More

    ಸವ್ಯಸಾಚಿ ಅಂಕಣ: ಅಹಂಕಾರ ಅಳಿಯಲಿ ಹೊಸ ವರ್ಷ ಕನಸುಗಳು ಸಾಕಾರವಾಗಲಿ

    ಸವ್ಯಸಾಚಿ ಅಂಕಣ: ಅಹಂಕಾರ ಅಳಿಯಲಿ ಹೊಸ ವರ್ಷ ಕನಸುಗಳು ಸಾಕಾರವಾಗಲಿರಾಜನೊಬ್ಬ ತನ್ನೆಲ್ಲ ರಾಜಕಾರ್ಯಗಳ ನಡುವೆ ತಾನೇ ವಿಶೇಷ ಮುತುವರ್ಜಿ ವಹಿಸಿ ಬೆಕ್ಕೊಂದನ್ನು ಸಾಕಿದ್ದ. ಅದು ರಾಜ ಹೇಳಿದಂತೆಯೇ ಕೇಳುತ್ತಿತ್ತು. ನಿತ್ಯ ರಾತ್ರಿ ಭೋಜನ ಮಾಡುವ ಸಂದರ್ಭದಲ್ಲಿ ರಾಜ ಹಣತೆಯೊಂದನ್ನು ಹಚ್ಚಿ ಬೆಕ್ಕಿನ ನೆತ್ತಿಯ ಮೇಲೆ ಇಡುತ್ತಿದ್ದ. ಬೆಕ್ಕು ರಾಜನ ಊಟವಾಗುವವರೆಗೂ ಸ್ವಲ್ಪವೂ ಅಲುಗಾಡದೆ, ಹಣತೆ ಬೀಳಿಸದೆ ಧ್ಯಾನಕ್ಕೆ ಕುಳಿತಂತೆ ತಟಸ್ಥವಾಗಿ ಕುಳಿತಿರುತ್ತಿತ್ತು.

    ಅದೊಂದು ದಿನ ರಾಜ ಸಿಟ್ಟಿನ ಭರದಲ್ಲಿ ಮಂತ್ರಿಯನ್ನು ತರಾಟೆಗೆ ತೆಗೆದುಕೊಂಡು ‘ನನ್ನ ಬೆಕ್ಕಿಗಿರುವ ಏಕಾಗ್ರತೆಯೂ ನಿನಗಿಲ್ಲ’ ಎಂದು ಬೈದುಬಿಟ್ಟ. ಮಂತ್ರಿಗೆ ಅವಮಾನವಾದರೂ ರಾಜನೆದುರು ತೋರಿಸಿಕೊಳ್ಳಲಿಲ್ಲ. ‘ಮಹಾಸ್ವಾಮಿ, ಆ ಬೆಕ್ಕಿನ ಏಕಾಗ್ರತೆ ನನಗೂ ನೋಡುವಾಸೆ, ಅವಕಾಶ ಮಾಡಿಕೊಡುವಿರಾ’ ಎಂದು ಪ್ರಾರ್ಥಿಸಿದ. ಅದಕ್ಕೇನಂತೆ, ರಾತ್ರಿ ಭೋಜನ ಸಮಯಕ್ಕೆ ಸರಿಯಾಗಿ ಬರುವಂತೆ ರಾಜ ಸೂಚಿಸಿದ.

    ಆ ರಾತ್ರಿ ಮಂತ್ರಿ ಭೋಜನಗೃಹಕ್ಕೆ ಬಂದಾಗ ಊಟ ಮಾಡುತ್ತಿದ್ದ ರಾಜನೆದುರು ಬೆಕ್ಕು ನೆತ್ತಿ ಮೇಲೆ ಹಣತೆ ಹೊತ್ತು ಅಲುಗಾಡದಂತೆ ಕುಳಿತಿತ್ತು. ಆಗ ಮಂತ್ರಿ ಉಪಾಯವಾಗಿ ತನ್ನ ಕಿಸೆಯಿಂದ ಇಲಿಮರಿಯೊಂದನ್ನು ಹೊರಬಿಟ್ಟ. ಅದನ್ನು ಕಂಡಿದ್ದೇ ತಡ, ಬೆಕ್ಕು ಮೈಕೊಡವಿ, ಹಣತೆಯನ್ನು ಕೆಡವಿ ಛಂಗನೆ ಇಲಿಯತ್ತ ನೆಗೆಯಿತು.

    ಯಾವುದೇ ಸಾಧನೆ ಮಾಡಬೇಕಾದರೆ ಏಕಾಗ್ರತೆ, ದೃಢಸಂಕಲ್ಪ ಬೇಕು, ಪರಿಶ್ರಮವಿರಬೇಕು. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಪ್ರಯತ್ನಗಳಿಗೆ ತಕ್ಕ ಫಲ ದೊರಕದೆ ಇರುವುದಕ್ಕೆ ಕಾರಣ ಏಕಾಗ್ರತೆಯ ಕೊರತೆ. ಕೇವಲ ಕಣ್ಣು ಮುಚ್ಚಿ ಕುಳಿತರೆ ಅದು ಧ್ಯಾನವಲ್ಲ. ನಿದ್ರೆಯೂ ಆಗಿರಬಹುದು.

    ‘ಇಂದ್ರಿಯಗಳೆಂಬ ಕಳ್ಳರೈವರು/ಬಂಧಿಸಿ ತಮ್ಮ ವಿಷಯಕ್ಕೊಯ್ದೆನ್ನ/ ಕಂದಿಸಿ ಜ್ಞಾನವೆಂಬ ದೃಷ್ಟಿಯ/ ಎಂದೆಂದಿನ ಧರ್ಮಧನವನೊಯ್ದರು/ ಇಂದಿರೇಶ ಲೋಕಪತಿ ಸಿರಿಕೃಷ್ಣ ಕಾಯೆನ್ನ ತಂದೆ’/ ‘ಇಂದ್ರಿಯಗಳೇ ನಮ್ಮ ಮನಸ್ಸನ್ನು ಹಾಳುಗೆಡವುತ್ತವೆ. ಇಂದ್ರಿಯಗಳೆಂಬ ಐವರು ಕಳ್ಳರು ವಿವೇಚನೆಯೆಂಬ ನನ್ನ ಶಕ್ತಿಯನ್ನು ಬಂಧಿಸಿ, ವಿಷಯ ಸುಖಗಳ ದಾಸನಾಗುವಂತೆ ಮಾಡಿ, ಅರಿವಿನ ದೃಷ್ಟಿಯನ್ನು ಕುಂದಿಸಿ, ಸಂಗ್ರಹಿಸಿಟ್ಟಿದ್ದ ಪುಣ್ಯವೆಂಬ ಸಂಪತ್ತನ್ನು ಕದ್ದೊಯ್ದರು’ ಎಂದು ವ್ಯಾಸತೀರ್ಥರು ಹೇಳುತ್ತಾರೆ. ಹಾಗಾದರೆ, ಆಧುನಿಕ ಪ್ರಪಂಚದ ಯುದ್ಧೋನ್ಮಾದದ ಬದುಕಿನ ಓಟದಲ್ಲಿ ನಮ್ಮನ್ನು ನಾವು ಗೆಲ್ಲುವುದು ಹೇಗೆ? ಇದನ್ನೇ ಪುರಂದರದಾಸರು ಒಗಟಾಗಿ ಹೇಳುತ್ತಾರೆ.

