More

    ಸವ್ಯಸಾಚಿ ಅಂಕಣ: ಅದೃಷ್ಟದ ಹುಡುಕಾಟ ಮನೀಷ್ ಪಾಂಡೆ ಪರದಾಟ

    ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ

    ಆಡಿಸಿದೆ ಕಾಡಿಸಿದೆ ಅಳಿಸಿ ನಗುತಿದೆ…

    ಸವ್ಯಸಾಚಿ ಅಂಕಣ: ಅದೃಷ್ಟದ ಹುಡುಕಾಟ ಮನೀಷ್ ಪಾಂಡೆ ಪರದಾಟಸರಿಯಾಗಿ ಹತ್ತು ವರ್ಷ ಕೆಳಗೆ. ಮುಂಬೈ ವಿರುದ್ಧದ ರಣಜಿ ಟ್ರೋಫಿ ಫೈನಲ್ ಪಂದ್ಯ. ಮೈಸೂರಿನಲ್ಲಿ ನಡೆದ ಆ ಪಂದ್ಯದಲ್ಲಿ ಬಲಾಢ್ಯ ಮುಂಬೈ ಭರ್ಜರಿ ಆಟವಾಡಿ ಕರ್ನಾಟಕದ ಗೆಲುವಿಗೆ 338 ರನ್​ಗಳ ಬೆಟ್ಟದೆತ್ತರದ ಗುರಿ ನಿಗದಿಪಡಿಸಿತ್ತು. ಕರ್ನಾಟಕ ತಂಡ ಬಹುತೇಕ ಹೋರಾಟ ಕೈಬಿಟ್ಟಾಗಿತ್ತು. ಪ್ರಮುಖ ಆಟಗಾರರೆಲ್ಲರೂ ಕೈಚೆಲ್ಲಿಯಾಗಿತ್ತು. ಆದರೆ, ಒಬ್ಬ ಯುವಕ ಮಾತ್ರ ಅಜಿತ್ ಅಗರ್ಕರ್ ಪಡೆಗೆ ಸೆಡ್ಡು ಹೊಡೆದಿದ್ದ. ಹೌದು, ಪಂದ್ಯದ ನಾಲ್ಕನೇ ಇನಿಂಗ್ಸ್​ನಲ್ಲಿ, ಚಿತ್ರವಿಚಿತ್ರವಾಗಿ ವರ್ತಿಸುತ್ತಿದ್ದ ಪಿಚ್​ನಲ್ಲಿ, ಬಲಿಷ್ಠ ಬೌಲಿಂಗ್ ಪಡೆ ಹೊಂದಿದ್ದ ಮುಂಬೈ ತಂಡದ ವಿರುದ್ಧ ಏಕಾಂಗಿ ಹೋರಾಟ ನಡೆಸಿದ್ದ ಮನೀಷ್ ಪಾಂಡೆ ಅವಿಸ್ಮರಣೀಯ 144 ರನ್ ಬಾರಿಸಿದ್ದರು. ಪಾಂಡೆ ಸಾಹಸ ಅದೆಷ್ಟು ಅದ್ಭುತವಾಗಿತ್ತೆಂದರೆ, ರಣಜಿ ಟ್ರೋಫಿ ಇತಿಹಾಸದಲ್ಲಿ ಕರ್ನಾಟಕದ ಪಾಲಿಗೆ ಅದ್ಭುತ ಗೆಲುವೊಂದು ಬೆರಳಂಚಿನಲ್ಲಿತ್ತು. ಕೊನೆಗೂ ವಿಧಿಯಾಟ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಕೇವಲ 6 ರನ್​ಗಳಿಂದ ರಾಜ್ಯ ತಂಡ ಸೋತು ಪ್ರಶಸ್ತಿ ವಂಚಿತವಾಗಿತ್ತು. ಆದರೆ, ಪಾಂಡೆ ಹೋರಾಟ ಯಾವತ್ತಿಗೂ ನೆನಪಿನಲ್ಲುಳಿಯುವಂಥದ್ದಾಗಿತ್ತು.

    ಅದೇ ಪಂದ್ಯದಲ್ಲಿ ಆಲ್ರೌಂಡರ್ ಅಭಿಷೇಕ್ ನಾಯರ್ ಅವರನ್ನು ಪಾಂಡೆ ಒಂದೇ ಕೈನಲ್ಲಿ ಕ್ಯಾಚ್ ಹಿಡಿದು ಔಟ್ ಮಾಡಿದ ರೀತಿಯೂ ಅಷ್ಟೇ ಚೇತೋಹಾರಿಯಾಗಿತ್ತು. ಮೊನ್ನೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಮಿಂಚಿನ ವೇಗದಲ್ಲಿ ಮೇಲಕ್ಕೆ ಜಿಗಿದು ಒಂದೇ ಕೈನಲ್ಲಿ ಅದ್ಭುತ ಕ್ಯಾಚ್ ಹಿಡಿದು ಡೇವಿಡ್ ವಾರ್ನರ್​ರನ್ನು ಔಟ್ ಮಾಡಿದ ಪಾಂಡೆ, ಅದೇ ರೀತಿ ನಾಯರ್​ರನ್ನೂ ಅದ್ಭುತ ಜಿಗಿತದ ಮೂಲಕ ಒಂದೇ ಕೈಯಲ್ಲಿ ಶರವೇಗದಲ್ಲಿದ್ದ ಚೆಂಡನ್ನು ಕ್ಯಾಚ್ ಹಿಡಿದಿದ್ದರು. ಆ ಕ್ಯಾಚ್ ಇವತ್ತಿಗೂ ಭಾರತದ ದೇಶಿ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಕ್ಯಾಚ್​ಗಳಲ್ಲೊಂದೆನಿಸಿದೆ.

    ಮನೀಷ್ ಪಾಂಡೆ ಎಂದರೇ ಹಾಗೆ. ವಿಶೇಷ ಪ್ರತಿಭೆ, ವಿಶೇಷ ಆಟಗಾರ. ಕರ್ನಾಟಕ ಕ್ರಿಕೆಟ್​ನ ಅಪೂರ್ವ ಬ್ಯಾಟ್ಸ್​ಮನ್​ಗಳ ಯಾದಿಯಲ್ಲಿ ಶಾಶ್ವತ ಸ್ಥಾನ ಪಡೆಯುವಂಥ ಯೋಗ್ಯತೆಯುಳ್ಳವರು. ತಾಂತ್ರಿಕವಾಗಿ ಗಟ್ಟಿಗ ಬ್ಯಾಟ್ಸ್​ಮನ್. ಸುದೀರ್ಘ ಇನಿಂಗ್ಸ್ ಆಡುವ ಛಾತಿ, ಶಕ್ತಿ ಎರಡೂ ಉಳ್ಳವರು. ಪ್ರತಿಕೂಲ ಸನ್ನಿವೇಶಗಳಲ್ಲಿ, ನಿರ್ಣಾಯಕ ಸಂದರ್ಭಗಳಲ್ಲಿ ದೊಡ್ಡ ಆಟ ಆಡುವಂಥ ಮನೋಬಲ ಉಳ್ಳವರು. ಓರ್ವ ಅತ್ಯುತ್ತಮ ಕ್ರಿಕೆಟಿಗನೆನಿಸಿಕೊಳ್ಳಲು ಬೇಕಾದ ಎಲ್ಲ ಗುಣಲಕ್ಷಣಗಳನ್ನು ಹೊಂದಿರುವಂಥ ಆಟಗಾರ. ಆದರೂ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅವರ ಯೋಗ್ಯತೆಗೆ ತಕ್ಕ ನ್ಯಾಯ ಒದಗಿಸುವಂಥ ಯೋಗ ಅವರಿಗಿನ್ನೂ ಒಲಿದೇ ಇಲ್ಲ. ಅದೇ ಪಾಂಡೆ ಪಾಲಿನ ದುರದೃಷ್ಟ.

    ಮನೀಷ್ 2008ರಲ್ಲೇ ವಿರಾಟ್ ಕೊಹ್ಲಿ ಜೊತೆ ಮಲೇಶಿಯಾದಲ್ಲಿ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಆಡಿದವರು. ಅದರ ಮಾರನೇ ವರ್ಷ ರಣಜಿ ಟ್ರೋಫಿಯಲ್ಲಿ ಒಂದೇ ಋತುವಿನಲ್ಲಿ 800ಕ್ಕೂ ಅಧಿಕ ರನ್ ಬಾರಿಸಿ ದೇಶದ ಗಮನ ಸೆಳೆದವರು. ಆ ಋತುವಿನಲ್ಲಿ ಅವರು 5 ಶತಕ ಬಾರಿಸಿದ್ದರು. 2013-14, 2014-15ರಲ್ಲಿ ಸತತ ಎರಡು ವರ್ಷ ಕರ್ನಾಟಕ ತಂಡ ವಿನಯ್ಕುಮಾರ್ ನಾಯಕತ್ವದಲ್ಲಿ ರಣಜಿ ಟ್ರೋಫಿ ಚಾಂಪಿಯನ್ ಪಟ್ಟಕ್ಕೇರಿದಾಗ ಬ್ಯಾಟ್ಸ್​ಮನ್ ಆಗಿ ಮನೀಷ್ ಕೊಡುಗೆ ಅಮೂಲ್ಯವಾಗಿತ್ತು. ಕಳೆದ ಸಾಲಿನಲ್ಲಿ ಕರ್ನಾಟಕ ತಂಡದ ನಾಯಕರಾಗಿ ವಿಜಯ್ ಹಜಾರೆ ಟ್ರೋಫಿ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆಲ್ಲಿಸಿಕೊಟ್ಟವರು ಮನೀಷ್.

    ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಅವರು. 2009ರಲ್ಲಿ ಟೂರ್ನಿ ದಕ್ಷಿಣ ಆಫ್ರಿಕಾದಲ್ಲಿ ನಡೆದಾಗ ಪಾಂಡೆ ಬಾರಿಸಿದ್ದ ಆ ಶತಕ ಐತಿಹಾಸಿಕವಾಗಿತ್ತು. 2014ರ ಐಪಿಎಲ್ ಫೈನಲ್​ನಲ್ಲಿ ಮನೀಷ್ ಭರ್ಜರಿ 94 ರನ್ ಬಾರಿಸಿ ಕೋಲ್ಕತ್ತ ನೈಟ್​ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಆ ಇನಿಂಗ್ಸ್ ಗಾಗಿ ಅವರು ಪಂದ್ಯಶ್ರೇಷ್ಠರೂ ಆಗಿದ್ದರು. ಅಷ್ಟಾಗಿಯೂ ಇವತ್ತಿಗೂ ಐಪಿಎಲ್​ನಲ್ಲಿ ಅವರು ನೆಲೆ ಕಂಡುಕೊಳ್ಳಲಾಗಿಲ್ಲ. ತಂಡದಿಂದ ತಂಡಕ್ಕೆ ಅವರ ವಲಸೆ ಮುಂದುವರಿದಿದೆ. ಆಟಗಾರರ ಹರಾಜಿನಲ್ಲಿ ಅವರ ತಾರಾಮೌಲ್ಯ ಹಾಗೂ ಮಾರುಕಟ್ಟೆ ಮೌಲ್ಯ ಕುಸಿಯುತ್ತಲೇ ಬಂದಿದೆ.

    2016ರಲ್ಲಿ ಭಾರತ ಧೋನಿ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಏಕದಿನ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಆರಂಭಿಕ ನಾಲ್ಕೂ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಸಿಡ್ನಿಯಲ್ಲಿ ನಡೆದ ಐದನೇ ಪಂದ್ಯದಲ್ಲೂ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 330 ರನ್​ಗಳ ದೊಡ್ಡ ಮೊತ್ತ ಪೇರಿಸಿ ಗೆಲುವಿನತ್ತ ಹೆಜ್ಜೆ ಇಟ್ಟಿತ್ತು. ಭಾರತಕ್ಕೆ 0-5 ಸೋಲಿನ ಮುಖಭಂಗ ಎದುರಿಸುವಂಥ ಹೀನಾಯ ಪರಿಸ್ಥಿತಿ. ಇಂಥ ಸನ್ನಿವೇಶದಲ್ಲಿ ಆ ಪಂದ್ಯದಲ್ಲಷ್ಟೇ ಗಾಯಾಳು ಅಜಿಂಕ್ಯ ರಹಾನೆ ಬದಲು ಅವಕಾಶ ಪಡೆದಿದ್ದ ಮನೀಷ್ 84 ಎಸೆತಗಳಲ್ಲಿ ಅಜೇಯ 104 ರನ್​ಗಳ ಅವಿಸ್ಮರಣೀಯ ಇನಿಂಗ್ಸ್ ಆಡಿದರು. ನಾಯಕ ಧೋನಿ ಜೊತೆ 94 ರನ್​ಗಳ ನಿರ್ಣಾಯಕ ಜೊತೆಯಾಟವಾಡಿ ಭಾರತಕ್ಕೆ ಸರಣೀಯಲ್ಲಿ ಚೊಚ್ಚಲ ಗೆಲುವು ಕೊಡಿಸಿದರು.

    ಟೀಮ್ ಇಂಡಿಯಾದಲ್ಲಿ ಸ್ಥಾನ ಭದ್ರ ಪಡಿಸಿಕೊಳ್ಳುವುದಕ್ಕೆ ಇಂಥ ಒಂದು ಇನಿಂಗ್ಸ್ ಸಾಕು ಎನ್ನುವುದು ನಂಬಿಕೆ. ಅನೇಕ ಆಟಗಾರರು ಈ ರೀತಿಯ ಸಾಹಸಿಕ ಆಟವಾಡದಿದ್ದರೂ, ಶತಕ ಬಾರಿಸದಿದ್ದರೂ, ತಂಡವನ್ನು ಗೆಲ್ಲಿಸದಿದ್ದರೂ ನಿರಂತರವಾಗಿ ಹತ್ತಾರು ಪಂದ್ಯಗಳಲ್ಲಿ ಅವಕಾಶಗಳನ್ನು ಪಡೆಯುವುದಿದೆ. ಆದರೆ, ಸಿಡ್ನಿಯ ಚೇತೋಹಾರಿ, ಮ್ಯಾಚ್​ವಿನಿಂಗ್ಸ್ ಸೆಂಚುರಿ ಕೂಡ ಮನೀಷ್ ಪಾಂಡೆಗೆ ಭಾರತ ತಂಡದಲ್ಲೊಂದು ಖಚಿತ ಸ್ಥಾನ ಕೊಡಿಸಲಿಲ್ಲ. ಭಾರತ ತಂಡಕ್ಕೆ ಆಯ್ಕೆಯಾಗಲು ಮುಖ್ಯ ಮಾನದಂಡವಾದ ಫಿಟ್​ನೆಸ್ ವಿಚಾರದಲ್ಲಿ ಮನೀಷ್ ಯಾವಾಗಲೂ ಸೂಪರ್​ಫಿಟ್. ಯೋಯೋ ಟೆಸ್ಟ್​ನಲ್ಲಿ ಅತೀ ಹೆಚ್ಚು ಅಂಕ ತೆಗೆಯುವವರು ಅವರು. ಟೀಮ್ ಇಂಡಿಯಾದ ಅತ್ಯುತ್ತಮ ಫೀಲ್ಡರ್​ಗಳಲ್ಲಿ ಇವರೂ ಒಬ್ಬರು. ಮೊನ್ನೆ ಇವರು ವಾರ್ನರ್ ಕ್ಯಾಚ್ ಹಿಡಿದ ಅದ್ಭುತ ಕೌಶಲ್ಯವನ್ನು ಆಫ್ರಿಕಾದ ದಿಗ್ಗಜ ಜಾಂಟಿ ರೋಡ್ಸ್ ಸಹ ಮೆಚ್ಚಿಕೊಂಡರು. ಬ್ಯಾಟಿಂಗ್​ನಲ್ಲೂ ಯಾವುದೇ ಕ್ರಮಾಂಕದಲ್ಲಿ ಆಡಬಲ್ಲರು. ಆದರೂ, ಭಾರತ ತಂಡದಲ್ಲಿ ಮನೀಷ್​ಗೆ ಸಿಗಬೇಕಿದ್ದ ಅನೇಕ ಅವಕಾಶಗಳು ತಪ್ಪಿಹೋದವು. ಅರೆಕಾಲಿಕ ಬೌಲರ್ ಎಂಬ ಕಾರಣಕ್ಕೆ ಕೇದಾರ್ ಜಾಧವ್​ಗೆ ಸಿಕ್ಕಷ್ಟು ಅವಕಾಶ ಇವರಿಗೆ ಸಿಗಲಿಲ್ಲ. ಶ್ರೇಯಸ್ ಅಯ್ಯರ್​ಗೆ ಸಿಗುತ್ತಿರುವಷ್ಟು ಪೋ›ತ್ಸಾಹ ಇವರಿಗೆ ಸಿಗಲಿಲ್ಲ. ಶುಭಮಾನ್ ಗಿಲ್, ಅಂಬಟಿ ರಾಯುಡುಗೆ ಸಿಕ್ಕಷ್ಟು ಅವಕಾಶಗಳು ಕೂಡ ಮನೀಷ್​ಗೆ ಸಿಗಲಿಲ್ಲ. ಹತ್ತು ವರ್ಷಗಳಿಂದ ಭಾರತ ತಂಡಕ್ಕೆ ಬಂದುಹೋಗುತ್ತಿದ್ದರೂ ಖಾಯಂ ಸದಸ್ಯರಾಗದೆ, ಅಪರೂಪದ ನೆಂಟನಂತಾಗಿರುವುದು ಆತ್ಮವಿಶ್ವಾಸವನ್ನು ಯಾವಮಟ್ಟಿಗೆ ಕುಗ್ಗಿಸಿದೆ ಎಂದರೆ, ಆಗೊಮ್ಮೆಈಗೊಮ್ಮೆ ಅವಕಾಶ ದೊರೆತರೂ ಅದನ್ನು ಬಳಸಿಕೊಳ್ಳಲಾಗದ ಪರಿಸ್ಥಿತಿ.

    ಒಂದು ಕ್ರಿಕೆಟ್ ತಂಡವಿರಲಿ, ಯಾವುದೇ ವ್ಯವಸ್ಥೆಯಿರಲಿ, ಆಟಗಾರರ ಯಶಸ್ಸಿನಲ್ಲಿ ನಾಯಕರ ಪಾತ್ರ ಬಹಳ ಮುಖ್ಯ. ರೋಹಿತ್ ಶರ್ಮ ಜೂನಿಯರ್ ಕ್ರಿಕೆಟ್​ನಿಂದಲೇ ಸಚಿನ್​ರ ಉತ್ತರಾಧಿಕಾರಿ ಎಂದು ಬಿಂಬಿಸಿಕೊಂಡಿದ್ದರೂ, ಭಾರತ ತಂಡದಲ್ಲಿ ಅವರು ಭದ್ರವಾಗಿ ನೆಲೆಯೂರಲು ಸ್ವಲ್ಪ ದೀರ್ಘ ಸಮಯವನ್ನೇ ತೆಗೆದುಕೊಂಡರು. ಏಕದಿನ ಹಾಗೂ ಟಿ20 ತಂಡಗಳಲ್ಲಿ ಖಾಯಂ ಸದಸ್ಯರೆನಿಸಿದರೂ, ಟೆಸ್ಟ್ ತಂಡದಲ್ಲಿ ನಿಶ್ಚಿತ ಅವಕಾಶಕ್ಕಾಗಿ ಅವರು ಸಾಕಷ್ಟು ಕಾಯಬೇಕಾಯಿತು. ತಂಡದೊಳಗಿನ ಎಲ್ಲ ಪೈಪೋಟಿ, ಅಸೂಯೆ, ಹಿತಶತ್ರುಗಳ ಸವಾಲು ಮೆಟ್ಟಿನಿಂತು ಅವರು ಸದ್ಯ ಯಶಸ್ಸಿನ ಉತ್ತುಂಗ ತಲುಪಿದ್ದಾರೆ. ಈ ಹಂತವನ್ನು ತಲುಪಬೇಕಾದರೆ, ವ್ಯಕ್ತಿಗತ ಪರಿಶ್ರಮ, ಕೆಚ್ಚೆದೆಯ ಹೋರಾಟದ ಜೊತೆಗೆ ಅದೃಷ್ಟವೂ ಕೈಹಿಡಿಯಬೇಕು. ಮನೀಷ್ ಪಾಲಿಗೆ ಅದೃಷ್ಟವೇ ಮರೀಚಿಕೆಯಾಗಿದೆ.

    ರಣಜಿ ಟ್ರೋಫಿಯಲ್ಲಿ ಎಲ್ಲರೂ ಗುರುತಿಸಿರುವಂತೆ ಮನೀಷ್ ದೊಡ್ಡ ಇನಿಂಗ್ಸ್​ಗಳ ಆಟಗಾರ. ಎಂಥ ಬೌಲಿಂಗ್ ದಾಳಿಯನ್ನೂ ದಿನಗಟ್ಟಲೆ ಎದುರಿಸಿ ನಿಲ್ಲುವ ಸಾಮರ್ಥ್ಯ ಅವರಿಗಿದೆ. ಟೆಸ್ಟ್ ಕ್ರಿಕೆಟ್​ನಲ್ಲಿ ಅವರಿಗೆ ಒಂದಾದರೂ ಅವಕಾಶ ಸಿಕ್ಕಿದ್ದರೆ, ಪ್ರತಿಭೆಗೆ ತಕ್ಕ ಭರವಸೆ ಉಳಿಸಿಕೊಳ್ಳಲು ಚಿಮ್ಮುಹಲಗೆ ಆಗುವ ಅವಕಾಶವಿತ್ತೇನೋ. ಟಿ20 ಪಂದ್ಯದಲ್ಲಿ ಹತ್ತು-ಹನ್ನೆರಡು ಓವರ್​ಗಳ ನಂತರ ಬಂದಾಗ ಅಥವಾ ಏಕದಿನ ಕ್ರಿಕೆಟ್​ನಲ್ಲಿ 48-49ನೇ ಓವರ್​ನಲ್ಲಿ ಬ್ಯಾಟಿಂಗ್​ಗೆ ಬರುವ ಸಂದರ್ಭದಲ್ಲಿ ಆಟಗಾರನಿಗೆ ಸನ್ನಿವೇಶಕ್ಕೆ ತಕ್ಕಂತೆ ಆಡುವುದು ಮುಖ್ಯವಾಗುವುದೇ ಹೊರತು ತನ್ನ ನೈಜ ಆಟ ಆಡಲು ಅವಕಾಶ ಇರುವುದಿಲ್ಲ. ಅದೇ ಟೆಸ್ಟ್ ಪಂದ್ಯದಲ್ಲಾದರೆ, ಆಟಗಾರನೊಬ್ಬನ ಯೋಗ್ಯತೆ ಪ್ರದರ್ಶಿಸಲು ಆಡಿದಷ್ಟೂ ಓವರ್​ಗಳು, ಕಾಲಾವಕಾಶ ಎದುರಿಗಿರುತ್ತದೆ. ಅಂಥ ಅವಕಾಶಗಳ ವಿಚಾರದಲ್ಲಿ ಮನೀಷ್ ನತದೃಷ್ಟ. ಇನ್ನು 25 ಏಕದಿನ ಪಂದ್ಯಗಳಲ್ಲಿ ಆಡಿದ್ದರೂ ಸಿಡ್ನಿಯಂಥ ಮತ್ತೊಂದು ಇನಿಂಗ್ಸ್ ಆಡುವುದು ಅವರಿಂದ ಸಾಧ್ಯವಾಗಿಲ್ಲ. ವಿಫಲನಾದರೆ ಮುಂದಿನ ಪಂದ್ಯಕ್ಕೆ ತಂಡದಲ್ಲಿರುವುದಿಲ್ಲ ಎಂಬ ತೂಗುಕತ್ತಿ ಎಂಥ ಆಟಗಾರನ ಸಾಮರ್ಥ್ಯವನ್ನೂ ಕುಂದಿಸಿಬಿಡುತ್ತದೆ. ಮನೀಷ್ ವಿಚಾರದಲ್ಲಿ ಆಗಿರುವುದೂ ಇದೇ.

    ರ್ಯಾಂಕ್ ವಿದ್ಯಾರ್ಥಿಗಳೆಲ್ಲರೂ ಜೀವನದಲ್ಲಿ ಭರ್ಜರಿ ಯಶಸ್ವಿಯಾಗಬೇಕೆಂದೇನೂ ಇಲ್ಲ. ದೊಡ್ಡ ದೊಡ್ಡ ಕಂಪನಿಗಳನ್ನು ಆರಂಭಿಸಿದವರು ಕಾಲೇಜಿನಲ್ಲಿ ರ್ಯಾಂಕ್ ಬಂದವರೇನೂ ಅಲ್ಲ. ಕ್ರಿಕೆಟ್​ನಲ್ಲೂ ಅಷ್ಟೇ. ದೇಶಿ ಕ್ರಿಕೆಟ್​ನಲ್ಲಿ ದಂತಕಥೆಗಳೆನಿಸಿದ ಅನೇಕರು ಭಾರತ ತಂಡದಲ್ಲಿ ಸರ್ವೆಸಾಮಾನ್ಯರಾಗಿ ಕಳೆದುಹೋದ ಅನೇಕ ಉದಾಹರಣೆಗಳಿವೆ. ಮನೀಷ್ ಸಹ ಅಪ್ರತಿಮ ಪ್ರತಿಭಾವಂತರಾಗಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹತ್ತರಲ್ಲಿ ಹನ್ನೊಂದಾಗಿ ಕಳೆದುಹೋಗುವ ಅಪಾಯವಿದೆ. 30 ವರ್ಷದ ಅವರೀಗ ತಂಡದಲ್ಲಿ ಸ್ಥಾನಕ್ಕಾಗಿ ತಮಗಿಂತ ಹತ್ತು ವರ್ಷ ಚಿಕ್ಕವರೊಂದಿಗೆ ಪೈಪೋಟಿ ನಡೆಸಬೇಕಿದೆ. ಹಾಗಾಗಿ ಬಹುಶಃ 2020 ಅವರ ಪಾಲಿಗೆ ನಿರ್ಣಾಯಕ ವರ್ಷವಾಗಲಿದೆ. ಈ ವರ್ಷ ಭಾರತ ತಂಡದಲ್ಲಿ ಸಿಗುವ ಅವಕಾಶಗಳನ್ನು ಎಷ್ಟರ ಮಟ್ಟಿಗೆ ಸಾರ್ಥಕ ಪಡಿಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಅವರ ಅಂತಾರಾಷ್ಟ್ರೀಯ ಯಶಸ್ಸು ನಿರ್ಧಾರವಾಗಲಿದೆ. ಪ್ರವಾಹದ ವಿರುದ್ಧ ಈಜುವುದು ಅವರಿಗೆ ಹೊಸದೇನೂ ಅಲ್ಲ. ಅಂಥ ಸಾಮರ್ಥ್ಯ, ಮನೋಬಲ ಅವರಿಗಿದೆ. ಆದರೆ, ನಿರಂತರ ಅವಕಾಶಗಳಿಗಾಗಿ ನಾಯಕ, ಕೋಚ್, ಆಯ್ಕೆಗಾರರ ವಿಶ್ವಾಸವನ್ನು ಯಾವ ಮಟ್ಟಿಗೆ ಗಳಿಸುತ್ತಾರೆ ಎನ್ನುವುದು ಅವರ ಆಟದ ಸ್ಥಿರತೆಯನ್ನು ಅವಲಂಬಿಸಿದ್ದು. ಈ ನಿಟ್ಟಿನಲ್ಲಿ ಅದೃಷ್ಟ ಎಷ್ಟರ ಮಟ್ಟಿಗೆ ಕೈಹಿಡಿಯಲಿದೆ ಎನ್ನುವುದೂ ಬಹಳ ಮುಖ್ಯ. ಉದಾಹರಣೆಗೆ ಮೊನ್ನೆ ಬೆಂಗಳೂರು ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬದಲು ಮನೀಷ್ 4ನೇ ಕ್ರಮಾಂಕದಲ್ಲಿ ಬಂದಿದ್ದರೆ, ಆ ದಿನ ಅವರ ವೀರಾವೇಶಕ್ಕೆ ಸಾಕ್ಷಿ ಆಗಬಹುದಿತ್ತು. ಆದರೆ, ಅದಕ್ಕೂ ಯೋಗಬೇಕು. ಎಲ್ಲದಕ್ಕೂ ಕಾಲಕೂಡಿ ಬರಬೇಕು.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts