

ದೇಶ ಅಥವಾ ರಾಜ್ಯವೊಂದರ ಆರ್ಥಿಕ ಬೆಳವಣಿಗೆಯ ಗತಿಯನ್ನು ತೀವ್ರಗೊಳಿಸುವಲ್ಲಿ ಕೈಗಾರಿಕಾಭಿವೃದ್ಧಿಯು ಪ್ರಮುಖ ಪಾತ್ರ ವಹಿಸುತ್ತದೆ. ತನ್ನ ಅಪಾರ ಖನಿಜ ಸಂಪತ್ತು, ಕಚ್ಚಾ ವಸ್ತುಗಳು, ಸೂಕ್ತ ವಾತಾವರಣ, ಕಾರ್ವಿುಕರ ಲಭ್ಯತೆ, ವಿಶಾಲ ಮಾರುಕಟ್ಟೆ ಹಾಗೂ ತಂತ್ರಜ್ಞಾನವನ್ನು ಬಳಸಿ ಬೆಳೆದ ಕರ್ನಾಟಕ ಇಂದು ಕೈಗಾರಿಕಾಭಿವೃದ್ಧಿಯ ಜಾಗತಿಕ ಕೇಂದ್ರವಾಗಿ ಹೆಸರು ಮಾಡಿದೆ. ಕೈಗಾರಿಕೋದ್ಯಮ ನಮ್ಮ ರಾಜ್ಯದ ಜೀವಾಳ. ಇಲ್ಲಿನ ಜೀವನದ ಗುಣಮಟ್ಟ ಸುಧಾರಿಸುವುದರಲ್ಲಿ ಕೈಗಾರಿಕೆ ದೊಡ್ಡ ಕೊಡುಗೆ ನೀಡಿದೆ. ಏಳು ದಶಕಗಳಲ್ಲಿ ದೇಶದ ಕೈಗಾರಿಕೋದ್ಯಮದ ಅಭಿವೃದ್ಧಿಯನ್ನು ಸ್ಥೂಲವಾಗಿ ಮೂರು ಅವಧಿಯಲ್ಲಿ ವರ್ಗೀಕರಿಸಬಹುದಾಗಿದೆ.
ಮೊದಲನೇ ಅವಧಿ: 1950ರ ದಶಕದ ಮಧ್ಯಭಾಗದಲ್ಲಿ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿ ಸಾರ್ವಜನಿಕ ವಲಯದ ಕೈಗಾರಿಕೆಗಳ ಸ್ಥಾಪನೆ ಮತ್ತು ದೊಡ್ಡ ವಿಸ್ತರಣೆ. ಇದನ್ನು ಹಿಂಬಾಲಿಸಿದ ರಾಜ್ಯ ಸರ್ಕಾರಗಳು ಕೂಡ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳನ್ನು ಆರಂಭಿಸಿದವು. ಇದು ದೇಶ ಮತ್ತು ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ಉತ್ತಮ ವೇದಿಕೆ ಸೃಷ್ಟಿಸಿತು.
ಎರಡನೆಯ ಅವಧಿ: 1970-80ರ ದಶಕಗಳ ಆರಂಭದಲ್ಲಿ ರಾಜ್ಯ ಸರ್ಕಾರವು ವಿದ್ಯುತ್ ಕೇಂದ್ರಿತ ಕೈಗಾರಿಕೆಗಳ ಆರಂಭಕ್ಕೆ ಪ್ರೋತ್ಸಾಹ ನೀಡಿತು. ಶರಾವತಿ ವಿದ್ಯುತ್ ಯೋಜನೆ ಪೂರ್ಣಗೊಂಡ ನಂತರ ರಾಜ್ಯವು ಖಾಸಗಿ ವಲಯವನ್ನು ವಿದ್ಯುತ್ ಅವಲಂಬಿತ ಸ್ಟೀಲ್, ಅಲ್ಯೂಮಿನಿಯಂ ಇತ್ಯಾದಿ ಉತ್ಪಾದಿಸುವ ಕೈಗಾರಿಕೆಗಳನ್ನು ಉತ್ತೇಜಿಸಿತು.
ಮೂರನೇಯ ಅವಧಿ: 1990-2000 ದಶಕಗಳಲ್ಲಿ ಬಹುಶಃ ದೇಶಾದ್ಯಂತ ಮತ್ತು ಕರ್ನಾಟಕದಲ್ಲಿ ಕೈಗಾರಿಕೋದ್ಯಮಕ್ಕೆ ಭಾರಿ ಬೆಂಬಲ ದೊರೆಯಿತು. ಈ ಹಂತದಲ್ಲಿ ಉದ್ದಿಮೆ ಎಲ್ಲ ಕ್ಷೇತ್ರಗಳಲ್ಲಿ ಮತ್ತು ವಿಶೇಷವಾಗಿ ಐಟಿ/ಬಿಟಿ/ಐಟಿಇಎಸ್ ಮತ್ತು ನವೋದ್ಯಮ ಕ್ಷೇತ್ರಗಳಲ್ಲಿ ಸುಧಾರಣೆ ಕಂಡಿತು. ಈ ಹಂತದ ವಿಶೇಷತೆಯೆಂದರೆ ಕೈಗಾರಿಕೆಗಳಿಗೆ ಸರ್ಕಾರದ ಕೆಲವೊಂದು ನೀತಿಗಳ ಬೆಂಬಲ ದೊರೆಕಿದ್ದು.
ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಪ್ರಥಮ ಬಾರಿಗೆ 1997ರಲ್ಲಿ ಐ.ಟಿ. ಪಾಲಿಸಿ ಜಾರಿಗೆ ತಂದ ದೇಶದ ಪ್ರಥಮ ರಾಜ್ಯವೆಂಬ ಹೆಗ್ಗಳಿಕೆ ಕರ್ನಾಟಕದ್ದು. ಈ ನೀತಿಯ ಭಾಗವಾಗಿ ಐ.ಟಿ. ಇನ್ಕ್ಯುಬೇಶನ್ ಸೆಂಟರ್ಗಳನ್ನು ಸ್ಪಾಪಿಸಲಾಯಿತು. ಭಾರತ ಸರ್ಕಾರದ ನೆರವಿನೊಂದಿಗೆ ಸಣ್ಣ ಸಾಫ್ಟ್ವೇರ್ ಕಂಪನಿಗಳನ್ನು ಉತ್ತೇಜಿಸಲು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸೆಟ್ಲೈಟ್ ಸೆಂಟರ್ ಸ್ಥಾಪಿಸಲಾಯಿತು. 2000ರಲ್ಲಿ ದೇಶದ ಮೊದಲ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ (ಜಿಮ್ ಅನ್ನು ಬೆಂಗಳೂರಿನಲ್ಲಿ ನಡೆಸಲಾಯಿತು.
1995ರಲ್ಲಿ ಆಗಿನ ಮುಖ್ಯಮಂತ್ರಿ ದೇವೇಗೌಡರೊಂದಿಗೆ ಸ್ವಿಜರ್ಲೆಂಡಿನ ದಾವೋಸ್ನಲ್ಲಿನ ವಿಶ್ವ ಹೂಡಿಕೆದಾರರ ಸಭೆಯಲ್ಲಿ ಭಾಗವಹಿಸಿ ಕರ್ನಾಟಕವನ್ನು ವಿಶ್ವಬಂಡವಾಳ ಹೂಡಿಕೆದಾರರಿಗೆ ಪರಿಚಯಿಸಲಾಯಿತು. ಹಾಗೆಯೇ 2000ನೇ ಇಸ್ವಿಯಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರೊಂದಿಗೆ ಮತ್ತೊಮ್ಮೆ ದಾವೋಸ್ನ ವಿಶ್ವ ಹೂಡಿಕೆದಾರರ ಮೇಳದಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಇದರಿಂದ ವಿದೇಶಿ ಬಂಡವಾಳ ಹೂಡಿಕೆದಾರರು ಕರ್ನಾಟಕವನ್ನು ಆದ್ಯತಾಕ್ಷೇತ್ರವನ್ನಾಗಿ ಆಯ್ದುಕೊಂಡರು.
ಕೃಷಿ ಹಾಗೂ ತಾಂತ್ರಿಕತೆ: ಕೊವಿಡ್ ಮಹಾಸೋಂಕು ಭೀತಿಯ ಹಿನ್ನೆಲೆಯಲ್ಲಿ ಹೇರಲಾಗಿರುವ ಲಾಕ್ಡೌನ್ನಿಂದಾಗಿ ಕೃಷಿ ಚಟುವಟಿಕೆಗಳಿಗೆ ಹೊಡೆತ ಬಿದ್ದಿದೆ. ಕರ್ನಾಟಕದಲ್ಲಿ ಶೇ.35ರಷ್ಟು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಉಳಿದ ಜನರನ್ನು ಕೈಗಾರಿಕೆಗಳಿಗೆ ಸೆಳೆಯಬೇಕಾಗಿದೆ. ಆದರೆ, ರೈತ ಕುಟುಂಬಗಳು ವಾಸಿಸಿರುವ ಹಳ್ಳಿಗಳ ಸಮೀಪದಲ್ಲಿಯೇ ಯಾವುದೇ ಕಾರ್ಖಾನೆಗಳು, ಉದ್ದಿಮೆಗಳು ಇಲ್ಲದಿರುವುದು ಈ ನಿಟ್ಟಿನಲ್ಲಿ ದೊಡ್ಡ ಹಿನ್ನಡೆಯಾಗಿದೆ.
ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿ, ಅದಕ್ಕೆ ಬೇಕಾದ ಕುಶಲ ಕಾರ್ವಿುಕರನ್ನು ಸ್ಥಳೀಯವಾಗಿ ತರಬೇತಿಗೊಳಿಸಿ ಉದ್ದಿಮೆಗಳತ್ತ ಸೆಳೆಯಬೇಕಾಗಿದೆ.
ಬಂಡವಾಳ ಹೂಡುವಿಕೆ: ಕರೊನಾ ಹಾವಳಿ ಮುಗಿದ ನಂತರ ಭಾರಿ ಬಂಡವಾಳವನ್ನು ಕರ್ನಾಟಕಕ್ಕೆ ಸ್ವಾಗತಿಸಲು ಸುಸಮಯ. ಹಲವು ಕಂಪನಿಗಳು ಚೀನಾವನ್ನು ಬಿಟ್ಟು ಹೊರಬರಲು ಯೋಚಿಸುತ್ತಿವೆ. ನಮ್ಮ ಮುಂದಿರುವುದು ಇಂತಹ ಹಸಿರು ಕ್ಷೇತ್ರಗಳ ಬಿಸಿನೆಸ್. ದಕ್ಷಿಣ ಪೂರ್ವ ರಾಷ್ಟ್ರಗಳನ್ನು ಆಕರ್ಷಿಸಲು ಕೂಡ ವಿಪುಲ ಅವಕಾಶಗಳಿವೆ. ಆದರೆ, ನಮ್ಮ ದೇಶದ ಉತ್ಪಾದನಾ ವೆಚ್ಚವು ಚೀನಾದ ಜತೆ ಹೋಲಿಸಿದರೆ ಸ್ಪರ್ಧಾತ್ಮಕವಾಗಬಹುದು. ಚೀನಾದ ಜತೆ ಸ್ಪರ್ಧಿಸುವುದಿದ್ದರೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.
1) ಪ್ರೊಸೆಸ್ಗಳ ನಿರ್ವಹಣೆ 2) ಮಾನವ ಕೌಶಲಗಳ ಅಭಿವೃದ್ಧಿ 3) ವಿತರಣೆ ಹಾಗೂ ಪೂರೈಕೆಗಳ ವ್ಯಾಲ್ಯೂ ಚೈನ್ ಸಿಸ್ಟಮ್ ಹಾಗೂ ರೆಗ್ಯುಲೆಟರಿ ವ್ಯವಸ್ಥೆಯನ್ನು ಉದ್ಯಮ ಸ್ನೇಹಿ ಆಗುವಂತೆ ಮಾಡಿ ಉದ್ಯಮಗಳಿಗೆ ಕಿರುಕುಳ ತಪ್ಪಿಸುವುದು.
ಸರಳೀಕೃತ ಕಾನೂನುಗಳು: ಜಪಾನ್, ಅಮೆರಿಕ, ದಕ್ಷಿಣ ಕೊರಿಯಾ ಮುಂತಾದ ಹಲವು ದೇಶಗಳಿಂದ ಕಂಪನಿಗಳು ಚೀನಾವನ್ನು ತೊರೆದು ಭಾರತಕ್ಕೆ ಬರಲು ನಿರ್ಧರಿಸಬಹುದಾಗಿದ್ದು, ಇವುಗಳಿಗೆ ಭೂಮಿ ಒದಗಿಸುವುದು ಸೇರಿ ಹಲವು ಸವಾಲುಗಳು ಎದುರಾಗಬಹುದು. ಆದ್ದರಿಂದ ಮೊದಲೇ ಭೂಮಿ ಹಾಗೂ ಸರಳೀಕೃತವಾದ ಕಾನೂನಾತ್ಮಕ ಅವಕಾಶಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಬೇಕಿದೆ. ಆದರೆ, ಇಂತಹ ವಾತಾವರಣವನ್ನು ಸೃಷ್ಟಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಇವುಗಳಲ್ಲಿ ಮುಖ್ಯವಾದುದು ‘ಈಸ್ ಆಫ್ ಡುಯಿಂಗ್ ಬಿಸಿನೆಸ್’ (ಸುಲಭವಾಗಿ ವ್ಯವಹಾರ ನಡೆಸುವುದು) ಸೂಚ್ಯಂಕಗಳಲ್ಲಿ ನಮ್ಮ ಗ್ರೇಡಿಂಗ್ ಸುಧಾರಿಸಿಕೊಳ್ಳುವುದು. ಈ ನಿಟ್ಟಿನಲ್ಲಿ ಭಾರತವನ್ನು ಅಗ್ರ 10 ದೇಶಗಳಲ್ಲಿ ಒಂದನ್ನಾಗಿಸಲು ಎಲ್ಲ ರೀತಿಯ ಉತ್ತಮ ಅವಕಾಶಗಳಿವೆ. ಅದು ನಮ್ಮ ಗುರಿಯಾಗಿರಬೇಕು.
ಉದ್ಯಮಸ್ನೇಹಿ ವಾತಾವರಣ: ಕರ್ನಾಟಕ ಹಲವು ವಿಷಯಗಳಲ್ಲಿ ಉದ್ಯಮಿಸ್ನೇಹಿಯಾಗಿದೆ. ಮಾಹಿತಿ-ತಂತ್ರಜ್ಞಾನ ಕ್ಷೇತ್ರದಲ್ಲಂತೂ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. ಇನ್ನಷ್ಟು ಉದ್ಯಮಸ್ನೇಹಿ ವಾತಾವರಣ ಸೃಷ್ಟಿಸುವ ಸಲುವಾಗಿ ಎಲ್ಲ ಕೈಗಾರಿಕಾ ಸಂಬಂಧಿ ಅನುಮೋದನೆಗಳನ್ನು ಸಕಾಲ ಯೋಜನೆಯಡಿಯಲ್ಲಿ ತರಬೇಕು. ಇದರಿಂದ ಉದ್ಯಮ ಕ್ಷೇತ್ರದ ಅಭಿವೃದ್ಧಿ ವೇಗ ಪಡೆಯುತ್ತದೆ. ಹಾಗೆಯೇ ಕಾರ್ವಿುಕರ ಹಿತ ಕಾಯುವುದರ ಜೊತೆಗೆ, ಕಾರ್ವಿುಕ ಕಾನೂನುಗಳು ಹಾಗೂ ದಿವಾಳಿತನದ ಕಾನೂನುಗಳನ್ನು ನವೀಕರಿಸಿ ಹೂಡಿಕೆದಾರರಿಗೆ ಸ್ಥಿರತೆ ಒದಗಿಸಬೇಕು. ಉದ್ದಿಮೆಗಳ ನಿಯಂತ್ರಣ, ತಪಾಸಣೆ, ಪರಿವೀಕ್ಷಣೆ ಮತ್ತು ವಿವಿಧ ಇಲಾಖೆಗಳ ಲೈಸನ್ಸ್ ಶುಲ್ಕ ಇತ್ಯಾದಿ ವಸೂಲಿ ಮಾಡಲು ಏಕ ನಿಯಂತ್ರಣ ಪ್ರಾಧಿಕಾರವನ್ನು ಮಾಡುವುದು ಸೂಕ್ತ.
ನಗರಗಳ ವಿಂಗಡಣೆ: ಭಾರತದ ಸಿಲಿಕಾನ್ ಸಿಟಿಯಾದ ಬೆಂಗಳೂರು ಕಿಕ್ಕಿರಿದು ತುಂಬಿದ್ದು, ಉಸಿರಾಟಕ್ಕೂ ಹರಸಾಹಸ ಪಡಬೇಕಾಗಿದೆ. ಬೆಂಗಳೂರನ್ನು ಡೀ-ಕನ್ಜೆಸ್ಟ್ ಮಾಡಲು ಅದನ್ನು ಹಲವು ಉಪನಗರಗಳನ್ನಾಗಿ ವಿಂಗಡಿಸಬೇಕಿದೆ. ಸಿಲಿಕಾನ್ ಹಬ್ ಅನ್ನು ವಿಸ್ತಾರವಾಗಿಸಿ ಐಟಿ ಕ್ಷೇತ್ರದಲ್ಲಿ ಹೂಡಿಕೆಯನ್ನು ಆಕರ್ಷಿಸಲು ರಾಜ್ಯ ಸರ್ಕಾರ ಪ್ರಯತ್ನ ಮಾಡಬೇಕು. ಬೆಂಗಳೂರಿನ ದಟ್ಟಣೆ ನಿಯಂತ್ರಿಸಿ ಅನೇಕ ಉದ್ಯಮಗಳಿಗೆ ಅವಕಾಶ ಮಾಡಿಕೊಡುವುದರಿಂದ ನಾಗರಿಕ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳಲ್ಲಿ ಅದ್ಭುತ ಬೆಳವಣಿಗೆ ಸಾಧ್ಯವಾಗುತ್ತದೆ.
ವಿಷಾದದ ಸಂಗತಿ ಎಂದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವೊಮ್ಮೆ ಸರ್ಕಾರಗಳ ಪತನದ ನಂತರ ಹಿಂದಿನ ಸರ್ಕಾರ ಮಾಡಿದ ಒಳ್ಳೆಯ ಯೋಜನೆಗಳು ಕೂಡ ಹಿನ್ನಡೆ ಕಾಣುತ್ತವೆ. ಹಾಗಾಗಬಾರದು. ಹೊಸ ಸರ್ಕಾರಗಳು ಹಿಂದಿನ ಸರ್ಕಾರದ ಉತ್ತಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ಪ್ರಸಕ್ತ ಕೊವಿಡ್-19 ಹೊಡೆತಕ್ಕೆ ಸಿಲುಕಿ ಜಗತ್ತಿನ ಆರ್ಥಿಕ ಪರಿಸ್ಥಿತಿಯೇ ಬುಡಮೇಲಾಗಿದೆ. ಹಲವಾರು ಉದ್ಯಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಾಗಿಲು ಮುಚ್ಚುವ ಪರಿಸ್ಥಿತಿ ಬಂದಿದ್ದು, ಕೆಲವು ಉದ್ಯಮಗಳು ನಷ್ಟದ ಹಾದಿ ತುಳಿದಿವೆ. ಕೈಗಾರಿಕೆಗಳನ್ನು ತನ್ನತ್ತ ಸೆಳೆಯಲು ಕರ್ನಾಟಕಕ್ಕೆ ಈಗ ಸುವರ್ಣಾವಕಾಶ ಒದಗಿ ಬಂದಿದೆ. ಕಾರಣ, ರಾಜ್ಯ ಸರ್ಕಾರವು ಸ್ಥಳೀಯವಾಗಿ ಅದರಲ್ಲೂ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ವ್ಯವಸ್ಥಿತ ನಗರೀಕರಣ ಮೂಲಸೌಲಭ್ಯಗಳ ಅಭಿವೃದ್ಧಿ, ತಾಂತ್ರಿಕ ಕೌಶಲವುಳ್ಳ ಕಾರ್ವಿುಕರಿಗೆ ತರಬೇತಿ, ನವೋದ್ಯಮಗಳ ಆರ್ಥಿಕತೆಗೆ ಒತ್ತು ಕೊಡುವುದು, ಮಾನವ ಸಂಪನ್ಮೂಲಗಳ ಸೃಷ್ಟಿ, ಆರೋಗ್ಯ ವಲಯಕ್ಕೆ ಮೂಲಸೌಲಭ್ಯ ಹಾಗೂ ಕೃಷಿ ಉತ್ಪನ್ನಗಳ ಆರ್ಥಿಕ ಗಳಿಕೆಯ ಸಾಮರ್ಥ್ಯವನ್ನು ವೃದ್ಧಿಸುವ ಮೂಲಕ ರಾಜ್ಯದ ಆರ್ಥಿಕತೆ ಸುಧಾರಿಸಬಹುದು, ಜೊತೆಗೆ ಕೈಗಾರಿಕೆಗಳನ್ನು ರಾಜ್ಯಗಳತ್ತ ಸೆಳೆದು ಉದ್ಯಮಸ್ನೇಹಿ ವಾತಾವರಣ ನಿರ್ಮಾಣ ಮಾಡುವುದರ ಮೂಲಕ ಹೊಸ ಉದ್ಯೋಗಗಳನ್ನು ಸೃಷ್ಟಿಸಿ ಅರ್ಥಿಕ ಸ್ಥಿತಿ ಬಲಪಡಿಸಬಹುದಾಗಿದೆ.
(ಲೇಖಕರು ಶಾಸಕರು ಹಾಗೂ ಮಾಜಿ ಸಚಿವರು)