟಿಗನಾಗಿ ಧೋನಿಯನ್ನು ಓರ್ವ ವಿಕೆಟ್ಕೀಪರ್ ಅಥವಾ ಬ್ಯಾಟ್ಸ್ಮನ್ ಅಥವಾ ಕ್ಯಾಪ್ಟನ್ ಎಂದು ಪ್ರತ್ಯೇಕವಾಗಿ ನೋಡುವುದು ಕಷ್ಟ. ಅವರೊಂದು ಕಂಪ್ಲೀಟ್ ಪ್ಯಾಕೇಜ್. ನಾಯಕರಾಗಿ ಅವರು ಭಾರತದ ಬೇರಾವುದೇ ಪೂರ್ವನಾಯಕರಿಗೆ ಸಾಧ್ಯವಾಗದ ಅನೇಕ ಪ್ರಥಮಗಳನ್ನು ಒಲಿಸಿಕೊಂಡರು. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಟೆಸ್ಟ್ ಚಾಂಪಿಯನ್ಷಿಪ್, ಏಕದಿನ, ಟೆಸ್ಟ್ ಎರಡೂ ಮಾದರಿಗಳಲ್ಲಿ ತಂಡಕ್ಕೆ ನಂ.1 ಪಟ್ಟ. ಹೀಗೆ ಸರ್ವರೀತಿಯ ಯಶಸ್ಸು ಕಂಡರು. ಇಷ್ಟೆಲ್ಲ ಸಾಧನೆಗಳ ನಡುವೆಯೂ ಧೋನಿ ತಮ್ಮತನ ಕಳೆದುಕೊಳ್ಳಲಿಲ್ಲ. ಗೆದ್ದಾಗ ಬೀಗಲಿಲ್ಲ, ಸೋತಾಗ ಕುಗ್ಗಲಿಲ್ಲ.
ಹಾಗೆ ನೋಡಿದರೆ ಧೋನಿ ಸ್ವಭಾವತಃ ಅಂತಮುಖಿಯೇನಲ್ಲ. ಅವರಿಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಿದ್ದರು. ಅವರಿಗೂ ಸಾಕಷ್ಟು ಸ್ನೇಹಿತರಿದ್ದರು. ಹಾಗೆಂದು ಅವರು ವಾಚಾಳಿಯೂ ಅಲ್ಲ. ತುಂಬ ಹತ್ತಿರದವರಿಗೂ ಧೋನಿ ಯಾವ ಸಂದರ್ಭದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಊಹಿಸುವುದು ಕಷ್ಟವಾಗುತ್ತಿತ್ತು. ಏಕೆಂದರೆ ಅದಕ್ಕೊಂದು ಸಿದ್ಧಸೂತ್ರ ಇರುತ್ತಿರಲಿಲ್ಲ. ಕ್ರಿಕೆಟ್ ಆಟವನ್ನು ಧೋನಿ ಗ್ರಹಿಸುವ, ಅರ್ಥೈಸುವ ರೀತಿಯೇ ಬೇರೆಯಾಗಿರುತ್ತಿತ್ತು. ಈ ಧೋನಿತನದ ಮೊದಲ ಪರಿಚಯವಾಗಿದ್ದು 2007ರ ಟಿ20 ವಿಶ್ವಕಪ್ ಫೈನಲ್ನಲ್ಲಿ. ಕೊನೆಯ ಓವರ್ನಲ್ಲಿ ಪಾಕಿಸ್ತಾನಕ್ಕೆ 11 ರನ್ ಬೇಕಿದ್ದಾಗ ಜೋಗಿಂದರ್ ಶರ್ಮ ಅವರಿಗೆ ಬೌಲಿಂಗ್ ನೀಡಿದ್ದರು. ಮುಂದಿನದು ಇತಿಹಾಸ. ಓರ್ವ ನಾಯಕರಾಗಿ ಧೋನಿ ತಂತ್ರವನ್ನು ಅರ್ಥ ಮಾಡಿಕೊಂಡ ಎದುರಾಳಿ ನಾಯಕರು ಯಾರೂ ಇಲ್ಲ. ಜೊತೆ ಆಟಗಾರರಿಗೂ ಅವರ ನಡೆ ಕೊನೆಕ್ಷಣದವರೆಗೂ ಗೊತ್ತಾಗುತ್ತಿರಲಿಲ್ಲ. ಎದುರಾಳಿ ಆಟಗಾರರ ಸಾಮರ್ಥ್ಯ ಹಾಗೂ ಸಣ್ಣಪುಟ್ಟ ದೌರ್ಬಲ್ಯಗಳನ್ನೂ ಅರಿತಿರುತ್ತಿದ್ದ ಧೋನಿ ಅದಕ್ಕೆ ತಕ್ಕಂತೆ ತಮ್ಮ ವ್ಯೂಹ ಹೆಣೆಯುತ್ತಿದ್ದರು. ಯಾವ ಬ್ಯಾಟ್ಸ್ಮನ್ಗೆ ಯಾವ ರೀತಿ ಎಸೆತ ಹಾಕಬೇಕೆಂಬ ಬಗ್ಗೆ ಧೋನಿ ಬಳಿ ತಂತ್ರ ಸಿದ್ಧವಿರುತ್ತಿತ್ತು. ಅವರ ಕ್ಷೇತ್ರರಕ್ಷಕರ ನಿಯೋಜನೆ ಅಸಾಂಪ್ರದಾಯಿಕವಾಗಿರುತ್ತಿತ್ತು. ಅಷ್ಟೇ ಏಕೆ, ಶ್ರೀಲಂಕಾ ವಿರುದ್ಧದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಸ್ವತಃ ತಾವೇ 4ನೇ ಕ್ರಮಾಂಕದಲ್ಲಿ ಆಗಮಿಸಿ ಟ್ರೋಫಿ ಗೆಲ್ಲಿಸಿದ್ದು, ಇಂಗ್ಲೆಂಡ್ ವಿರುದ್ಧ ಪಂದ್ಯವೊಂದರಲ್ಲಿ ನಿರ್ಣಾಯಕ ಹಂತದಲ್ಲಿ ಇಶಾಂತ್ ಶರ್ಮ ಕೈಗೆ ಚೆಂಡಿತ್ತು ಸೋಲಬಹುದಾಗಿದ್ದ ಪಂದ್ಯ ಗೆಲ್ಲಿಸಿಕೊಂಡಿದ್ದು, ಬಾಂಗ್ಲಾದೇಶ ವಿರುದ್ಧ ಪಂದ್ಯದ ಕೊನೆಯ ಓವರ್ನಲ್ಲಿ ಹಾರ್ದಿಕ್ ಪಾಂಡ್ಯರನ್ನು ಬೌಲಿಂಗ್ಗಿಳಿಸುವ ಮೂಲಕ ಆಘಾತಕಾರಿ ಸೋಲಿನಿಂದ ಬಚಾವಾಗಿ 1 ರನ್ ಗೆಲುವು ಸಾಧಿಸಿದ್ದು... ಧೋನಿ ನಾಯಕತ್ವದಲ್ಲಿ ಇಂಥ ದಿಢೀರ್ ನಿರ್ಧಾರಗಳ ಸಂಖ್ಯೆ ಅಪಾರ. ವಿಶೇಷವೆಂದರೆ, ಎಂಥ ಅದ್ಭುತ ಗೆಲುವು ದಕ್ಕಿಸಿಕೊಂಡಾಗಲೂ ಧೋನಿ ಹಾರಾಡಲಿಲ್ಲ. 28 ವರ್ಷ ಅಂತರದ ಬಳಿಕ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಸಂದರ್ಭದಲ್ಲೂ ತಾವು ಬದಿಗೆ ಸರಿದು ಸಚಿನ್ ತೆಂಡುಲ್ಕರ್ರನ್ನು ಹೆಗಲಮೇಲೆ ಹೊತ್ತು ಮೆರೆಸಿದರು. ಹದಿನೈದು ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಧೋನಿ ಮಿತಿಮೀರಿ ಸಂಭ್ರಮಿಸಿದ್ದು, ಕೋಪತಾಪ ಪ್ರದರ್ಶಿಸಿದ್ದು ಬಹಳ ಕಡಿಮೆ. ಕಳೆದ ವರ್ಷ ರಾಜಸ್ಥಾನ ರಾಯಲ್ಸ್ ವಿರುದ್ಧ ಐಪಿಎಲ್ ಪಂದ್ಯದಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಸಿಟ್ಟಿಗೆದ್ದು ಮೈದಾನಕ್ಕೆ ನುಗ್ಗಿದ ಅಪವಾದವೊಂದನ್ನು ಬಿಟ್ಟರೆ, ಧೋನಿ ಯಾವತ್ತೂ ತಮ್ಮ ಭಾವುಕತೆಯನ್ನು ಜಗತ್ತಿಗೆ ತೋರಿಸಿದವರಲ್ಲ. ಇದನ್ನೂ ಓದಿ: ಆಲ್ರೌಂಡರ್ಗಳ ವಿಶ್ವಕಪ್: ಸವ್ಯಸಾಚಿಗಳೇ ನಿರ್ಣಾಯಕ
ಬಡತನವನ್ನೇ ಉಂಡುಟ್ಟು ಬೆಳೆದ ಧೋನಿ, ಅಪಾರ ಸಂಪತ್ತು ಒಲಿದುಬಂದಾಗಲೂ ಬದಲಾದವರಲ್ಲ. ಸೂಪರ್ಸ್ಟಾರ್ ಸ್ಟೇಟಸ್ಸು, ಸೆಲೆಬ್ರಿಟಿ ವರ್ಚಸ್ಸು ಯಾವತ್ತೂ ತಲೆಗೆ ಹತ್ತಲಿಲ್ಲ. ಆಪ್ತರ ವರ್ಗವನ್ನು ಯಾವತ್ತೂ ದೂರ ಮಾಡಿಕೊಳ್ಳಲಿಲ್ಲ. ಟೀಕೆಗಳು ಎದುರಾದಾಗ, ವಿರೋಧಗಳು ಬಂದಾಗ ಅದಕ್ಕೆ ಸ್ಪಷ್ಟೀಕರಣ ಕೊಡುವ ಗೋಜಿಗೂ ಹೋಗಲಿಲ್ಲ. ದಿಗ್ಗಜ ಆಟಗಾರರ ನಿವೃತ್ತಿಗೆ ಅವಸರಿಸಿದ ಅಪವಾದ ಬಂದಾಗಲೂ ಧೋನಿ ಮೌನ ಮುರಿಯಲಿಲ್ಲ. ಸೆಹ್ವಾಗ್, ಯುವರಾಜ್ರ ವಿಚಾರದಲ್ಲಿ ಆರೋಪಗಳು ಬಂದಾಗಲೂ ತಮ್ಮ ಅಂತರಂಗವನ್ನು ಹಂಚಿಕೊಳ್ಳಲಿಲ್ಲ. ತಮ್ಮದೇ ಟೆಸ್ಟ್ ನಿವೃತ್ತಿ, ನಾಯಕತ್ವ ವಿದಾಯವನ್ನು ಸದ್ದುಗದ್ದಲವಿಲ್ಲದೆ ಜನರಿಗೆ ತಿಳಿಸಿದ್ದ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿರ್ಗಮಿಸುವ ಸಂದರ್ಭದಲ್ಲೂ ತಮ್ಮ ಯಾವತ್ತಿನ ನಿಗೂಢತೆಯನ್ನು ಕಾಪಾಡಿಕೊಂಡರು. ಬದುಕಿನುದ್ದಕ್ಕೂ ಸಾಮಾಜಿಕ ಜಾಲತಾಣಗಳಿಂದ ದೂರವೇ ಉಳಿದಿರುವ ಅವರು ನಿವೃತ್ತಿ ನಿರ್ಧಾರಕ್ಕೆ ಮಾತ್ರ
ಇನ್ಸ್ಟಾಗ್ರಾಂ ಮಾಧ್ಯಮ ಆಯ್ಕೆ ಮಾಡಿಕೊಂಡು ಅಲ್ಲೂ ಅಚ್ಚರಿಪಡಿಸಿದರು. ತಮ್ಮ ಇಷ್ಟದ ಒಂದು ಹಾಡಿನ ಮೂಲಕ ತಮಗೆ ಆಪ್ತವಾದ ವ್ಯಕ್ತಿಗಳನ್ನು, ಮಧುರ ಕ್ಷಣಗಳನ್ನು, ನೋವಿನ ಸಂದರ್ಭಗಳನ್ನು ಸ್ಮರಿಸಿದರು. ಇದನ್ನೂ ಓದಿ: ಸವ್ಯಸಾಚಿ: ಅನ್ನದ ಋಣ, ದೇಹದ ಋಣ, ಬಾಲಿವುಡ್ ಗುಣ
ಧೋನಿ ತಮ್ಮ ಚೊಚ್ಚಲ ಇನಿಂಗ್ಸ್ನಲ್ಲಿ ರನೌಟ್ ಆಗಿದ್ದರು. ಕೊಟ್ಟಕೊನೆಯ ಇನಿಂಗ್ಸ್ನಲ್ಲೂ ರನೌಟ್ ಆಗಿ ನಿರ್ಗಮಿಸಿದ್ದರು. ಈ ಎರಡು ರನೌಟ್ಗಳ ನಡುವೆ ವಿಕೆಟ್ ಹಿಂದೆ ನಿಂತು ಅಸಂಖ್ಯಾತ ರನೌಟ್, ಸ್ಟಂಪ್ ಔಟ್ಗಳಿಗೆ ಕಾರಣರಾದರು. ಧೋನಿ ವಿಕೆಟ್ ಹಿಂದಿರುವರೆಂದರೆ, ಬ್ಯಾಟ್ಸ್ಮನ್ಗಳು ಕ್ರೀಸ್ ದಾಟಿ ರನ್ ಬಾರಿಸುವ ಧಾವಂತಕ್ಕೆ ಹೋಗುತ್ತಿರಲಿಲ್ಲ. ಎರಡನೇ ರನ್ಗಾಗಿ ಓಡುವ ಧೈರ್ಯವನ್ನಂತೂ ಮಾಡುತ್ತಲೇ ಇರಲಿಲ್ಲ. ಇದು ಧೋನಿ ಹಿರಿಮೆ. ‘ನಾನೋರ್ವ ಹೀಗೆ ಬಂದು ಹಾಗೆ ಹೋಗುವ ಕವಿ. ಹಿಂದೆಯೂ ನನಗಿಂತ ಉತ್ತಮರಿದ್ದರು, ಮುಂದೆಯೂ ನನಗಿಂತ ಶ್ರೇಷ್ಠ ಕವಿ ಬಂದುಹೋಗುತ್ತಾರೆ’ ಎಂಬರ್ಥದ ಹಾಡನ್ನು ಧೋನಿ ವಿದಾಯಕ್ಕೆ ಬಳಸಿಕೊಂಡರು. ಇಂಥ ಸಂತತ್ವವೇ ಧೋನಿ ಸ್ವಂತಿಕೆ. ಭಾರತೀಯ ಕ್ರಿಕೆಟ್ ಹಾಗೂ ಅಭಿಮಾನಿಗಳು ಧೋನಿಗೆ ಸದಾ ಋಣಿ. ಟೀಮ್ ಇಂಡಿಯಾ ಪರ ಧೋನಿ ಆಟ ನೋಡುವ ಅದೃಷ್ಟ ಇನ್ನಿಲ್ಲ. ಮುಂಬರುವ ಐಪಿಎಲ್ನಲ್ಲಿ ಅವರ ಆಟ ನೋಡುವ ಅವಕಾಶವಷ್ಟೇ ಸದ್ಯ ನಮ್ಮ ಮುಂದೆ.
**
ಇಂದು ನಾ ಹಾಡಿದರೂ ಅಂದಿನಂತೆಯೇ ಕುಳಿತು ಕೇಳುವಿರಿ ಸಾಕೆನಗೆ ಅದುವೇ ಬಹುಮಾನ..
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)