    ‘ಮನೆಯ ಗಂಡ ಮಾಯವಾಗಲಿ (ನಮ್ಮ ಶರೀರಾಭಿಮಾನ ಅಳಿಯಲಿ)/ ಉಣಬಂದ ಮೈದುನ ಒರಗಲಿ (ಕಾಮಕ್ರೋಧ ಇತ್ಯಾದಿ ಅವಗುಣಗಳು ದೂರವಾಗಲಿ)/ ಅತ್ತಿಗೆ ನಾದಿನಿ ಸಾಯಲಿ (ಯಾವುದು ನಿಜವಲ್ಲವೋ, ಅಂಥ ನಮ್ಮ ಮನಸ್ಸನ್ನು ಆವರಿಸಿರುವ ಭ್ರಮೆಯ ಪೊರೆ ಕಳಚಲಿ)/ ಮನೆ ಹಾಳಾಗಿ ಹೋಗಲೋ ಹರಿಯೇ (ಅಭಿಮಾನ, ಅಹಂಕಾರ, ಅಜ್ಞಾನ, ಭ್ರಮೆಗಳ ಆಶ್ರಯತಾಣವಾದ ಮನಸ್ಸು ಹಾಳಾಗಲಿ)/ ಅತ್ತೆಯ ಕಣ್ಣೆರಡು ಹಿಂಗಲಿ (ಅಹಂಕಾರ ಮತ್ತು ದರ್ಪ ತೊಲಗಲಿ)/ ಮಾವನ ಕಾಲೆರಡು ಮುರಿಯಲಿ (ಎಲ್ಲವೂ ನನ್ನಿಂದಲೇ, ಎಲ್ಲವನ್ನೂ ನಾನೇ ಮಾಡಿದ್ದು ಎಂಬ ಭಾವ ಇಲ್ಲವಾಗಲಿ)/ ಹಿತ್ತಲ ಗೋಡೆಯು ಬೀಳಲಿ (ದುಷ್ಕೃತ್ಯಗಳಿಂದ ನಾವು ಶೇಖರಿಸಿಟ್ಟಿರುವ ಪಾಪಗಳು ನಶಿಸಲಿ)/ ಕಾಡಕತ್ತಲೆಯಾದರೂ ಕವಿಯಲಿ (ಅರೆಬರೆ ಜ್ಞಾನಕ್ಕಿಂತ ಏನೂ ತಿಳಿಯದ ಅಜ್ಞಾನವೇ ಮೇಲು)/ ಕಂದನ ಕಣ್ಣೆರಡು ಮುಚ್ಚಲಿ, ಚಂದದ ಹಾವು ಕಚ್ಚಲಿ (ಮೋಹ, ಮದಗಳು ಕಾಲಪುರುಷನಿಂದ ನಾಶವಾಗಲಿ)/ ದ್ವಂದ್ವಾರ್ಥಗಳೆಲ್ಲ ಬಿಚ್ಚಲಿ, ಪುರಂದರ ವಿಠಲ ಮೆಚ್ಚಲಿ (ಮನಸ್ಸಿನ ಚಂಚಲತೆ ಹೋಗಿ ನಿಶ್ಚಲತೆ ಪ್ರಾಪ್ತವಾಗಲಿ, ಸಾಧನೆಯು ಕೈಹಿಡಿಯಲಿ)’.

    ಹರಿದಾಸ ಪರಂಪರೆಯನ್ನು, ದಾಸಸಾಹಿತ್ಯವನ್ನು ಹರಿಕಥೆಗಳ ಮೂಲಕ ನಾಡಿನಲ್ಲಿ ಪಸರಿಸಿದ ಸಂತಶ್ರೇಷ್ಠ ಭದ್ರಗಿರಿ ಅಚ್ಯುತದಾಸರು ಭಗವದ್ಗೀತೆಯ ಸಂಪೂರ್ಣ ಸಾರಸರ್ವಸ್ವವನ್ನು ‘ಗೀತಾರ್ಥ ಚಿಂತನೆ’ ಎಂಬ ತಮ್ಮ ಬೃಹದ್​ಗ್ರಂಥದಲ್ಲಿ ಹಿಡಿದಿಟ್ಟಿದ್ದಾರೆ. ಪುರಂದರ ದಾಸರ ಮೇಲಿನ ಕೀರ್ತನೆಯನ್ನು ಗೀತೆಯ ಬೆಳಕಿನಲ್ಲಿ ದಾಸರು ವಿಶ್ಲೇಷಿಸಿರುವುದು ಈ ರೀತಿ.

    ಸಾಧನೆ ಮಾಡುವುದಕ್ಕೆ ನಾನಾ ದಾರಿ. ಆದರೆ, ಮನಸ್ಸಿನಲ್ಲಿ ಗೊಂದಲಗಳು ಅನೇಕ. ಅನೇಕ ಬಾರಿ ಇಷ್ಟಾನಿಷ್ಟಗಳು ದ್ವಂದ್ವ ಹುಟ್ಟುಹಾಕುವುದರಿಂದ ನಿರ್ಧಾರ ತೆಗೆದುಕೊಳ್ಳುವುದು ವಿಳಂಬವಾಗುತ್ತದೆ. ಸುಖದುಃಖಗಳು ಯಾವತ್ತೂ ಒಂಟಿಯಾಗಿ ಬರುವುದಿಲ್ಲ. ಒಂದು ಬರುವಾಗ ಜೊತೆಯಲ್ಲಿ ಇನ್ನೊಂದು ಕೂಡ ಅನುಸರಿಸಿರುತ್ತದೆ. ಹಾಗಾಗಿ ಬಂದದ್ದೆಲ್ಲ ಬರಲಿ, ಹರಿಯ ದಯೆಯೊಂದಿರಲಿ ಎಂಬ ಸಂತೃಪ್ತ ಭಾವ ನಮ್ಮಲ್ಲಿದ್ದರೆ ಎದೆ ಹಗುರ, ನೋವಿನ ಭಾರ ದೂರ. ನಮ್ಮ ನಂಬಿಕೆಗಳು, ಅದನ್ನು ಅನುಸರಿಸಿ ಬರುವ ಗೊಂದಲಗಳು ಹೇಗಿರುತ್ತದೆ ಎನ್ನುವುದಕ್ಕೆ ಸಂತ ಭದ್ರಗಿರಿ ಅಚ್ಯುತದಾಸರು ಉದಾಹರಣೆಯೊಂದನ್ನು ಕೊಡುತ್ತಾರೆ.

    ಶಿವಭಕ್ತನೊಬ್ಬ ಒಮ್ಮೆ ದೇವಾಲಯಕ್ಕೆ ನಡೆದುಹೋಗುವಾಗ ದಾರಿಯಲ್ಲಿ ಬಿದ್ದಿದ್ದ ವಿಗ್ರಹವೊಂದು ಕಾಣಿಸಿತು. ಭಕ್ತಿಯಿಂದ ಎತ್ತಿನೋಡಿದರೆ, ಹರಿಹರೇಶ್ವರನ ವಿಗ್ರಹ ಅದು. ಮನೆಗೆ ತೆಗೆದುಕೊಂಡುಹೋಗಿ ಪೂಜೆ ಮಾಡೋಣವೆಂದರೆ, ವಿಗ್ರಹದಲ್ಲಿ ಅರ್ಧ ಭಾಗ ಹರಿ (ವಿಷ್ಣು) ಇದ್ದಾನೆ. ದಾರಿಯಲ್ಲೇ ಬಿಟ್ಟುಹೋಗೋಣವೆಂದರೆ ಅರ್ಧಭಾಗದಲ್ಲಿ ಹರ (ಶಿವ) ಇದ್ದಾನೆ. ಕೈಗೆಬಂದ ಶಿವನ ವಿಗ್ರಹ ಬಿಡುವುದುಂಟೇ? ಇದೇ ಗೊಂದಲದಲ್ಲೇ ವಿಗ್ರಹವನ್ನು ಮನೆಗೆ ತಂದ ಆ ಭಕ್ತ ಹರಿಹರ ವಿಗ್ರಹದ ನಡುಭಾಗಕ್ಕೆ ಸರಿಯಾಗಿ ದಾರವೊಂದನ್ನು ಇಳಿಬಿಟ್ಟು ವಿಷ್ಣುವಿನ ಭಾಗ ಕಾಣದಂತೆ ಬಟ್ಟೆಯಿಂದ ಮುಚ್ಚಿ, ಹರನ ಭಾಗದಲ್ಲಿ ಮಾತ್ರ ಪೂಜೆ ಮಾಡಿದ.

    ವಿಗ್ರಹದ ಅರ್ಧಭಾಗಕ್ಕೆ ಮಾತ್ರ ಪಂಚಾಮೃತ ಅಭಿಷೇಕ ಮಾಡಿ, ಹೂವೇರಿಸಿ, ಗಂಧ ಹಚ್ಚಿ, ಧೂಪ, ಊದಿನಕಡ್ಡಿ ಹಚ್ಚಬೇಕೆನ್ನುವಾಗ, ಧೂಪದ ಪರಿಮಳವನ್ನು ವಿಷ್ಣು ಆಘ್ರಾಣಿಸಬಾರದಲ್ಲ ಎಂಬ ಯೋಚನೆ ಬಂತು. ಕೂಡಲೇ ಆತ ವಿಗ್ರಹದ ವಿಷ್ಣುವಿನ ಭಾಗದ ಮೂಗಿನ ಹೊಳ್ಳೆಗೆ ಹತ್ತಿ ಇಟ್ಟ. ಕೂಡಲೇ ಮಹಾವಿಷ್ಣು ಆತನ ಮುಂದೆ ಪ್ರತ್ಯಕ್ಷನೇ ಆಗಿಬಿಟ್ಟ. ಈ ಶಿವಭಕ್ತನಿಗೆ ಆಘಾತ. ‘ನಾನು ಶಿವನಪೂಜೆ ಮಾಡಿದ್ದು, ನೀನೇಕೆ ಬಂದೆ’ ಎಂದು ಪ್ರಶ್ನಿಸಿದಾಗ, ‘ನೀನು ಯಾರ ಪೂಜೆಯನ್ನಾದರೂ ಮಾಡು, ವಿಷ್ಣು ಇದ್ದಾನೆ ಎಂದು ನಂಬಿ ನನ್ನ ಮೂಗಿಗೆ ಹತ್ತಿ ಇಟ್ಟೆಯಲ್ಲ, ನನಗೆ ಅಷ್ಟು ಸಾಕು, ನಿನ್ನ ಭಕ್ತಿ ಮೆಚ್ಚಿ ಬಂದಿದ್ದೇನೆ’ ಎಂದು ವಿಷ್ಣು ವರ ನೀಡಿದನಂತೆ. ಅದರರ್ಥ, ಭಕ್ತಿ ಇರಲಿ, ದ್ವೇಷ ಇರಲಿ, ಇಲ್ಲವೇ ಇಲ್ಲ ಎಂದು ನಿರಾಕರಿಸುವುದಕ್ಕಿಂತ, ಇಷ್ಟವಿಲ್ಲದ ಶಕ್ತಿಯೊಂದನ್ನು ದ್ವೇಷಿಸುವುದೂ ಭಕ್ತಿಯೇ.

    ಜೀವನದಲ್ಲಿ ನಮ್ಮ ಗುರಿ ಏನೆನ್ನುವುದು ಸ್ಪಷ್ಟವಾಗಿರಬೇಕು. ಆದರೆ, ಅನೇಕ ಬಾರಿ ಗುರಿ ತಲುಪುವುದಕ್ಕೆ ಮೊದಲೇ ದಾರಿಯಲ್ಲಿ ಎದುರಾಗುವ ಪ್ರಲೋಭನೆಗಳಿಗೆ ಬಲಿಯಾಗುವುದು ವೈಫಲ್ಯಕ್ಕೆ ಕಾರಣ. ಶ್ರೀಮಂತ ವ್ಯಕ್ತಿಯೊಬ್ಬ ತನ್ನ ತೋಟದಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ಕೆಲಸದಾಳುಗಳಿಂದ ಹೊರಿಸಿಕೊಂಡು ಗೆಳೆಯನ ಮನೆಗೆ ಬರುತ್ತಾನೆ. ಅಲ್ಲಿದ್ದ ಮಕ್ಕಳನ್ನು ಕರೆದು ಆಳುಗಳ ಮೂಲಕವೇ ಹಣ್ಣುಗಳನ್ನು ಹಂಚುತ್ತಾನೆ. ಮುಂದಿನ ಬಾರಿ ಆ ಶ್ರೀಮಂತ ಗೆಳೆಯನ ಮನೆಗೆ ಬಂದಾಗ ಅಲ್ಲಿದ್ದ ಮಕ್ಕಳು ಜೊತೆಯಲ್ಲಿ ಬರುವ ಕೆಲಸದವರ ಕಡೆಗೆ ಓಡುತ್ತವೆ, ಶ್ರೀಮಂತನತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಅಂದರೆ, ನಿಜವಾದ ಗಮ್ಯ ಬೇರೆಲ್ಲೋ ಇದ್ದರೂ, ಯಾವುದೋ ಶಕ್ತಿ ನಿಯಂತ್ರಿಸುತ್ತಿದ್ದರೂ, ಕಣ್ಣೆದುರಿನ ಆಕರ್ಷಣೆಗಳನ್ನೇ ನಾವು ನಿಜ ಎಂದು ನಂಬಿ ಅವುಗಳ ಹಿಂದೆ ಓಡುತ್ತಿರುತ್ತೇವೆ.

    ಖುಷಿಯನ್ನು ಹಂಚಿ ಬದುಕು ಎಂದರು ಹಿರಿಯರು. ಆದರೆ, ಜಗತ್ತಿನಲ್ಲಿ ಯಶಸ್ವಿ ವ್ಯಕ್ತಿಗಳಿಗೆ ತಮ್ಮ ಯಶಸ್ಸಿನ ಸಂತೋಷವನ್ನು ಸುತ್ತಲಿದ್ದವರೊಂದಿಗೆ ಹಂಚಿಕೊಳ್ಳುವುದಕ್ಕೆ ಅವರ ಅಹಂಕಾರವೇ ಅಡ್ಡಿಯಾಗುತ್ತದೆ. ತಮ್ಮ ಶಕ್ತಿ, ಸಾಮರ್ಥ್ಯ, ಬುದ್ಧಿವಂತಿಕೆ, ಪ್ರತಿಭೆಯ ಪ್ರಭಾವಳಿಯಲ್ಲಿ ಅವರು ಕಳೆದುಹೋಗಿರುತ್ತಾರೆ. ಸಾಧನೆಯ ಹಾದಿಯಲ್ಲಿರುವ ದೃಢಚಿತ್ತ, ಸ್ವಯಂನಿಗ್ರಹ ಎಷ್ಟೋ ಬಾರಿ ಗೆದ್ದ ಬಳಿಕ ಇರುವುದಿಲ್ಲ. ಮಹಾಭಾರತದಲ್ಲಿ ಅರ್ಜುನ ಮಾನವ ಸ್ವರೂಪದಲ್ಲೇ ದೇವಲೋಕಕ್ಕೆ ಹೋಗಿಬಂದವನು.

    ಸ್ವರ್ಗದಲ್ಲಿರುವಾಗ ಸ್ವತಃ ಊರ್ವಶಿಯೇ ಆತನ ರೂಪಕ್ಕೆ ಮರುಳಾಗಿ ವರಿಸೆಂದರೂ, ಒಲಿದುಬಂದವಳಲ್ಲಿ ಮಾತೃಸ್ವರೂಪವನ್ನು ಕಂಡು, ‘ನಿನ್ನೊಡನೆ ರಮಿಸಲಾರೆ, ಶಾಪ ಕೊಟ್ಟರೂ ಅನುಭವಿಸುವೆ’ ಎಂದವನು. ವಿರಾಟ ರಾಜನ ಅರಮನೆಯಲ್ಲಿ ಅಜ್ಞಾತವಾಸ ಕಳೆದ ಬಳಿಕ ಮಗಳು ಉತ್ತರೆಯನ್ನು ವಿವಾಹವಾಗೆಂದು ಪ್ರಸ್ತಾಪ ಬಂದಾಗಲೂ ಆಕೆಯನ್ನು ಮಗಳಂತೆ ಕಂಡಿದ್ದೇನೆ, ಸೊಸೆಯಾಗಿ ಸ್ವೀಕರಿಸುತ್ತೇನೆ, ಮಡದಿಯಂತಲ್ಲ ಎಂಬ ದೃಢಚಿತ್ತ ಅರ್ಜುನನದು. ಆದರೆ, ಮಹಾಭಾರತ ಯುದ್ಧ ಮುಗಿಯುತ್ತ ಬಂದಂತೆ ಅರ್ಜುನನಲ್ಲಿ ತನ್ನ ಪರಾಕ್ರಮದ ಬಗ್ಗೆ ಅಹಂಕಾರ ಮೂಡಿತ್ತು. ‘ಈ ಗೆಲುವು ನನ್ನ ಗಾಂಢೀವದಿಂದ, ನನ್ನ ಪರಾಕ್ರಮದಿಂದಲೇ ಸಾಧ್ಯವಾಯಿತು’ ಎಂಬ ಭ್ರಮೆಯಲ್ಲಿ ಆತ ಮುಳುಗಿದ್ದ. ಇದು ಕೃಷ್ಣನಿಗೂ ಗೊತ್ತಾಗಿತ್ತು. 18ನೇ ದಿನದ ಯುದ್ಧಮುಗಿದು ಕೌರವರೆಲ್ಲ ಸೋತು ಸತ್ತ ಮೇಲೆ ರಣರಂಗದಿಂದ ಕೃಷ್ಣಾರ್ಜುನರು ಮರಳುತ್ತಾರೆ. ಯುದ್ಧರಂಗದಿಂದ ಶಿಬಿರಕ್ಕೆ ಬಂದಾಗ ಸಾಮಾನ್ಯವಾಗಿ ಕೃಷ್ಣ ಮೊದಲು ರಥದಿಂದಿಳಿದು ಬಳಿಕ ಅರ್ಜುನನಿಗೆ ಇಳಿಯುವಂತೆ ಸೂಚಿಸುತ್ತಿದ್ದ.

    ಆದರೆ, ಆ ದಿನ ಅರ್ಜುನನಿಗೆ ಮೊದಲು ಇಳಿಯುವಂತೆ ಸೂಚಿಸಿದ. ಸೂತಸ್ಥಾನದಲ್ಲಿ ಕುಳಿತಿರುವ ಕೃಷ್ಣ ರಥದಲ್ಲೇ ಕುಳಿತು, ಯುದ್ಧ ಗೆದ್ದ ತನ್ನನ್ನು ಮೊದಲು ಇಳಿಯುವಂತೆ ಹೇಳುತ್ತಿರುವನಲ್ಲ ಎಂಬ ಭಾವ ಅರ್ಜುನನಲ್ಲಿ ಸುಳಿದರೂ, ತೋರಗೊಡದೆ ಇಳಿದ. ಬಳಿಕ, ರಥದಿಂದ ಕುದುರೆಗಳನ್ನು ಬಿಚ್ಚಲು ಹೇಳಿದ ಕೃಷ್ಣ, ಧ್ವಜಸ್ಥಾನದಲ್ಲಿ ನೆಲೆಸಿದ್ದ ಮಾರುತಿಗೆ ಸ್ವಸ್ಥಾನಕ್ಕೆ ಮರಳಲು ಸೂಚಿಸಿದ. ಕೊನೆಯವನಾಗಿ ಕೃಷ್ಣ ರಥದಿಂದ ಇಳಿದ. ಕೃಷ್ಣ ಇಳಿಯುತ್ತಿದ್ದಂತೆಯೇ ಆ ರಥ ಬೆಂಕಿ ತಗುಲಿದ ಕರ್ಪರದಂತೆ ಕ್ಷರ್ಣಾರ್ಧದಲ್ಲಿ ಸುಟ್ಟುಬೂದಿಯಾಯಿತು. ಅಲ್ಲಿದ್ದವರಿಗೆಲ್ಲ ಗಾಬರಿ. ಇದೆಂಥ ಅಪಶಕುನವೋ ಎಂಬ ಚಿಂತೆ.

    ಅಲ್ಲಿಯೇ ಇದ್ದ ದ್ರೌಪದಿ, ‘ಕೃಷ್ಣ ಇದೇನಿದು’ ಎಂದು ಪ್ರಶ್ನಿಸುವಾಗ, ಕೃಷ್ಣ ವಿವರಿಸುತ್ತಾನೆ. ‘ಯುದ್ಧದಲ್ಲಿ ಭೀಷ್ಮ, ದ್ರೋಣ, ಕರ್ಣ ಮೊದಲಾದ ಅತಿರಥಮಹಾರಥರು ಅರ್ಜುನನ ಮೇಲೆ, ಈ ರಥದ ಮೇಲೆ ಮಹಾಮಹಾ ಅಸ್ತ್ರಗಳನ್ನು, ಮಂತ್ರಾಸ್ತ್ರಗಳನ್ನು ಪ್ರಯೋಗಿಸಿದರು. ಆದರೆ, ನನ್ನ ಸೂಚನೆಯಂತೆ ಧ್ವಜಸ್ಥಾಯಿಯಾಗಿದ್ದ ಮಾರುತಿ ಆ ಎಲ್ಲ ಅಸ್ತ್ರಗಳನ್ನು ನಿಗ್ರಹಿಸಿದ್ದ. ಈಗ ರಥದಲ್ಲಿ ಮಾರುತಿಇಲ್ಲ. ಹಾಗಾಗಿ ಅಸ್ತ್ರಗಳ ಪ್ರಭಾವದಿಂದ ರಥ ಬೂದಿಯಾಯಿತು’ ಎಂಬ ಕೃಷ್ಣನ ಮಾತಿನ ಬೆನ್ನಲ್ಲೇ ‘ಎಲ್ಲರನ್ನೂ ನಾನೇ ಸೋಲಿಸಿದ್ದು, ಯುದ್ಧ ನಾನೇ ಗೆದ್ದಿದ್ದು’ ಎಂಬ ಅರ್ಜುನನ ಅಹಂಕಾರವೂ ಬೂದಿಯಾಗಿತ್ತು. ಕೃಷ್ಣಾರ್ಜುನರ ರಥದಂತೆ ಕಾಲಚಕ್ರವೂ. ದಿನಗಳು ಕಳೆಯುವುದು, ವರ್ಷಗಳು ಉರುಳುವುದು ನಮ್ಮ ಜ್ಞಾನ, ಅರಿವಿಗೆ ನಿಲುಕದ್ದು. ವೃತ್ತಿಯಲ್ಲಿ, ಜೀವನದಲ್ಲಿ, ಕೆಲಸಕಾರ್ಯಗಳಲ್ಲಿ ವೈಫಲ್ಯಗಳು ನಮ್ಮಿಂದ ಆಗಿಲ್ಲ, ಯಶಸ್ಸೆಲ್ಲವೂ ನಮ್ಮ ಶ್ರಮ ಎಂಬ ಅಹಂಕಾರದಿಂದ ಮಸುಕಾಗುವುದು ನಮ್ಮದೇ ವ್ಯಕ್ತಿತ್ವ.

    2019 ಕಳೆದು ಇಪ್ಪತ್ತನೇ ಇಸವಿಗೆ ಕಾಲಿಟ್ಟಿದ್ದೇವೆ. ಲೌಕಿಕ ಪ್ರಪಂಚದಲ್ಲಿ ಇಪ್ಪತ್ತಕ್ಕೆ ವಿಪರೀತ ಮಹತ್ವವಿದೆ. ಏಕೆಂದರೆ, ಬದುಕಿನಲ್ಲಿ ಗಮ್ಮತ್ತು, ಸಂಪತ್ತು ಅದರ ಬೆನ್ನ ಹಿಂದೆಯೇ ವಿಪತ್ತು, ಆಪತ್ತು ಎಲ್ಲವೂ ಹಿಂಬಾಲಿಸುವುದು ಈ ವಯಸ್ಸಿನಲ್ಲೇ. ನಮ್ಮ ಎಚ್ಚರ, ನಮ್ಮ ವಿವೇಚನೆ ನಮ್ಮ ಕೈಯಲ್ಲಿರುವವರೆಗೆ ಬದುಕು ಸುರಕ್ಷಿತ. ಅದನ್ನೇ ದಾಸರು ಬುದ್ಧಿಯಲಿ ತನುಮನವ ತಿದ್ದಿಕೊಳ್ಳಲು ಬೇಕು/ ಶುದ್ಧನಾಗಿರಬೇಕು ಕರಣತ್ರಯಗಳಲಿ ಎಂದು ಮಾರ್ಗದರ್ಶನ ಮಾಡಿದ್ದಾರೆ. ಕಲಿಯುವುದು, ಮರೆಯುವುದು ನಮ್ಮ ಕೈಯಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts