ನಂ.1 ಮಿಥಾಲಿ: 3 ವರ್ಷಗಳ ಅಂತರದಲ್ಲಿ 2 ಬಾರಿ ಟಾಪರ್

Mithali
Published on

ಮಹಿಳಾ ಕ್ರಿಕೆಟ್ ಅಂದರೆ ತಕ್ಷಣ ನೆನಪಿಗೆ ಬರುವ ಹೆಸರು ಮಿಥಾಲಿ ರಾಜ್. ಹಲವು ದಾಖಲೆಗಳ ಮೂಲಕ ವಿಶ್ವದ ಗಮನ ಸೆಳೆದಿರುವ ಭಾರತ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. 16 ವರ್ಷಗಳ ಅಂತರದಲ್ಲಿ ನಂ.1 ಎನಿಸಿದ ವಿಶ್ವದ ಮೊದಲ ಬ್ಯಾಟುಗಾರ್ತಿ ಎನಿಸಿಕೊಂಡಿದ್ದಾರೆ. ಇವರ ಸಾಧನೆಯ ಮೇಲೊಂದು ನೋಟ.

| ಶ್ವೇತಾ ನಾಯ್ಕ್​

ಕಳೆದ ವಾರ ದುಬೈನಲ್ಲಿ ನಡೆದ ಐಸಿಸಿ ಮಹಿಳಾ ಕ್ರಿಕೆಟ್ ಪಂದ್ಯದಲ್ಲಿ ವಿಶ್ವದ ಗಮನ ಸೆಳೆದವರು ಆಟಗಾರ್ತಿ ಮಿಥಾಲಿ ರಾಜ್. ಇದಾಗಲೇ ಕೆಲವು ದಾಖಲೆಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡಿರುವ ಭಾರತದ ಏಕದಿನ ಕ್ರಿಕೆಟ್ ಪಂದ್ಯದ ನಾಯಕಿ ಮಿಥಾಲಿ ಮತ್ತೊಂದು ದಾಖಲೆಯ ಗರಿಯನ್ನು ತಮ್ಮ ಕಿರೀಟಕ್ಕೆ ಸಿಕ್ಕಿಸಿಕೊಂಡರು. ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್​ನಲ್ಲಿ 7 ಸಾವಿರ ರನ್ ಪೂರೈಸಿ ವಿಶ್ವದ ಮೊದಲ ಆಟಗಾರ್ತಿ ಎಂಬ ಬಿರುದು ಪಡೆದಿದ್ದ ಮಿಥಾಲಿ ಮಹಿಳಾ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್​ನಲ್ಲಿ ಮೂರು ವರ್ಷಗಳ ಬಳಿಕ ಮತ್ತೆ ವಿಶ್ವದ ನಂ. 1 ಪಟ್ಟಕ್ಕೇರಿದರು. ಈ ಮೂಲಕ 16 ವರ್ಷಗಳ ಅಂತರದಲ್ಲಿ ನಂ.1 ಎನಿಸಿದ ವಿಶ್ವದ ಮೊಲದ ಬ್ಯಾಟುಗಾರ್ತಿ ಎನಿಸಿಕೊಂಡಿದ್ದಾರೆ. ಇಂಗ್ಲೆಂಡ್​ನ ಆಟಗಾರ್ತಿಯಾಗಿದ್ದ ಚಾರ್ಲೋಟ್ ಎಡ್ವರ್ಡ್ಸ್ ದಾಖಲೆಯನ್ನು ಹಿಂದಿಕ್ಕಿ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಅಂತಾರಾಷ್ಟ್ರಿಯ ಮಹಿಳಾ ಕ್ರಿಕೆಟ್​ನಲ್ಲಿ ಎಲ್ಲ ಮೂರು ಮಾದರಿಗಳಿಂದ ಅತಿಹೆಚ್ಚು ರನ್ (10,337 ರನ್) ಪೇರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಿಥಾಲಿ ಏಕದಿನ ಕ್ರಿಕೆಟ್​ನಲ್ಲೂ ಅತಿ ಹೆಚ್ಚು ರನ್ ಗಳಿಸಿರುವುದು ದಾಖಲೆಯಾಗಿದೆ. ಏಕದಿನ ಕ್ರಿಕೆಟ್​ನಲ್ಲಿ 58ನೇ ಅರ್ಧಶತಕ ಸಿಡಿಸಿದ್ದಾರೆ. ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್​ನಲ್ಲಿ ಮೂರು ವರ್ಷಗಳ ಬಳಿಕ ಮತ್ತೆ ನಂ.1 ಪಟ್ಟಕ್ಕೆ ಏರಿದ್ದಾರೆ. ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ತೋರಿದ ಉತ್ತಮ ನಿರ್ವಹಣೆ ಇದಕ್ಕೆ ಕಾರಣವಾಗಿದೆ. 2018ರ ಫೆಬ್ರವರಿಯಲ್ಲಿ ಮಿಥಾಲಿ ವಿಶ್ವದ ನಂ.1 ಬ್ಯಾಟುಗಾರ್ತಿ ಎನಿಸಿದ್ದರು. ಒಟ್ಟಾರೆ 16 ವರ್ಷಗಳ ಅಂತರದಲ್ಲಿ ನಂ.1 ಎನಿಸಿದ ವಿಶ್ವದ ಮೊದಲ ಬ್ಯಾಟುಗಾರ್ತಿ ಎಂಬ ಅಪರೂಪದ ಸಾಧನೆ ಮಾಡಿದ್ದಾರೆ.

ಸಾಧನೆಗಳು ತಲೆಗೇರಿಲ್ಲ: ‘ಈಗ ಬ್ಯಾಟಿಂಗ್​ನಲ್ಲಿ ವಿಶ್ವದ ನಂ.1 ಪಟ್ಟ ಸಿಕ್ಕಿರಬಹುದು. ಇಷ್ಟು ಸಾಕು. ಜನ ಗುರುತಿಸಿದ್ದಾರೆ ಎಂದು ಕುಳಿತುಕೊಳ್ಳುವುದಿಲ್ಲ. ಸಾಧನೆ, ಹೊಗಳಿಕೆಯನ್ನು ತಲೆಗೇರಿಸಿಕೊಂಡರೆ ಮತ್ತೆ ಮೂಲಸ್ಥಾನಕ್ಕೆ ಹೋಗಬೇಕಾಗುತ್ತದೆ ಎನ್ನುವ ಮಿಥಾಲಿ ಸದಾ ಅಭ್ಯಾಸ ನಿರತರು. ಭಾರತಕ್ಕಾಗಿ ಆಡುವುದು ನನ್ನ ಕನಸು, ನನ್ನ ಅಭಿಮಾನಿ ಗಳನ್ನು ಎಂದಿಗೂ ನಿರಾಸೆಗೊಳಿಸಲು ಇಷ್ಟಪಡುವುದಿಲ್ಲ’ ಎನ್ನುತ್ತಾ ಇನ್ನಷ್ಟು ಸಾಧನೆಯತ್ತ ಮುನ್ನುಗ್ಗುತ್ತಿದ್ದಾರೆ.

22 ವರ್ಷದ ಜರ್ನಿ ಸುಲಭವಲ್ಲ: ಪುರುಷ ಪ್ರಧಾನ ಆಟದಲ್ಲಿ ಪ್ರಬಲತೆ ಸಾಧಿಸು ವುದು ಅಷ್ಟು ಸುಲಭವಲ್ಲ. ಅದನ್ನು ಮಿಥಾಲಿ ಸಾಧಿಸಿ ತೋರಿಸಿದ್ದಾರೆ. ಬಾಲ್ಯದಲ್ಲೇ ಭರತನಾಟ್ಯ ಬಿಟ್ಟು ಕ್ರಿಕೆಟ್​ನೆಡೆಗೆ ಮುಖ ಮಾಡಿದ್ದ ಇವರು ತಮ್ಮ ಆಯ್ಕೆಯಲ್ಲಿ ಯಾವುದೇ ತಪ್ಪಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಸವಾಲುಗಳು ಇದ್ದಾಗಲೇ ಸಾಧನೆಗೆ ಛಲ ಬರುವುದು. ನನ್ನ 22 ವರ್ಷದ ಕ್ರಿಕೆಟ್ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ಪ್ರಾರಂಭದಲ್ಲಿ ಫೀಲ್ಡಿಗಿಳಿದಾಗ ಭಯ ಪಡುತ್ತಿದ್ದೆ. ಚೆನ್ನಾಗಿ ಆಡಿದಾಗ ಹುರಿದುಂಬಿಸುವ ಜನ ಸೋತಾಗ, ಬ್ಯಾಟಿಂಗ್ ಕಳಪೆಯಾದಾಗ ಕೆಟ್ಟದಾಗಿ ಮಾತನಾಡುತ್ತಾರೆ. ಅದೆಲ್ಲವನ್ನು ಮೆಟ್ಟಿನಿಂತು ಮುಂದುವರಿಯುವುದೇ ಕ್ರೀಡಾ ಸ್ಪೂರ್ತಿ ಎನ್ನುವ ಮಿಥಾಲಿ ಕ್ರಿಕೆಟ್​ನಲ್ಲಿ ಇತರ ಮಹಿಳಾ ಆಟಗಾರರಿಗೂ ಸ್ಪೂರ್ತಿ.

ಏಕದಿನ ಕ್ರಿಕೆಟ್​ನಲ್ಲಿ 213 ಪಂದ್ಯ: ಮಾರ್ಚ್ 12ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10,000 ರನ್ ಗಡಿ ದಾಟಿದ್ದ ಮಿಥಾಲಿ, ಏಕದಿನ ಕ್ರಿಕೆಟ್​ನಲ್ಲಿ 7 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ್ತಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವನಿತೆಯರ ತಂಡದ ವಿರುದ್ಧ ಇತ್ತೀಚೆಗೆ ನಡೆದ ಏಕದಿನ ಕ್ರಿಕೆಟ್ ಸರಣಿಯ 4ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಮಹಿಳಾ ಟೆಸ್ಟ್ ಕ್ರಿಕೆಟ್, ಏಕದಿನ ಮತ್ತು ಟಿ20 ಈ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಒಟ್ಟು ಸೇರಿ ಅವರು 10 ಸಾವಿರ ರನ್ ಕಲೆಹಾಕಿದ ವಿಶ್ವದ 2ನೇ ಆಟಗಾರ್ತಿ ಎಂಬ ಹಿರಿಮೆಗೂ ಮಿಥಾಲಿ ಪಾತ್ರರಾಗಿದ್ದರು. ಟೆಸ್ಟ್ ಕ್ರಿಕೆಟ್​ನಲ್ಲಿ 10, ಟಿ20 ಕ್ರಿಕೆಟ್​ನಲ್ಲಿ 89 ಮತ್ತು ಏಕದಿನ ಕ್ರಿಕೆಟ್​ನಲ್ಲಿ 213 ಪಂದ್ಯವಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net