More

    ಅನಿಸಿಕೆ: ಆತ್ಮನಿರ್ಭರ ಭಾರತಕ್ಕಾಗಿ ದೃಢಹೆಜ್ಜೆ

    ಅನಿಸಿಕೆ: ಆತ್ಮನಿರ್ಭರ ಭಾರತಕ್ಕಾಗಿ ದೃಢಹೆಜ್ಜೆ

    ಕಳೆದ 6 ವರ್ಷಗಳಿಂದ ಪ್ರಧಾನಿ ನರೇದ್ರ ಮೋದಿ ಭಾರತವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಸರ್ಕಾರ ಎರಡನೇ ಅವಧಿಯ ಮೊದಲ ವರ್ಷ ಮುಗಿಸಿ, ಎರಡನೇ ವರ್ಷಕ್ಕೆ ಪ್ರವೇಶಿಸಿದೆ. ಕಳೆದೊಂದು ವರ್ಷದಲ್ಲಿ ಮೋದಿಯವರ ಕೆಲಸವನ್ನು ಮೂರು ಭಾಗಗಳಲ್ಲಿ ನೋಡಬಹುದು. ಮೊದಲನೆಯದು, ಐತಿಹಾಸಿಕವಾದ ರಾಷ್ಟ್ರೀಯ ಉಪಕ್ರಮಗಳು. ಎರಡನೆಯದು, ಕೊವಿಡ್-19ರ ವಿರುದ್ಧದ ಹೋರಾಟ ಮತ್ತು ಮೂರನೆಯದಾಗಿ, ಆತ್ಮನಿರ್ಭರ ಭಾರತದ ಮೂಲಕ ದೇಶದ ಭವಿಷ್ಯಕ್ಕೆ ಅಡಿಪಾಯ ಹಾಕುವುದು.

    ಜಮ್ಮು-ಕಾಶ್ಮೀರದಿಂದ 370ನೇ ವಿಧಿ ಹಿಂಪಡೆದಿದ್ದು, ಲಡಾಖ್ ಹಾಗೂ ಜಮ್ಮು- ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ರಚನೆ, ಪೌರತ್ವ ತಿದ್ದುಪಡಿ ಮಸೂದೆಯ ಅಂಗೀಕಾರ, ತ್ರಿವಳಿ ತಲಾಕ್ ನಿಷೇಧ ಮತ್ತು ರಾಮಮಂದಿರ ನಿರ್ವಣಕ್ಕೆ ನೆರವು- ಇವುಗಳನ್ನು ರಾಷ್ಟ್ರೀಯ ಮತ್ತು ಐತಿಹಾಸಿಕ ರಾಜಕೀಯ ಕ್ರಮಗಳಾಗಿ ನೋಡಬಹುದು. ವಿಶೇಷ ಸ್ಥಾನಮಾನ ರದ್ದತಿಯ ನಂತರ ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಿದೆ. 50 ವರ್ಷಗಳಷ್ಟು ಹಳೆಯದಾದ ಬೋಡೋ ಬಿಕ್ಕಟ್ಟನ್ನು ಕೊನೆಗೊಳಿಸಲು ಸಮಗ್ರ ಒಪ್ಪಂದವೊಂದನ್ನು ತರಲಾಯಿತು. ಇದರಿಂದ ಸಮಾಜದ ಎಲ್ಲ ವರ್ಗದವರು ಸಂತೋಷಗೊಂಡಿದ್ದಾರೆ. ಹಾಗೆಯೇ, ತ್ರಿಪುರಾ, ಕೇಂದ್ರ ಸರ್ಕಾರ ಮತ್ತು ಮಿಜೋರಾಂ ನಡುವಿನ ತ್ರಿಪಕ್ಷೀಯ ಒಪ್ಪಂದದೊಂದಿಗೆ ಬ್ರೂ-ರಿಯಾಂಗ್ ನಿರಾಶ್ರಿತರ ಬಿಕ್ಕಟ್ಟನ್ನು ಯಶಸ್ವಿಯಾಗಿ ಬಗೆಹರಿಸಲಾಗಿದೆ. ಇಂಥ ಪ್ರಮುಖ ಸಾಮಾಜಿಕ ಉಪಕ್ರಮಗಳನ್ನು ಸರ್ಕಾರ ಒಂದೇ ವರ್ಷದ ಅವಧಿಯಲ್ಲಿ ತಂದಿದೆ.

    ಕರೊನಾ ವಿರುದ್ಧದ ಹೋರಾಟದಲ್ಲಿ, ದೀರ್ಘ ಮತ್ತು ಕಟ್ಟುನಿಟ್ಟಿನ ಲಾಕ್​ಡೌನ್ ಮಾಡಿದೆವು. ಈಗ 800ಕ್ಕಿಂತ ಹೆಚ್ಚು ಕೊವಿಡ್ ಆಸ್ಪತ್ರೆಗಳನ್ನು ಹೊಂದಿದ್ದೇವೆ. ಪರೀಕ್ಷೆಗೆ 300ಕ್ಕಿಂತ ಹೆಚ್ಚು ಪ್ರಯೋಗಾಲಯಗಳಿವೆ. ವೈಯಕ್ತಿಕ ಸುರಕ್ಷಾ ಸೂಟ್, ಮುಖಗವಸು ಮತ್ತು ಸ್ರಾವ ತೆಗೆಯುವ ಕಡ್ಡಿಗಳನ್ನೂ ಆಮದು ಮಾಡಿಕೊಳ್ಳುತ್ತಿದ್ದೆವು. ನಾವೀಗ ಸ್ವಾವಲಂಬಿಗಳಾಗಿದ್ದೇವೆ ಮತ್ತು ಈಗ ಅದು ‘ಮೇಕ್ ಇನ್ ಇಂಡಿಯಾ’ದ ಭಾಗವಾಗಿದೆ. ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದಿಸಲು 165 ಡಿಸ್ಟಿಲರಿಗಳು ಮತ್ತು 962 ತಯಾರಕರಿಗೆ ಪರವಾನಗಿ ನೀಡಲಾಗಿದೆ, ಪರಿಣಾಮವಾಗಿ 87 ಲಕ್ಷ ಲೀಟರ್ ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದನೆಯಾಯಿತು. ಕೇಂದ್ರ ಸರ್ಕಾರವು ರಾಜ್ಯಗಳಿಗೆ 15 ಸಾವಿರ ಕೋಟಿ ರೂ.ಗಳ ಆರೋಗ್ಯ ಪ್ಯಾಕೇಜ್ ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿಗೆ  11 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ರಾಜ್ಯಗಳು ಸಾಲ ಮಾಡದೆ ಸವಾಲು ಎದುರಿಸಲು ಅನುಕೂಲವಾಗಿದೆ.

    ಮೋದಿಯವರ ಮೊದಲ ಆದ್ಯತೆ ಜನಸಾಮಾನ್ಯ. ಮೊದಲ ಪ್ಯಾಕೇಜ್​ನಲ್ಲಿ, 80 ಕೋಟಿ ಕುಟುಂಬಗಳಿಗೆ 25 ಕೆ.ಜಿ ಅಕ್ಕಿ/ಗೋಧಿ ಮತ್ತು 5 ಕೆಜಿ ದ್ವಿದಳ ಧಾನ್ಯಗಳನ್ನು (ಐದು ತಿಂಗಳು) ಉಚಿತವಾಗಿ ನೀಡುವ ಆಹಾರ ಭದ್ರತೆಯನ್ನು ಕಲ್ಪಿಸಿದರು. ಮಹಿಳೆಯರ 20 ಕೋಟಿ ಜನಧನ ಖಾತೆಗಳಿಗೆ 30 ಸಾವಿರ ಕೋಟಿ ರೂ. ಹಾಕಲಾಯಿತು. 8 ಕೋಟಿ ಕುಟುಂಬಗಳಿಗೆ 2 ಸಾವಿರ ರೂ. ಮೌಲ್ಯದ 3 ಗ್ಯಾಸ್ ಸಿಲಿಂಡರ್ ನೀಡಲಾಯಿತು. 9 ಕೋಟಿ ರೈತರಿಗೆ ಅವರ ಬ್ಯಾಂಕ್ ಖಾತೆಗಳಿಗೆ ತಲಾ 2 ಸಾವಿರ ರೂ. ಜಮೆಯಾಗಿದೆ. 50 ಲಕ್ಷ ಬೀದಿ ವ್ಯಾಪಾರಿಗಳು ತಲಾ 10 ಸಾವಿರ ರೂ. ಪಡೆಯಲಿದ್ದಾರೆ. ಕಟ್ಟಡ ಕಾರ್ವಿುಕರ ನಿಧಿಯಿಂದ ಲಕ್ಷಾಂತರ ಕಟ್ಟಡ ಕಾರ್ವಿುಕರಿಗೆ ಹಣಕಾಸಿನ ನೆರವು ನೀಡಲಾಗಿದೆ. ಇದನ್ನೆಲ್ಲ ಲೆಕ್ಕ ಹಾಕಿದರೆ, ನಮ್ಮ ಸಮಾಜದ ಶೇಕಡ 10 ರಷ್ಟಿರುವ ತಳ ಸಮುದಾಯದ ಕುಟುಂಬವೊಂದು 10 ಸಾವಿರ ರೂ. ಪಡೆದಂತಾಗಿದೆ. ಅಭಿವೃದ್ಧಿಯ ಮೂರನೇ ಭಾಗ, ಆತ್ಮನಿರ್ಭರ ಪ್ಯಾಕೇಜ್ ಮೂಲಕ ಘೊಷಣೆಯಾದ ಪ್ರಮುಖ ಸುಧಾರಣೆಗಳು. ಆತ್ಮನಿರ್ಭರ ಭಾರತದ ಐದು ಸ್ತಂಭಗಳೆಂದರೆ, ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ಜನಸಂಖ್ಯೆ ಮತ್ತು ಬೇಡಿಕೆ. ಇದು 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್. ಈ ಪ್ಯಾಕೇಜ್ ಸಮಾಜದ ಪ್ರತಿ ವರ್ಗದ ಬಗ್ಗೆಯೂ ಕಾಳಜಿ ವಹಿಸುತ್ತದೆ. ಸಣ್ಣ ಮತ್ತು ಮಧ್ಯಮ ಸಾಲಗಳಿಗೆ ಶೇಕಡ 2ರಷ್ಟು ಬಡ್ಡಿ ಸಹಾಯಧನ ನೀಡಲಾಗಿದೆ. 63 ಲಕ್ಷ ಸ್ವ-ಸಹಾಯ ಗುಂಪುಗಳು 20 ಲಕ್ಷ ರೂ.ವರೆಗೆ ಮೇಲಾಧಾರ ಮುಕ್ತ ಸಾಲವನ್ನು ಪಡೆಯಲಿವೆ. ಈ ಸಾಲವನ್ನು ಮೊದಲು 10 ಲಕ್ಷ ರೂ.ಗಳಿಗೆ ಮಿತಿಗೊಳಿಸಲಾಗಿತ್ತು.

    ಇದನ್ನೂ ಓದಿ: ಕರೊನಾ ರೋಗಿಯ ಅಂತ್ಯಕ್ರಿಯೆ ಮಾಡಿದ್ದ ಕುಟುಂಬಕ್ಕೆ ಮರುದಿನವೇ ಆತ ಬದುಕಿದ್ದಾನೆಂಬ ಸುದ್ದಿ ಬಂತು!

    ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವ್ಯಾಖ್ಯಾನವನ್ನು ಹೆಚ್ಚಿನ ಕಂಪನಿಗಳಿಗೆ ಅನುಕೂಲವಾಗುವಂತೆ ಬದಲಾಯಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಎನ್​ಬಿಎಫ್​ಸಿಗಳಿಗೆ 4,45,000 ಕೋಟಿ ರೂ.ಒದಗಿಸಲಾಗಿದೆ. ಕೃಷಿ ಮೂಲಸೌಕರ್ಯ ಕಾರ್ಯಕ್ರಮಗಳಿಗೆ 1 ಲಕ್ಷ ಕೋಟಿ ರೂ., ಮೀನುಗಾರಿಕೆ ಅಭಿವೃದ್ಧಿಗೆ 20 ಸಾವಿರ ಕೋಟಿ ರೂ. ಮತ್ತು ಜಾನುವಾರಗಳ ಕಾಲು ಮತ್ತು ಬಾಯಿ ರೋಗದ ಲಸಿಕೆ ಮತ್ತು ಚಿಕಿತ್ಸೆಗಾಗಿ 15 ಸಾವಿರ ಕೋಟಿ ರೂ. ಒದಗಿಸಲಾಗಿದೆ. 70 ಸಾವಿರ ಕೋಟಿ ರೂ.ಗಳ ಸಾಲಾಧಾರಿತ ಸಹಾಯಧನ ಪ್ರಮುಖವಾದುದು.

    ಈ ಪ್ಯಾಕೇಜ್​ನಲ್ಲಿ ಪ್ರಮುಖ ಸುಧಾರಣೆಗಳನ್ನು ಘೊಷಿಸಲಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಐತಿಹಾಸಿಕ ಉಪಕ್ರಮ. ಶಸ್ತ್ರಾಸ್ತ್ರಗಳನ್ನು ಶೇ.100 ರಷ್ಟು ಆಮದು ಮಾಡಿಕೊಳ್ಳುತ್ತಿದ್ದೆವು, ಆದರೆ ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡಿರಲಿಲ್ಲ. ಮೋದಿ ಈ ಬೂಟಾಟಿಕೆಯಿಂದ ದೇಶವನ್ನು ಹೊರತಂದರು ಮತ್ತು ರಕ್ಷಣಾ ಉತ್ಪಾದನೆಯಲ್ಲಿ ಶೇ.74ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ ಮಾಡಿಕೊಟ್ಟರು. ಭಾರತದಲ್ಲಿ ತಯಾರಾದ ರಕ್ಷಣಾ ಬಿಡಿಭಾಗಗಳು ಮತ್ತು ಶಸ್ತ್ರಾಸ್ತ್ರಗಳ ಆಮದನ್ನು ನಿಷೇಧಿಸಿದರು. ವಲಸೆ ಕಾರ್ವಿುಕರು ಮರಳಿ ತಮ್ಮ ಊರುಗಳನ್ನು ಸೇರಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ಬೇಡಿಕೆ ಹೆಚ್ಚಾಗಲಿರುವುದರಿಂದ, ಅಗತ್ಯ ಇರುವವರಿಗೆ ಉದ್ಯೋಗವನ್ನು ಒದಗಿಸುವ ಎಂಎನ್​ಆರ್​ಇಜಿಎಗೆ 1 ಲಕ್ಷ ಕೋಟಿ ರೂ. ಒದಗಿಸಿರುವುದು ಅತ್ಯುತ್ತಮ ಉಪಕ್ರಮ. ಯುಪಿಎ ಸರ್ಕಾರ ಎಂದಿಗೂ ಎಂಎನ್​ಆರ್​ಇಜಿಎ ಮೇಲಿನ ವೆಚ್ಚವನ್ನು 37 ಸಾವಿರ ಕೋಟಿ ರೂ.ಗಿಂತ ಹೆಚ್ಚಿಗೆ ಮಾಡಿರಲಿಲ್ಲ. ಕಳೆದ ಐದು ವರ್ಷಗಳ ದಾಖಲೆ ಸರಾಸರಿ 55 ಸಾವಿರ ಕೋಟಿ ರೂ.. ಈಗ ಅದನ್ನು ದುಪ್ಪಟ್ಟು ಅಂದರೆ 1 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದ್ದೇವೆ.

    ಮುಖ್ಯವಾಗಿ, ಕೃಷಿಕ್ಷೇತ್ರದ ಐತಿಹಾಸಿಕ ಸುಧಾರಣೆಗಳು. ರೈತರನ್ನು ಎಪಿಎಂಸಿಗಳಿಂದ ಮುಕ್ತಗೊಳಿಸಲಾಗಿದೆ. ಅವರು ತಮ್ಮ ಆಯ್ಕೆಯನುಸಾರ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಯಾವುದೇ ಸಮಯದವರೆಗೆ ಅವರ ಕೃಷಿ ಉತ್ಪನ್ನಗಳನ್ನು ಇಟ್ಟುಕೊಳ್ಳಬಹುದು. ಅಗತ್ಯ ಸರಕು ಕಾಯ್ದೆಯ ಅನೇಕ ರೈತವಿರೋಧಿ ನಿಬಂಧನೆಗಳಿಂದ ಅವರಿಗೆ ಮುಕ್ತಿ ನೀಡಲಾಗಿದೆ. ಈಗ, ರೈತರಿಗೆ ಯಾವುದೇ ನಿರ್ಬಂಧಗಳು ಇಲ್ಲದಿರುವುದರಿಂದ ಮಾರುಕಟ್ಟೆಯಲ್ಲಿ ಕೃಷಿಉತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರೆಯುತ್ತದೆ. ಆತ್ಮನಿರ್ಭರ ಪ್ಯಾಕೇಜ್ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ. ಇದೊಂದು ದೂರದೃಷ್ಟಿಯ, ಐತಿಹಾಸಿಕವಾದ ಮತ್ತು ವಿವೇಕಯುತವಾದ ಪ್ಯಾಕೇಜ್ ಆಗಿದೆ.

    (ಲೇಖಕರು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts