ನ್ಯಾಯಾಲಯಗಳ ವಿರುದ್ಧ ವೃಥಾ ಟೀಕೆ ಅಕ್ಷಮ್ಯ

Court 10 June 20
Published on

ಕೆಲವು ಸಂದರ್ಭಗಳಲ್ಲಿ ಕಾರ್ಯಾಂಗಕ್ಕೆ ಅದರ ಜವಾಬ್ದಾರಿಗಳ ಬಗ್ಗೆ ನ್ಯಾಯಾಲಯ ನೆನಪು ಮಾಡಿಕೊಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಅದನ್ನು ಗುರುತಿಸಿ ಸರ್ಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಹೀಗಿರುವಾಗ ರಾಜಕೀಯ ಲಾಭಕ್ಕಾಗಿ ನ್ಯಾಯಾಲಯದ ಕಲಾಪ, ಆದೇಶಗಳನ್ನು ತಿರುಚಿ ಪ್ರಚುರಗೊಳಿಸುವ ಪ್ರವೃತ್ತಿಗೆ ಕೋರ್ಟ್ ಛೀಮಾರಿ ಹಾಕಿದೆ.

‘ನಿಂದಕರಿರಬೇಕು... ಇರಬೇಕು..ನಿಂದಕರಿರಬೇಕು..,’ ಎನ್ನುವ ಪುರಂದರದಾಸರ 16ನೇ ಶತಮಾನದ ಪದ ಎಂದೆಂದಿಗೂ, ಎಲ್ಲ ಸಂದರ್ಭಗಳಲ್ಲೂ ಪ್ರಸ್ತುತ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ವಿಷಯದಲ್ಲಿಯೂ ವಿಮರ್ಶೆ ಪ್ರಸ್ತುತವಷ್ಟೇ ಅಲ್ಲ, ಅವಶ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಪ್ರಭಾವಿ ವ್ಯಕ್ತಿ ಹಾಗೂ ಗುಂಪುಗಳಿಂದ ನ್ಯಾಯಾಲಯದ ಕಲಾಪಗಳು ಹಾಗೂ ತೀರ್ಪಗಳ ಬಗ್ಗೆ ಅನವಶ್ಯಕವಷ್ಟೇ ಅಲ್ಲ ಅತಿರೇಕ ಎನಿಸುವಷ್ಟು ಟೀಕಾಪ್ರಹಾರ ಕೇಳಿಬರುತ್ತಿದೆ. ತಮ್ಮ ವೈಯಕ್ತಿಕ ವಿಚಾರಧಾರೆಯನ್ನು ಕೋರ್ಟ್ ಮನ್ನಿಸದೇ ಇರುವ ಸಂದರ್ಭದಲ್ಲಿ ನ್ಯಾಯಾಲಯಗಳ (ಅರ್ಥಾತ್ ನ್ಯಾಯಾಧೀಶರುಗಳ) ಮೇಲೆ ಪುಂಖಾನುಪುಂಖವಾಗಿ ಆರೋಪಗಳನ್ನು ಹರಿಬಿಟ್ಟಿದ್ದಾರೆ. ವಿಪರ್ಯಾಸವೆಂದರೆ ಪಟ್ಟಭದ್ರ ಹಿತಾಸಕ್ತರು ಮಾತ್ರವಲ್ಲದೆ ಕೆಲವು ವಿಶ್ರಾಂತ ನ್ಯಾಯಾಧೀಶರೂ ಇದರಲ್ಲಿ ದನಿಗೂಡಿಸಿದ್ದಾರೆ. ಸಾರ್ವಜನಿಕರ ಅಭಿಪ್ರಾಯವನ್ನು ಪ್ರಭಾವಿಸಬಲ್ಲ ಇಂತಹ ವಾಗ್ದಾಳಿ ನ್ಯಾಯಾಂಗದ ಸ್ವಾಯತ್ತತೆಯನ್ನು ತೀವ್ರವಾಗಿ ಕುಂಠಿತಗೊಳಿಸುತ್ತದೆ.

