ಚೌಕ ಅಂಕಣ | ಕೃತಕ ಬುದ್ಧಿಮತ್ತೆಯ ವರ್ಲ್ಡ್ ಕಪ್!

AI Tech
Published on
ಕೆಲ ದಿನಗಳ ಹಿಂದಿನಿಂದ ಕೃತಕ ಬುದ್ಧಿಮತ್ತೆಯ ಪಂಟರ್​ಗಳ ಪಡಸಾಲೆಗಳಲ್ಲಿ ಒಂದು ವಿಷಯ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆಗುವಂಥದ್ದೇ ಬಿಡಿ, ಸುಮ್ನೆ ಕೇಳಿ ಆಲ್ ರೈಟ್ ಅಂತ ಮುಂದಕ್ಕೆ ಹೋಗುವಂತಹ ವಿಷಯವಲ್ಲ ಅದು. ಹೇಳಿಕೇಳಿ ಏಳು ಲಕ್ಷ ಅಮೆರಿಕನ್ ಡಾಲರ್​ನ ಬಾಬ್ತು ಅಂದರೆ ಸುಮ್ನೇನಾ? ಇದನ್ನು ಘೊಷಿಸಿದ್ದು ಯಾವುದೇ ಆನ್​ಲೈನ್ ಲಾಟರಿಯವನಲ್ಲ; ಬದಲಿಗೆ ಕೆಂಟುಕಿ ವಿಶ್ವವಿದ್ಯಾಲಯದ ಕೃತಕ ಬುದ್ಧಿಮತ್ತೆ ವಿಭಾಗದ ಹಿರಿಯ ಉಪನ್ಯಾಸಕ ಡಾ ಬ್ರೆಂಟ್ ಸೀಲ್ಸ್ ಮತ್ತವರ ತಂಡ. ಇದೊಂಥರ ಕೃತಕ ಬುದ್ಧಿಮತ್ತೆಯ ವರ್ಲ್ಡ್ ಕಪ್ ಅಂತಾನೂ ಹೇಳಬಹುದಾದ ಕಾಂಪಿಟೇಷನ್ನು.

ವಿಷಯ ಏನಪ್ಪಾ ಅಂದ್ರೆ, ಇತ್ತೀಚೆಗೆ ಮೇಲೆ ಹೇಳಿದ ಅಮೆರಿಕ ಮೂಲದ ತಂಡವೊಂದು ಕೃತಕ ಬುದ್ಧಿಮತ್ತೆಯ ಪರಿಣತರಿಗೆ ಸ್ಪರ್ಧೆಯೊಂದನ್ನು ಘೊಷಿಸಿದೆ. ಕ್ಷ-ಕಿರಣಗಳನ್ನು ಬಳಸಿ ಸ್ಕಾ್ಯನ್ ಮಾಡಿದಂತಹ ಲಿಪಿಗಳನ್ನು ಕಂಪ್ಯೂಟರ್ ಕೋಡಿಂಗ್ ಬಳಸಿ ಅದರ ಮೂಲಾರ್ಥವನ್ನು ಪತ್ತೆ ಹಚ್ಚುವುದು. ಹಲವು ವಿಭಾಗಗಳಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಅತಿ ಹೆಚ್ಚಿನ ಇನಾಮು ಏಳು ಲಕ್ಷ ಅಮೆರಿಕನ್ ಡಾಲರ್ ಮೊದಲು ಒಂದು ಪುಟ ಪೂರ್ತಿ ಓದುವ ತಂಡಕ್ಕೆ ದೊರೆಯಲಿದ್ದು ಇದೂ ಸೇರಿದಂತೆ ಮತ್ತಷ್ಟು ಲಕ್ಷ ಡಾಲರ್​ಗಳು ಕೋಡಿಂಗ್ ಗುರುಗಳಿಗಾಗಿ ಕಾಯುತ್ತಿವೆ. ಇಷ್ಟೆಲ್ಲ ರಕಮ್ಮು ಕೊಡುತ್ತಾರೆಂದ ಮೇಲೆ ಆ ಲಿಪಿ ಕೂಡ ಕಬ್ಬಿಣದ ಕಡಲೆಯೇ ಆಗಿರ್ಬೆಕಲ್ಲ. ಹೌದು, ಆದರೆ ಅದು ಕಬ್ಬಿಣದ ಕಡಲೆಯಲ್ಲ; ಬದಲಾಗಿ ಸಂಪೂರ್ಣ ಇಂಗಾಲದ ಗಟ್ಟಿ ಕರಕಲಾಗಿರುವ ಹಾಳೆಗಳ ಮೇಲಿನ ಅಚ್ಚುಗಳು. ಇಂತಹ ಭಸ್ಮದ ಹಿಂದೆ ಇವರೆಲ್ಲ ಬಿದ್ದಿರುವುದಕ್ಕೂ ಕಾರಣವಿದ್ದು ಅದು ನಮಗೆ ಅಂದಾಜು ಎರಡು ಸಾವಿರ ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತದೆ.

1752ರಲ್ಲಿ ದಕ್ಷಿಣ ಇಟಲಿಯ ಎಕೋಲಾನೊ ಎಂಬ ಸ್ಥಳದಲ್ಲಿ ಬಾವಿ ತೋಡುತ್ತಿದ್ದ ಕಾರ್ವಿುಕರಿಗೆ ಸುಟ್ಟು ಕರಕಲಾದ ಬಾಳೇದಿಂಡಿನಂತಹ ಅವಶೇಷಗಳು ಸಿಕ್ಕಿದವು. ಮೊದಮೊದಲು ಸಿಕ್ಕವುಗಳಲ್ಲಿ ಹೆಚ್ಚಿನವು ಬಳಕೆಯಾದದ್ದು ಅವರುಗಳ ಮನೆಯಲ್ಲಿ ಹಂಡೆ ಕಾಸಲು. ಇದಾದ ಮುಂದಿನ ಕೆಲವು ದಿನಗಳಲ್ಲಿ ಇಂತಹುದೇ ಮತ್ತಷ್ಟು ದಿಂಡುಗಳು ಆ ಭಾಗದಲ್ಲಿ ಸಿಗುವ ಸುದ್ದಿ ಕೇಳಿಬರತೊಡಗಿತು. ಈ ವಿಷಯ ಅಲ್ಲಿನ ರಾಜಮನೆತನದವರೆಗೆ ತಲುಪಿ ಅವರ ಆಜ್ಞೆಯಂತೆ ಆ ಜಾಗದಲ್ಲಿ ಉತ್ಖನನ ನಡೆಯಿಸಲಾಯಿತು. ಆಗ ಅವರು ಕಂಡುಕೊಂಡಿದ್ದು ನೆಲದೊಳಗೆ ಹೂತಿದ್ದ ಹಲವು ಸಾವಿರ ವರ್ಷಗಳ ಹಿಂದಿನ ಮಹಲು. ಮುಂದಿನ ವರ್ಷಗಳಲ್ಲಿ ಇದರ ಮೂಲ ಹುಡುಕಹೊರಟ ಹಲವು ಇತಿಹಾಸಕಾರರ ಸಂಶೋಧನೆಗಳಿಂದ ಮತ್ತಷ್ಟು ಕುತೂಹಲಕಾರಿ ವಿಷಯಗಳು ಬೆಳಕಿಗೆ ಬಂದವು. ಆ ಪ್ರದೇಶ ಮೊದಲು ಹರ್ಕಲೇನಿಯಮ್ ಎಂದು ಕರೆಯಲ್ಪಡುತ್ತಿದ್ದು ಮಣ್ಣಿನ ಕೆಳಗೆ ಕಂಡುಬಂದ ಇಮಾರತ್ತು ರೋಮ್ ಜನರಲ್ ಆಗಿದ್ದ ಜೂಲಿಯಸ್ ಸೀಜರ್​ನ ಮಾವ ಸಿಸೋನಿನಸ್​ನ ಸ್ವಂತ ಬಂಗಲೆಯಾಗಿತ್ತು. ರೋಮನ್ ಇತಿಹಾಸದಲ್ಲೇ ಅತ್ಯಂತ ಭವ್ಯಬಂಗಲೆಗಳಲ್ಲೊಂದು ಎಂದು ಹೇಳಲಾಗುವ ಇದರಲ್ಲಿ ಅಮೂಲ್ಯ ಮತ್ತು ಬೆಲೆಬಾಳುವ ಕಲಾಕೃತಿಗಳ ಜತೆಗೆ ಆ ಸಮಯದ ಅಪೂರ್ವ ವಾಸ್ತುವಿನ್ಯಾಸವನ್ನೂ ಕಾಣಬಹುದಿತ್ತು. ಇದೆಲ್ಲವುದರ ಜತೆಗೆ ಇತ್ತೊಂದು ದೊಡ್ಡ ಪುಸ್ತಕಾಲಯ. ಬಂಗಲೆಯ ನೆಲಮಾಳಿಗೆಯಲ್ಲಿದ್ದ ಆ ಲೈಬ್ರರಿಯಲ್ಲಿ ಆ ಕಾಲದ ಅನೇಕ ಬೆಲೆಕಟ್ಟಲಾಗದ ಗ್ರೀಕ್ ತತ್ವಜ್ಞಾನದ ಪುಸ್ತಕಗಳ ಖಜಾನೆಯೇ ಇತ್ತು.

ಕ್ರಿಶ 79ರಲ್ಲಿ ಹರ್ಕಲೇನಿಯಮ್ಂದ ಅಂದಾಜು ಹತ್ತು ಕಿಲೋಮೀಟರ್ ದೂರದಲ್ಲಿ ಸ್ಥಿತವಾಗಿರುವ ವೆಸುವಿಯಸ್ ಪರ್ವತ ಉಗುಳಿದ ಜ್ವಾಲಾಮುಖಿಯ ಪರಿಣಾಮ ಹರ್ಕಲೇನಿಯಮ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಲಾವಾರಸವು ಆಕ್ರಮಿಸಿಕೊಂಡಿತು. ಅದರಲ್ಲಿ ಅಕ್ಕಪಕ್ಕದ ಎಲ್ಲ ಊರಿಗೆ ಊರುಗಳೇ ದಫನ್ ಆದವು. ಊರಿಗೆ ಬಂದಂತೆ ಪೋರನಿಗೆ ಎನ್ನುವಂತೆ ಸಿಸೋನಿನಸ್​ನ ಬಂಗಲೆಯೂ ಅದರಲ್ಲಿ ಸೇರಿತ್ತು. ಅಲ್ಲಿದ್ದ ಅಪೂರ್ವ ಕಲಾಕೃತಿಗಳೂ ಸೇರಿದಂತೆ ಕೆಳಮಹಡಿಯಲ್ಲಿದ್ದ ಗ್ರಂಥಾಲಯವನ್ನೂ ನುಂಗಿ ನೀರು ಕುಡಿದ ಲಾವಾರಸ ಅಲ್ಲಿದ್ದ ಪುಸ್ತಕಗಳನ್ನೂ ತನ್ನ ಮಡಿಲಿಗೆ ಹಾಕಿಕೊಂಡಿತು. ಸಾಮಾನ್ಯವಾಗಿ ಕಾಗದದ ಮೇಲೆ ಮೂಡಿಸಿದ ಶಾಯಿ ಕಾಲಕ್ರಮೇಣ ಗಾಳಿಯ ಸಂಪರ್ಕದಿಂದ ಅಳಿಸಿ ಹೋಗುವುದರ ಜತೆಗೆ ಕಾಗದವೂ ನರಂ ಆಗುತ್ತದೆ. ಆದರೆ, ಇಡೀ ಪುಸ್ತಕಾಲಯವನ್ನಾವರಿಸಿಕೊಂಡ ಲಾವಾರಸವು ಆ ಕೋಣೆಯನ್ನು ಗಾಳಿರಹಿತವಾಗಿಸಿತು. ಲಾವಾರಸದ ಶಾಖಕ್ಕೆ ಸುಟ್ಟು ಭಸ್ಮವಾಗಿ ಸುರುಳಿಯಾಕಾರವನ್ನು ಪಡೆದು ಅದು ತಣ್ಣಗಾದಂತೆಯೇ ಒಂಥರಾ ಇದ್ದಲಿನಂತಾದ ಆ ಕಾಗದಗಳು ಅದೇ ಪರಿಸ್ಥಿತಿಯಲ್ಲಿ ನೆಲದಡಿ ಭದ್ರವಾಗುಳಿದು ಅಂದಾಜು ಎರಡು ಸಾವಿರ ವರ್ಷಗಳ ನಂತರ ಅಂದು ಆ ಬಾವಿ ತೋಡುತ್ತಿದ್ದ ಕಾರ್ವಿುಕರ ಕೈಗೆ ಸಿಕ್ಕಿದ್ದವು.

