

| ಡಾ.ರೂಪಾ ರಾವ್ ಮನೋತಜ್ಞೆ
ಇತ್ತೀಚಿನ ದಿನಗಳಲ್ಲಿ ಉದ್ಯಮಕ್ಕೆ ಆನ್ಲೈನ್ ಅನ್ನು ವೇದಿಕೆ ಮಾಡಿಕೊಳ್ಳುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿವೆ. ದುರ್ಬಲವಾದ ಆರ್ಥಿಕ ಪರಿಸ್ಥಿತಿಯಲ್ಲಿ ಕುಟುಂಬಕ್ಕೆ ಹೆಗಲು ಕೊಡಲೋ, ಅನಿರೀಕ್ಷಿತ ಸನ್ನಿವೇಶಗಳಿಂದ ತಾನೇ ಕುಟುಂಬದ ಆಧಾರ ಸ್ತಂಭವಾಗಲೋ ಇಲ್ಲವೇ ಸ್ವಂತ ಕಾಲ ಮೇಲೆ ನಿಲ್ಲುವ ಸಲುವಾಗಿ ಈ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿದ್ದಾರೆ. ಆಹಾರ ಪದಾರ್ಥ, ಗೃಹಾಲಂಕಾರ, ವಿವಿಧ ಡಿಸೈನ್ಗಳ ಕಸೂತಿ... ಹೀಗೆ ಮನೆಯಲ್ಲಿಯೇ ಕುಳಿತು ಚಿಕ್ಕಪುಟ್ಟ ಉದ್ಯಮ ಶುರು ಮಾಡಿದ್ದಾರೆ .
ತಮ್ಮ ಉದ್ಯಮವನ್ನು ವಿಸ್ತಾರ ಮಾಡಲು, ಹೆಚ್ಚು ಹೆಚ್ಚು ಗ್ರಾಹಕರನ್ನು ಆಕರ್ಷಿಸಲು ಮೊಬೈಲ್ ಫೋನ್ ಸಂಖ್ಯೆ ನೀಡುವುದು ಅನಿವಾರ್ಯವೇ. ಆದರೆ ಇದೀಗ ಇದೇ ಮಹಿಳೆಯರಿಗೆ ತಲೆನೋವು ತಂದಿದೆ. ಫೇಸ್ಬುಕ್ನಲ್ಲಿ ಮಹಿಳಾ ಉದ್ಯಮಿಗಳು ಹಾಕುತ್ತಿರುವ ಪೋಸ್ಟ್ ಗಳನ್ನು ನೋಡಿದರೆ ಅವರು ಯಾವ ಪರಿಯಲ್ಲಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಎಂದು ತಿಳಿಯುತ್ತದೆ. ಇನ್ನು ರಾತ್ರಿಯೆಲ್ಲಾ ಕರೆಗಳು ಬಂದಾಗ ಗಂಡನ, ಅತ್ತೆ- ಮಾವಂದಿರು ನೋಡುವ ಪರಿಯಂತೂ ಕೆಲವರಿಗೆ ನುಂಗಲಾರದ ತುತ್ತಾಗಿದೆ.
ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಮೊಬೈಲ್ ಫೋನ್ ಹೊಂದಿದ ಪ್ರತಿ ಮೂರು ಮಹಿಳೆಯರಲ್ಲಿ ಒಬ್ಬರು, ಅಪರಿಚಿತ ಗಂಡಸರ ಕರೆಗಳ ತೊಂದರೆ ಅನುಭವಿಸುತ್ತಾರೆ. ಇದರರ್ಥ ಶೇ. 9ರಷ್ಟು ಮಹಿಳೆಯರಿಗೆ ಪ್ರತಿನಿತ್ಯ ಇಂತಹ ಕರೆಗಳು ಬರುತ್ತಿವೆ. ಆದರೆ ಇದಕ್ಕೆ ಜಗ್ಗದೇ, ಬಗ್ಗದೇ ಮುನ್ನುಗ್ಗುವ ಛಾತಿ ಹೆಣ್ಣಲ್ಲಿ ಬರಬೇಕಿದೆ. ಬದುಕಿನ ಪ್ರಮಾಣದಲ್ಲಿ ಸಂಸಾರವನ್ನು ನೊಗ ಹೊತ್ತು ನಡೆಯುವಾಗ, ಒಂದಿಷ್ಟು ಸಲಹೆ, ಸೂಚನೆ, ಉಪಾಯಗಳನ್ನು ಮಾಡಿ ಬೀದಿಯಲ್ಲಿ ಬೊಗಳುವ ನಾಯಿಗಳಿಗೆ ತಕ್ಕ ಶಾಸ್ತಿ ಮಾಡಿ ಮುಂದೆ ಸಾಗಬೇಕೇ ಹೊರತು, ಹೆದರಿ ಪಯಣ ನಿಲ್ಲಿಸಬೇಕಿಲ್ಲ.