ಪರಮಹಂಸ ನುಡಿದೀಪ | ಮಹಾನ್ ಗುರುಗಳ ಗುರುವಾಗಿದ್ದ ಸಿದ್ಧಯೋಗಿ

Paramahamsa (1)
Published on
ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಬಾಹ್ಯವಾಗಿ ಯಾವುದೇ ತೆರನಾದ ಆಡಂಬರ, ತೋರ್ಪಡಿಕೆ ಇತ್ಯಾದಿಗಳಿಲ್ಲದೆ ಕೇವಲ ಭಗವತ್ ಸ್ಮರಣೆ, ಅಹರ್ನಿಶಿ ಭಗವದ್ ದರ್ಶನಕ್ಕೆ ಹಾತೊರೆಯುತ್ತಿದ್ದ ಮಹಾನ್ ಗುರುಗಳಲ್ಲಿ ಗುರುಗಳಾಗಿದ್ದರು. ರಾಮಕೃಷ್ಣರ ವೈಶಿಷ್ಟ್ಯ ಎಂದರೆ ಸರಳರಲ್ಲಿ ಸರಳರಾಗಿ ಅನೇಕಾನೇಕ ಶಿಷ್ಯರಿಗೆ ಭಗವದ್ದರ್ಶನದ ಲಾಭ ನೀಡಿರುವುದು. ವಿಶೇಷತೆ ಎಂದರೆ ಭವತಾರಿಣಿಯ ದರ್ಶನ ನನಗಾಗಿದೆ ಎಂದಷ್ಟೇ ತಿಳಿಸುತ್ತಿರಲಿಲ್ಲ, ನಿನಗೂ ಆ ದಿವ್ಯ, ಭವ್ಯ ಜಗಜ್ಜನನಿಯ ದರುಶನ ಖಂಡಿತಾ ದೊರೆಯುತ್ತದೆ ಎಂದು ತಿಳಿಸುತ್ತಿದ್ದರು. ಆದರೆ ಭಗವಂತನನ್ನು ಪಡೆಯುವ ವ್ಯಾಕುಲತೆ ನಿಮಗಿರಬೇಕು ಎಂದು ಪದೇ ಪದೇ ಸ್ಪಷ್ಟಪಡಿಸುತ್ತಿದ್ದರು.

ಸಾಮಾನ್ಯವಾಗಿ ಎಲ್ಲೆಡೆ ಕೇಳಿಬರುವುದು ನಮಗೆಲ್ಲಿ ಅಧ್ಯಾತ್ಮ, ಭಗವದ್ ಅನುಭವ? ಎನ್ನುವ ನಕಾರಾತ್ಮಕ ವಿಚಾರಗಳೇ. ಆದರೆ ಪರಮಹಂಸರಲ್ಲಿ ಹಾಗಲ್ಲ. ದಿವ್ಯತೆಯನ್ನು ಯಾರು ಬೇಕಾದರೂ ಪಡೆಯಬಹುದು. ಮೊದಲು ಭಗವದ್ದರ್ಶನಕ್ಕೆ ಹಾತೊರೆಯಬೇಕು. ಈ ಅಂಶವನ್ನು ವಿವರಿಸುತ್ತಾ ರಾಮಕೃಷ್ಣರು ಗೋಪಿಕಾ ಸ್ತ್ರೀಯರ ಉದಾಹರಣೆ ನೀಡುತ್ತಿದ್ದರು. ಶ್ರೀಕೃಷ್ಣನನ್ನು ಕಾಣಲು ಅವನೊಂದಿಗೆ ಸದಾ ಪರಮಾನಂದದ ಗುಂಗಿನಲ್ಲಿರಲು ಗೋಪಿಕಾ ಸ್ತ್ರೀಯರು ಎಲ್ಲವನ್ನೂ ತ್ಯಜಿಸಿ ಧಾವಿಸುತ್ತಿದ್ದರು. ಅವರಿಗೆ ಈ ಜಗತ್ತಿನಲ್ಲಿ ಬೇರಾವ ವಿಚಾರವೂ, ವಸ್ತುವೂ ಬೇಕಿರಲಿಲ್ಲ. ಕೇವಲ ಶ್ರೀಕೃಷ್ಣನ ಧ್ಯಾನ, ಚಿಂತನ, ಮನನ ಅಷ್ಟೇ. ಹಾಗಾಗಿ ಅವರಿಗೆ ಪರಬ್ರಹ್ಮನ ಕೃಪೆ, ದರ್ಶನ ಅತ್ಯಂತ ಸುಲಭ ಸ್ಪಷ್ಟವಾಗಿ ದೊರೆಯುತ್ತಿತ್ತು ಎಂದು ತಿಳಿಸುತ್ತಿದ್ದರು. ಸರ್ವರಿಗೂ ಪರಬ್ರಹ್ಮನ ದರ್ಶನವಾಗುತ್ತದೆ, ಆದರೆ ಅವರು ಅಣಿಯಿಲ್ಲ ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸುತ್ತಿದ್ದರು. ಅಂಥ ಒಂದು ಉದಾಹರಣೆ ಹೀಗಿದೆ:

ಒಬ್ಬ ಶಿಷ್ಯ ಗುರುವನ್ನು ಕುರಿತು, ಸ್ವಾಮಿ ನಾನು ದೇವರನ್ನು ಪಡೆಯುವ ಬಗೆ ಹೇಗೆ? ಎಂದು ಕೇಳಿದ. ಆಗ ಗುರು ಶಿಷ್ಯನನ್ನು ಒಂದು ಸರೋವರಕ್ಕೆ ಕರೆದುಕೊಂಡು ಹೋದನು. ಇಬ್ಬರೂ ಸ್ನಾನಕ್ಕಾಗಿ ನೀರಿಗೆ ಇಳಿದರು. ಇದ್ದಕ್ಕಿದ್ದಂತೆ ಗುರುವು ಶಿಷ್ಯನನ್ನು ನೀರಿನಲ್ಲಿ ಮುಳುಗಿಸಿ ಹಿಡಿದುಕೊಂಡನು. ಕೆಲವು ಕ್ಷಣಗಳ ನಂತರ ಬಿಟ್ಟನು! ಆಗ ಶಿಷ್ಯನನ್ನು ಕೇಳಿದನು: ನೀನು ನೀರಿನಲ್ಲಿ ಚಡಪಡಿಸುತ್ತಾ ಇದ್ದಾಗ ಹೇಗನಿಸಿತು? ಎಂದು. ಶಿಷ್ಯ ತಾನು ನೀರು ಕಟ್ಟಿಕೊಂಡು ಉಸಿರಿಗಾಗಿ ಹಾತೊರೆಯುತ್ತಿದ್ದೆ ಎಂದು ಉಸುರಿದ. ಆಗ ಗುರುವು ನಿನಗೆ ಭಗವಂತನ ವಿಷಯದಲ್ಲೂ ಅದೇ ತೆರನಾದ ವ್ಯಾಕುಲತೆ ಬಂದರೆ ಮಾತ್ರ, ಭಗವಂತನನ್ನು ತತ್​ಕ್ಷಣ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು ಎಂದನು.

ಪರಮಗುರು ರಾಮಕೃಷ್ಣರ ಬಗ್ಗೆ ಯುವ ನರೇಂದ್ರ ಮೊಟ್ಟ ಮೊದಲ ಬಾರಿಗೆ ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕೇಳಿದನು. ಅದೂ ಒಬ್ಬ ಆಂಗ್ಲ ಪ್ರಾಧ್ಯಾಪಕನಿಂದ. ಆಂಗ್ಲ ಭಾಷೆಯ ಮಹೋನ್ನತ ಕವಿ ವರ್ಡ್ಸ್​ವರ್ತ್​ನ ಪ್ರಕೃತಿ ವಿಹಾರ ಪದ್ಯದ ವಿವರಣೆಯನ್ನು ಮಾಡುತ್ತಿದ್ದ ಪೊ›. ವಿಲಿಯಂ ಹೇಸ್ಟಿ ಅಂದು ತರಗತಿಯಲ್ಲಿ ವನ ವಿಹಾರ ಎಂಬ ಅಂಶವನ್ನು ವಿವರಿಸುತ್ತಾ ಸಮಾಧಿ ವಿಚಾರ ಬಂದಾಗ ಈ ಸ್ಥಿತಿಯನ್ನು ಪರಿಶುದ್ಧ ಹೃದಯ, ಮನಸ್ಸು, ಆತ್ಮ ಹೊಂದಿರುವವರು ಮಾತ್ರ ಅನುಭವಿಸಬಹುದು ಎಂದು ತಿಳಿಸಿದರು. ಜತೆಗೆ ನನಗೆ ತಿಳಿದಂತೆ ದಕ್ಷಿಣೇಶ್ವರದಲ್ಲಿ ಒಬ್ಬರು ಮಹಾತ್ಮರಿದ್ದಾರೆ. ಅವರಿಗೆ ಸಮಾಧಿ, ದೇಹಾತೀತ ಸ್ಥಿತಿ ಅತ್ಯಂತ ಅನುಭವವಾಗಿದೆ, ನೀವು ಯಾರಾದರೂ ಅಲ್ಲಿಗೆ ಭೇಟಿ ನೀಡಿದರೆ ಆ ದೇವಮಾನವನನ್ನು ಕಾಣಬಹುದು ಎಂದೂ ತಿಳಿಸುತ್ತಾರೆ. ನರೇಂದ್ರ ಸ್ವಲ್ಪಸಮಯದಲ್ಲಿಯೇ ದಕ್ಷಿಣೇಶ್ವರಕ್ಕೆ ತೆರಳುತ್ತಾನೆ. ಅಲ್ಲಿ ಪರಮಹಂಸರನ್ನು ಭೇಟಿಯಾದಾಗ ಈ ಪ್ರಶ್ನೆಯನ್ನು ರಾಮಕೃಷ್ಣರಿಗೆ ಹಾಕುತ್ತಾನೆ. ಈ ಘಟನೆಯಿಂದಲೇ ಜಗತ್ತಿಗೆ ಪರಮಗುರು-ಪರಮಾದ್ಭುತ ಶಿಷ್ಯನ ಪರಿಚಯವಾಯಿತು ಎನ್ನಬಹುದು. ಅವರ ಪ್ರಶ್ನೋತ್ತರ ಹೀಗಿತ್ತು:

ಸ್ವಾಮಿ ನೀವು ದೇವರನ್ನು ನೋಡಿರುವಿರಾ? - ರಾಮಕೃಷ್ಣರು : ಮಗೂ, ಖಂಡಿತಾ ನೋಡಿರುವೆನು ಮತ್ತು ನಿನಗೂ ಪರಮಾತ್ಮನ ದರ್ಶನ ಮಾಡಿಸಬಲ್ಲೆ ಎಂದರು. ಈ ನುಡಿಗಳೇ ವೀರ ನರೇಂದ್ರನನ್ನು ಜಗದ್ವಿಖ್ಯಾತ ಸ್ವಾಮಿ ವಿವೇಕಾನಂದರನ್ನಾಗಿಸಿತು. ಯಾರಲ್ಲಿ ಅಂತಹ ಪವಿತ್ರ ಹೃದಯ, ಮನಸ್ಸು, ಅಂತಃಕರಣವಿದೆಯೋ ಅವರೆಲ್ಲರೂ ಸಹ ಭಗವದ್ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು ಎಂದು ವೇದಾಂತ, ಉಪನಿಷತ್, ಪುರಾಣಗಳ ಹಿನ್ನೆಲೆಯಲ್ಲಿ ಇಡೀ ಜಗತ್ತಿಗೆ ತಿಳಿಸಿದರು. ಇದೇ ಅಲ್ಲವೇ ಪರಮಗುರುವಿನ ಲಕ್ಷಣ. ಪರಮಹಂಸರ ಪ್ರಕಾರ ಸಿಕ್ಕ ಸಿಕ್ಕವರೆಲ್ಲ ಗುರು ಆಗಲಾರರು. ಮರದ ದಿಮ್ಮಿ ತಾನೂ ತೇಲಿ ಹೋಗಬಹುದು, ಅನೇಕ ಜೀವಜಂತುಗಳನ್ನು ಹೊತ್ತುಕೊಂಡೂ ಹೋಗಬಲ್ಲದು. ಆದರೆ ಬೆಂಡಿನ ಮೇಲೆ ಹತ್ತಿ ಕುಳಿತರೆ, ಬೆಂಡೂ ಮುಳುಗಿ ಹೋಗುತ್ತದೆ, ಜೊತೆಯಲ್ಲಿ ಹತ್ತಿದವನೂ ಮುಳುಗಿಹೋಗುತ್ತಾನೆ. ಸಚ್ಚಿದಾನಂದನೇ ನಿಜವಾದ ಗುರು. ಈ ಮಹಾನ್ ತತ್ವವನ್ನು ಗುರುಪೂರ್ಣಿಮೆಯ ಹಿನ್ನೆಲೆಯಲ್ಲಿ ಅರಿಯಬಹುದಾಗಿದೆ.

(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net