1752ರಲ್ಲಿ ಆಕಸ್ಮಾತ್ತಾಗಿ ಬೆಳಕಿಗೆ ಬಂದ ಈ ಎಕೋಲಾನೊ ಯಾನೆ ಹರ್ಕಲೇನಿಯಮ್ ಈ ಲಾವಾರಸದಲ್ಲಿ ಲ್ಯಾಮಿನೇಟ್ ಆದ ಕಾಗದಗಳು ಹರ್ಕಲೇನಿಯಮ್ ಪಾಪೈರಿ ಎಂದೇ ಖ್ಯಾತಿಗೊಳಗಾದವು. ಅಂದ ಹಾಗೆ ಪಾಪೈರಿ ಎಂಬುದು ಆಫ್ರಿಕಾ ಮತ್ತು ಯುರೋಪ್​ನಲ್ಲಿ ಬೆಳೆಯುವ ಒಂದು ಸಸ್ಯವಾಗಿದ್ದು ಇದರಿಂದ ಆ ದಿನಗಳಲ್ಲಿ ಕಾಗದ ತಯಾರಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಲ್ಯಾಟಿನ್ ಭಾಷೆಯಲ್ಲಿ ಕಾಗದಕ್ಕೆ ಪಾಪೈರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಂಗ್ಲಿಷ್​ನ ಪೇಪರ್​ನ ಮೂಲ ಕೂಡ ಇದೇ. ಗ್ರೀಕೋ ರೋಮನ್ ಇತಿಹಾಸದ ಅಪೂರ್ವ ಸಾಹಿತ್ಯದ ಜತೆಗೆ ಆ ಸಂಸ್ಕೃತಿಯ ಅದುವರೆಗೆ ದೊರೆತಿದ್ದ ಅತ್ಯಂತ ದೊಡ್ಡ ಸಂಗ್ರಹ ಎಂಬ ಹೆಗ್ಗಳಿಕೆ ಸಿಕ್ಕುತ್ತಲೇ ಈ ಪುಟ್ಟ ಊರು ಇದ್ದಕ್ಕಿದ್ದಂತೆಯೇ ಖ್ಯಾತಿ ಹೊಂದಿತು. ಸಂಪೂರ್ಣ ಕರಕಲಾಗಿ ಸುರುಳಿಯಾಕಾರದಲ್ಲಿ ಸುತ್ತಿಕೊಂಡಿರುವ ಆ ಕಾಗದಗಳನ್ನು ಬಿಡಿಸಿ ಅದರಲ್ಲಿರುವ ಸಾಹಿತ್ಯವನ್ನು ಸಂರಕ್ಷಿಸಬೇಕೆಂಬ ಕೂಗು ಎಲ್ಲೆಡೆಯಿಂದ ಬಂತು. ಈ ಸವಾಲನ್ನೆದುರಿಸಿ ತಮ್ಮ ಜ್ಞಾನವನ್ನು ಜಗಜ್ಜಾಹೀರು ಮಾಡುವ ಅವಕಾಶ ಕಂಡ ಅನೇಕ ಮೇಧಾವಿಗಳು ಈ ಪಾಪೈರಿಗಳ ಮೇಲೆ ಪ್ರಯೋಗ ನಡೆಸಿದರು. ಅಲ್ಲಿಯವರೆಗೆ ಲಾವಾರಸದ ಸಂಗದಲ್ಲಿ ಭದ್ರವಾಗಿದ್ದ ಹಲವಾರು ಪಾಪದ ಪಾಪೈರಿಗಳು ಈ ಮೇಧಾವಿಗಳ ಸಂಪರ್ಕಕ್ಕೆ ಬಂದು ಸಂಪೂರ್ಣ ಹಾಳಾಗಿ ಹೋದವು. ಇನ್ನೊಂದೆಡೆ ಈ ಭಸ್ಮಕಾಗದಗಳನ್ನು ರಾಜನೀತಿಗೂ ಬಳಸಬಹುದೆಂಬ ದೂರಾಲೋಚನೆಯೂ ಅಲ್ಲಿನ ಅರಸರಿಗೆ ಬಂತು. ಅಲ್ಲಿನ ರಾಜ ಆ ಕಾಗದಗಳಲ್ಲಿ ಕೆಲವನ್ನು ಸಾಮ್ರಾಟ್ ನೆಪೋಲಿಯನ್​ಗೆ ಬಳುವಳಿಯಾಗಿ ನೀಡಿದ. ನೆಪೋಲಿಯನ್ ಈ ಕಾಣಿಕೆಯನ್ನು ತನ್ನ ಗ್ರಂಥಾಲಯದಲ್ಲಿ ಕಾಪಿಟ್ಟ. ಆ ಕಾಗದಗಳು ಇಂದಿಗೂ ಬ್ರಿಟಿಷ್ ಲೈಬ್ರರಿಯಲ್ಲಿ ಭದ್ರವಾಗಿವೆ.

ಪಾಪೈರಿಗಳ ಬ್ರಹ ಗಂಟನ್ನು ಬಿಡಿಸಿ ಅದರಲ್ಲಿರುವ ಮಾಹಿತಿಯನ್ನು ಓದಲು ಹಲವು ರಾಜರು ನಡೆಸಿದ ಪ್ರಯೋಗಗಳಲ್ಲಿ ಎಲ್ಲೋ ಒಂದಿಬ್ಬರು ಆ ಸುರುಳಿಗಳಲ್ಲಿ ಕೆಲವನ್ನು ಸೀದಾ ಮಾಡಿ ಜೋಡಿಸಿಟ್ಟಿದ್ದು ಬಿಟ್ಟರೆ ಅಷ್ಟೇನೂ ಯಶಸ್ಸು ಕಾಣಲಿಲ್ಲ .ಈ ಪ್ರಯೋಗಗಳಲ್ಲಿ ಹೆಚ್ಚಿನವು ನಾಶವಾದ ಹಿನ್ನೆಲೆಯಲ್ಲಿ ಅಳಿದುಳಿದವನ್ನು ನೇಪಲ್ಸ್ನ ರಾಷ್ಟ್ರೀಯ ಲೈಬ್ರರಿಯಲ್ಲಿ ಇಟ್ಟು 1969ರಲ್ಲಿ ಸಂಶೋಧನೆಯನ್ನು ಮುನ್ನಡೆಸಲು ಕೇಂದ್ರವೊಂದನ್ನು ಅಲ್ಲಿನ ಸರ್ಕಾರ ಸ್ಥಾಪಿಸಿತು. ಆದರೆ, ಈ ನಿಟ್ಟಿನಲ್ಲಿ ಪ್ರಾಥಮಿಕ ಯಶಸ್ಸು ದೊರಕಿದ್ದು 2015ರಲ್ಲಿ. ಕೆಂಟುಕಿ ವಿಶ್ವವಿದ್ಯಾಲಯದ ಕೃತಕ ಬುದ್ಧಿಮತ್ತೆ ವಿಭಾಗದ ಹಿರಿಯ ಉಪನ್ಯಾಸಕ ಡಾ ಬ್ರೆಂಟ್ ಸೀಲ್ಸ್ ಮತ್ತವರ ತಂಡವು ಕ್ಷ ಕಿರಣಗಳನ್ನು ಬಳಸಿ ಆ ಪಾಪೈರಿಗಳನ್ನು ಬಿಡಿಸದೇ ಓದುವ ಪ್ರಯತ್ನದಲ್ಲಿ ಕೊಂಚ ಮಟ್ಟಿನ ಯಶ ಕಂಡರು. 2019ರಲ್ಲಿ ಇದರ ಸುಧಾರಿತ ತಂತ್ರಜ್ಞಾನದಲ್ಲಿ ಕಣ ವೇಗೋತ್ಕರ್ಷ ತಂತ್ರಜ್ಞಾನವನ್ನು ಬಳಸಿ ಆ ಸುರುಳಿಗಳ ಮೇಲಿರುವ ಶಾಯಿಯನ್ನು ಗುರುತಿಸಿ ಲಿಪಿಯನ್ನು ಸ್ಕಾ್ಯನ್ ಮಾಡುವ ಮೂಲಕ ದೊಡ್ಡ ಯಶಸ್ಸನ್ನು ಕಂಡಿದ್ದಾರೆ.

ಈಗಿರುವುದು ಎರಡನೆಯ ಮತ್ತು ಬಹುಶಃ ಕೊನೆಯ ಹಂತ. ಬ್ರೆಂಟ್ ಸೀಲ್ಸ್ ಮತ್ತವರ ತಂಡ ಸ್ಕಾ್ಯನ್ ಮಾಡಿರುವ ಡಿಜಿಟಲ್ ಮಾಹಿತಿಯನ್ನು ಕೃತಕ ಬುದ್ಧಿಮತ್ತೆಯನ್ನು ಬಳಸಿ ಆ ಲಿಪಿಗಳನ್ನು ಮೂಲ ಸಾಹಿತ್ಯದ ರೂಪಕ್ಕಿಳಿಸುವುದು. ಶತಮಾನಗಳ ಕಾಲದ ಪ್ರಯತ್ನ ಇದೀಗ ಕ್ಲೈಮ್ಯಾಕ್ಸ್​ಗೆ ತಲುಪಿದೆ. ಈಗ ಸ್ಕಾ್ಯನ್ ಮಾಡಿರುವ ಮಾಹಿತಿಯಲ್ಲಿ ನಡುವಿನ ಕೆಲ ಮಾಹಿತಿಗಳು ಬಿಟ್ಟು ಹೋಗಿರುವ ಹಿನ್ನೆಲೆಯಲ್ಲಿ ಕೆಂಟುಕಿ ವಿಶ್ವವಿದ್ಯಾಲಯದ ತಂಡ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೊರೆ ಹೋಗಲು ನಿರ್ಧರಿಸಿದೆ. ‘ವೆಸುವಿಯಸ್ ಚಾಲೆಂಜ್’ ಎಂಬ ಹೆಸರಿನಲ್ಲಿ ಸ್ಪರ್ಧೆ ಆಯೋಜಿಸಿ ಜಾಗತಿಕವಾಗಿ ಯುವತಂತ್ರಜ್ಞರುಗಳಿಗೆ ಪಂಥಾಹ್ವಾನ ನೀಡಿದೆ. ನಿಮ್ಮಲ್ಲಿ ಆ ಕಿಚ್ಚು ಇದ್ದಲ್ಲಿ ಪ್ರಯತ್ನಿಸಿ, ಏಕೆಂದರೆ ಆಫರ್ ಕ್ಲೋಸಸ್ ಸೂನ್!

(ಲೇಖಕರು ಪರಿಸರ, ವಿಜ್ಞಾನ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net