More

    ಕೃಷಿಯಲ್ಲಿ ಬೇಕು ಸಮಗ್ರ ದೃಷ್ಟಿಕೋನ

    ಕೃಷಿಯಲ್ಲಿ ಬೇಕು ಸಮಗ್ರ ದೃಷ್ಟಿಕೋನಬೆಳೆ ಬೆಳೆಯುವುದರಿಂದ ಹಿಡಿದು ಗ್ರಾಹಕನ ಕೈ ಸೇರುವವರೆಗೂ ಹಲವು ಹಂತಗಳಿವೆ. ಈ ಎಲ್ಲ ಹಂತಗಳಲ್ಲೂ ವಿಶೇಷವಾದ ಮುತುವರ್ಜಿ ವಹಿಸಿದಾಗ ಮಾತ್ರ ಗ್ರಾಹಕನ ಮನಗೆಲ್ಲಲು ಸಾಧ್ಯ. ರೈತರು, ವ್ಯಾಪಾರಿ, ಗ್ರಾಹಕರು ಎಲ್ಲರೂ ಅವರವರ ಜವಾಬ್ದಾರಿ ಅರಿತು ವ್ಯವಹರಿಸಿದಲ್ಲಿ ಎಲ್ಲವೂ ಸುಗಮವಾಗಿ ಸಾಗುತ್ತದೆ.

    ಸಮಾಜಜೀವಿಯಾಗಿರುವ ಮಾನವನಿಗೆ ಕೊಡುಕೊಳ್ಳುವಿಕೆ ಅತ್ಯವಶ್ಯ. ಶತಮಾನಗಳಿಂದಲೂ ವಿವಿಧ ರೀತಿಯಲ್ಲಿ ಈ ಕೊಡುಕೊಳ್ಳುವಿಕೆ, ವ್ಯವಹಾರ ಪದ್ಧತಿಗಳು ಜಾರಿಯಲ್ಲಿದ್ದವು. ಒಂದು ಕಾಲದಲ್ಲಿ ಉಪ್ಪು ಕೊಟ್ಟರೆ ಅದಕ್ಕೆ ಸಮನಾಗಿ ತೆಂಗಿನಕಾಯಿ ಕೊಡುವುದು, ಅಕ್ಕಿ ಕೊಟ್ಟರೆ ತರಕಾರಿ ಕೊಡುವುದು ಹೀಗೆ ವಸ್ತು-ವಿನಿಮಯ ವ್ಯವಸ್ಥೆಗಳ ಮೂಲಕ ವ್ಯವಹಾರಗಳು ನಡೆಯುತ್ತಿದ್ದವು. ರಾಜ-ಮಹಾರಾಜರ ಕಾಲದಲ್ಲಿದ್ದ ಈ ಪದ್ಧತಿಗಳು ಕಾಲಕಾಲಕ್ಕೆ ಬದಲಾಗುತ್ತ ಹೋದವು. ಮೂಲಭೂತ ಅವಶ್ಯಕತೆಗೆ ಸೀಮಿತವಾಗಿದ್ದ ಕೃಷಿ ಪದ್ಧತಿ ಸಹ ನಿಧಾನವಾಗಿ ಬದಲಾಗುತ್ತಾ ಬಂತು. ಕೃಷಿಕರು ಆದಾಯ ತರುವ ವಾಣಿಜ್ಯ ಬೆಳೆಯತ್ತ ಚಿತ್ತ ಹರಿಸಿದರು. ವ್ಯಾಪಾರ-ವ್ಯವಹಾರಗಳ ರೂಪವೂ ಬದಲಾಯಿತು. ಈಗಂತೂ ಆನ್​ಲೈನ್ ಮೂಲಕ ಎಲ್ಲೋ ಕೂತು ಏನನ್ನು ಬೇಕಾದರೂ ಖರೀದಿ ಮಾಡುವಷ್ಟು ಬೃಹತ್ ಉದ್ಯಮವಾಗಿ ಬದಲಾಗಿದೆ.

    ಕೇವಲ ಒಂದು ದಶಕದ ಹಿಂದಿನ ಕಥೆ ಗಮನಿಸಿದರೆ ನಾವು ಎಲ್ಲಿ ಇದ್ದೆವು, ಎಲ್ಲಿಗೆ ಬಂದು ತಲುಪಿದ್ದೇವೆ ಎಂಬುದರ ಚಿತ್ರಣ ದೊರೆಯುತ್ತದೆ. ಆಗ ಸೀಬೆಕಾಯಿ, ಕಿತ್ತಳೆ, ಮೂಸಂಬಿ, ಸೇಬು, ಬಾಳೆ ಹಣ್ಣು ಅಥವಾ ಸೊಪ್ಪು, ತರಕಾರಿ, ಈರುಳ್ಳಿ, ಟೊಮೆಟೊ ಎಂದು ರಸ್ತೆಯಲ್ಲಿ ಕೂಗುತ್ತಾ, ತಳ್ಳುಗಾಡಿ ದೂಡುತ್ತಾ ಹೋಗುವ ರೈತ ವ್ಯಾಪಾರಿಗಳಿದ್ದರು. ಬಳೆಗಾರ ಮನೆ-ಮನೆಗೆ ಬಳೆ ತಂದರೆ ಕುಂಬಾರ ಮಡಕೆಗಳನ್ನು ತರುತ್ತಿದ್ದ. ಈ ಬಗ್ಗೆ ಅನೇಕ ರೀತಿಯ ಜಾನಪದ ಹಾಡುಗಳೂ ಪ್ರಚಲಿತದಲ್ಲಿದ್ದವು. ಮಾರಾಟಗಾರರು ಮತ್ತು ಖರೀದಿದಾರರ ಮಧ್ಯೆ ಆತ್ಮೀಯತೆಯಿತ್ತು. ತರಕಾರಿಗಳಲ್ಲಿ ಒಂದಷ್ಟು ಗ್ರಾಂ ಜಾಸ್ತಿಯೇ ಕೊಡುವುದು, ಇಲ್ಲವೇ ಒಂದು ಹಿಡಿ ಮೆಣಸಿನಕಾಯಿ, ಶುಂಠಿಯನ್ನು ಉಚಿತವಾಗಿ ಕೊಡುವುದಿತ್ತು. ಮನೆಯವರೂ ಅಷ್ಟೆ, ಬಿಸಿಲಿಗೆ ಬಂದ ವ್ಯಾಪಾರಿಗೆ ಮಜ್ಜಿಗೆಯನ್ನೋ, ನೀರನ್ನೋ ಕೊಡುವ ಉದಾರತನವಿತ್ತು.

    ಕಾಲಕ್ರಮೇಣ ರೈತರು ಹೀಗೆ ರಸ್ತೆಯಲ್ಲಿಯೋ, ಮನೆ-ಮನೆಗೆ ಬಂದೋ ತಾವು ಬೆಳೆದ ಫಸಲನ್ನು ಮಾರಾಟ ಮಾಡುವುದನ್ನು ಕೈಬಿಟ್ಟರು. ಯಾಕೆಂದರೆ ಈ ಕೆಲಸವನ್ನು ಮಧ್ಯವರ್ತಿಗಳೇ ನಿರ್ವಹಿಸಲು ಮುಂದಾದರು. ಮಧ್ಯವರ್ತಿಗಳು ನೇರವಾಗಿ ರೈತರ ಮನೆಗೇ ಬಂದು ಎಲ್ಲ ಫಸಲನ್ನು ಕೊಂಡು ಹೋಗಿ, ತಾವೇ ತಲೆಯಲ್ಲಿ ಹೆಡಿಗೆಗಳನ್ನು ಇಟ್ಟುಕೊಂಡು ಮನೆಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದರು. ಈರ್ವರಿಗೂ ಚೌಕಾಸಿ ಅನಿವಾರ್ಯವೆಂದು ಗೊತ್ತಾದ್ದರಿಂದ ಸಹಜವಾಗಿ ಸಂಭಾಷಣೆ ನಡೆಯುತ್ತಿತ್ತು. ಮೊದಲ ಹಂತದಲ್ಲಿ ಜಗಳವೆಂದೇ ಭಾವಿಸುವಷ್ಟು ಚರ್ಚೆ ನಡೆದರೂ ಕೊನೆಗೆ ಸೌಹಾರ್ದಯುತವಾಗಿ ವ್ಯಾಪಾರ ನಡೆಯುತ್ತಿತ್ತು.

    ಈಗ ಹಳ್ಳಿಯಲ್ಲೂ ಸೂಪರ್ ಮಾರ್ಕೆಟ್ ಅಥವಾ ಅಂಗಡಿಗಳಲ್ಲಿ ಒಂದೇ ಸೂರಿನಡಿ ಎಲ್ಲಾ ವಸ್ತುಗಳೂ ದೊರೆಯುತ್ತವೆ. ತಳ್ಳುಗಾಡಿ ವ್ಯಾಪಾರ, ಬೀದಿ ಬದಿ ವ್ಯಾಪಾರಗಳಲ್ಲಿ ಚರ್ಚೆ ಮಾಡಿಕೊಂಡು ವ್ಯವಹಾರ ಮಾಡಲಾಗುತ್ತದೆ. ಆದರೆ, ನಿಗದಿತ ದರ ನಮೂದಿಸಿದಂತಹ ಮಾರಾಟ ಮಳಿಗೆಗಳಲ್ಲಿ, ಮಾಲ್​ಗಳಲ್ಲಿ ಚರ್ಚೆ ಅಸಾಧ್ಯ ಹಾಗೂ ಅವಮಾನಕರ ಎಂದು ಭಾವಿಸುವುದುಂಟು. ಹಾಗಾಗಿ ನಮೂದಿಸಿದಷ್ಟು ಹಣ ಪಾವತಿ ಮಾಡಿ ಖರೀದಿ ನಡೆಯುತ್ತದೆ.

    ಸಗಟು ಖರೀದಿಯಿಂದ ಮಾಲ್​ಗಳಲ್ಲಿ ಬೆಲೆ ಕಡಿಮೆಯಾಗಲು ಹಾಗೂ ಗುಣಮಟ್ಟದ ಸರಕನ್ನು ಪಡೆಯಲು ಸಾಧ್ಯವಿದೆ. ತರಕಾರಿ, ಹಣ್ಣು ಹಂಪಲುಗಳನ್ನು ಬೆಳೆಯದ ವಿದೇಶಗಳಲ್ಲೂ ಮಾಲ್​ಗಳಲ್ಲಿ ಇವು ಸಿಗುತ್ತವೆ.

    ಇಂದಿನ ಹೆಣ್ಣುಮಕ್ಕಳು ಮದುವೆಯಾಗುವ ಮೊದಲು ಗಂಡ ವಾಸವಾಗಿರುವಲ್ಲಿ ಮಾಲ್ ಇದೆಯಾ ಎಂದು ಕೇಳುತ್ತಾರೆ. ಅಂದರೆ ಹಿಂದಿನಂತೆ ವಾರಕ್ಕೊಮ್ಮೆ ನಡೆಯುವ ಸಂತೆಗೆ ಹೋಗಿ ಖರೀದಿಸುವ ಅಗತ್ಯವಿಲ್ಲ. ಗುಣಮಟ್ಟ ಖಾತ್ರಿಪಡಿಸಿಕೊಂಡು ವಸ್ತುಗಳ ಆಯ್ಕೆ ಮಾಡಬಹುದು ಎಂಬ ಭಾವನೆ ಇರಬಹುದು. ಇಂದು ಹಳ್ಳಿಗಳಲ್ಲಿಯೂ ಗಂಡಸರಿಗೆ ಸ್ವಲ್ಪ ನಿಶ್ಚಿಂತೆಯಾಗಿದೆ. ಹೆಣ್ಣುಮಕ್ಕಳಿಗೂ ಮನೆಯಲ್ಲಿ ಕೈತೋಟದ ಅವಶ್ಯಕತೆ ಇಲ್ಲ. ಜಾನುವಾರುಗಳನ್ನು ಸಾಕಿ ಹಾಲು ಕರೆಯುವ ಪ್ರಮೇಯವಿಲ್ಲ. ಪೌಷ್ಟಿಕ ಆಹಾರವನ್ನು ತಕ್ಷಣ ಖರೀದಿಸಬಹುದೆಂದು ನಿಟ್ಟುಸಿರು ಬಿಡಬಹುದು.