ಸಫೂರಾ ಜರ್ಗಾರ್ ಎಂಬ ಮಹಿಳೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ವೇಳೆ ಭಾರತ ದೇಶದ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿದ್ದಲ್ಲದೆ ಹಿಂಸೆಯನ್ನು ಪ್ರಚೋದಿಸುವಲ್ಲಿ ತೊಡಗಿದ್ದಾಳೆ ಎಂದು ದಂಡಸಂಹಿತೆಯ ಜೊತೆಗೆ ಕಾನೂನುಬಾಹಿರ ಚಟುವಟಿಕೆ ತಡೆಯಲು ಮಾಡಿರುವ ಕಾಯ್ದೆ (ಖ್ಞಿ್ಝಡ್ಛಿu ಅಠಿಜಿಡಜಿಠಿಜಿಛಿಠ ಕ್ಟಛಿಡಛ್ಞಿಠಿಜಿಟ್ಞ ಅಠಿ) ಅಡಿಯಲ್ಲಿಯೂ ಆರೋಪ ಸಲ್ಲಿಸಿ ಆಕೆಯನ್ನು ಬಂಧಿಸಲಾಗಿದೆ. ಇದೇ ಜೂನ್ 4ರಂದು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಆಕೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ತೀರ್ಪಿನಲ್ಲಿ ನ್ಯಾಯಾಧೀಶರು, ‘ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಮಾಡಿರುವ ಕಾನೂನಿನ ಪ್ರಕಾರ ಸುಲಭವಾಗಿ ಜಾಮೀನು ಕೊಡಲು ಬರುವುದಿಲ್ಲ, ಕೆಂಡದೊಡನೆ ಸರಸವಾಡಿದ ಮೇಲೆ ಒಂದೇ ಒಂದು ಕಿಡಿ ಹಾರಿಹೋಗಿ ಬೆಂಕಿ ಹಚ್ಚಿತು ಎಂದು ಗಾಳಿಯನ್ನು ದೂಷಿಸಲು ಅವಕಾಶವಿಲ್ಲ’ ಎಂದು ವಿಶದವಾಗಿ ವಿಶ್ಲೇಷಿಸಿದ್ದಾರೆ.

ತೀರ್ಪು ಸರಿಯೋ ತಪ್ಪೋ ಎನ್ನುವುದು ನ್ಯಾಯಾಂಗದ ಒಳಗಿನ ಮೇಲ್ಮನವಿಗಳ ವ್ಯಾಪ್ತಿಗೆ ಒಳಪಟ್ಟಿದೆ. ಆದರೆ ಚಿಂತಾಕ್ರಾಂತ ಸಂಗತಿಯೆಂದರೆ ಆಕೆಯನ್ನು ಮತ್ತು ಅಂತಹ ಪ್ರತಿಭಟನಾಕಾರರನ್ನು ಬೆಂಬಲಿಸುವ ದಿಕ್ಕಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ನ್ಯಾಯಾಧೀಶರ ವಿರುದ್ಧ ಹರಿಹಾಯ್ದಿದ್ದಾರೆ. ಇಂತಹದ್ದೇ ಇನ್ನೊಂದು ಪ್ರಕರಣ (ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಪ್ರಕರಣ) ನಮ್ಮ ರಾಜ್ಯದಲ್ಲೇ ನಡೆದಿರುವುದು ಇನ್ನೂ ಹಚ್ಚಹಸಿರಾಗಿದೆ. ಹಿಂಸೆಗೆ ಪ್ರಚೋದನೆ ನೀಡುವುದು, ದೇಶದ ಸಮಗ್ರತೆ ಹಾಗೂ ಸಾರ್ವಭೌಮತೆಯನ್ನು ಪ್ರಶ್ನಿಸಿ ದೇಶದ್ರೋಹಿ ಹೇಳಿಕೆಗಳನ್ನು ನೀಡುವಂಥ ಆರೋಪಗಳು ಅತಿ ಸೂಕ್ಷ್ಮವಾದ ಪ್ರಕರಣಗಳು. ಕಾನೂನಿನ ಚೌಕಟ್ಟಿನೊಳಗೆ ಇಂತಹ ಸೂಕ್ಷ್ಮ ಪ್ರಕರಣಗಳನ್ನು ನಿರ್ವಹಿಸಲು ಸುಭದ್ರ ವ್ಯವಸ್ಥೆ ಇರುತ್ತದೆ. ಯಾವೊಬ್ಬ ಆರೋಪಿಯ ಹಕ್ಕುಗಳೂ ಚ್ಯುತಿ ಆಗದಂತೆ ವಿಚಾರಣೆಗೆ ನ್ಯಾಯಾಲಯ ವ್ಯವಸ್ಥೆ ಸುಸಜ್ಜಿತವಾಗಿದೆ. ವಾಕ್ ಸ್ವಾತಂತ್ರ್ಯ ಬಳಸಿ ಯಾವುದೇ ಆರೋಪಿಯ ಕೃತ್ಯಗಳನ್ನು ಸಮರ್ಥಿಸಬಹುದು, ಆದರೆ ಒಮ್ಮೆ ನ್ಯಾಯಾಲಯ ಒಂದು ತೀರ್ಪನ್ನಿತ್ತರೆ ಅದನ್ನು ಸಂಬಂಧಪಟ್ಟವರು ಕಾನೂನು ಪ್ರಕ್ರಿಯೆ ಮೂಲಕ ಪ್ರಶ್ನಿಸುವುದರ ಹೊರತಾಗಿ ಮಾಧ್ಯಮಗಳ ಮೂಲಕ ಯಾರ್ಯಾರಾದರೂ ನ್ಯಾಯಾಲಯದ ಮೇಲೆಯೇ ದೋಷಾರೋಪಣೆ ಮಾಡುವುದು ನಮ್ಮ ಸಾಂವಿಧಾನಿಕ ವ್ಯವಸ್ಥೆಗೇ ಧಕ್ಕೆ ಉಂಟುಮಾಡುತ್ತದೆ. ಇದನ್ನೂ ಓದಿ: ಅನಿಸಿಕೆ: ಕೈಗಾರಿಕೆಗಳನ್ನು ಸೆಳೆಯಲು ಈಗ ಸುಸಮಯ

ನಮ್ಮ ಸಂವಿಧಾನ ವಾಕ್ ಸ್ವಾತಂತ್ರ್ಯದ ಭರವಸೆ ನೀಡುವಾಗ ಅದನ್ನು ನ್ಯಾಯಾಲಯ ನಿಂದನೆಗೆ ಬಳಸಲಾಗದು ಎಂಬ ನಿರ್ಬಂಧ ಸಂಯೋಜಿಸಿಕೊಂಡಿದೆ. ಸಂಪೂರ್ಣವಾಗಿ ಇತ್ಯರ್ಥವಾಗದೇ ಇರುವ ಪ್ರಕರಣಗಳ ಬಗ್ಗೆ ಹಗುರವಾಗಿ ಮಾತನಾಡಿ ಟೀಕಿಸುವುದು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಸುಪ್ರೀಂ ಕೋರ್ಟ್ 1978ರ ರಾಮ್ ದಯಾಳ್ ಮರ್ಕರ್ಹಾ ಮತ್ತು 2002ರ ಅರುಂಧತಿ ರಾಯ್ ಪ್ರಕರಣಗಳಲ್ಲಿ ತೀರ್ಪಿತ್ತಿದೆ.

ಕರೊನಾ ವಿರುದ್ಧ ವಿಶ್ವವೇ ಸೆಣೆಸುತ್ತಿರುವಾಗ ಅವಕಾಶವಾದಿಗಳು ಸರ್ಕಾರದ ಕಾರ್ಯವೈಖರಿ ಹಾಗೂ ನೀತಿ-ನಿರ್ಧಾರಗಳ ಬಗ್ಗೆ ತಮ್ಮ ವಿರೋಧವನ್ನು ನ್ಯಾಯಾಲಯಗಳ ಮೂಲಕ ಜನತೆಯ ಮೇಲೆ ಹೇರುವುದಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಗುಜರಾತ್ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಮೊಕದ್ದಮೆಯೊಂದನ್ನು ದಾಖಲಿಸಿಕೊಂಡು ವಿಚಾರಣೆ ಮಾಡತೊಡಗಿತು. ಮುಖ್ಯ ನ್ಯಾಯಾಧೀಶರ ನೇತೃತ್ವದ ಪೀಠವೊಂದು ಕೆಲವು ಆದೇಶ ಹೊರಡಿಸಿ ನಿರ್ದೇಶನಗಳನ್ನು ನೀಡಿತ್ತು. ಕೆಲವು ದಿನಗಳ ನಂತರ ನಡೆದ ಇನ್ನೊಂದು ವಿಚಾರಣೆಯಲ್ಲಿ ಬೇರೊಂದು ನ್ಯಾಯಪೀಠ ಸರ್ಕಾರದ ಬಗ್ಗೆ ಸ್ವಲ್ಪ ಗರಂ ಆಗಿ ಆದೇಶ ಮಾಡಿತ್ತು. ಇದೇ ಮೇ 29ರಂದು ಮತ್ತೆ ಮುಖ್ಯ ನ್ಯಾಯಾಧೀಶರ ಪೀಠದಲ್ಲಿ ವಿಚಾರಣೆ ನಡೆದು ಕೋರ್ಟ್ ವಿವರವಾದ ಆದೇಶ ನೀಡಿದೆ. ಹಾಗೆ ಆದೇಶ ಮಾಡುವಾಗ, ನ್ಯಾಯಪೀಠ ಮುಖ್ಯವಾದ ವಿಚಾರವೊಂದನ್ನು ಪರಿಗಣಿಸಿ ಅದರ ಬಗ್ಗೆ ತೀವ್ರ ಕಾಳಜಿ ಹಾಗೂ ಆಘಾತ ವ್ಯಕ್ತಪಡಿಸಿದೆ. ಹಿಂದೆ ಮಾಡಿದ ಕೆಲವು ಆದೇಶಗಳಲ್ಲಿ ಕೋರ್ಟ್ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದೇನೋ ನಿಜ, ಆದರೆ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಅದನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರದ ಬಗ್ಗೆ ಜನರಲ್ಲಿ ತಪ್ಪುಕಲ್ಪನೆ ಮೂಡುವ ರೀತಿಯಲ್ಲಿ ಟೀಕೆ ಮಾಡಿರುವುದು ಅಸಮರ್ಪಕ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಅನಿಸಿಕೆ: ಆತ್ಮನಿರ್ಭರ ಭಾರತಕ್ಕಾಗಿ ದೃಢಹೆಜ್ಜೆ

‘ಜಗತ್ತು ಕರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವಾಗ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವುದು ಅವಶ್ಯವೇ ಹೊರತು ವಿನಾಕಾರಣ ಸರ್ಕಾರವನ್ನು ಟೀಕಿಸುವುದು ಅಸಮಂಜಸ’ ಎಂದೂ ಅಭಿಪ್ರಾಯಪಟ್ಟಿದೆ. ಕಾರ್ಯಾಂಗ ಹಾಗೂ ನ್ಯಾಯಾಂಗಕ್ಕೆ ತಮ್ಮದೇ ಆದ ಕಾರ್ಯಕ್ಷೇತ್ರಗಳಿವೆ, ಅಧಿಕಾರಗಳಿವೆ. ಕೆಲವು ಸಂದರ್ಭಗಳಲ್ಲಿ ಕಾರ್ಯಾಂಗಕ್ಕೆ ಅದರ ಜವಾಬ್ದಾರಿಗಳ ಬಗ್ಗೆ ನ್ಯಾಯಾಲಯ ನೆನಪು ಮಾಡಿಕೊಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಅದನ್ನು ಗುರುತಿಸಿ ಸರ್ಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಹೀಗಿರುವಾಗ ರಾಜಕೀಯ ಲಾಭಕ್ಕಾಗಿ ನ್ಯಾಯಾಲಯದ ಕಲಾಪ, ಆದೇಶಗಳನ್ನು ತಿರುಚಿ ಪ್ರಚುರಗೊಳಿಸುವ ಪ್ರವೃತ್ತಿಗೆ ಕೋರ್ಟ್ ಛೀಮಾರಿ ಹಾಕಿದೆ. ‘ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ಇದ್ದಿದ್ದರೆ ನಾವ್ಯಾರೂ ಇಂದು ಜೀವಂತ ಇರುತ್ತಿರಲಿಲ್ಲ’ ಎಂದು ಕಿವಿಮಾತು ಹೇಳಿದೆ. ಇದೆಲ್ಲ ಸರಿ. ಆದರೆ ಕೆಲವರು ಗುಜರಾತ್ ಹೈಕೋರ್ಟಿನ ನ್ಯಾಯಪೀಠ ಬದಲಾಗಿದೆ, ನ್ಯಾಯಾಲಯ ತನ್ನ ನಿಲುವನ್ನು ಬದಲಿಸಿ ಸರ್ಕಾರದ ಬೆಂಬಲಕ್ಕೆ ನಿಂತಿದೆಯೇನೋ ಎಂಬ ಭಾವನೆ ಕಲ್ಪಿಸಬಲ್ಲ ಕೊಂಕು ಮಾತುಗಳನ್ನಾಡಿದ್ದಾರೆ. ಆಗಿದ್ದಿಷ್ಟೆ: ಮುಖ್ಯ ನ್ಯಾಯಮೂರ್ತಿಗಳು ರಜೆಗೆ ತೆರಳಿದ್ದರು. ತಿರುಗಿ ಬಂದ ನಂತರ ಅವರೇ ಪೀಠದ ನೇತೃತ್ವವನ್ನು ಮುಂದುವರಿಸಿ ಕಲಾಪಗಳನ್ನು ನಡೆಸಿದ್ದಾರೆ. ಹೀಗಿರುವಾಗ ನ್ಯಾಯಾಂಗದ ಬಗ್ಗೆ ವ್ಯಂಗ್ಯವಾಡುವುದು ಸಭ್ಯಸಮಾಜದ ಲಕ್ಷಣವೇ?

ಗುಜರಾತಿನ ಕಥೆ ಇದಾದರೆ, ಇನ್ನೊಂದೆಡೆ ದೇಶದ ಸುಪ್ರೀಂ ಕೋರ್ಟ್ ಕೂಡ ಟೀಕೆಗೆ ಗುರಿಯಾಗಿದೆ. ಕರೊನಾ ನಿಯಂತ್ರಣಕ್ಕಾಗಿ ಮಾಡಿದ ನಿರ್ಬಂಧಗಳಿಂದ ವಲಸೆ ಕಾರ್ವಿುಕರ ಸಮಸ್ಯೆಗಳು ದೇಶದೆಲ್ಲೆಡೆ ತಲೆಯೆತ್ತಿವೆ. ಲಾಕ್​ಡೌನ್ ಶುರುವಾದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು. ಕಾರ್ಯಾಂಗವೇ ಈ ವಿಚಾರಗಳಲ್ಲಿ ಸರಿಯಾದ ನೀತಿನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತ್ತು. ಅಧಿಕಾರ ಹಾಗೂ ಕಾರ್ಯಕ್ಷೇತ್ರಗಳ ಪ್ರತ್ಯೇಕತೆ ನಮ್ಮ ಸಂವಿಧಾನದ ಆಧಾರಸ್ತಂಭಗಳಲ್ಲೊಂದು. ಇದನ್ನು ಗುರುತಿಸಿ ಸುಪ್ರೀಂ ಕೋರ್ಟ್ ತನ್ನ ನಿಲುವು ತೆಗೆದುಕೊಂಡಿತ್ತು. ಇಷ್ಟೇ ಸಾಕಾಗಿತ್ತು ಕೆಲವರಿಗೆ ಸುಪ್ರೀಂ ಕೋರ್ಟಿನ ವಿರುದ್ಧ ತೊಡೆತಟ್ಟಿ ನಿಲ್ಲಲು. ‘ನ್ಯಾಯಾಂಗ ಸರ್ಕಾರಕ್ಕೆ ಶರಣಾಗಿಬಿಟ್ಟಿದೆ, ತನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ’ ಎಂದೆಲ್ಲ ಟೀಕಿಸಿದರು. ಕೆಲವು ಮಾನ್ಯ ನ್ಯಾಯಮೂರ್ತಿಗಳ ಅಭಿಪ್ರಾಯ, ಆದೇಶಗಳನ್ನು ಅವಹೇಳನ ಮಾಡಿದರು. ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ‘ಓಂಕಾರ್ 108 ಪ್ಲಸ್’ ನೀರು ಮಾರುಕಟ್ಟೆಗೆ

ಸಾಲದು ಎಂಬಂತೆ 1976ರ ಎಮರ್ಜೆನ್ಸಿ ಕಾಲದ ಶಿವಕಾಂತ್ ಶುಕ್ಲಾ ಕೇಸಿನ ಸಾಮ್ಯ ಕೊಟ್ಟು ಇಂದಿನ ಸುಪ್ರೀಂ ಕೋರ್ಟನ್ನು ಅಂದಿಗೆ ಹೋಲಿಸಿ ಲೇವಡಿ ಮಾಡಿದರು. ತುರ್ತು ಪರಿಸ್ಥಿತಿ ಕಾಲದಲ್ಲಿ ನಡೆದ ಭಯಾನಕ ಘಟನೆಗಳನ್ನು ಇಂದಿನ ಪ್ರಕೃತಿಸೃಷ್ಟಿತ ‘ಹೆಲ್ತ್ ಎಮರ್ಜೆನ್ಸಿ’ಗೆ ಹೋಲಿಸುವುದು ದೌರ್ಭಾಗ್ಯಕರ. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ ಕಾನೂನು ಹಾಗೂ ಸಂವಿಧಾನಗಳಲ್ಲಿ ತಿದ್ದುಪಡಿ ಮಾಡಿ ಪ್ರಜೆಗಳ ಮಾನವಾಧಿಕಾರಗಳನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆದಿತ್ತು. ‘ಯಾವೊಬ್ಬ ಪ್ರಜೆಯನ್ನು ಪೊಲೀಸ್ ಬಂಧಿಸಿದರೆ ಅವನಿಗೆ ಜಾಮೀನು ಕೊಟ್ಟು ಬಿಡುಗಡೆ ಮಾಡುವ ಹಕ್ಕು ಕೋರ್ಟಿಗೆ ಕೂಡ ಇಲ್ಲ’ ಎಂದು ಶಿವಕಾಂತ್ ಶುಕ್ಲಾ ಕೇಸಿನಲ್ಲಿ ತೀರ್ಪು ಕೊಡಲಾಗಿತ್ತು. ಸರ್ಕಾರದ ದೌರ್ಜನ್ಯ, ಮಾನವಾಧಿಕಾರಗಳ ವಿನಾಶ ತಾಂಡವವಾಡುತ್ತಿದ್ದ ಕರಾಳ ದಿನಗಳವು. ಆ ತೀರ್ಪು ಈಗ ಸುಪ್ರೀಂ ಕೋರ್ಟಿನಿಂದಲೇ ವ್ಯತಿರಿಕ್ತಗೊಂಡು ರದ್ದಾಗಿದೆ. ಪ್ರಸಕ್ತ ಸಂದರ್ಭದಲ್ಲಿ ವಲಸೆ ಕಾರ್ವಿುಕರ ಸಮಸ್ಯೆಗಳ ಬಗ್ಗೆ ನ್ಯಾಯಾಲಯ ತೆಗೆದುಕೊಂಡ ನಿಲುವಿಗೆ ಕೋರ್ಟನ್ನು ತೀಕ್ಷ್ಣವಾಗಿ ದೂಷಿಸಿರುವುದು ವಿಷಾದನೀಯವಷ್ಟೇ ಅಲ್ಲ, ಅಕ್ಷಮ್ಯ. ಎಲ್ಲ ರೀತಿಯ ಕೇಸುಗಳು ಪ್ರವಾಹೋಪಾದಿಯಲ್ಲಿ ಕೋರ್ಟಿಗೆ ಹರಿದುಬರುತ್ತಿರುವಾಗ ಯಾವ ಪ್ರಕರಣಗಳನ್ನು ಕೈಗೆತ್ತಿಕೊಳ್ಳಬೇಕು ಎನ್ನುವ ವಿವೇಚನೆ ಕೋರ್ಟಿಗಿದೆ. ಅದನ್ನು ಗೌರವಿಸಿ ಸಾಂವಿಧಾನಿಕ ವ್ಯವಸ್ಥೆಯಲ್ಲಿ ವಿಶ್ವಾಸವಿಡುವುದು ಅಗತ್ಯ. ಇದನ್ನೂ ಓದಿ: ಮಿತಿಮೀರುತ್ತಿರುವ ಕರೊನಾ ಆತಂಕದ ನಡುವೆ ಆದಿತ್ಯ ಠಾಕ್ರೆ ಕೊಟ್ರು ಗುಡ್​ನ್ಯೂಸ್​; ಇನ್ನು ಭಯ ಪಡುವ ಅಗತ್ಯವಿಲ್ಲ…

ಇದೆಲ್ಲದರ ತಾತ್ಪರ್ಯ ಇಷ್ಟೆ: ವಾಕ್ ಸ್ವಾತಂತ್ರ್ಯದ ಪ್ರಯೋಗದಲ್ಲಿ ನ್ಯಾಯಾಂಗದ ಬಗ್ಗೆ ನ್ಯಾಯೋಚಿತವಾದ ವ್ಯಾಖ್ಯೆ ಮಾಡುವುದು ಸ್ವಾಗತಾರ್ಹ. 2010ರಲ್ಲಿ ಇತ್ಯರ್ಥವಾದ ಕಪಿಲ್ ಸಿಬಲ್ ಪ್ರಕರಣದಲ್ಲಿಯೂ ಈ ಸ್ವಾತಂತ್ರ್ಯದ ಬಗ್ಗೆ ಸುಪ್ರೀಂ ಕೋರ್ಟ್ ಪ್ರಸ್ತಾಪಿಸಿದೆ. ಯಾವುದೇ ಒಂದು ಪ್ರಕರಣದ ಬಗ್ಗೆ ಅಥವಾ ಯಾವುದೇ ಒಬ್ಬ ನ್ಯಾಯಾಧೀಶರ ಪ್ರಸ್ತಾಪ ಮಾಡದೆ, ಸಾರ್ವಜನಿಕ ಒಳಿತಿಗಾಗಿ ರಚನಾತ್ಮಕ ವಿಮರ್ಶೆ ಅಗತ್ಯ, ಆದರೆ ವಾಕ್ ಸ್ವಾತಂತ್ರ್ಯದ ಎಲ್ಲೆ ಮೀರಿ ನ್ಯಾಯಾಲಯದ ವಿರುದ್ಧ ಹರಿತವಾದ ದಾಳಿ ಮಾಡುವುದರಿಂದ ನಮ್ಮ ವ್ಯವಸ್ಥೆಗೇ ಕಂಟಕ. ನ್ಯಾಯಾಧೀಶರುಗಳು ತಮ್ಮನ್ನು ಸಮರ್ಥಿಸಿಕೊಳ್ಳಲು ಅವರ ತೀರ್ಪ, ಆದೇಶಗಳಲ್ಲದೆ ಬೇರೆ ಮಾರ್ಗವಿಲ್ಲ. ಪ್ರಸಕ್ತ ಪರಿಸ್ಥಿತಿಯಲ್ಲಿ ದೇಶದ ಹಿತದೃಷ್ಟಿಯಿಂದ ಜವಾಬ್ದಾರಿಯುತವಾಗಿ ನಮ್ಮ ಹಕ್ಕುಗಳನ್ನು ಪ್ರಯೋಗಿಸಿ, ನಮ್ಮ ಬಾಧ್ಯತೆಗಳನ್ನು ನಿಭಾಯಿಸೋಣ, ಸೂರ್ಯಂಗೇ ಟಾರ್ಚು ತೋರಿಸುವ ಉದ್ಧಟತನ ಬೇಡ.

(ಲೇಖಕರು ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ವಕೀಲರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net