

ಒಂದೂರಿನಲ್ಲಿ ಒಬ್ಬ ಶ್ರೀಮಂತನಿದ್ದ. ಅವನು ಜಿಪುಣಾಗ್ರೇಸರನಾಗಿದ್ದ. ಎಂದೂ ಯಾರಿಗೂ ಒಂದು ಬಿಡಿಗಾಸೂ ದಾನ ಮಾಡುತ್ತಿರಲಿಲ್ಲ. ಒಮ್ಮೆ ಆ ಊರಿನಲ್ಲಿ ಭೀಕರ ಬರಗಾಲ ಬಂತು. ಬಡಬಗ್ಗರು ಹಸಿವಿನಿಂದ ಹಾಹಾಕಾರ ಮಾಡಹತ್ತಿದರು. ಆಗ, ಆ ಊರಿನ ಯುವಕರ ಗುಂಪೊಂದು, ಬಡಬಗ್ಗರಿಗಾಗಿ ಅನ್ನಛತ್ರವನ್ನು ಏರ್ಪಡಿಸಲು ಮುಂದಾದರು. ಹಣವಿದ್ದವರ ಮನೆಯ ಮುಂದೆ ಹೋಗಿ ಸಹಾಯ ಬೇಡಿದರು. ಆದರೆ, ಅವರ ನಿರೀಕ್ಷೆಯಷ್ಟು ಹಣ ಸಂಗ್ರಹವಾಗಲಿಲ್ಲ. ಆಗ ಒಬ್ಬ ಬುದ್ಧಿವಂತ ತರುಣ ಒಂದು ಉಪಾಯ ಮಾಡಿದನು. ಆ ಯುವಕರೆಲ್ಲ ಜಿಪುಣನಾದ ಸಿರಿವಂತನ ಬಳಿಗೆ ಹೋಗಿ, ‘ನೀವು ಹತ್ತು ಸಾವಿರ ರೂ.ಗಳನ್ನು ಚಂದಾ ನೀಡಿ. ಈ ಸಂಗತಿ ಬೇರೆಯವರಿಗೆ ತಿಳಿಯುತ್ತಿದ್ದ ಹಾಗೇ ಅವರೂ ಧನಸಹಾಯ ಮಾಡಬಹುದು. ಕೊನೆಗೆ ನಿಮ್ಮ ಹಣವನ್ನು ನಿಮಗೇ ಹಿಂತಿರುಗಿಸುತ್ತೇವೆ. ನಿಮಗೆ ಒಳ್ಳೆಯ ಹೆಸರೂ ಬರುತ್ತದೆ, ನಿಮ್ಮ ಹಣವೂ ಮರಳಿ ಸಿಗುತ್ತದೆ. ಬಡಬಗ್ಗರಿಗೆ ನೆರವೂ ದೊರೆಯುತ್ತದೆ’ ಎಂದು ವಿನಂತಿಸಿಕೊಂಡರು.
ಆ ಶ್ರೀಮಂತನು, ಒಂದು ಬಿಡಿಗಾಸೂ ಖರ್ಚಿಲ್ಲದೆ, ತನಗೆ ದಾನಶೂರ ಎಂಬ ಹೆಸರು ಬರುವುದಲ್ಲಾ ಎಂದು ಹಿರಿಹಿರಿ ಹಿಗ್ಗುತ್ತಾ, ಆ ಯುವಕರಿಗೆ ಹತ್ತು ಸಾವಿರ ರೂ.ಗಳನ್ನು ನೀಡಿದನು. ಈ ವಿಷಯವನ್ನು ಹಳ್ಳಿಯ ರಸ್ತೆಗಳಲ್ಲಿ ಡಂಗುರ ಸಾರಲಾಯಿತು. ಇಂತಹ ಜಿಪುಣನೇ ದಾನ ಮಾಡಿರುವಾಗ, ನಾವೂ ಕೈ ಜೋಡಿಸೋಣ ಎಂದು ಉಳಿದ ಗ್ರಾಮಸ್ಥರು, ನಾ ಮುಂದೆ ತಾ ಮುಂದೆ ಎನ್ನುತ್ತಾ ನೆರವಿನ ಹಸ್ತ ಚಾಚಿದರು. ಬುದ್ಧಿವಂತ ತರುಣನ ಉಪಾಯದಿಂದ ಸಾಕಷ್ಟು ಹಣ ಸಂಗ್ರಹವಾಯಿತು. ಆಗ ಆ ಯುವಕರು, ತಾವು ಶ್ರೀಮಂತನಿಗೆ ಕೊಟ್ಟ ಮಾತಿನಂತೆ, ಅವನ ಹಣವನ್ನು ಹಿಂತಿರುಗಿಸಲು ಹೊರಟರು. ಆಗ ಶ್ರೀಮಂತನು, ‘ಛೇ, ಛೇ, ಊರಿನ ಜನರೆಲ್ಲಾ ಬಡಬಗ್ಗರಿಗೆ ನೆರವು ನೀಡಲು ಮುಂದಾಗಿರುವಾಗ, ನಾನು ಹೇಗೆ ತಾನೆ ನನ್ನ ಹಣ ಮರಳಿ ಪಡೆಯಲಿ? ನಿಮಗೆ ಧನಸಹಾಯ ಮಾಡಿದಾಗಿನಿಂದ, ದಾನ ಮಾಡುವುದರಲ್ಲಿ ಇರುವ ಸುಖ, ತೃಪ್ತಿ ಅನುಭವಿಸುತ್ತಿದ್ದೇನೆ’ ಎಂದ. ಹೀಗೆ ಸಜ್ಜನರ ಸಂಗದಲ್ಲಿ ಜಿಪುಣ ಸಾಹುಕಾರನ ಮನಸ್ಸೂ ಪರಿವರ್ತನೆಯಾಗಿತ್ತು.
ಉತ್ತಮರ ಸಂಗದಲ್ಲಿರುವ ಅಧಮನ ಮನಸ್ಸೂ ಪರಿವರ್ತನೆಯಾಗುವುದರಲ್ಲಿ ಸಂಶಯವಿಲ್ಲ. ಅಧಮನು ದುರ್ಜನರ ಸಂಗದಿಂದ ಸಂಪತ್ತು ಹಾಗೂ ಅಧಿಕಾರ ಗಳಿಸಲು ಎಂತಹ ಕುತಂತ್ರಗಳನ್ನಾದರೂ ಮಾಡಬಲ್ಲನು. ಪರರ ಹಾದಿಯಲ್ಲಿ ಕಲ್ಲು ಮುಳ್ಳು ಹರಡುತ್ತಾ ನಡೆಯುವನು. ಆದರೆ, ಸದ್ಗುಣಗಳ ಸಾಕಾರಮೂರ್ತಿಗಳಾದ ಉತ್ತಮರ ಸಂಗದಲ್ಲಿ ಇರುವಾಗ, ಅವನಿಗೆ ಪ್ರಾಪಂಚಿಕ ಸುಖಗಳ ನಶ್ವರತೆ ಅರಿವಾಗುವುದು. ತನ್ನಂತೆಯೇ ಪರರನ್ನು ಭಾವಿಸಿ, ಅವರೊಂದಿಗೆ ಸ್ನೇಹ, ವಿಶ್ವಾಸದಿಂದಿರಲು ಪ್ರಯತ್ನಿಸುವನು. ಸಂಪತ್ತು, ಅಧಿಕಾರಗಳ ಬಯಕೆಯಿಲ್ಲದೆ ಭಗವಂತನಿಗೆ ಶರಣಾಗುವನು. ಅದಕ್ಕಾಗಿಯೇ ಸರ್ವಜ್ಞ ಕವಿ ಹೇಳಿರುವುದು, ‘ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ...’
(ಲೇಖಕರು ನಿವೃತ್ತ ಪ್ರಾಂಶುಪಾಲರು, ಹವ್ಯಾಸಿ ಬರಹಗಾರರು)