ಜಗದಗಲ|ಆಫ್ರಿಕಾದಲ್ಲಿ ಚೀನಾದ ಅತಿಯಾಸೆ ಗತಿಗೇಡು

Xi Jinping China
Published on

ಕರೊನಾ ಸೋಂಕು ಆರಂಭವಾದ ನಂತರ ಚೀನೀಯರ ಜನಾಂಗ ದ್ವೇಷ ಅಸಹ್ಯಕರ ರೂಪದಲ್ಲಿ ಹೊರಹೊಮ್ಮಿದೆ. ಕರೊನಾ ಸೋಂಕಿನ ಉಗಮಕ್ಕೆ ಮೊದಲು ಅಮೆರಿಕ ನಂತರ ಇಟಲಿಯನ್ನು ದೂಷಿಸಲು ಹೆಣಗಿ ಸೋತ ನಂತರ ಸೋಂಕಿನ ಎರಡನೆಯ ಅಲೆಯನ್ನು ಚೀನಾದಲ್ಲಿದ್ದ ಆಫ್ರಿಕನ್ನರ ತಲೆಗೆ ಕಟ್ಟಲು ಕಮ್ಯೂನಿಸ್ಟ್ ಸರ್ಕಾರ ನೋಡಿತು.

ಕೆನ್ಯಾದ ಖ್ಯಾತ ಲೇಖಕ ನ್ಗೂಗಿ ವಾ ಥಿಯಾಂಗ್​ಓ ಯುರೋಪಿಯನ್ನರನ್ನು ಉದ್ದೇಶಿಸಿ ಹೀಗೆ ಹೇಳುತ್ತಾರೆ- ‘ಮೊದಲು ನಮ್ಮ ಕೈಯಲ್ಲಿ ಜಮೀನಿತ್ತು, ನಿಮ್ಮ ಕೈಯಲ್ಲಿ ಬೈಬಲ್ ಇತ್ತು. ನೀವು ನಮಗೆ ಮಂಡಿಯೂರಿ, ಕಣ್ಣುಮುಚ್ಚಿ ಪ್ರಾರ್ಥನೆ ಮಾಡಲು ಹೇಳಿದಿರಿ. ನಾವು ನೀವು ಹೇಳಿದಂತೆ ಮಾಡಿದೆವು. ಕಣ್ಣು ತೆರೆದಾಗ ನಮ್ಮ ಜಮೀನು ನಿಮ್ಮ ಕೈಯಲ್ಲಿತ್ತು, ನಿಮ್ಮ ಬೈಬಲ್ ನಮ್ಮ ಕೈಯಲ್ಲಿತ್ತು’.

ವಸಾಹತುಶಾಹಿ ಅಂದರೆ ಮಣ್ಣಿನ ಮಕ್ಕಳ ದಮನ, ನೆಲದ ಕಬಳಿಕೆ, ಸಂಪನ್ಮೂಲಗಳ ಕೊಳ್ಳೆ. ಯುರೋಪಿಯನ್ ವಸಾಹತುಶಾಹಿಗೆ ಕೊನೆಯಲ್ಲಿ ತುತ್ತಾದ ಖಂಡ ಆಫ್ರಿಕಾ. ಅವಧಿ ಕಡಿಮೆಯಾದರೂ ವಸಾಹತುಶಾಹಿಯ ಬರ್ಬರತೆಯನ್ನು ಆಫ್ರಿಕನ್ನರು ಅನುಭವಿಸಿದ್ದು ಮಾತ್ರ ದಾರುಣ. ಎರಡನೆಯ ಮಹಾಯುದ್ಧದ ನಂತರ ಪರಿಸ್ಥಿತಿಯ ಒತ್ತಡಕ್ಕೊಳಗಾಗಿ ಯುರೋಪಿಯನ್ನರು ಆಫ್ರಿಕಾದ ದೇಶಗಳಿಗೆ ಸ್ವಾತಂತ್ರ್ಯವನ್ನೇನೋ ಕೊಟ್ಟರು. ಆದರೆ ಹೆಚ್ಚಿನ ಆಫ್ರಿಕನ್ ದೇಶಗಳು ಸಿಕ್ಕಿಹೋದದ್ದು ಸ್ವಾರ್ಥಿ, ಕ್ರೂರಿ ಸರ್ವಾಧಿಕಾರಿಗಳ ಕೈಗೆ. ಜವಾಬ್ದಾರಿಯುತ ರಾಷ್ಟ್ರನಾಯಕರಿಲ್ಲದೆ ರಾಜಕೀಯವಾಗಿ ಡೋಲಾಯಮಾನ ಸ್ಥಿತಿಯೊಂದಿಗೆ ಆರ್ಥಿಕವಾಗಿ ತೀರಾ ಹಿಂದುಳಿದಿದ್ದ ಆಫ್ರಿಕನ್ ದೇಶಗಳು ಪಶ್ಚಿಮದ ಆರ್ಥಿಕ-ಸೇನಾ-ರಾಜಕೀಯ ಕುತಂತ್ರಗಳಿಗೆ ಆಡಂಬೋಲವಾಗಿಯೇ ಮುಂದುವರಿದವು. ಶೀತಲಸಮರದ ದಿನಗಳಲ್ಲಿ ಆಫ್ರಿಕಾದ ದೇಶಗಳ ಪಾತ್ರ ದಾಳಗಳದಷ್ಟೇ.

ಸೋವಿಯೆತ್ ಯೂನಿಯನ್ ಪರವಾಗಿದ್ದ ಇಥಿಯೋಪಿಯಾದ ಮೆಂಗಿಷ್ತು, ಅಂಗೋಲಾದ ಅಗಸ್ಟಿನೋ ನೇಟೋ, ಸೋಮಾಲಿಯಾದ ಸೈಯದ್ ಬರ್ರೆ ಹೊರತಾಗಿ ಉಳಿದೆಲ್ಲ ರಾಷ್ಟ್ರನಾಯಕರು ಪಶ್ಚಿಮದ ಮುಖ್ಯವಾಗಿ ಅಮೆರಿಕ ಮತ್ತು ಫ್ರಾನ್ಸ್​ನ ಬಂಟರಾಗಿಹೋಗಿದ್ದರು. ಮೂರು ದಶಕಗಳ ಹಿಂದೆ ಸೋವಿಯೆತ್ ಯೂನಿಯನ್ ಕುಸಿದ ಮೇಲೆ ಆಫ್ರಿಕಾ ಮತ್ತೆ ಇಡಿಯಾಗಿ ಅಮೆರಿಕ ಮತ್ತು ಪಶ್ಚಿಮ ಯುರೋಪಿನ ತೆಕ್ಕೆಗೆ ಬಿತ್ತು. ಆದರೀಗ ಪಶ್ಚಿಮದ ದೇಶಗಳ ತಂತ್ರ ಬದಲಾಗಿತ್ತು. 1990ರಿಂದ 2005ರವರೆಗಿನ ಅವಧಿಯಲ್ಲಿ ಅಮೆರಿಕ ಮತ್ತು ಪಶ್ಚಿಮ ಯುರೋಪಿನ ರಾಷ್ಟ್ರಗಳು ಉದ್ಯೋಗ ಸೃಷ್ಟಿಗೆ, ಆರ್ಥಿಕ ಬೆಳವಣಿಗೆಗೆ ಆಫ್ರಿಕಾದ ದೇಶಗಳಿಗೆ ಯಾವ ನೆರವನ್ನೂ ನೀಡಲಿಲ್ಲ. ಬದಲಾಗಿ ಅವು ಕೊಟ್ಟದ್ದು ಗರ್ಭನಿರೋಧಕಗಳಿಗಾಗಿ ಆರು ಬಿಲಿಯನ್ ಡಾಲರ್​ಗಳು! ಅವುಗಳ ಉದ್ದೇಶ ಇಷ್ಟೇ- ಆಫ್ರಿಕಾದ ಜನಸಂಖ್ಯೆ ಏರಬಾರದು! ಅಂದರೆ ಆಫ್ರಿಕಾದ ಅಗಾಧ ಸಂಪನ್ಮೂಲಗಳು ಆಫ್ರಿಕಾದಲ್ಲೇ ಬಳಕೆಯಾಗಿಹೋಗಕೂಡದು!

ಹೊಸ ಶತಮಾನ ಆರಂಭವಾಗುತ್ತಿದ್ದಂತೇ ಆಫ್ರಿಕಾಗೆ ಹಣದ ಥೈಲಿ ಹಿಡಿದ ಕಮ್ಯೂನಿಸ್ಟ್ ಚೀನಾದ ಪ್ರವೇಶವಾಯಿತು. ಪಶ್ಚಿಮದ ದೇಶಗಳಿಂದ ಆರ್ಥಿಕವಾಗಿ ನಿರ್ಲಕ್ಷ್ಯಕ್ಕೊಳಗಾಗಿದ್ದ ಆಫ್ರಿಕನ್ ದೇಶಗಳಿಗೆ ಆರ್ಥಿಕ ಬೆಳವಣಿಗೆಗಾಗಿ ಅಗಾಧ ನೆರವು ನೀಡುವ ಭರವಸೆಯೊಂದಿಗೆ ಅಲ್ಲಿಗೆ ಕಾಲಿಟ್ಟ ಚೀನಾಗೆ ಸ್ವಾಗತ ಸಹಜವಾಗಿಯೇ ದೊರೆಯಿತು. ಆದರೆ ಪೂರ್ವದ ಈ ಕಮ್ಯೂನಿಸ್ಟ್ ದೈತ್ಯನ ಹುನ್ನಾರವೇ ಬೇರೆಯಾಗಿತ್ತು. ‘ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್’ (ಬಿಆರ್​ಐ) ಎಂಬ ಕರಾಳ ನವವಸಾಹತುಶಾಹಿ ಯೋಜನೆಯ ಮೂಲಕ ಆಫ್ರಿಕಾದ ಬಹುತೇಕ ರಾಷ್ಟ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಚೀನಾ ಹಣದ ಗಂಟು ಹಿಡಿದು ಧಾವಿಸಿತು. ಹೊಸ ಬಂದರುಗಳು ಮತ್ತು ವಿಮಾನನಿಲ್ದಾಣಗಳ ನಿರ್ವಣ, ಹಳೆಯವುಗಳ ನವೀಕರಣ ಹಾಗೂ ವಿಸ್ತರಣೆ, ರಸ್ತೆ ನಿರ್ವಣ, ವಿದ್ಯುತ್ ಉತ್ಪಾದನೆ, ಗಣಿಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಕಳೆದ ಐದಾರು ವರ್ಷಗಳಲ್ಲಿ ಚೀನಾ ಆಫ್ರಿಕಾದ 49 ದೇಶಗಳಲ್ಲಿ ಹೂಡಿರುವ ಅಗಾಧ ಮೊತ್ತ 198 ಬಿಲಿಯನ್ ಡಾಲರ್​ಗಳು. ಇದರಲ್ಲಿ 142 ಬಿಲಿಯನ್ ಡಾಲರ್​ಗಳು ಸಾಲದ ರೂಪದಲ್ಲಿ ಹಾಗೂ ಉಳಿದ 46 ಬಿಲಿಯನ್ ಡಾಲರ್​ಗಳು ನೇರ ಹೂಡಿಕೆಯಲ್ಲಿ ಎಂದು ಜಾನ್ ಹಾಪ್ಕಿನ್ಸ್ ಯೂನಿವರ್ಸಿಟಿಯ ‘ಚೀನಾ-ಆಫ್ರಿಕಾ ರೀಸರ್ಚ್ ಇನ್ಸ್​ಟಿಟ್ಯೂಟ್’ ಹೇಳುತ್ತದೆ. ಈ ಹಣವನ್ನು ಚೀನಾ ಅಲ್ಲಿ ಹೂಡಿರುವುದು ಆ ಖಂಡದ ಖನಿಜಗಳು ಹಾಗೂ ಪೆಟ್ರೋಲಿಯಂ ನಿಕ್ಷೇಪಗಳ ಮೇಲೆ ಹತೋಟಿ ಸಾಧಿಸಲು. ಚೀನಾವನ್ನು ಜಾಗತಿಕ ಆರ್ಥಿಕ-ರಾಜಕೀಯ-ಸೇನಾ ಸೂಪರ್ ಪವರ್ ಸ್ಥಾನಕ್ಕೇರಿಸುವ ತಮ್ಮ ಉದ್ದೇಶದಲ್ಲಿ ಆಫ್ರಿಕಾದ ಅಗಾಧ ನೈಸರ್ಗಿಕ ಸಂಪನ್ಮೂಲಗಳ ಪ್ರಾಮುಖ್ಯವನ್ನು ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಗುರುತಿಸಿದ್ದರಲ್ಲಿ ಅಚ್ಚರಿಯೇನಿಲ್ಲ.

ಆದರೀಗ ಕರೊನಾ ವೈರಸ್ ಜಿನ್​ಪಿಂಗ್​ರ ಯೋಜನೆಗಳೆಲ್ಲವನ್ನೂ ಹಾಳುಗೆಡವುವಂತೆ ಕಾಣುತ್ತಿದೆ. ವ್ಯಾಪಕವಾಗಿ ಹರಡುತ್ತಿರುವ ಸೋಂಕನ್ನು ತಡೆಗಟ್ಟಲು ಆಫ್ರಿಕಾದ ಬಹುತೇಕ ಬಡ ದೇಶಗಳು ಹೆಣಗುತ್ತಿವೆ. ಸೋಂಕಿತರ ಸೂಕ್ತ ರೀತಿಯ ಶುಶ್ರೂಷೆಯಿರಲಿ ಖಂಡದ ಶೇಕಡ 35 ಜನತೆಗೆ ಬಾರಿಬಾರಿಗೆ ಕೈತೊಳೆಯುವಷ್ಟು ನೀರನ್ನು ಒದಗಿಸುವುದೂ ಅಲ್ಲಿನ ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದಾಗಿ ಸರ್ಕಾರಗಳ ಹಾಗೂ ಜನರ ಆದಾಯವೂ ಕುಗ್ಗಿರುವ ಕಾರಣ ಖಂಡದ ಸಬ್ ಸಹಾರನ್ ಮತ್ತು ದಾಕ್ಷಿಣಾತ್ಯ ದೇಶಗಳಲ್ಲಿ ಸೋಂಕಿನ ವಿರುದ್ಧದ ಹೋರಾಟ ಹಳ್ಳ ಹಿಡಿಯುವ ಎಲ್ಲ ಸೂಚನೆಗಳೂ ಕಾಣುತ್ತಿವೆ. ಇಂತಹ ಸ್ಥಿತಿಯಲ್ಲಿ ಚೀನಾಗೆ ಸಾಲ ಮರುಪಾವತಿಯಿರಲಿ, ಬಡ್ಡಿ ಪಾವತಿಸಲೂ ಆ ದೇಶಗಳಿಗೆ ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಋಣಸಂದಾಯದ ಅವಧಿಯನ್ನು ಚೀನಾ ವಿಸ್ತರಿಸದೇ ಬೇರೆ ದಾರಿಯಿಲ್ಲ. ಅಂದರೆ ಆಫ್ರಿಕಾದಲ್ಲಿ ಚೀನಾ ನೀಡಿರುವ ಸಾಲ ನಿರೀಕ್ಷಿತ ಸಮಯದಲ್ಲಿ ನಿರೀಕ್ಷಿತ ಲಾಭವನ್ನು ತರುತ್ತಿಲ್ಲ. ಸಾಲ ಮರುಪಾವತಿ ಅಗದಿದ್ದಲ್ಲಿ ತಾನು ನಿರ್ವಿುಸಿರುವ ಬಂದರುಗಳು ಹಾಗೂ ವಿಮಾನನಿಲ್ದಾಣಗಳು ಮತ್ತು ಕಾರ್ಯನಿರತವಾಗಿರುವ ಗಣಿ ಪ್ರದೇಶಗಳ ಮೇಲೆ ತನ್ನ ಹತೋಟಿ ಸ್ಥಾಪಿಸುವ ನಿಯಮಗಳನ್ನು ಚೀನಾ ತನ್ನ ಸಾಲಯೋಜನೆಯಲ್ಲಿ ಆಳವಡಿಸಿದೆಯೇನೋ ನಿಜ. ಆ ಮೂಲಕ ಮೊಝಾಂಬಿಕ್, ಝಾಂಬಿಯಾ, ಜಿಬೂತಿಯಂತಹ ದೇಶಗಳಲ್ಲಿ ನೆಲಕಬಳಿಕೆಗೆ ಮುಂದಾಗಿರುವುದೂ ನಿಜ. ಆದರೆ ಕೆಲವು ಕಾರಣಗಳಿಂದಾಗಿ ಅದೂ ಸಾಧ್ಯವಾಗದ ಸ್ಥಿತಿ ನಿರ್ವಣವಾಗಿದೆ.

ಆಫ್ರಿಕಾದ 54 ದೇಶಗಳಲ್ಲಿ 40 ದೇಶಗಳ ಒಂದಲ್ಲ ಒಂದು ಪ್ರಮುಖ ಸರ್ಕಾರಿ ಕಟ್ಟಡಗಳನ್ನು ಚೀನೀಯರು ನಿರ್ವಿುಸಿದ್ದಾರೆ. ಇವುಗಳಲ್ಲಿ 24 ರಾಷ್ಟ್ರಾಧ್ಯಕ್ಷರ ಅಥವಾ ಪ್ರಧಾನಮಂತ್ರಿಗಳ ನಿವಾಸಗಳು ಹಾಗೂ ಕಾರ್ಯಾಲಯಗಳು, 26 ಸಂಸತ್ ಭವನಗಳು ಹಾಗೂ ಸಂಸದೀಯ ಕಾರ್ಯಾಲಯಗಳು, 32 ಮಿಲಿಟರಿ ಅಥವಾ ಪೊಲೀಸ್ ಕಾರ್ಯಾಲಯಗಳು ಸೇರಿವೆ. ಇವುಗಳಲ್ಲಿ ಕಿರೀಟಪ್ರಾಯದ್ದೆಂದರೆ ಇಥಿಯೋಪಿಯಾದ ಅಡಿಸ್ ಅಬಾಬಾದಲ್ಲಿ ಚೀನೀಯರು ‘ಗಿಫ್ಟ್’ ರೂಪದಲ್ಲಿ ಪುಕ್ಕಟೆಯಾಗಿ ಕಟ್ಟಿಕೊಟ್ಟಿರುವ ‘ಆಫ್ರಿಕನ್ ಯೂನಿಯನ್’ ಸಂಘಟನೆಯ ಮುಖ್ಯ ಕಚೇರಿ. ಆದರೆ ಈ ಕಚೇರಿಯಲ್ಲಿ ಚೀನೀಯರು ಬೇಹುಗಾರಿಕಾ ಸಾಧನಗಳನ್ನು ಗುಪ್ತವಾಗಿ ಎಲ್ಲೆಡೆ ಆಳವಡಿಸಿದ್ದುದು ಪತ್ತೆಯಾಗಿದೆ! ಅಂದರೆ ಆಫ್ರಿಕನ್ ನೇತಾರರು ಅಲ್ಲಿ ಸಭೆ ಸೇರಿದಾಗೆಲ್ಲ ಅಲ್ಲೇನು ನಡೆಯುತ್ತದೆಂದು, ಅವರ ನಡುವೆ ಏನು ಮಾತುಕತೆ ಆಗುತ್ತಿದೆಯೆಂದು ಚೀನಾಗೆ ತಕ್ಷಣ ತಿಳಿದುಹೋಗುತ್ತದೆ! ಆಫ್ರಿಕಾದಲ್ಲಿ ತಾನು ನಿರ್ವಿುಸಿರುವ ಪ್ರತಿಯೊಂದು ಸರ್ಕಾರಿ ಹಾಗೂ ಸೇನಾ ಕಟ್ಟಡಗಳನ್ನು ಚೀನಾ ತನ್ನ ಬೇಹುಗಾರಿಕೆಗೆ ಉಪಯೋಗಿಸಿಕೊಳ್ಳುತ್ತಿರುವ ಸಾಧ್ಯತೆ ಇದೆ ಎಂದು ‘ದ ಹೆರಿಟೇಜ್ ಫೌಂಡೇಷನ್’ನ ವರದಿಯೊಂದು ಹೇಳುತ್ತದೆ. ಇದು ಆಫ್ರಿಕಾದ ರಾಜಕೀಯ ವಲಯದಲ್ಲಿ ಚೀನಾದ ಬಗ್ಗೆ ನಿರಾಶೆ, ಅಪನಂಬಿಕೆ ಹಾಗೂ ರೋಷವನ್ನು ಉಂಟುಮಾಡಿದೆ. ಇದು ಸಾಕಾಗದು ಎಂಬಂತೆ ಸರ್ಕಾರಗಳ ಜತೆ ಸಾಮಾನ್ಯ ಆಫ್ರಿಕನ್ನರೂ ಚೀನಾ ಬಗ್ಗೆ ಅಸಹನೆ, ರೋಷದ ಭಾವನೆ ಬೆಳೆಸಿಕೊಳ್ಳಲು ಇತ್ತೀಚಿನ ಚೀನೀಯರ ವರ್ತನೆಗಳೇ ಪ್ರಚೋದಕಗಳಾಗಿವೆ.

ಪಶ್ಚಿಮದ ಶ್ವೇತವರ್ಣೀಯರು ತಮ್ಮ ಬಗ್ಗೆ ಜನಾಂಗೀಯ ಭೇದ ನೀತಿ ಅನುಸರಿಸುತ್ತಾರೆಂದು ಆಪಾದಿಸುವ ಚೀನೀಯರು ತಾವೇ ಆಫ್ರಿಕನ್ನರ ಬಗ್ಗೆ ಅದೇ ಜನಾಂಗೀಯ ಭೇದ ನೀತಿ ಅನುಸರಿಸುತ್ತಾರೆ. ಇದರ ಒಂದು ಉದಾಹರಣೆಯೆಂದರೆ ಚೀನೀ ವಾಹಿನಿಗಳಲ್ಲಿ ಪ್ರಸಾರವಾಗುವ ಒಂದು ವಾಷಿಂಗ್​ವುಶೀನ್ ಜಾಹಿರಾತು. ಅದರಲ್ಲಿ ಆಫ್ರಿಕನ್ ಯುವಕನೊಬ್ಬ ಚೀನೀ ಯುವತಿಯೊಬ್ಬಳ ಮುಂದೆ ಪ್ರೇಮನಿವೇದನೆ ಮಾಡುತ್ತಾನೆ. ಅವನ ಮೈಬಣ್ಣದ ಬಗ್ಗೆ ಅಸಹ್ಯಪಟ್ಟುಕೊಳ್ಳುವ ಚೀನೀ ಯುವತಿ ಅವನನ್ನು ಅನಾಮತ್ತಾಗಿ ವಾಷಿಂಗ್ ಮಶೀನ್​ನೊಳಗೆ ತುರುಕಿ ‘ಒಗೆದುಬಿಡುತ್ತಾಳೆ’! ಪರಿಣಾಮವಾಗಿ ಅವನು ಅವಳಂತೇ ಹಳದೀ ಬಣ್ಣದವನಾಗಿ ಹೊರಬಂದು ಅವಳ ಮುಂದೆ ಹಲ್ಲು ಕಿರಿಯುತ್ತ ನಿಲ್ಲುತ್ತಾನೆ. (ಅವಳೂ ಹಲ್ಲು ಕಿರಿಯುತ್ತಾಳೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಅಲ್ಲವೇ?)

ಕರೊನಾ ಸೋಂಕು ಆರಂಭವಾದ ನಂತರ ಚೀನೀಯರ ಈ ಜನಾಂಗ ದ್ವೇಷ ಅಸಹ್ಯಕರ ರೂಪದಲ್ಲಿ ಹೊರಹೊಮ್ಮಿದೆ. ಕರೊನಾ ಸೋಂಕಿನ ಉಗಮಕ್ಕೆ ಮೊದಲು ಅಮೆರಿಕ ನಂತರ ಇಟಲಿಯನ್ನು ದೂಷಿಸಲು ಹೆಣಗಿ ಸೋತ ನಂತರ ಸೋಂಕಿನ ಎರಡನೆಯ ಅಲೆಯನ್ನು ಚೀನಾದಲ್ಲಿದ್ದ ಆಫ್ರಿಕನ್ನರ ತಲೆಗೆ ಕಟ್ಟಲು ಕಮ್ಯೂನಿಸ್ಟ್ ಸರ್ಕಾರ ನೋಡಿತು. ಪರಿಣಾಮವಾಗಿ ಚೀನಾದಲ್ಲಿ ಮುಖ್ಯವಾಗಿ ಗ್ವಾಂಗ್​ರ ನಗರದಲ್ಲಿದ್ದ ಆಫ್ರಿಕನ್ ವಲಸಿಗ ಕಾರ್ವಿುಕರು ಏಕಾಏಕಿ ಸಂಕಷ್ಟಕ್ಕೆ ಸಿಕ್ಕಿಕೊಂಡರು. ಅವರಿಗೆ ರೆಸ್ಟೋರೆಂಟ್​ಗಳಲ್ಲಿ ಪ್ರವೇಶ ನಿರಾಕರಿಸಲಾಯಿತು, ಮನೆ ಮಾಲಿಕರು ಹೊರಹಾಕಿದ್ದರಿಂದಾಗಿ ಬಹಳಷ್ಟು ಆಫ್ರಿಕನ್ನರು ಫುಟ್​ಪಾತ್​ಗಳಲ್ಲಿ ದಿನಗಳೆಯುವಂತಾಯಿತು. ಕಮ್ಯೂನಿಸ್ಟ್ ಸರ್ಕಾರದ ಈ ಲಜ್ಜೆಗೇಡಿ ಕೃತ್ಯದ ವಿವರಗಳು ಹಾಗೂ ಚೀನಾದಲ್ಲಿರುವ ಆಫ್ರಿಕನ್ನರ ಸಂಕಷ್ಟಗಳ ಚಿತ್ರಗಳು ಆಫ್ರಿಕಾಗೆ ತಲುಪುತ್ತಿದ್ದಂತೇ ಅಲ್ಲಿ ಚೀನೀ-ವಿರೋಧ ಭುಗಿಲೆದ್ದಿದೆ. ಸದ್ಯಕ್ಕೆ ದೊರೆಯುತ್ತಿರುವ ಮಾಹಿತಿಗಳ ಪ್ರಕಾರ ಕೆನ್ಯಾ, ಗಿನೀ ಬಿಸ್ಸಾವು, ಉಗಾಂಡಾ, ದಕ್ಷಿಣ ಆಫ್ರಿಕಾ ಹಾಗೂ ಮೊಝಾಂಬಿಕ್ ದೇಶಗಳು ತಮ್ಮಲ್ಲಿರುವ ಚೀನೀಯರನ್ನು ಕಲೆಹಾಕಿ ಚೀನಾಗೆ ಅಟ್ಟಿವೆ. ಕೆನ್ಯಾವಂತೂ ಇದನ್ನು ಅದೆಷ್ಟು ತರಾತುರಿಯಲ್ಲಿ ಮಾಡಿತೆಂದರೆ ತನ್ನಲ್ಲಿದ್ದ ತೈವಾನೀಯರನ್ನೂ ಚೀನಿಯರು ಎಂದು ತಪ್ಪಾಗಿ ತಿಳಿದು ಚೀನಾಗೆ ಕಳುಹಿಸಿ ತೈವಾನ್​ನ ಕೋಪಕ್ಕೆ ಗುರಿಯಾಗಿದೆ! ನೈಜೀರಿಯಾವಂತೂ ಚೀನಾ ತನ್ನಲ್ಲಿ ಸಾಗಿಸುತ್ತಿರುವ ಎಲ್ಲ ಯೋಜನೆಗಳನ್ನೂ ಮರುಪರಿಶೀಲನೆಗೊಳಪಡಿಸಹೊರಟಿದೆ. ಈ ಎಲ್ಲ ದೇಶಗಳು ಚೀನಾದ ಸಾಲಸಂಕೋಲೆಯಲ್ಲಿ ಸಿಲುಕಿಕೊಂಡು ನರಳುತ್ತಿರುವ ದೇಶಗಳು ಎನ್ನುವುದು ಇಲ್ಲಿ ನೆನಪಿಸಿಕೊಳ್ಳಬೇಕಾದ ಅಂಶ. ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳಲ್ಲಿ ಅಷ್ಟೇನೂ ಮಾನ್ಯ ಎನಿಸದ, ಆದರೆ ತಾತ್ವಿಕವಾಗಿ ಲಭ್ಯವಿರುವ ‘ಋಣ ನಿರಾಕರಣೆ’ ವಿಧಾನಕ್ಕೆ ಮೊರೆಹೋಗಲು ಈ ದೇಶಗಳು ಚೀನೀ ಸರ್ಕಾರ ಮತ್ತು ಚೀನೀ ಜನರ ಜನಾಂಗದ್ವೇಷ ಮನೋಭಾವವನ್ನು ಬಳಸಿಕೊಳ್ಳಲೂಬಹುದು. ಅಲ್ಲದೆ ಈ ದೇಶಗಳು ತಮ್ಮ ನೆಲಕ್ಕೆ ಚೀನೀಯರನ್ನೇ ಬರಗೊಡದಾಗ ಚೀನಾ ತನ್ನ ನವವಸಾಹತುಶಾಹಿ ಯೋಜನೆಯನ್ನು ಮುಂದುವರಿಸುವುದಾದರೂ ಹೇಗೆ? ಅಲ್ಲಿಗೆ ಚೀನಾದ 198 ಬಿಲಿಯನ್ ಡಾಲರ್​ಗಳು ಮುಳುಗಿಹೋದ ಹಾಗೆ.

ಒಂದುವೇಳೆ ಆಫ್ರಿಕನ್ ದೇಶಗಳ ವಿಶ್ವಾಸವನ್ನು ಚೀನಾ ಮರುಗಳಿಸಿಕೊಂಡರೂ ಅದಕ್ಕೆ ಆರ್ಥಿಕ ಲಾಭವೇನೂ ಸಿಗಲಾರದು. ತನ್ನಲ್ಲೇ ಕಾರ್ಖಾನೆಗಳು ಮುಚ್ಚಿಹೋಗಿರುವಾಗ, ಜಾಗತಿಕ ಮಾರುಕಟ್ಟೆಯಲ್ಲೂ ಚೀನೀ ವಸ್ತುಗಳಿಗೆ ಬೇಡಿಕೆ ಇಲ್ಲದಿರುವಾಗ ಆಫ್ರಿಕಾದ ಸಂಪನ್ಮೂಲಗಳನ್ನು ತಂದು ಚೀನಾ ಮಾಡುವುದಾದರೂ ಏನು? ಅಂತಹ ಸ್ಥಿತಿಯಲ್ಲೂ ಚೀನಾ ಆಫ್ರಿಕಾದಲ್ಲಿ ಹೂಡಿರುವ ಹಣಕ್ಕೆ ಪಂಗನಾಮವೇ. ಇದು ಅತಿ ದಾರುಣವಾಗಿ ಗೋಚರವಾಗುವುದು ಅಂಗೋಲಾದಲ್ಲಿ. ಅಲ್ಲಿನ ತೈಲನಿಕ್ಷೇಪದ ಒಡೆತನಕ್ಕಾಗಿ ಚೀನಾ 50 ಬಿಲಿಯನ್ ಡಾಲರ್​ಗಳಷ್ಟು ಬೃಹತ್ ಮೊತ್ತ ಸುರಿದಿದೆ. ಈಗ ತೈಲಕ್ಕೆ ಬೇಡಿಕೆಯೇ ಇಲ್ಲವಾಗಿ ಅದರ ಬೆಲೆ ನಕಾರಕ್ಕಿಳಿದಿರುವಾಗ ಅಂಗೋಲಾದ ತೈಲಬಾವಿಗಳಿಂದ ಚೀನಾ ತನ್ನ ಹಣವನ್ನು ಎತ್ತಿಕೊಳ್ಳುವುದು ಸದ್ಯಕ್ಕಂತೂ ಅಸಾಧ್ಯ.

ಈ ನಡುವೆ ಚೀನಾದ ಬಂಟನಂತೆ ವರ್ತಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ ಸಹ ಆಫ್ರಿಕಾದಲ್ಲಿ ತನ್ನ ಹೆಸರು ಕೆಡಿಸಿಕೊಳ್ಳುತ್ತಿದೆ ಮತ್ತದರ ಪರಿಣಾಮವನ್ನೂ ಅನುಭವಿಸುತ್ತಿದೆ. 2003ರಲ್ಲಿ ಚೀನಾದಲ್ಲಿ ಸಾರ್ಸ್ ವೈರಸ್ ಕಾಣಿಸಿಕೊಂಡಾಗ ಅಲ್ಲಿಗೆ ಧಾವಿಸಿದ ವಿಆಸಂ ತಂಡ ವೈರಸ್ ಹೊರಬಿದ್ದದ್ದು ರಾಜಧಾನಿ ಬೀಜಿಂಗ್​ನಲ್ಲಿದ್ದ ಲ್ಯಾಬ್ ಒಂದರಿಂದ ಎಂದು ಪತ್ತೆ ಹಚ್ಚಿದ್ದಲ್ಲದೆ ಸೋಂಕಿತರನ್ನು ಮರೆಯಾಗಿಸಿ ತನ್ನನ್ನು ಅಡ್ಡದಾರಿಗೆಳೆಯಲು ನೋಡಿದ ಚೀನೀ ಸರ್ಕಾರಕ್ಕೆ ಛೀಮಾರಿ ಹಾಕಿತು. ಸೋಂಕಿನ ಬಗ್ಗೆ ಜಗತ್ತನ್ನು ತಕ್ಷಣ ಎಚ್ಚರಿಸಿ ಸೋಂಕು ವ್ಯಾಪಕವಾಗದಂತೆಯೂ ತಡೆಯಿತು. ಇಂದು ಅದೇ ವಿಆಸಂ ಆಫ್ರಿಕನ್ನನೊಬ್ಬನನ್ನು ತನ್ನ ಮಹಾನಿರ್ದೇಶಕನನ್ನಾಗಿ ಹೊಂದಿದೆ ಮತ್ತು ವಿಪರ್ಯಾಸದಂತೆ ಚೀನಾದ ತುತ್ತೂರಿಯಾಗಿದೆ! ಕರೊನಾ ಸೋಂಕಿನ ಬಗ್ಗೆ ಚೀನಾ ಹೇಳಿದ ಸುಳ್ಳುಗಳನ್ನು ತಾನೂ ಹೇಳಿ ಜಗತ್ತನ್ನು ಹಾದಿತಪ್ಪಿಸಿದೆ, ಸೋಂಕು ವ್ಯಾಪಕವಾಗಲು ಕಾರಣವಾಗಿದೆ. ಅದಕ್ಕೀಗ ಒಂದು ಕಡೆ ಛೀಮಾರಿ ಬಿದ್ದಿದೆ.

ತಾನು ಆಪದ್ಭಾಂಧವನಂತೆ ಬಿಂಬಿಸಿಕೊಳ್ಳಲು ವಿಆಸಂ ವಿವಿಧ ದೇಶಗಳಲ್ಲಿ ಸೋಂಕು ಪತ್ತೆಹಚ್ಚಲು ಮುಂದೆ ಬಂದಿತಷ್ಟೇ. ಆದರೆ ಅದರ ಕೆಲಸದ ವಿಶ್ವಾಸಾರ್ಹತೆಯ ಬಗ್ಗೆ ಪೂರ್ವ ಆಫ್ರಿಕಾದ ತಾಂಜಾನಿಯಾ ದೇಶದ ಅಧ್ಯಕ್ಷ ಜಾನ್ ಮಾಗುಫುಲಿ ಅವರಿಗೆ ಸಂದೇಹ ಬಂತು. ನೋಡಿಯೇಬಿಡೋಣ ಅಂದುಕೊಂಡು ಮನುಷ್ಯರ ಬದಲು ಒಂದು ಮೇಕೆ, ಒಂದು ಪಪ್ಪಾಯಿ ಹಣ್ಣು ಮತ್ತು ಒಂದು ಕ್ವೇಲ್ ಹಕ್ಕಿಯ ಸ್ಯಾಂಪಲ್​ಗಳನ್ನು ಮೇ ತಿಂಗಳ ಅರಂಭದಲ್ಲಿ ವಿಆಸಂ ತಂಡಕ್ಕೆ ಕಳುಹಿಸಿದರು. 11ರಂದು ಫಲಿತಾಂಶ ಬಂತು. ಅವು ಮೂರೂ ಕರೊನಾ ಸೋಂಕಿತ ಅಂತೆ! ಅಧ್ಯಕ್ಷ ಮಾಗುಫುಲಿ ತಕ್ಷಣವೇ ವಿಆಸಂ ಅನ್ನು ತಾಂಜಾನಿಯಾದಿಂದ ಒದ್ದೋಡಿಸಿದರು. ಅದೇ ಗತಿ ನಾಳೆ ಇಡೀ ಆಫ್ರಿಕಾದಲ್ಲಿ ಚೀನಾಗೆ ಆದರೆ ಅಚ್ಚರಿಯಿಲ್ಲ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net