ಚೀನಾದ ಗಂಭೀರ ಅಪಾಯಕ್ಕೆ ಭಾರತೀಯರ ಒಗ್ಗಟ್ಟೇ ಉತ್ತರ

protest against china
Published on
ಚೀನಾ 1962ರಲ್ಲಿ ಅಪ್ರಚೋದಿತವಾಗಿ ಆಕ್ರಮಣ ಮಾಡಿದಾಗಿನಿಂದಲೂ ಭಾರತ ಮತ್ತು ಚೀನಾ ನಡುವಿನ ಬಾಂಧವ್ಯ ಸುಲಲಿತವಾಗಿರಲಿಲ್ಲ. ಆಗ ಗಡಿ ತಕರಾರೇ ಸಮಸ್ಯೆಯ ಮೂಲವಾಗಿತ್ತು. ವರ್ಷಗಳು ಉರುಳಿದಂತೆ ಹಲವು ಅಂಶಗಳು ಅದಕ್ಕೆ ಸೇರ್ಪಡೆಯಾದವು.

ಜಗತ್ತಿನ ನಂಬರ್ ಒನ್ ಶಕ್ತರಾಷ್ಟ್ರವಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ, ಅಮೆರಿಕದೊಂದಿಗೆ ತೀಕ್ಷ್ಣವಾದ ವಾಣಿಜ್ಯ ಸಂಘರ್ಷ ಮತ್ತು ಅಧಿಕಾರ ಹೋರಾಟದಲ್ಲಿ ತೊಡಗಿದೆ. ಅಮೆರಿಕಕ್ಕೆ ನಿಕಟವಾಗುತ್ತಿರುವ ಭಾರತ, ತನ್ನ ಮಹತ್ವಾಕಾಂಕ್ಷೆ ಈಡೇರಿಸಿಕೊಳ್ಳಲು ದೊಡ್ಡ ಅಡ್ಡಿ ಎಂದು ಚೀನಾ ಭಾವಿಸಿದೆ. ಹೀಗಾಗಿ ಭಾರತವನ್ನು ಮಣಿಸಬೇಕೆಂಬುದು ಅದರ ಹವಣಿಕೆ. ಪಾಕಿಸ್ತಾನ ಜೊತೆಗಿನ ಮೈತ್ರಿ ಅದರ ಉದ್ದೇಶ ಈಡೇರಿಕೆಗೆ ಪೂರಕವಾಗಿದ್ದು ಭಾರತಕ್ಕೆ ಅಪಾಯವನ್ನು ಹೆಚ್ಚಿಸುತ್ತದೆ.

ಬಗೆಹರಿಯದ ಗಡಿ ತಂಟೆ ಸಮಸ್ಯೆಯನ್ನು ಹೆಚ್ಚಿಸಿದೆ. ವಾಸ್ತವ ನಿಯಂತ್ರಣ ರೇಖೆ (ಎಲ್​ಎಸಿ) ಶಾಂತಿಗೆ ಮೂಲವಾಗಿದೆ. ಆದರೆ ಆ ರೇಖೆ ಎಲ್ಲಿರಬೇಕೆಂದು ನಿರ್ಧರಿಸುವ ಒಂದು ಒಪ್ಪಂದ ಏರ್ಪಡದ ಹೊರತು ಶಾಂತಿ ನೆಲೆಸುವುದು ಅಸಾಧ್ಯ. ನಕ್ಷೆಯ ಮೇಲೆ ರೇಖೆ ನಮೂದಿಸಿ ಭೂಪ್ರದೇಶದ ಮೇಲೆ ಅದನ್ನು ಗುರುತಿಸುವ ಸಲುವಾಗಿ ಜಂಟಿ ಕಾರ್ಯಪಡೆ ರಚನೆ ಮತ್ತು ‘ವಿಶೇಷ ಪ್ರತಿನಿಧಿಗಳ’ ಸಭೆ ಮೊದಲಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದಕ್ಕೆ ಅನುಕೂಲವಾಗಲೆಂದು ನಕ್ಷೆಗಳ ವಿನಿಮಯ ಕೂಡ ಮಾಡಿಕೊಳ್ಳಬೇಕು. ಕೇಂದ್ರ ಸೆಕ್ಟರ್ ನಕಾಶೆಗಳನ್ನು 2002ರಲ್ಲಿ ವಿನಿಮಯ ಮಾಡಿಕೊಳ್ಳಲಾಗಿದೆ. ಆದರೆ ಚೀನಾದ ದೂರಗಾಮಿ ತಂತ್ರಕ್ಕೆ ಸೂಕ್ತವಾಗಲಾರದೆಂಬ ಕಾರಣಕ್ಕೆ ಆ ಪ್ರಕ್ರಿಯೆ ಅಲ್ಲಿಯೇ ನಿಂತು ಹೋಗಿದೆ. ಉದ್ದೇಶಪೂರ್ವಕ ಕುಟಿಲ ಯೋಜನೆಗೆ ಹೆಸರುವಾಸಿಯಾದ ಚೀನಾ, ಒಳ್ಳೆಯ ಸಮಯಕ್ಕಾಗಿ ಕಾದು ಕುಳಿತಿದೆ.

ಸಂಘರ್ಷ ಹೆಚ್ಚಳ: ಕಳೆದ ಆರೇಳು ವರ್ಷಗಳಲ್ಲಿ ಉಭಯ ಕಡೆಗಳ ಮುಖಾಮುಖಿಯ ಸಂಖ್ಯೆ ಮತ್ತು ಗಂಭೀರತೆ ಜಾಸ್ತಿಯಾಗಿದೆ. ದೆಪ್​ಸಂಗ್, ಚುಮಾರ್ ಮತ್ತು ಡೊಕ್ಲಾಮ್ ಅದಕ್ಕೆ ಕೆಲವೇ ಉದಾಹರಣೆಗಳು. ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮೊದಲಾದ ದೇಶಗಳೊಂದಿಗೆ ಭಾರತದ ವ್ಯೂಹಾತ್ಮಕ ಸಂಬಂಧ ಆಳಗೊಳ್ಳುತ್ತಿರುವುದೇ ಮೊದಲಾದ ಕಾರಣಗಳು ಚೀನಾದ ಈ ಅತಿಕ್ರಮಣಗಳ ಹಿಂದಿದೆ. ತೀರಾ ಇತ್ತೀಚೆಗೆ, ಇತರ ದೇಶಗಳ ಉತ್ಪಾದಕರನ್ನು ಸೆಳೆಯುವ ಭಾರತದ ಉದ್ದೇಶದಿಂದ ಚೀನಾ ಭಾರಿ ಕಸಿವಿಸಿ ಹೊಂದಿದೆ. ಈ ರೀತಿಯ ಮಹತ್ವಾಕಾಂಕ್ಷೆ ಇಟ್ಟುಕೊಳ್ಳುವುದು ಬೇಡ ಎಂದು ಭಾರತಕ್ಕೆ ಎಚ್ಚರಿಸುವ ಲೇಖನವೊಂದು ಚೀನಾದ ‘ಗ್ಲೋಬಲ್ ಟೈಮ್ಸ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಈ ಎಲ್ಲ ಕಾರಣಗಳ ಫಲವೋ ಎಂಬಂತೆ ಲಡಾಖ್ ವಲಯದ ಅನೇಕ ಸ್ಥಳಗಳಲ್ಲಿ ಚೀನಾ ಇತ್ತೀಚೆಗೆ ಅತಿಕ್ರಮಣಗಳನ್ನು ನಡೆಸಿದೆ. ಎಲ್​ಎಸಿ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಅದಕ್ಕೆ ನೆಪವನ್ನು ಒದಗಿಸುತ್ತಿದೆ. ವಾಸ್ತವದಲ್ಲಿ, ಎರಡೂ ಕಡೆಗಳವರು ತಮ್ಮ ತಮ್ಮ ರೇಖೆಗಳವರೆಗೆ ಕಾವಲು ನಡೆಸುತ್ತಿದ್ದಾರೆ. ಹಾಗೆ ನೋಡಿದರೆ ಎರಡೂ ಕಡೆಗಳವರ ಗ್ರಹಿಕೆ ಸರಿಯಾಗಿಯೇ ಇದೆ. ಒಟ್ಟು 23 ಜಾಗಗಳಲ್ಲಿ (ಲಡಾಖ್​ನಲ್ಲಿ 11) ವಿವಾದವಿದೆ ಹಾಗೂ ಅದು ಪರಿಹಾರವಾಗಬೇಕಿದೆ ಎನ್ನುವುದನ್ನು ಒಂದು ಹಂತದಲ್ಲಿ ಉಭಯ ಕಡೆಗಳು ಒಪ್ಪಿಕೊಂಡಿವೆ.

ಇತ್ತೀಚಿನ ಗಲ್ವಾನ್ ಘಟನಾವಳಿ ಚೀನಾದ ದೀರ್ಘಕಾಲದ ಮಹತ್ವಾಕಾಂಕ್ಷೆಯನ್ನು ಅನಾವರಣಗೊಳಿಸಿದೆ. ಗಲ್ವಾನ್ ಕಣಿವೆ ಯಾವತ್ತೂ ತನಗೇ ಸೇರಿದ್ದು ಎಂದು ಚೀನಾದ ವಿದೇಶಾಂಗ ಸಚಿವರು ಹೇಳಿರುವುದು, ಸದ್ಯದ ವಿದ್ಯಮಾನಗಳ ಹಿಂದೆ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನ ಕಾರಣವಿದೆ ಎನ್ನುವುದನ್ನು ದೃಢಪಡಿಸುತ್ತದೆ. ಡಿಬಿಓ-ಕಾರಾಕೋರಂ ಪಾಸ್ ಅನ್ನು ವಶಪಡಿಸಿಕೊಂಡು ಪಾಕಿಸ್ತಾನ ಅವರಿಗೆ ಬಿಟ್ಟುಕೊಟ್ಟ ಭಾರತದ ಪ್ರದೇಶವಾದ ಶಕ್ಸ್​ಗಂ ಕಣಿವೆವರೆಗೆ ಕೂಡಿಸಿಕೊಳ್ಳುವುದು ಹಾಗೂ ನಂತರ ಸಿಯಾಚಿನ್ ಗ್ಲೇಸಿಯರ್ ಅನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನಕ್ಕೆ ನೆರವಾಗುವುದು ಚೀನಾದ ದೀರ್ಘಕಾಲೀನ ತಂತ್ರವಾಗಿರಬಹುದು. ಈಶಾನ್ಯ ಲಡಾಖ್ ವಶಪಡಿಸಿಕೊಳ್ಳುವುದರಿಂದ ಅಕ್ಸಾಯ್ಚಿನ್ ರಸ್ತೆಗೆ ಆಳ ಒದಗಿಸಲು ಹಾಗೂ ಚೀನಾ-ಪಾಕ್ ಆರ್ಥಿಕ ಕಾರಿಡಾರ್​ಗೆ ಭದ್ರತೆ ಒದಗಿಸಲು ಸಾಧ್ಯವಾಗುತ್ತದೆ. ಈ ಅಪಾಯದ ಗಂಭೀರತೆಯನ್ನು ನಾವು ಅರ್ಥಮಾಡಿಕೊಳ್ಳಬೇಕು ಹಾಗೂ ಒಂದು ದೇಶವಾಗಿ ಒಗ್ಗಟ್ಟಿನಿಂದ ಇರಬೇಕು. ಈ ಹಿಂದೆಯೂ ಇಂಥ ಹಲವು ಘಟನೆಗಳು ನಡೆದಿವೆ. ಆದರೆ ಆಗೆಲ್ಲ ಮಾತುಕತೆ ಹಾಗೂ ರಾಜತಾಂತ್ರಿಕ ಸಂಧಾನಗಳು ಫಲ ಕೊಟ್ಟಿದ್ದವು. ಈ ಬಾರಿ ಅದಕ್ಕೆ ಯಾವುದೇ ಫಲ ಸಿಕ್ಕಿಲ್ಲ. ಚೀನಾದ ಆಳವಾದ ತಂತ್ರಗಳೇ ಇದಕ್ಕೆ ಕಾರಣವಾಗಿರಬಹುದು.

ಪ್ರಧಾನಿಯಿಂದ ಒಳ್ಳೆಯ ಕ್ರಮ: ದೇಶದ ಭದ್ರತೆಗೆ ಒದಗಿರುವ ಈ ಗಂಭೀರ ಅಪಾಯದ ಬಗ್ಗೆ ರ್ಚಚಿಸಲು ಪ್ರಧಾನಿ ನರೇಂದ್ರ ಮೋದಿ ಜೂನ್ 19ರಂದು ಸರ್ವ ಪಕ್ಷ ಸಭೆ ನಡೆಸಿದ್ದು ಉತ್ತಮ ನಡೆಯಾಗಿದೆ. ಸಭೆಯಲ್ಲಿ ಮೋದಿ ಎಂಟು ಅಂಶಗಳನ್ನು ಪ್ರಸ್ತಾಪಿಸಿದರು. ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಸಶಸ್ತ್ರ ಪಡೆಗಳಿಗೆ ಶಸ್ತ್ರಾಸ್ತ್ರ ಒದಗಿಸುವುದು ಹಾಗೂ ಅವನ್ನು ಸನ್ನದ್ಧ ಸ್ಥಿತಿಯಲ್ಲಿಡುವುದು, ಗಡಿ ಭಾಗಗಳಲ್ಲಿ ಹೆಚ್ಚು ಬಾರಿ ಪಹರೆ ನಡೆಸುವುದು, ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸುವ ಸಾಮರ್ಥ್ಯ ವರ್ಧನೆ ಮತ್ತು ಎಲ್​ಎಸಿಯಲ್ಲಿ ಅದರಲ್ಲೂ ವಿಶೇಷವಾಗಿ ಗಲ್ವಾನ್ ಕಣಿವೆಯಲ್ಲಿ ಪ್ರಸ್ತುತ ಪರಿಸ್ಥಿತಿ- ಇವೇ ಮೊದಲಾದವನ್ನು ಅವರು ಪ್ರಸ್ತಾಪಿಸಿದರು.

ಭಾರತದ ಗಡಿಗಳಲ್ಲಿ ಯಾರೇ ಅತಿಕ್ರಮಣಕಾರರು ಇರಲಿಲ್ಲ ಅಥವಾ ಯಾವುದೇ ಠಾಣೆ ಯಾರದೇ ನಿಯಂತ್ರಣದಲ್ಲಿಲ್ಲ ಎಂಬ ಪ್ರಧಾನಿಯವರ ಹೇಳಿಕೆಯನ್ನು ದುರದೃಷ್ಟವಶಾತ್ ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಲಾಯಿತು. ಇಂಥ ಆಕ್ಷೇಪಗಳು ತಪು್ಪ ಮಾಹಿತಿಯಿಂದ ಕೂಡಿದ್ದು ದೇಶದ ಹಿತಕ್ಕೆ ವಿರುದ್ಧವಾಗಿದೆ. ಪ್ರಧಾನ ಮಂತ್ರಿಯವರ ಕಚೇರಿ ಜೂನ್ 20ರಂದು ಹೊರಡಿಸಿದ ಹೇಳಿಕೆ ಈ ಬಗ್ಗೆ ಸ್ಪಷ್ಟನೆ ನೀಡಿದೆ.

‘ಭಾರತದ ಯೋಧರ ಶೌರ್ಯದ ನಂತರ ಗಡಿಯಲ್ಲಿ ಯಾವುದೇ ಚೀನಿ ಅತಿಕ್ರಮಣಕಾರರು ಇರಲಿಲ್ಲ ಎನ್ನುವುದರತ್ತ ಪ್ರಧಾನಿ ಗಮನ ಸೆಳೆದಿದ್ದರು’ ಎಂದು ಅದು ವಿವರಿಸಿದೆ. ಎಲ್​ಎಸಿ ಉಲ್ಲಂಘನೆಯ ಪ್ರಯತ್ನಗಳ ವಿರುದ್ಧ ಭಾರತ ಕಠಿಣವಾಗಿ ವರ್ತಿಸಲಿದೆ ಎಂದೂ ಅದು ಪ್ರತಿಪಾದಿಸಿದೆ. ಪ್ರಧಾನಿ ಕಚೇರಿಯೇ ಸ್ಪಷ್ಟನೆ ನೀಡಿರುವುದರಿಂದ ವಿವಾದವನ್ನು ಅಲ್ಲಿಗೇ ನಿಲ್ಲಿಸಬೇಕಿದೆ. ನಾವು ಎದುರಿಸುತ್ತಿರುವ ಅಪಾಯದ ಬಗ್ಗೆಯೇ ಹೆಚ್ಚಾಗಿ ದೇಶ ಗಮನ ಹರಿಸಬೇಕಿದೆ. ರಾಜಕೀಯವನ್ನು ಬೇರೆ ಸಂದರ್ಭದಲ್ಲಿ ಮಾಡಬಹುದು.

ಬೆಂಬಲ ಗಳಿಸಿದ್ದ ಇಂದಿರಾ, ವಾಜಪೇಯಿ: ರಾಷ್ಟ್ರೀಯ ಬಿಕ್ಕಟ್ಟುಗಳನ್ನು ನಮ್ಮ ದೇಶ ಸದಾ ಒಗ್ಗಟ್ಟಿನಿಂದ ಎದುರಿಸಿದೆ. 1971ರಲ್ಲಿ ಇಂದಿರಾ ಗಾಂಧಿಯವರಿಗೆ ಎಲ್ಲ ಪಕ್ಷಗಳು ಒಕ್ಕೊರಲ ಬೆಂಬಲ ನೀಡಿದ್ದವು. ಅದೇ ರೀತಿ ಕಾರ್ಗಿಲ್ ಯುದ್ಧದ ವೇಳೆ ಅಟಲ್ ಬಿಹಾರಿ ವಾಜಪೇಯಿಯವರಿಗೆ ಎಲ್ಲ ಪಕ್ಷಗಳ ಬೆಂಬಲ ಸಿಕ್ಕಿತ್ತು. ಈಗಲೂ ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಸರ್ಕಾರಕ್ಕೆ ಒಮ್ಮತದ ತಾತ್ವಿಕ ಬೆಂಬಲ ನೀಡಿವೆ.

‘ಭಾರತದ ಇಂಚಿಂಚೂ ಭೂಮಿ ರಕ್ಷಿಸಲು ದೇಶ ಬದ್ಧವಾಗಿದೆ. ಪ್ರಚೋದಿಸಿದರೆ ದಿಟ್ಟ ಉತ್ತರ ನೀಡುವುದು ನಮ್ಮ ಸಂಕಲ್ಪವಾಗಿದೆ’ ಎಂದು ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ಗುಡುಗಿದ್ದಾರೆ. ಆದ್ದರಿಂದ ಅಪಸ್ವರ ಎತ್ತುವ ಪ್ರಮೇಯವೇ ಇಲ್ಲ. ಭಾರತ ಯಾವತ್ತೂ ಶಾಂತಿಪ್ರಿಯ ದೇಶ. ಆದರೆ ಅದು ದೇಶದ ಸಮಗ್ರತೆಯೊಂದಿಗೆ ರಾಜಿ ಮಾಡಿಕೊಳ್ಳ ಬಯಸುವುದಿಲ್ಲ. ಇತ್ತೀಚಿನ ವಿದ್ಯಮಾನಗಳು ಹಾಗೂ ಚೀನಾದ ರಹಸ್ಯ ಮಹತ್ವಾಕಾಂಕ್ಷೆಯು ಭಾರತ-ಚೀನಾ ಸಂಬಂಧಗಳನ್ನು ಮರುಹೊಂದಾಣಿಕೆ ಮಾಡಬೇಕಾದ ಸನ್ನಿವೇಶವನ್ನು ಸೃಷ್ಟಿಸಿದೆ. ರಾಜತಾಂತ್ರಿಕ, ಆರ್ಥಿಕ ಮತ್ತು ಮಿಲಿಟರಿ- ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಭಾರತ ಪರಿಸ್ಥಿತಿಯನ್ನು ನಿಭಾಯಿಸುವುದು ಅಗತ್ಯ. ನಮ್ಮ ಸಿದ್ಧಾಂತ ಸ್ಪಷ್ಟವಾಗಿದೆ: ‘ನಮ್ಮ ಒಂದಿಂಚು ನೆಲವನ್ನೂ ನಷ್ಟಮಾಡಿಕೊಳ್ಳುವುದಿಲ್ಲ. ಚೀನಿಯರನ್ನು ಎದುರಿಸಲು ನಮ್ಮ ಸೇನೆ ಸಮರ್ಥವಾಗಿದೆ’ ಎಂಬುದೇ ಆ ನಿಲುವು. ಚೀನಾ ಆಕ್ರಮಣಕಾರಿ ಧೋರಣೆ ತಳೆದಾಗ ನಾವೇಕೆ ಸುಮ್ಮನಿರಬೇಕು? ಟಿಬೆಟ್, ಹಾಂಕಾಂಗ್, ದಕ್ಷಿಣ ಚೀನಾ ಸಮುದ್ರ ಮೊದಲಾದ ವಿಷಯಗಳಲ್ಲಿ ಚೀನಾ ಜಗತ್ತಿಗೆ ಉತ್ತರ ಹೇಳಬೇಕಾದ ಸಂದಿಗ್ಧತೆಯಲ್ಲಿದೆ. ಭಾರತ ಕೂಡ ಆರ್ಥಿಕತೆ ವಿಚಾರದಲ್ಲಿ ಚೀನಾವನ್ನು ಕ್ರಮೇಣ ಮಣಿಸಬೇಕಾಗುತ್ತದೆ. ಚೀನಾ ವಿರುದ್ಧ ಆಗಲೇ ಭಾರತೀಯರಲ್ಲಿ ಆಕ್ರೋಶ ಮಡುಗಟ್ಟುತ್ತಿದ್ದು ಚೀನಿ ವಸ್ತುಗಳ ಬಹಿಷ್ಕಾರ ಆಂದೋಲನ ಆರಂಭವಾಗಿದೆ.

(ಲೇಖಕರು ಭೂ ಸೇನೆಯ ಮಾಜಿ ಮುಖ್ಯಸ್ಥರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net