ಮನೋಲ್ಲಾಸ; ಗುರು ಮಹಿಮೆ

Manollasa
Published on
ಡಾ. ವಿ.ಎಚ್.ಮೂಲಿಮನಿ, ಲೇಖಕರು, ನಿವೃತ್ತ ಪ್ರಾಧ್ಯಾಪಕರು

ಒಬ್ಬ ರಾಜ ಆನೆ ಮೇಲೆ ಕುಳಿತು ವಿಹಾರಕ್ಕೆ ಹೊರಟಿದ್ದ. ದಾರಿಯಲ್ಲಿ ಒಂದು ಪಾಠಶಾಲೆಯನ್ನು ನೋಡಿ ನಿಂತ. ಗುರುಗಳು ಮರದ ನೆರಳಿನಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಮಕ್ಕಳು ಆನೆಯನ್ನು ನೋಡಿ, ‘ಆನೆ, ಆನೆ’ ಎಂದು ಕುಣಿದಾಡತೊಡಗಿದರು. ಗುರುಗಳು ‘ಪಾಠ ಮುಗಿಯುವವರೆಗೂ ಯಾರೂ ಅತ್ತಕಡೆ ನೋಡಬೇಡಿ’ ಎಂದು ಗದರಿಸಿದರು. ಮಕ್ಕಳು ಸುಮ್ಮನಾದರು. ತನ್ನನ್ನು ಸ್ವಾಗತಿಸಲು ಬಾರದೇ, ಪಾಠ ಮಾಡುತ್ತಲೇ ಇದ್ದ ಗುರುವಿನ ಬಗ್ಗೆ, ರಾಜನಿಗೆ ಕೋಪ ಬಂತು. ಒಬ್ಬ ಭಟ ಗುರುಗಳ ಬಳಿಗೆ ಬಂದು, ಮಹಾರಾಜರು ಬಂದಿದ್ದಾರೆ ಎಂದು ತಿಳಿಸಿದ.

ಆಗ ಗುರುಗಳು, ‘ಮಹಾರಾಜರು ಆಗಮಿಸಿದ್ದು ಗಮನಕ್ಕೆ ಬಂದಿದೆ. ಸ್ವಲ್ಪ ಹೊತ್ತಿನಲ್ಲಿ ಪಾಠ ಮುಗಿಯುತ್ತದೆ. ಆಮೇಲೆ ಬಂದು ಸ್ವಾಗತಿಸುತ್ತೇನೆ’ ಎಂದರು. ಪಾಠ ಮುಗಿದ ಬಳಿಕ ರಾಜನ ಬಳಿ ಬಂದು ನಮಸ್ಕರಿಸಿ, ಕ್ಷಮೆ ಕೇಳಿ ಸ್ವಾಗತಿಸಿದರು. ರಾಜ ಕೋಪದಿಂದಲೆ ‘ರಾಜ್ಯದ ಬೊಕ್ಕಸದಿಂದ ಸಂಬಳ ಪಡೆಯುವ ನೀವು, ರಾಜ ಬಂದರೂ ಸ್ವಾಗತಿಸದೇ, ಅಲಕ್ಷಿಸಿದ್ದು ಏಕೆ?’ ಎಂದು ದರ್ಪದಿಂದಲೇ ಕೇಳಿದ. ಗುರುಗಳು ‘ದೊರೆಗಳೇ ಮನ್ನಿಸಬೇಕು. ತಾವು ಬಂದದ್ದು ತಿಳಿದರೂ, ಪಾಠವನ್ನು ಅರ್ಧದಲ್ಲಿ ಬಿಟ್ಟು ಬರಲಾಗಲಿಲ್ಲ. ನಿಮ್ಮನ್ನು ಅಗೌರವಿಸುವ ಯಾವ ಉದ್ದೇಶವೂ ನನಗಿಲ್ಲ. ತಂದೆ, ತಾಯಿ, ಆಳುವವರಿಗಿಂತಲೂ, ಬದುಕಿನಲ್ಲಿ ಬೆಳಕು ನೀಡುವ ಗುರುವೇ ಶ್ರೇಷ್ಠನೆಂಬ ಭಾವನೆಯನ್ನು ಮಕ್ಕಳಲ್ಲಿ ಬಿತ್ತಿದ್ದೇನೆ. ತಾವು ಬಂದ ತಕ್ಷಣ ನಾನು ಎದ್ದು ಬಂದಿದ್ದರೆ ಮಕ್ಕಳಲ್ಲಿ ಆ ಭಾವನೆ ದೂರವಾಗುತ್ತಿತ್ತು. ಗುರುಗಳಲ್ಲಿ ವಿಧೇಯತೆ, ಪೂಜ್ಯತೆಯ ಭಾವನೆ ಅವರಲ್ಲಿ ಇಲ್ಲದಿದ್ದರೆ ವಿದ್ಯಾಭ್ಯಾಸ ಚೆನ್ನಾಗಿ ಆಗುವುದಿಲ್ಲ. ನನ್ನ ಈ ಅನಿಸಿಕೆ ತಪ್ಪೆನಿಸಿದರೆ ಶಿಕ್ಷೆ ವಿಧಿಸಿ’ ಎಂದರು.

ದೊರೆಯ ಅಹಂಕಾರ ಅಳಿಯಿತು. ‘ನಿಮ್ಮಂತಹ ಆದರ್ಶ ಶಿಕ್ಷಕರಿದ್ದರೆ, ದೇಶ ಸುಜ್ಞಾನದ ಹಾದಿಯಲ್ಲಿ ನಿಶ್ಚಯವಾಗಿಯೂ ಸಾಗುತ್ತದೆ. ಮಕ್ಕಳನ್ನು ಮನುಷ್ಯರನ್ನಾಗಿ ಮಾಡುವ ಗುರು ತಂದೆ, ತಾಯಿ, ರಾಜನಿಗಿಂತಲೂ ಶೇಷ್ಠವೆಂದು ನನಗೆ ತಿಳಿಯಿತು’ ಎಂದು ಅಭಿನಂದಿಸಿದ. ಕಬೀರರು ಹೇಳಿದಂತೆ- ‘ಗುರುವಿಗೆ ಸಮಾನರಾದ ಬೇರೊಬ್ಬ ದಾತಾ ಇಲ್ಲ ಮತ್ತು ಶಿಷ್ಯ ಸಮಾನ ಮತ್ತೊಬ್ಬ ಯಾಚಕನಿಲ್ಲ, ಮೂರು ಲೋಕದ ಸಂಪತ್ತಿಗಿಂತಲೂ ಅಧಿಕವಾದ ಜ್ಞಾನವನ್ನು ಗುರು ನೀಡುತ್ತಾನೆ.’

ಕಾಸಾರೇ ದಿವಸಂ ವಸನ್ನಪಿ ಪಯಃ ಪೂರಂ ಪರಂ ಪಂಕಿಲಂ|
ಕುವಾರ್ಣಃ ಕಮಲಾಕರಸ್ಯ ಲಭತೇ ಕಿಂ ಸೌರಭಂ ಸೈರಿಭ||

‘ವಿದ್ಯೆಯ ವೈಭವವು ಗುರುವಿನ ಅನುಗ್ರಹಕ್ಕೆ ಪಾತ್ರನಾದವನಿಗೆ ದೊರೆಯುವುದೇ ಹೊರತು ಸುಮ್ಮನೆ ಒರಲಿ ಒರಲಿ ಪಾಠ ಮಾಡಿದ ಮಾತ್ರಕ್ಕೆ ಬರುವುದಿಲ್ಲ. ಕೋಣವು ದಿನವೆಲ್ಲ ಕಮಲಗಳಿಂದ ತುಂಬಿರುವ ಕೊಳದಲ್ಲಿದ್ದರೂ ನೀರನ್ನು ಕದಡಿ ಹೊಲಸು ಮಾಡುವುದೇ ಹೊರತು ಸುವಾಸನೆಯನ್ನು ಪಡೆಯುವುದಿಲ್ಲ. ಆದ್ದರಿಂದ ಗುರುಮೂಲಕವಾಗಿ ವಿದ್ಯಾಭ್ಯಾಸ ಮಾಡಬೇಕು.’

ಗುರುವಿನ ಪ್ರಸನ್ನತೆ ಸಂಪಾದಿಸುವುದಕ್ಕಾಗಿ ಶಿಷ್ಯನು ಹೇಗಿರಬೇಕೆಂಬ ವಿಚಾರದಲ್ಲಿ ಸರ್ವಜ್ಞನು ಹೇಳಿರುವುದೇನೆಂದರೆ-
ಎತ್ತಾಗಿ ತೊತ್ತಾಗಿ, ಹಿತ್ತಲ ಗಿಡವಾಗಿ / ಮತ್ತೆ ಪಾದದ ಕೆರನಾಗಿ, ಗುರುವಿನ ಹತ್ತಿರರು ಎಂದ ಸರ್ವಜ್ಞ.

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net