    ಹಿಂದೆ ಹಳ್ಳಿಗಳಲ್ಲಿ ಚೌಕಾಸಿ (ದರ ಕಡಿಮೆ ಮಾಡಲು) ಇಲ್ಲದೆ ಯಾವುದೇ ವ್ಯವಹಾರ ನಡೆಯುತ್ತಿರಲಿಲ್ಲ. ಆ ಕಾಲದಲ್ಲಿ ಕೆಲವು ಕಡೆಗಳಲ್ಲಿ ಮೀಟರ್ ಬಡ್ಡಿ ವ್ಯವಸ್ಥೆಯಲ್ಲಿ ಜಿಲ್ಲಾ ಹಾಗೂ ಕೆಲವು ತಾಲೂಕು ಕೇಂದ್ರಗಳಲ್ಲಿ ತಳ್ಳುಗಾಡಿಯ ಮಾರುಕಟ್ಟೆಗಳಿದ್ದವು. ಒಂದು ದಿನದ ಬಾಡಿಗೆಗೆ ತಳ್ಳುಗಾಡಿ ಹಾಗೂ ತರಕಾರಿಗಳು ಸಿಗುತ್ತವೆ. ಅವರು ಒಂದು ದಿನಕ್ಕೆ ಸಾವಿರ ರೂಪಾಯಿ ಬಾಡಿಗೆ ಪಡೆದರೆ 900 ಅಥವಾ 950 ರೂ. ಮಾತ್ರ ಕೈಗೆ ಸಿಗುತ್ತದೆ. ಅಂದರೆ ಅಂದಿನ ಬಡ್ಡಿ ವಜಾ ಮಾಡಿ ಸಾಲ ಕೊಡುವುದು ವಾಡಿಕೆಯಾಗಿತ್ತು. ದಿನಕ್ಕೆ ಸಾವಿರಕ್ಕೆ 50 ರೂ. ಬಡ್ಡಿಯಾದರೆ ವಾರ್ಷಿಕ ಬಡ್ಡಿದರ ಎಷ್ಟಾಗುತ್ತದೆಂದು ಓದುಗರು ಲೆಕ್ಕ ಹಾಕಿಕೊಳ್ಳಬಹುದು. ಇದನ್ನು ಮೀಟರ್ ಬಡ್ಡಿ ಎಂದು ಕರೆಯಲಾಗುತ್ತದೆ. ಈಗ ಕಾಲ ಬದಲಾಗಿದೆ. ಮಾರುಕಟ್ಟೆಗಳು ವ್ಯವಸ್ಥಿತವಾಗಿ ಸಹಕಾರಿ ರೂಪದಲ್ಲಿ ನಡೆಯುತ್ತವೆ. ಸರ್ಕಾರಗಳೂ ರೈತರಿಗೆ ಸ್ಪಂದನೆ ನೀಡುತ್ತಿವೆ. ರೈತರು, ವ್ಯಾಪಾರಿಗಳೂ ಚಕ್ರಬಡ್ಡಿ ವ್ಯವಹಾರ ಮಾಡದೇ ಬ್ಯಾಂಕ್, ಸಂಘ-ಸಂಸ್ಥೆಗಳಿಂದ ಸಾಲ ಪಡೆದು ವ್ಯವಹಾರ ನಡೆಸುತ್ತಿದ್ದಾರೆ.

    ಕೃಷಿಕರ ಬೆಳೆಗೆ ಸೂಕ್ತ ಬೆಲೆ ನಿಗದಿಯೇ ಒಂದು ಸವಾಲು. ಉತ್ತಮವಾಗಿ ಬೆಳೆಯಾದರೆ ಬೆಲೆ ಕಡಿಮೆಯಾಗುತ್ತದೆ, ಬೆಳೆ ಕಡಿಮೆಯಾದರೆ ಬೆಲೆ ಏರುತ್ತದೆ. ತೆಂಗು, ಬಾಳೆಕಾಯಿ, ಬಾಳೆ ಎಲೆ, ತರಕಾರಿಗಳನ್ನು ತಾಲ್ಲೂಕು ಮಟ್ಟದ ಸಂತೆ, ಮಾರುಕಟ್ಟೆಗೆ ಒಯ್ದರೆ ಕನಿಷ್ಠ ಬೆಲೆ ದೊರಕಬಹುದು, ಖರೀದಿದಾರರು ಕೊಟ್ಟ ಬೆಲೆಗೆ ಒಪ್ಪದಿದ್ದರೆ ಕೃಷಿ ವಸ್ತುಗಳು ನಶಿಸಿ ಹೋಗುವ ಸಾಧ್ಯತೆ ಇರುವುದರಿಂದ ಇಟ್ಟುಕೊಳ್ಳುವಂತಿಲ್ಲ. ಈ ಸಂದಿಗ್ಧತೆಯಲ್ಲಿ ರೈತರು ಬವಣೆ ಪಡುತ್ತಿದ್ದಾರೆ. ಇತ್ತೀಚೆಗೆ ಪೂರ್ವ ನಿಗದಿತ ಬೆಲೆಗೆ ಗುಣಮಟ್ಟದ ಬೆಳೆಯನ್ನು ನಿಗದಿಪಡಿಸಿಕೊಳ್ಳುವುದೂ ಇದೆ.

    ತರಕಾರಿ, ಹಣ್ಣು-ಹಂಪಲುಗಳನ್ನು ವಾರಕ್ಕೊಮ್ಮೆ ಸಂತೆಗೆ ಕೊಂಡುಹೋಗಬಹುದು, ಹೋಗದೆಯೂ ಇರಬಹುದು. ಸ್ವಲ್ಪವೇ ಬೆಳೆದರೆ ಮಾರಾಟಕ್ಕೆ ಕೊಂಡು ಹೋಗುವ ವೆಚ್ಚ, ಸಮಯ ಪರಿಗಣಿಸಿದಾಗ ಲಾಭವಾಗದಿರಬಹುದು. ಈ ಸಮಸ್ಯೆ ಅರಿತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿ ರೈತರೊಬ್ಬರು ಸಣ್ಣ ವಾಹನ ಉಪಯೋಗಿಸಿ ಸ್ಥಳೀಯ ರೈತರು ಬೆಳೆದ ಅಲ್ಪ-ಸ್ವಲ್ಪ ಬೆಳೆಗಳನ್ನು ಒಟ್ಟು ಸೇರಿಸಿ ಮಾರುಕಟ್ಟೆಗೆ ಒಯ್ದು ಮಾರಾಟ ಮಾಡಿ ಸಂಜೆ ಹೊತ್ತಿಗೆ ಆಯಾ ಕೃಷಿಕರ ಬೆಳೆಯ ಮೌಲ್ಯ ಹಿಂದಿರುಗಿಸುವ ಪ್ರಯೋಗ ಮಾಡಿದರು. ಈ ಪ್ರಯೋಗದಿಂದ ತಾಜಾ ವಸ್ತುಗಳು ದೊರೆಯುವಂತಾಯಿತು. ಹೂವು, ಹಾಲು ನಿತ್ಯ ಮಾರಾಟವಾದರೆ, ಕೆಲವು ತರಕಾರಿ, ಹೂವು, ವೀಳ್ಯದೆಲೆ ವಾರಕ್ಕೊಮ್ಮೆ ಮಾರುಕಟ್ಟೆಗೆ ಹೋಗುತ್ತಿದ್ದವು. ಅಂತೂ ರೈತರ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯುತ್ತಿತ್ತು.

    ಒಮ್ಮೆ ಗುಜರಾತಿನ ಮಾವಿನ ತೋಟಕ್ಕೆ ಹೋಗಿದ್ದೆವು. ಅಲ್ಲಿನ ರೈತರ ಬಳಿ ನಗರದ ಮಾಲ್​ಗಳು ನಿರ್ದಿಷ್ಟ ಗಾತ್ರದ ಪ್ಯಾಕೆಟ್ ಕೊಟ್ಟು ಅದರೊಳಗೆ ಹಿಡಿಯುವ ಗಾತ್ರದ ಹಣ್ಣನ್ನು ಕೊಡಲು ಹೇಳಿದ್ದರಂತೆ, ಇದು ಲಂಡನ್ (ಇಂಗ್ಲೆಂಡ್ ದೇಶ) ನಗರದ ಹ್ಯಾರೋಡ್ಸ್ ಮಾಲ್​ನವರು ಆಯ್ಕೆ ಮಾಡಿದ್ದರಂತೆ. ವಿದೇಶದ ಮಾರುಕಟ್ಟೆಗಳು ಸರಕಿನ ಗುಣಮಟ್ಟ, ಉತ್ಕೃಷ್ಟತೆಗೆ ಹೆಚ್ಚು ಆದ್ಯತೆ ನೀಡುತ್ತವೆ. ಗಲ್ಪ್ ರಾಷ್ಟ್ರಗಳಾದ ದುಬೈ, ಅಬುದಾಬಿ ಮುಂತಾದೆಡೆ ಕಾಣಸಿಗುವ ಕೃಷಿ ಉತ್ಪನ್ನಗಳು ಉತ್ಕೃಷ್ಟವಾಗಿರುತ್ತವೆ. ಆದರೆ, ಯಾವ ದೇಶದಿಂದ ಬಾಳೆಹಣ್ಣು ಬಂದಿದೆ, ತರಕಾರಿ ಬಂದಿದೆ ಎಂದು ಕೇಳುವಂತಿಲ್ಲ. ನಮ್ಮ ದೇಶದ ಕೃಷಿಕರು ಗುಣಮಟ್ಟದ ಬೆಳೆಗಳಿಗೆ ಆದ್ಯತೆ ಕೊಡಬೇಕು. ಪ್ಯಾಕೆಟ್​ಗಳ ಬಗ್ಗೆ ಗಮನ ಹರಿಸಿದಾಗ ಮಾತ್ರ ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸಲು ಸಾಧ್ಯ. ಹಿಂದೊಮ್ಮೆ ಮಾವಿನಕಾಯಿಯಲ್ಲಿ ರಾಸಾಯನಿಕ ಅಂಶ ಕಂಡುಬಂದ ಕಾರಣ ವಿದೇಶದವರು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದರ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿತ್ತು.

    ‘ನನ್ನ ತೋಟದ ಕಾಫಿ ಬೆಳೆಗೆ ಎಷ್ಟು ಮಹತ್ವ ಕೊಡುತ್ತೇನೋ ಅಷ್ಟೇ ಗಮನವನ್ನು ಅದರ ಪರಿಷ್ಕರಣೆಗೂ ಕೊಡುತ್ತೇನೆ. ಇಲ್ಲವಾದಲ್ಲಿ ಸೂಕ್ತ ಬೆಲೆ ದೊರೆಯುವುದಿಲ್ಲ, ಮಾರುಕಟ್ಟೆಯಲ್ಲೂ ಕೊಂಡುಕೊಳ್ಳುವವರಿಲ್ಲ ಎಂದಾಗುತ್ತದೆ. ವಿದೇಶದ ಕಂಪನಿಗಳು ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡುತ್ತವೆ’ ಎಂದು ಕಾಫಿ ಬೆಳೆಗಾರರೊಬ್ಬರು ನನ್ನ ಬಳಿ ಹೇಳಿದ್ದರು.

    ಒಮ್ಮೆ ಧಾರವಾಡದ ಬಳಿ ಗುಲಾಬಿ ಹೂವಿನ ತೋಟಕ್ಕೆ ಹೋಗಿದ್ದೆವು. ಅಲ್ಲಿ ಉತ್ತಮ ಗಾತ್ರದ, ಬಣ್ಣದ ಹೂ ಬೆಳೆದಿತ್ತು. ಆದರೆ ಅದಕ್ಕೆ ಮೌಲ್ಯ ಬಹಳ ಕಡಿಮೆ ಇತ್ತು. ಕಾರಣ ಗುಲಾಬಿ ಹೂಗಳನ್ನು ಒಟ್ಟಾಗಿ ಇರಿಸಿ ಮಾರಾಟಕ್ಕೆ ಹೋಗುತ್ತಿದ್ದುದರಿಂದ ಅವು ಬಾಡುತ್ತಿದ್ದವು ಅಥವಾ ಬೆಂದು ಹೋಗುತ್ತಿದ್ದವು. ಬೆಂಗಳೂರಿನಲ್ಲಿ ಹೂವಿನ ಮಾರುಕಟ್ಟೆಯಲ್ಲಿ ಹೂವುಗಳನ್ನು ರಕ್ಷಿಸಿಕೊಳ್ಳುವ ಶ್ರಮವನ್ನು ಗಮನಿಸಿದರೆ, ಬೆಳೆ ಬೆಳೆಯುವಾಗ, ಕೊಯ್ಯುವಾಗ, ಪ್ಯಾಕ್ ಮಾಡುವಾಗ ಹಾಗೂ ಮಾರುಕಟ್ಟೆಗೆ ಸಾಗಿಸುವಾಗ ಹಾಗೂ ಮಾರಾಟ ಮಾಡುವಾಗ ಎಷ್ಟು ಎಚ್ಚರಿಕೆ ವಹಿಸಬೇಕೆನ್ನುವುದು ವೇದ್ಯವಾಗುತ್ತದೆ.

    ಈಗ ಸರ್ಕಾರದ ನೆಲೆಯಲ್ಲಿ ಪ್ರಾರಂಭವಾದ ಹಲವು ಸಹಕಾರಿ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳು ನಿಗದಿತ ಬೆಲೆಯಲ್ಲಿ ಮಾರಾಟವಾಗುತ್ತವೆ. ಉತ್ತಮ ಮಾರುಕಟ್ಟೆ ವ್ಯವಸ್ಥೆ ಇದ್ದಲ್ಲಿ ರೈತರಿಗೆ ಅನುಕೂಲವಾಗುತ್ತದೆ. ತರಕಾರಿ ಮತ್ತು ಹಣ್ಣುಗಳ ಬೆಳೆ ಬಂದ ತಕ್ಷಣ ಶೀತಲ ಕೇಂದ್ರದಲ್ಲಿರಿಸಿ ಕೆಲವು ವಾರ, ತಿಂಗಳು ಕೆಡದಂತೆ ರಕ್ಷಿಸಿ ಮಾರುಕಟ್ಟೆ ನಿರ್ಮಾಣ ಮಾಡುವ ವ್ಯವಸ್ಥೆ ಬಂದಿದೆ. ಇಂತಹ ಶೀತಲೀಕರಣ ವ್ಯವಸ್ಥೆ ತಾಲ್ಲೂಕು ಮಟ್ಟದಲ್ಲೂ ಹೆಚ್ಚಾಗಬೇಕಾಗಿದೆ.

    ಬೆಳೆ ಬೆಳೆಯುವುದರಿಂದ ಹಿಡಿದು ಗ್ರಾಹಕನ ಕೈ ಸೇರುವವರೆಗೂ ಹಲವು ಹಂತಗಳಿವೆ. ಎಲ್ಲ ಹಂತಗಳಲ್ಲೂ ವಿಶೇಷವಾದ ಮುತುವರ್ಜಿ ವಹಿಸಿದಾಗ ಮಾತ್ರ ಗ್ರಾಹಕನ ಮನಗೆಲ್ಲಲು ಸಾಧ್ಯ. ಬೆಳೆಗಳಿಗೆ ಉತ್ತಮ ಬೆಲೆ ಲಭ್ಯವಾದಾಗ ಮಾತ್ರ ಬೆಳೆಗಾರರೂ ಬದುಕು ಕಟ್ಟಿಕೊಳ್ಳಲು ಸಾಧ್ಯ. ರೈತರು, ಮಧ್ಯವರ್ತಿ, ವ್ಯಾಪಾರಿ, ಗ್ರಾಹಕರು ಎಲ್ಲರೂ ತಮ್ಮದೇ ಆದ ಪ್ರಾಮುಖ್ಯತೆ ಹೊಂದಿದ್ದಾರೆ. ಎಲ್ಲರೂ ಅವರವರ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಇಂದಿನ ಈ ಆಧುನಿಕ ಮಾರುಕಟ್ಟೆಯ ಯುಗದಲ್ಲಿ ಲಾಭವೇ ಉದ್ದೇಶವಾಗಬಾರದು. ಬೆಳೆ ಬೆಳೆದ ರೈತ ಮತ್ತು ಕೊಂಡ ಗ್ರಾಹಕರಿಗೂ ಇಬ್ಬರಿಗೂ ವ್ಯಾಪಾರ-ವ್ಯವಹಾರದಲ್ಲಿ ಮನಸ್ಸಿಗೆ ತೃಪ್ತಿಯಾಗ ಬೇಕು. ಆಗ ಮಾತ್ರ ಉತ್ತಮ ಬೆಳವಣಿಗೆಗಳನ್ನು ಕಾಣಲು ಸಾಧ್ಯ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ: ಈಗಾಗಲೇ 3,773 ಮಂದಿ ಮತ ಚಲಾವಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts