More

    ಜುಲೈ 1ರಿಂದಲೇ ಹಂತ ಹಂತವಾಗಿ ಶಾಲೆ ಶುರು? : ಸಂದೇಹ ಮೂಡಿಸಿದೆ ಶಿಕ್ಷಣ ಇಲಾಖೆ ಸುತ್ತೋಲೆ..

    ಬೆಂಗಳೂರು: ಶಾಲೆ ಯಾವಾಗ ಶುರುಮಾಡಬೇಕು ಎಂಬ ಬಗ್ಗೆ ಜೂನ್​ 10-12 ರ ನಡುವೆ ಪಾಲಕರು, ಪಾಲುದಾರರೊಂದಿಗೆ ಸಭೆ ನಡೆಸಿ ಅಲ್ಲಿಂದ ಬರುವ ಫೀಡ್ ಬ್ಯಾಕ್ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್​ ಕುಮಾರ್ ಇಂದು ಬೆಳಗ್ಗೆಯಷ್ಟೇ ಫೇಸ್​ಬುಕ್​ ನಲ್ಲಿ ಸ್ಟೇಟಸ್​ ಅಪ್ಡೇಟ್ ಮಾಡಿಕೊಂಡಿದ್ದರು. ಆದರೆ, ಶಿಕ್ಷಣ ಇಲಾಖೆ ಪ್ರಕಟಿಸಿರುವ ಸುತ್ತೋಲೆಯಲ್ಲಿ ಶಾಲಾ ಆಡಳಿತ ಮಂಡಳಿಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಸೂಚನೆ ಇದೆ. ಮಕ್ಕಳ ಸುರಕ್ಷತೆ ಖಾತರಿಗೊಳಿಸುವ ಸಂಬಂಧ ಸಾಕಷ್ಟು ಗೊಂದಲಗಳಿರುವಾಗಲೇ ಇಲಾಖೆ ದಿನಾಂಕ ಪ್ರಕಟಿಸಿದ ವಿಚಾರ ಈಗ ಪಾಲಕರು, ಪಾಲುದಾರರ ನಡುವೆ ತೀವ್ರ ಚರ್ಚೆಗೆ ಒಳಗಾಗಿದೆ.

    ಶಿಕ್ಷಣ ಇಲಾಖೆ ಸುತ್ತೋಲೆಯ ಮುಖ್ಯಾಂಶಗಳು

    ಜೂನ್ 5,6ಕ್ಕೆ – ಪೇರೆಂಟ್ ಟೀಚರ್, ಎಸ್​ಡಿಎಂಸಿ ಮೀಟಿಂಗ್​ಗೆ ಸಿದ್ಧತೆ

    ಜೂನ್ 8 ರಿಂದ ಶಾಲಾ ಅಡ್ಮಿಷನ್ ಶುರು

    ಜೂನ್​ 10-12 ಪೇರೆಂಟ್ ಟೀಚರ್, ಎಸ್​ಡಿಎಂಸಿ ಮೀಟಿಂಗ್​

    ಜೂನ್ 15-30 – ದಾಖಲಾತಿ ಆಂದೋಲನ

    ಜುಲೈ 1ರಿಂದ ಶಾಲೆ ಶುರು

    ಮೊದಲ ಹಂತ – 4ರಿಂದ 7ನೇ ತರಗತಿ

    ಜುಲೈ 15ರಿಂದ

    ಎರಡನೇ ಹಂತ – 1ರಿಂದ 3ನೇ ತರಗತಿ ಮತ್ತು 8ರಿಂದ 10ನೇ ತರಗತಿ

    ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಅವರು ಫೇಸ್​ಬುಕ್ ಸ್ಟೇಟಸ್​​ನ ಆಯ್ದ ಅಂಶ ಈ ರೀತಿ ಇದೆ- ನಮ್ಮ‌ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಪುನರಾರಂಭಿಸುವುದಕ್ಕೆ ಸಂಬಂಧಿಸಿದಂತೆ #ಪೋಷಕರ_ಮತ್ತು_ಸಂಬಂಧಿಸಿದ_ಪಾಲುದಾರರ (Stakeholders) ಸಭೆಗಳನ್ನು ಪ್ರತಿ ಶಾಲೆಯ‌ ಮಟ್ಟದಲ್ಲಿ ಆಯೋಜಿಸುವಂತೆ ತೀರ್ಮಾನಿಸಲಾಯಿತು. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರಕಾರೀ ಹಾಗೂ ಅನುದಾನಿತ ಮತ್ತು ಅನುದಾನ ರಹಿತ (ಖಾಸಗಿ) ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯ ರುಗಳು ಕೂಡಲೇ (10.6.2020 ರಿಂದ 12.6.2020 ರ ನಡುವಿನ ಅವಧಿಯಲ್ಲಿ) #ಪೋಷಕರು_ಮತ್ತು_SDMC ಸದಸ್ಯರನ್ನು ಸಭೆಗೆ ಆಹ್ವಾನಿಸಿ ಈ ಕೆಳಕಂಡ ವಿಷಯಗಳ ಕುರಿತು ಅವರ ಅಭಿಪ್ರಾಯ ಪಡೆಯಲು ಸೂಚಿಸಲಾಗಿದೆ. :- A) ಶಾಲೆಗಳನ್ನು ಪುನರಾರಂಭ ಮಾಡಬಹುದಾದ ದಿನಾಂಕ ಕುರಿತು. B) ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಧಾನದ ಬಗ್ಗೆ. C) ಶಾಲೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ. ರಾಜ್ಯದ ಎಲ್ಲಾ ಪೋಷಕರು ಮತ್ತು SDMC ಸದಸ್ಯರುಗಳು ಈ ಸಭೆಗಳಲ್ಲಿ‌ ಪಾಲ್ಗೊಂಡು ತಮ್ಮ ಅಭಿಪ್ರಾಯ ತಿಳಿಸಬೇಕೆಂದು ಮನವಿ ಮಾಡುತ್ತಿದ್ದೇನೆ ಎಂದೂ ಸಚಿವರು ಕೇಳಿಕೊಂಡಿದ್ದರು.

    ಶಿಕ್ಷಣ ಇಲಾಖೆ ಸುತ್ತೋಲೆ ಅಂಶಗಳು ಹೀಗಿವೆ- ಶಿಕ್ಷಣ ಇಲಾಖೆ ಜೂನ್ 1ರಂದು ಪ್ರಕಟಿಸಿದ ಸುತ್ತೋಲೆಯಲ್ಲಿ ಶಾಲೆ ಆರಂಭಿಸಲು ಪ್ರಸ್ತಾಪವಾಗಿರುವ ದಿನಾಂಕಗಳ ವಿವರ ಇದೆ. ಇದರಂತೆ, ಜುಲೈ 1ರಿಂದಲೇ ಹಂತ ಹಂತವಾಗಿ ಶಾಲೆ ಶುರುವಾಗಲಿದೆ. ಜುಲೈ 1ರಿಂದ 4ರಿಂದ 7ನೇ ತರಗತಿ ವರೆಗೆ, ಜುಲೈ 15ರಿಂದ 1ನೇ ತರಗತಿಯಿಂದ 3ರ ತನಕ ಮತ್ತು 8ರಿಂದ 10ರ ತನಕದ ತರಗತಿಗಳು ಆರಂಭಿಸುವ ಪ್ರಸ್ತಾಪವಿದೆ. ಪೂರ್ವ ಪ್ರಾಥಮಿಕ ತರಗತಿಗಳು ಜುಲೈ20ರಿಂದ ಆರಂಭಿಸುವ ಪ್ರಸ್ತಾಪವಿದೆ.

    ಜೂನ್ 5,6ಕ್ಕೆ ಪೇರೆಂಟ್ ಟೀಚರ್ ಮೀಟಿಂಗ್​, ಎಸ್​ಡಿಎಂಸಿ ಸಭೆ ನಡೆಸುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಜೂನ್ 8ರಿಂದ ಶಾಲಾ ಅಡ್ಮಿಷನ್ ಶುರುಮಾಡಬೇಕು. ಜೂನ್ 10-12ರ ನಡುವೆ ಶಾಲೆಗಳಲ್ಲಿ ಎಸ್​ಡಿಎಂಸಿ, ಪೇರೆಂಟ್ ಟೀಚರ್ ಮೀಟಿಂಗ್​ ನಡೆಸಬೇಕು. ಅಭಿಪ್ರಾಯ ಸಂಗ್ರಹಿಸಿ SATSನಲ್ಲಿ ಅಪ್ಡೇಟ್ ಮಾಡಬೇಕು. ಜೂನ್ 15ರಿಂದ 30ರ ನಡುವೆ ದಾಖಲಾತಿ ಆಂದೋಲನ ನಡೆಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು ಎಂಬ ಅಂಶಗಳು ಸುತ್ತೋಲೆಯಲ್ಲಿವೆ.

    ಪಾಲಕರು, ಪಾಲುದಾರರಿಂದ ಸಂಗ್ರಹಿಸಬೇಕಾದ ಅಭಿಪ್ರಾಯದ ವಿಚಾರವನ್ನೂ ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದು, ಅದಕ್ಕೆ ನೀಡಿರುವ ವಿಷಯದಲ್ಲಿಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಧಾನಕ್ಕೆ ಮೂರು ಆಯ್ಕೆಯನ್ನೂ ನೀಡಲಾಗಿದೆ. ಅದನ್ನು ಒಪ್ಪದೇ ಇದ್ದಲ್ಲಿ, ಬೇರೆ ವಿಧಾನಗಳಿದ್ದರೆ ಅದನ್ನೂ ದಾಖಲಿಸಿ ಕಳುಹಿಸಬೇಕು ಎಂದು ಸೂಚಿಸಲಾಗಿದೆ.

    ಸ್ಪಷ್ಟೀಕರಣ ಬೇಕು…
    ಪಾಲಕರು ಮತ್ತು ಪಾಲುದಾರರ ನಡುವಿನ ಚರ್ಚೆಯ ವಿಷಯಗಳಿವು. ಶಿಕ್ಷಣ ಸಚಿವರ ಹೇಳಿಕೆ ಪಾಲಕರಲ್ಲಿ, ಪಾಲುದಾರರಲ್ಲಿ ವಿಶ್ವಾಸ ಮೂಡಿಸಿದ್ದರೆ, ಶಿಕ್ಷಣ ಇಲಾಖೆಯ ಸುತ್ತೋಲೆ ಒಂದಷ್ಟು ಸಂದೇಹ, ಗೊಂದಲಗಳನ್ನು ಸೃಷ್ಟಿಸಿದೆ. ಪಾಲಕರು, ಪಾಲುದಾರರ ನಡುವೆ ಈ ಬಗ್ಗೆ ಚರ್ಚೆ ಶುರುವಾಗಿದ್ದು ಅಲ್ಲಿ ವ್ಯಕ್ತವಾಗುತ್ತಿರುವ ಅಂಶಗಳಿವು..
    1. ಶಿಕ್ಷಣ ಸಚಿವರ ಹೇಳಿಕೆಯ ಪ್ರಕಾರವೇ ನೋಡುವುದಾದರೆ, ಪಾಲಕರು, ಪಾಲುದಾರರೊಂದಿಗೆ ಸಮಾಲೋಚಿಸುವ ಮೊದಲೇ ಶಿಕ್ಷಣ ಇಲಾಖೆ ಪ್ರಸ್ತಾವಿತ ದಿನಾಂಕಗಳ ವಿವರ ಸುತ್ತೋಲೆಯಲ್ಲಿ ಪ್ರಕಟಿಸಿದ್ದು ಸರಿಯೇ?
    2. ಪ್ರಸ್ತಾವಿತ ದಿನಾಂಕ ಜುಲೈ 1 ಎಂದು ನಮೂದಿಸಲಾಗಿದೆ. ಪ್ರಸ್ತಾವಿತ ದಿನಾಂಕ ಎಂದರೆ ಇನ್ನೂ ನಿರ್ಣಯವಾಗಿಲ್ಲ. ಹಾಗಿದ್ದ ಮೇಲೆ ಜೂನ್​ 8 ರಿಂದಲೇ ಅಡ್ಮಿಷನ್ ಆರಂಭಿಸಲು ಸೂಚಿಸಿರುವುದೇಕೆ? ಹಾಗಾದರೆ ಪಾಲಕರು, ಪಾಲುದಾರರ ಸಮಾಲೋಚನೆ ನೆಪಕ್ಕಷ್ಟೇ ನಡೆಸುತ್ತಿರುವುದೇ?
    3. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಚಾರವಾಗಿ ಮೂರು ಆಯ್ಕೆಗಳನ್ನು ನೀಡಲಾಗಿದ್ದು, ಪಾಳಿಯಲ್ಲಿ ತರಗತಿ ನಡೆಸುವ ವಿಚಾರ ಪ್ರಸ್ತಾಪವಾಗಿದೆ. ಶಾಲೆಗಳಲ್ಲಿ ಮಕ್ಕಳ ಥರ್ಮಲ್ ಸ್ಕ್ರೀನಿಂಗ್​ ನಡೆಸಲು ಕ್ರಮ ತೆಗೆದುಕೊಳ್ಳಲಾಗುತ್ತದೆಯೇ? ಶಾಲೆ ಆರಂಭಕ್ಕೂ ಮುನ್ನ ಎಲ್ಲ ಮಕ್ಕಳು, ಶಿಕ್ಷಕರ ಕೋವಿಡ್ 19 ಟೆಸ್ಟ್ ಮಾಡಿಸಲಾಗುತ್ತದೆಯೇ?
    4. ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಂದು ಮಗುವಿನ ಮೇಲೆ ನಿಗಾ ಇರಿಸುವುದು ಸಾಧ್ಯವೇ?
    5. ಸಾಮಾನ್ಯ ಜ್ವರ, ನೆಗಡಿ, ಕೆಮ್ಮು ಇರುವ ಮಕ್ಕಳು ಶಾಲೆಗೆ ಬರಬಹುದು. ಮಳೆಗಾಲವಾದ ಕಾರಣ ಶಾಲೆಗೆ ಬಂದ ನಂತರದಲ್ಲಿ ಮಕ್ಕಳು ಅಸ್ವಸ್ಥರಾಗಬಹುದು ಅಂತಹ ಸನ್ನಿವೇಶದಲ್ಲಿ ಮಕ್ಕಳ ಸುರಕ್ಷತೆಗೆ ಏನು ಕ್ರಮ ತೆಗೆದುಕೊಳ್ಳಬಹುದು?

    FULL DETAILS | ಸೈಕ್ಲೋನ್​ಗೆ ಹೆಸರಿಡೋದು ಯಾರು, ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts