

ಬೆಂಗಳೂರು: 'ಹುಲಿಯಾ..'
- ಹೀಗೆಂದಾಕ್ಷಣ ರಾಜಕಾರಣಾಸಕ್ತರಿಗೆ ಹೌದೋ ಹುಲಿಯಾ ಎಂಬ ಸಿದ್ದರಾಮಯ್ಯಗೆ ಸಂಬಂಧಿಸಿದ ಸಂಗತಿ ನೆನಪಾಗುತ್ತದೆ. ಅದೇ ಸಿನಿಮಾಸಾಕ್ತರಿಗೆ ಡೈನಾಮಿಕ್ ಸ್ಟಾರ್ ದೇವರಾಜ್ ಅಭಿನಯಿಸಿದ್ದ ಬಹು ಜನಪ್ರಿಯ ಸಿನಿಮಾ 'ಹುಲಿಯಾ' ನೆನಪಾಗುತ್ತದೆ. ಹೌದು.. ಅದೇ ಹುಲಿಯಾ ಈಗ ಮತ್ತೆ ಬಂದಿದ್ದಾನೆ. ಅರ್ಥಾತ್, ದೇವರಾಜ್ ಅಭಿನಯಿಸಿದ್ದ ಅದೇ ಸಿನಿಮಾದ ಶೀರ್ಷಿಕೆಯಲ್ಲೇ ಇನ್ನೊಂದು ಸಿನಿಮಾ ಮೂಡಿಬರುತ್ತಿದ್ದು ಅದರ ಟೈಟಲ್ ಲಾಂಚ್ ಆಗಿದೆ.
ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಆಶೀರ್ವಾದದೊಂದಿಗೆ ಎಂಬ ಒಕ್ಕಣೆಯೊಂದಿಗೆ ಈ ಟೈಟಲ್ ಲಾಂಚ್ ಆಗಿದೆ. ವಿಶೇಷವೆಂದರೆ ಈ ಚಿತ್ರದ ಟೈಟಲ್ಗೆ 50ಕ್ಕೂ ಅಧಿಕ ಸೆಲೆಬ್ರಿಟಿಗಳು ಸಾಥ್ ನೀಡಿದ್ದಾರಂತೆ. ಅಂದರೆ ಸುಮಾರು 50 ಸೆಲೆಬ್ರಿಟಿಗಳಿಂದ ಇದು ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದೆ.
ತೂತುಮಡಿಕೆ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ಎಂ.ಚಂದ್ರಕೀರ್ತಿ ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಟೈಟಲ್ ಲಾಂಚ್ ಜತೆಗೆ ಈ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗಿದೆ. ಸಿಲಿಕಾನ್ ಸಿಟಿ, ಕಿಸ್, ಮೂಕವಿಸ್ಮಿತ, ಬೆಂಕಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಚಂದ್ರಕೀರ್ತಿ, ತೂತುಮಡಿಕೆ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು. ಅವರೀಗ 'ಹುಲಿಯಾ' ಮೂಲಕ ಲವ್ ಕಂ ಆ್ಯಕ್ಷನ್ ಕಥೆಯನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರನ್ನು ರಂಜಿಸಲು ಅಣಿಯಾಗುತ್ತಿದ್ದಾರೆ.
ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುವುದರ ಜೊತೆಗೆ ಚಂದ್ರಕೀರ್ತಿ ನಾಯಕನಾಗಿಯೂ ನಟಿಸುತ್ತಿದ್ದಾರೆ. ಹುಲಿಯಾ ಪೋಸ್ಟರ್ನಲ್ಲಿ ಅವರು ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ತೂತುಮಡಿಕೆ ಸಿನಿಮಾ ನಿರ್ಮಾಣ ಮಾಡಿದ್ದ ಸರ್ವತಾ ಸಿನಿ ಗ್ಯಾರೇಜ್, ಮಧು ರಾವ್ ಹಾಗೂ ವಸಂತ್ ವಲ್ಲಭ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಸ್ವಾಮಿನಾಥನ್ ಆರ್.ಕೆ. ಅವರ ಸಂಗೀತ, ರಘು ನಿಡುವಳ್ಳಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಟೈಟಲ್ ಹಾಗೂ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆ ಮಾಡಿರುವ 'ಹುಲಿಯಾ' ಚಿತ್ರತಂಡ ಉಳಿದ ತಾಂತ್ರಿಕ ಹಾಗೂ ತಾರಾಬಳಗದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಿದೆ.