ಆಲ್ರೌಂಡರ್​ಗಳ ವಿಶ್ವಕಪ್: ಸವ್ಯಸಾಚಿಗಳೇ ನಿರ್ಣಾಯಕ

ಬೃಹತ್ ಮೊತ್ತಗಳು ಸಲೀಸಾಗಿ ದಾಖಲಾಗುವ ಬ್ಯಾಟಿಂಗ್ ಸ್ನೇಹಿ ಇಂಗ್ಲೆಂಡ್ ಪಿಚ್​ಗಳಲ್ಲಿ ಆಲ್ರೌಂಡರ್​ಗಳೇ ಆಯಾ ತಂಡಗಳ ಪ್ರಮುಖ ಅಸ್ತ್ರವಾಗಿರಲಿದ್ದಾರೆ. ಹಲವು ಕೋನಗಳಲ್ಲಿ ತಂಡಕ್ಕೆ ನೆರವಾಗಬಲ್ಲ ಆಲ್ರೌಂಡರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿದ್ದೇನೆ ಎಂದು ಮೊದಲ 2 ವಿಶ್ವಕಪ್​ಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ದಿಗ್ಗಜ ನಾಯಕ ಕ್ಲೈವ್ ಲಾಯ್್ಡ ಅಭಿಪ್ರಾಯಪಟ್ಟಿದ್ದಾರೆ. ಲಾಯ್್ಡ ಹೇಳಿರುವ ಮಾತುಗಳು ಅಕ್ಷರಶಃ ಸತ್ಯ. ಈ ಬಾರಿಯ ವಿಶ್ವಕಪ್ ಆಲ್ರೌಂಡರ್​ಗಳ ಪಾರುಪತ್ಯಕ್ಕೆ ಸಾಕ್ಷಿಯಾಗಲಿದೆ. ಭಾರತ ಸೇರಿದಂತೆ ಹೆಚ್ಚಿನ ಎಲ್ಲ ತಂಡಗಳಲ್ಲಿ ಎರಡಕ್ಕೂ ಅಧಿಕ ಆಲ್ರೌಂಡರ್​ಗಳಿರುವುದೇ ಇದಕ್ಕೆ ಸಾಕ್ಷಿ. ಗ್ಯಾರಿ ಗಿಲ್ಮರ್, ಡಂಕನ್ ಫ್ಲೆಚರ್, ಮೊಹಿಂದರ್ ಅಮರನಾಥ್, ಇಯಾನ್ ಬಾಥಮ್ ವಾಸಿಂ ಅಕ್ರಂ, ಸನತ್ ಜಯಸೂರ್ಯ, ಅರವಿಂದ ಡಿಸಿಲ್ವಾ, ಲ್ಯಾನ್ಸ್ ಕ್ಲುಸ್ನರ್, ಆಂಡಿ ಬಿಕೆಲ್, ಯುವರಾಜ್ ಸಿಂಗ್​ರ ಆಲ್ರೌಂಡರ್ ನಿರ್ವಹಣೆಗಳು ವಿಶ್ವಕಪ್ ಪುಟದಲ್ಲಿ ದಾಖಲಾಗಿರುವ ಹಂತದಲ್ಲಿ, 2019ರ ವಿಶ್ವಕಪ್​ನಲ್ಲಿ ಯಾವ ಆಲ್ರೌಂಡರ್ ಮಿಂಚಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ.

ಭಾರತ

ಕಪಿಲ್ ದೇವ್ ನಿವೃತ್ತಿ ನಂತರದಲ್ಲಿ ಐಸಿಸಿ ಟೂರ್ನಿಗಳಲ್ಲಿ ಭಾರತಕ್ಕೆ ದೊಡ್ಡ ಕೊರತೆಯಾಗಿ ಕಾಡುತ್ತಿದ್ದದ್ದು, ವೇಗದ ಬೌಲಿಂಗ್ ಆಲ್ರೌಂಡರ್. ಆದರೆ, ಈ ಬಾರಿ ಹಾರ್ದಿಕ್ ಪಾಂಡ್ಯರಂಥ ಅಗ್ರ ಆಲ್ರೌಂಡರ್​ನೊಂದಿಗೆ ಭಾರತ ವಿಶ್ವಕಪ್​ಗೆ ತೆರಳಲಿದೆ. ರವೀಂದ್ರ ಜಡೇಜಾ ಹಾಗೂ ವಿಜಯ್ ಶಂಕರ್ ತಂಡದಲ್ಲಿದ್ದರೂ, ಆಲ್ರೌಂಡರ್ ಸ್ಥಾನಕ್ಕೆ ಮೊದಲ ಆಯ್ಕೆ ಹಾರ್ದಿಕ್ ಪಾಂಡ್ಯ. ಕಳೆದ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಡಿದ ರೀತಿ ಇದಕ್ಕೆ ಸಾಕ್ಷಿಯಾಗಿ ಇರಲಿದೆ.

ಆಲ್ರೌಂಡರ್ಸ್: ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಿಜಯ್ ಶಂಕರ್.

ಆಸ್ಟ್ರೇಲಿಯಾ

ಮೂವರು ಆಲ್ರೌಂಡರ್​ಗಳು ತಂಡದಲ್ಲಿದ್ದರೂ, ಉಪನಾಯಕ ಪ್ಯಾಟ್ ಕಮ್ಮಿನ್ಸ್ ಹೆಚ್ಚಾಗಿ ಬೌಲಿಂಗ್​ನತ್ತ ಗಮನ ನೀಡಿದ್ದಾರೆ. ಸ್ಪಿನ್ ಬೌಲಿಂಗ್ ಆಲ್ರೌಂಡರ್ 100 ಏಕದಿನ ಪಂದ್ಯಗಳ ಅನುಭವಿ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ 33 ಪಂದ್ಯಗಳ ಅನುಭವಿ ವೇಗದ ಬೌಲಿಂಗ್ ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಮೇಲೆ ಆಸೀಸ್​ನ ಭಾರವಿದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮಧ್ಯಮ ಓವರ್​ಗಳ ಬೌಲಿಂಗ್​ನಲ್ಲಿ ಇವರ ನಿರ್ವಹಣೆಯ ಮೇಲೆ ಆಸೀಸ್ ತಂಡದ ಯಶಸ್ಸು ನಿರ್ಧಾರವಾಗಲಿದೆ.

ಆಲ್ರೌಂಡರ್ಸ್: ಗ್ಲೆನ್ ಮ್ಯಾಕ್ಸ್​ವೆಲ್, ಮಾರ್ಕಸ್ ಸ್ಟೋಯಿನಿಸ್, ಪ್ಯಾಟ್ ಕಮ್ಮಿನ್ಸ್.

ಇಂಗ್ಲೆಂಡ್

ಆತಿಥೇಯ ತಂಡದ ಅರ್ಧಕ್ಕೂ ಅಧಿಕ ಆಟಗಾರರು ಆಲ್ರೌಂಡರ್​ಗಳು. ಜೋ ಡೆನ್ಲಿ ವಿಶ್ವಕಪ್ ಸ್ಥಾನ ಅನುಮಾನವಾಗಿದ್ದರೂ, ಪ್ರಸ್ತುತ ತಂಡದಲ್ಲಿ 8 ಆಲ್ರೌಂಡರ್​ಗಳಿದ್ದಾರೆ. ಇದರಲ್ಲಿ ಬೆನ್ ಸ್ಟೋಕ್ಸ್ ಹಾಗೂ ಮೊಯಿನ್ ಅಲಿ ತಂಡದ ಪ್ರಮುಖ ಆಟಗಾರರು. ವೇಗದ ಬೌಲಿಂಗ್ ಹಾಗೂ ಸ್ಪಿನ್ ಬೌಲಿಂಗ್​ನಲ್ಲಿ ಇವರು ವಿಫಲರಾದಲ್ಲಿ, ಅದಕ್ಕೆ ಬದಲಿಯಾಗಿ ಸೂಕ್ತ ಆಲ್ರೌಂಡರ್​ಗಳೂ ತಂಡದಲ್ಲಿದ್ದಾರೆ. ಇಂಗ್ಲೆಂಡ್​ನ ಈ ಎಂಟೂ ಆಲ್ರೌಂಡರ್​ಗಳ ಒಟ್ಟಾರೆ ಏಕದಿನದ ಅನುಭವವೇ 485 ಪಂದ್ಯಗಳು.

ಆಲ್ರೌಂಡರ್ಸ್: ಬೆನ್​ಸ್ಟೋಕ್ಸ್, ಮೊಯಿನ್ ಅಲಿ, ಟಾಮ್ ಕರ›ನ್, ಜೋ ಡೆನ್ಲಿ, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್.

ನ್ಯೂಜಿಲೆಂಡ್

ಒಂದು ಕಾಲದಲ್ಲಿ ವಿಶ್ವದ ಅಗ್ರ ಆಲ್ರೌಂಡರ್​ಗಳನ್ನು ಹೊಂದಿದ್ದ ತಂಡವಾಗಿದ್ದ ನ್ಯೂಜಿಲೆಂಡ್ ಈ ಬಾರಿ ಮೂವರು ಆಲ್ರೌಂಡರ್​ಗಳೊಂದಿಗೆ ವಿಶ್ವಕಪ್​ಗೆ ಹೋಗುತ್ತಿದ್ದರೂ, ಯಾರ ಮೇಲೂ ಹೆಚ್ಚಿನ ವಿಶ್ವಾಸವಿಟ್ಟಿಲ್ಲ. ಗ್ರಾಂಡ್​ಹೊಮ್ ಹಾಗೂ ಜಿಮ್ಮಿ ನೀಶಾಮ್ ಫಾಮ್ರ್ ಕಳವಳಕಾರಿಯಾಗಿರುವುದು ಅದಕ್ಕೆ ಕಾರಣ. ಇನ್ನು ಬ್ಯಾಟಿಂಗ್ ಸ್ನೇಹಿ ಇಂಗ್ಲೆಂಡ್ ಪಿಚ್​ಗಳಲ್ಲಿ ಸ್ಯಾಂಟ್ನರ್ ಎಷ್ಟರ ಮಟ್ಟಿಗೆ ಅವಕಾಶ ಪಡೆದುಕೊಳ್ಳುತ್ತಾರೆ ಎಂದು ನಿರೀಕ್ಷೆ ಮಾಡುವುದು ಕಷ್ಟ.

ಆಲ್ರೌಂಡರ್ಸ್: ಕಾಲಿನ್ ಡಿ ಗ್ರಾಂಡ್​ಹೊಮ್ ಜಿಮ್ಮಿ ನೀಶಾಮ್ ಮಿಚೆಲ್ ಸ್ಯಾಂಟ್ನರ್.

ಪಾಕಿಸ್ತಾನ

ಪಾಕಿಸ್ತಾನ ತಂಡಕ್ಕೂ ಸೂಕ್ತ ವೇಗದ ಬೌಲಿಂಗ್ ಆಲ್ರೌಂಡರ್ ಕೊರತೆ ಇದೆ. ಸ್ಪಿನ್ ಬೌಲಿಂಗ್​ನಲ್ಲಿ ಶೋಯೆಬ್ ಮಲಿಕ್ ಹಾಗೂ ಶಾದಾಬ್ ಖಾನ್ ತಂಡದಲ್ಲಿದ್ದರೂ, ಮಲಿಕ್ ಮೇಲೆ ಹೆಚ್ಚಿನ ಭಾರವಿದೆ. 282 ಏಕದಿನ ಪಂದ್ಯಗಳ ಅನುಭವಿ ಶೋಯೆಬ್ ಮಲಿಕ್, ಏಕಾಂಗಿಯಾಗಿ ಪಾಕಿಸ್ತಾನಕ್ಕೆ ಗೆಲುವು ತಂದುಕೊಟ್ಟ ಹಲವು ನಿದರ್ಶನಗಳಿವೆ. ವಿಶ್ವ ನಂ.6 ಆಲ್ರೌಂಡರ್ ಇಮಾದ್ ವಾಸಿಂ ಮೇಲೂ ಹೆಚ್ಚಿನ ನಿರೀಕ್ಷೆಗಳಿವೆ.

ಆಲ್ರೌಂಡರ್ಸ್: ಶೊಯೆಬ್ ಮಲಿಕ್ ಶಾದಾಬ್ ಖಾನ್, ಇಮಾದ್ ವಾಸಿಂ, ಫಾಹೀಮ್ ಅಶ್ರಫ್.

ದಕ್ಷಿಣ ಆಫ್ರಿಕಾ

ಇಂಗ್ಲೆಂಡ್ ಬಿಟ್ಟರೆ, ಅಗ್ರ ಆಲ್ರೌಂಡರ್​ಗಳನ್ನು ಹೊಂದಿರುವ ತಂಡ ದಕ್ಷಿಣ ಆಫ್ರಿಕಾ. ಅನುಭವಿ ಜೆಪಿ ಡುಮಿನಿ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆಗಿದ್ದರೆ, ವೇಗದ ಬೌಲಿಂಗ್​ನಲ್ಲಿ ಕೊನೇ ಕ್ಷಣದಲ್ಲಿ ಕ್ರಿಸ್ ಮಾರಿಸ್ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಆಫ್ರಿಕಾ ಪರವಾಗಿ ಮಿಂಚಿರುವ ಆಂಡಿಲ್ ಪೆಹ್ಲುಕ್​ವಾಯೋ ಹಾಗೂ ಡ್ವೈನ್ ಪ್ರಿಟೋರಿಯಸ್ ಕೂಡ ಉತ್ತಮ ಫಾಮರ್್​ನಲ್ಲಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಆಲ್ರೌಂಡರ್ ವಿಭಾಗದಲ್ಲಿ ಉತ್ತಮ ಸಂಯೋಜನೆ ಹೊಂದಿರುವ ದಕ್ಷಿಣ ಆಫ್ರಿಕಾಕ್ಕೆ ಈ ಬಾರಿ ಅದೃಷ್ಟ ಮಾತ್ರವೇ ಕೈಹಿಡಿಯಬೇಕಿದೆ.

ಆಲ್ರೌಂಡರ್ಸ್: ಜೆಪಿ ಡುಮಿನಿ, ಆಂಡಿಲ್ ಪಹ್ಲುಕ್​ವಾಯೋ, ಡ್ವೈನ್ ಪ್ರಿಟೋರಿಯಸ್, ಕ್ರಿಸ್ ಮಾರಿಸ್

ಇತರ ತಂಡಗಳಲ್ಲೂ ಇದ್ದಾರೆ ಸ್ಟಾರ್ಸ್

ಏಕದಿನದ ನಂ.1 ಆಲ್ರೌಂಡರ್ ಅಫ್ಘಾನಿಸ್ತಾನದ ರಶೀದ್ ಖಾನ್, ನಂ.2 ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಶ್ರೀಲಂಕಾದ ವೇಗದ ಬೌಲಿಂಗ್ ಆಲ್ರೌಂಡರ್ ಏಂಜೆಲೋ ಮ್ಯಾಥ್ಯೂಸ್ ಮೇಲೆ ಆಯಾ ತಂಡಗಳು ಹೆಚ್ಚಿನ ನಿರೀಕ್ಷೆ ಹೊಂದಿವೆ. ಅಫ್ಘಾನಿಸ್ತಾನ ತಂಡದಲ್ಲಿ ರಶೀದ್ ಮಾತ್ರವಲ್ಲದೆ ಮೊಹಮದ್ ನಬಿ ಕೂಡ ಮಿಂಚುತ್ತಿದ್ದಾರೆ. ಜೇಸನ್ ಹೋಲ್ಡರ್, ಕಾಲೋಸ್ ಬ್ರಾಥ್​ವೇಟ್​ರೊಂದಿಗೆ ಐಪಿಎಲ್​ನಲ್ಲಿ ಬಹುದೊಡ್ಡ ಮಟ್ಟಿಗೆ ಯಶಸ್ಸು ಕಂಡ ಆಂಡ್ರೆ ರಸೆಲ್ ವೆಸ್ಟ್ ಇಂಡೀಸ್​ನ ಪ್ರಮುಖ ಆಲ್ರೌಂಡರ್ ಅಸ್ತ್ರ.