

| ರುದ್ರಣ್ಣ ಹರ್ತಿಕೋಟೆ
ಬಿದಿರು ಈಗ ಕೇವಲ ಅರಣ್ಯ ಬೆಳೆಯಾಗಿ ಉಳಿದಿಲ್ಲ; ಬಹೂಪಯೋಗಿಯಾಗಿದೆ. ಬಿದಿರು ಬುಟ್ಟಿಗೆ ಮಾತ್ರ ಸೀಮಿತವಾಗಿದ್ದ ಬಿದಿರು ಭವಿಷ್ಯದಲ್ಲಿ ಆಹಾರ, ಟಿಂಬರ್, ಇಂಧನ ಹೀಗೆ ಎಲ್ಲವೂ ಆಗಿ ಬದಲಾಗುತ್ತಿದೆ. ಆದ್ದರಿಂದಲೇ ಇದನ್ನು ಹಸಿರು ಬಂಗಾರ (ಗ್ರೀನ್ ಗೋಲ್ಡ್) ಎಂದು ಕರೆಯಲಾಗುತ್ತದೆ. ಬಡವರ ಟಿಂಬರ್ ಎಂದೂ ಹೇಳಲಾಗುತ್ತದೆ. ರೈತರ ಆದಾಯ ದ್ವಿಗುಣ ಮಾಡಬೇಕೆಂಬ ಉದ್ದೇಶದಿಂದ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸುತ್ತಿವೆ. ಸಮಗ್ರ ಕೃಷಿ ಪದ್ಧತಿ, ನೈಜ ಕೃಷಿ ಪದ್ಧತಿ, ಸಾಮಯವ ಕೃಷಿಯ ಜತೆಗೆ ಅರಣ್ಯ ಕೃಷಿಯನ್ನು ಬೆಂಬಲಿಸಲಾಗುತ್ತಿದೆ. ಅರಣ್ಯ ಕೃಷಿಯ ಮೂಲಕ ಸಮಗ್ರ ಕೃಷಿಗೆ ಬಿದಿರು ಬಹಳ ಉಪಯೋಗಿಯಾಗಿದೆ. ಅರಣ್ಯದ ಹಸಿರು ಪ್ರದೇಶವೂ ಹೆಚ್ಚುತ್ತದೆ, ಜತೆಗೆ ಆದಾಯವೂ ವೃದ್ಧಿಯಾಗುತ್ತದೆ. ಬಿದಿರು ಮೊದಲು ಅರಣ್ಯ ವ್ಯಾಪ್ತಿಯಲ್ಲಿತ್ತು, 2017-18ರಲ್ಲಿ ಕೇಂದ್ರ ಸರ್ಕಾರ ಅದನ್ನು ಕೃಷಿ ವ್ಯಾಪ್ತಿಗೆ ತಂದಿದೆ. ಈ ಮೂಲಕ, ಬಿದಿರು ಬೆಳೆಯಲು, ಕತ್ತರಿಸಿ ಮಾರಾಟ ಮಾಡಲು, ಮೌಲ್ಯವರ್ಧನೆ ಮಾಡಲು ಇದ್ದ ಕಾನೂನಿನ ಅಡ್ಡಿ ತೆರವಾಗಿದೆ. ಆದ್ದರಿಂದ ಬಿದಿರು ಬೇಡಿಕೆಯ ಅರಣ್ಯ ಕೃಷಿ ಬೆಳೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಬಿದಿರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಲ್ಲಿ ರೈಲು ಮಾರ್ಗದ ಎರಡೂ ಬದಿಯಲ್ಲಿ ಬಿದಿರು ಬೆಳೆಸುವ ಯೋಜನೆ ರೂಪಿಸಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಬಿದಿರು ಬೆಳೆ ವ್ಯಾಪಕಗೊಳಿಸಲು ಸರ್ಕಾರ ಆಲೋಚನೆ ನಡೆಸಿದೆ.
ಬಗೆ ಬಗೆ ಬಳಕೆ: ಪೀಠೋಪಕರಣಗಳ ತಯಾರಿ, ಬಟ್ಟೆ ನೂಲು, ಟೀ, ಪೆಟ್ರೋಲ್ ತಯಾರಿ, ಸಕ್ಕರೆ ಕಾರ್ಖಾನೆಗಳಲ್ಲಿ ಕೋ-ಜನರೇಷನ್ಗೆ ಬಗಾಸ್ ಬದಲು ಬಿದಿರನ್ನು ಪೆಲೆಟ್ಗಳಾಗಿ ಪರಿವರ್ತನೆ ಮಾಡಿ ಬಳಕೆ ... ಹೀಗೆ ಬಿದಿರನ್ನು ಅನೇಕ ವಿಧದಲ್ಲಿ ಉಪಯೋಗಿಸಬಹುದು.
ಸವಳು-ಜವಳು ತೆಗೆಯಲು ಬಳಕೆ: ರಾಜ್ಯದ ತುಂಗಭದ್ರಾ, ಕಾವೇರಿ, ಕೃಷ್ಣಾ ವ್ಯಾಪ್ತಿಯಲ್ಲಿ ಲಕ್ಷಾಂತರ ಎಕರೆ ಜಮೀನು ಸವಳು-ಜವಳು ಆಗಿ ಕೃಷಿಗೆ ಯೋಗ್ಯವಲ್ಲ ಎಂಬಂತಾಗಿದೆ. ಸವಳು-ಜವಳು ಇರುವ ಕಡೆಯಲ್ಲಿ ಬಿದಿರು ಬೆಳೆದರೆ ಲವಣಯುಕ್ತ ಮಣ್ಣನ್ನು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತಿಸಲು ಸಹಕಾರಿಯಾಗುತ್ತದೆ. ಬಿದಿರಿನ ಎಲೆಗಳು ಭೂಮಿಯ ಸಾರವನ್ನು ಹೆಚ್ಚಿಸುತ್ತದೆ.
ರೈತರಿಗೆ ಎಷ್ಟು ಲಾಭ?: ರೈತರು ಜಮೀನಿನ ಬದುಗಳಲ್ಲಿ ಬೆಳೆದರೂ ವರ್ಷಕ್ಕೆ 40 ಟನ್ನಷ್ಟು ಬಿದಿರು ಉತ್ಪಾದನೆ ಮಾಡಬಹುದಾಗಿದೆ. ಪ್ರತಿ ಟನ್ಗೆ ಕನಿಷ್ಠ 3 ರಿಂದ 4 ಸಾವಿರ ರೂ.ಗಳು ಸಿಕ್ಕುತ್ತದೆ. ಅದು ಒಂದು ರೀತಿಯಲ್ಲಿ ಶಾಶ್ವತವಾದ ಪರ್ಯಾಯ ಆದಾಯದ ಮೂಲವೂ ಆಗಿರುತ್ತದೆ. ಪೆಲೆಟ್ ಸೇರಿ ವಿವಿಧ ರೀತಿಯಲ್ಲಿ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ಆದಾಯ ಮೂರು ಪಟ್ಟು ಹೆಚ್ಚಾಗುತ್ತದೆ.
ನೂಲು ಆಮದಿಗೆ ಬ್ರೇಕ್: ಅನೇಕ ದೊಡ್ಡ ಕಂಪನಿಗಳು ಈಗಾಗಲೇ ಬಿದಿರು ನೂಲಿನಿಂದ ಬಟ್ಟೆಗಳನ್ನು ತಯಾರಿಸಿವೆ. ಆದರೆ, ಭಾರತ ಬಿದಿರು ನೂಲಿಗೆ ಬೇರೆ ದೇಶಗಳಿಗೆ ಅವಲಂಬನೆಯಾಗಬೇಕಿದೆ. ನೂಲು ತೆಗೆಯುವ ತಂತ್ರಜ್ಞಾನದ ಅಭಿವೃದ್ಧಿಯಾದರೆ ದೇಶದಲ್ಲಿಯೇ ನೂಲು ತಯಾರಿಕೆ ಹೆಚ್ಚಿಸಿ ಆಮದಿಗೆ ಬ್ರೇಕ್ ಹಾಕಬಹುದಾಗಿದೆ.
ಭೀಮ ಬಿದಿರು: ಬಿದಿರು ಸಾಮಾನ್ಯವಾಗಿ ಮೂರು ವರ್ಷಕ್ಕೆ ಫಲ ನೀಡುತ್ತದೆ. ಆದರೆ, ಭೀಮ ಹೆಸರಿನ ಬಿದಿರು ಅತ್ಯಂತ ವೇಗವಾಗಿ ಫಲ ನೀಡುವುದರೊಂದಿಗೆ, ಉಳಿದ ಬಿದಿರಿಗಿಂತ ಹೆಚ್ಚು ಉಪಯೋಗಿಯಾಗಿದೆ. ದಿನಕ್ಕೆ ಒಂದೂವರೆ ಅಡಿ ಎತ್ತರ ಬೆಳೆಯುತ್ತದೆ. ಬೇರೆ ಬಿದಿರು ಹೂ ಬಂದಾಗ ಸತ್ತು ಹೋದರೆ ಭೀಮಾ ಬಿದಿರು ಬಾಡುವುದಿಲ್ಲ. ಬಿದಿರು ಬೆಳೆಗೆ ಹೆಚ್ಚಿನ ನೀರು ಬೇಕಾಗುತ್ತದೆ. ಆದ್ದರಿಂದ ಹನಿ ನೀರಾವರಿ ಪದ್ಧತಿ ಅಳವಡಿಸಲಾಗುತ್ತದೆ.
ಬಿದಿರು ಈಗ ಅರಣ್ಯ ಕೃಷಿಯಾಗಿದೆ. ರಾಜ್ಯದಲ್ಲಿ ಜಲಾನಯನ ಇಲಾಖೆಯ ಮೂಲಕ ಕಿರು ಜಲಾನಯನ ಪ್ರದೇಶಗಳಲ್ಲಿ ಬಿದಿರು ಬೆಳೆಗೆ ಪ್ರೋತ್ಸಾಹ ನೀಡಲಾಗುವುದು. ರೈತರ ಆದಾಯ ದ್ವಿಗುಣಕ್ಕೆ ಇದರಿಂದ ಸಹಕಾರಿಯಾಗಲಿದೆ. | ಬಿ.ಸಿ. ಪಾಟೀಲ್ ಕೃಷಿ ಸಚಿವ ಬಿದಿರು ಬಹೂಪ ಯೋಗಿಯಾಗಿದೆ. ಸವಳು-ಜವಳು ತೆಗೆಯುವುದು, ಇಂಧನವಾಗಿ ಪರಿವರ್ತನೆ, ಬಟ್ಟೆಯ ನೂಲು ಹೀಗೆ ಅನೇಕ ಉಪಯೋಗಗಳಿವೆ. ಸರ್ಕಾರ ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳ ಮಾದರಿಯಲ್ಲಿ ಬಿದಿರು ಮಂಡಳಿ ರಚಿಸಿದರೆ ಅನುಕೂಲವಾಗುತ್ತದೆ. | ಡಾ.ಎ.ಬಿ. ಪಾಟೀಲ್ ಕೃಷಿ ತಜ್ಞರು
ಜಲಾನಯನ ಯೋಜನೆಯಲ್ಲಿ ಬಿದಿರು: ರಾಜ್ಯದಲ್ಲಿ ಈಗ ವಿಶ್ವ ಬ್ಯಾಂಕ್ನ 600 ಕೋಟಿ ರೂ.ಗಳ ನೆರವು ಸೇರಿ ಕೋಟ್ಯಂತರ ರೂ.ಗಳನ್ನು ವೆಚ್ಚ ಮಾಡಿ ಜಲಾನಯನ ಯೋಜನೆ ಜಾರಿಯಾಗುತ್ತಿದೆ. ಈ ಯೋಜನೆಯ ಹಣ ಬಳಸಿಕೊಂಡು ರೈತರ ಜಮೀನಿನ ಬದುಗಳಲ್ಲಿ ಬಿದಿರು ಬೆಳೆಗೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಅರಣ್ಯ ವೃದ್ಧಿಗೂ ಅನುಕೂಲ: ನಿಯಮಗಳ ಪ್ರಕಾರ ಶೇ. 33ರಷ್ಟು ಅರಣ್ಯ ಇರಬೇಕು. ಆದರೆ, ರಾಜ್ಯದಲ್ಲಿ ಶೇ. 21ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೇ. 10 ರಿಂದ 11 ಮಾತ್ರ ಇದೆ. ಬಿದಿರು ಬೆಳೆಸುವುದರಿಂದ ಹಸಿರು ಪ್ರದೇಶವೂ ಹೆಚ್ಚಾಗುತ್ತದೆ. ಅದರ ಮೂಲಕ ಹವಾಮಾನ ವೈಪರೀತ್ಯಗಳನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಲೆಕ್ಕ ಹಾಕಲಾಗಿದೆ.
ಉಪ ಉತ್ಪನ್ನಗಳು: ಬಿದಿರಿನಿಂದ ಅನೇಕ ಉತ್ಪನ್ನಗಳನ್ನು ತಯಾರು ಮಾಡಬಹುದಾಗಿದೆ. ಕೊಳಲು, ಪೆನ್ ಸ್ಟಾ್ಯಂಡ್, ದಿಂಬು, ಶೂ, ಪೇಪರ್, ಚಿಪ್ಸ್, ಟೀ, ಬಿಯರ್, ಉಪು್ಪ, ಸ್ಟೀಕ್, ಹೆಲ್ಮೆಟ್, ಬೈಸಿಕಲ್, ಫೋನ್ ಕೇಸ್, ಅಲಂಕಾರಿಕ ಆಭರಣಗಳು, ಬ್ರಷ್, ಮೌಸ್, ನೆಲಹಾಸು, ಮನೆ ಗೋಡೆಗಳ ಅಲಂಕಾರ, ಕಾರುಗಳ ಸ್ಟೇರಿಂಗ್ ಹೀಗೆ ದೊಡ್ಡ ಪಟ್ಟಿಯೇ ಇದೆ.
ಎಲ್ಲಿವೆ ಮಂಡಳಿ?: ಕೇಂದ್ರ ಸರ್ಕಾರ ಬಿದಿರು ಮಿಷನ್ ಮಾಡಿದೆ. ಉತ್ತರಾಖಂಡ, ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಮಂಡಳಿಗಳಿವೆ. ಸಾಕಷ್ಟು ಉತ್ಪನ್ನಗಳನ್ನು ತಯಾರು ಮಾಡಲಾಗುತ್ತದೆ. ಕೇರಳದಲ್ಲಿ ಅಲ್ಲಿನ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿಯೇ ಎರಡು ಕಾರ್ಖಾ ನೆಗಳು ಇವೆ. ರಾಜ್ಯದಲ್ಲಿಯೂ ಬಿದಿರು ಮಂಡಳಿ ಸ್ಥಾಪನೆಯ ಅಗತ್ಯವಿದೆ.
ಆಸಕ್ತಿ ತೋರಿಸಿದ್ದ ಕತ್ತಿ: ಇತ್ತೀಚಿಗೆ ನಿಧನರಾದ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಬಿದಿರು ಬೆಳೆಸುವ ಬಗ್ಗೆ ತೀವ್ರ ಆಸಕ್ತರಾಗಿದ್ದರು. ಬೆಳಗಾವಿ ಜಿಲ್ಲೆಯಲ್ಲಿ 50 ಸಾವಿರ ಎಕರೆ ಭೂಮಿ ಗುರುತಿಸಿದ್ದರು. ಹೊಸೂರಿಗೆ ಹೋಗಿ ಅಧ್ಯಯನ ಸಹ ಮಾಡಿದ್ದರು.
ಉದ್ಯೋಗಾವಕಾಶ: ಬಿದಿರು ಮಂಡಳಿ ರಚನೆ ಮಾಡಿ ಪ್ರೋತ್ಸಾಹ ನೀಡುವುದರಿಂದ ರೈತರಿಗೆ ಮಾತ್ರವಲ್ಲದೆ, ಉದ್ಯೋಗಾವಕಾಶಗಳು ಸಹ ಸ್ವಲ್ಪ ಪ್ರಮಾಣದಲ್ಲಿ ಸೃಷ್ಟಿಯಾಗುತ್ತವೆ. ಉತ್ಪನ್ನಗಳ ತಯಾರಿಕಾ ಘಟಕಗಳ ಸ್ಥಾಪನೆ, ಮಾರಾಟ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಗಳ ಸೃಷ್ಟಿಯ ಜತೆಗೆ ಆರ್ಥಿಕ ಚಟುವಟಿಕೆಗಳೂ ನಡೆಯುತ್ತವೆ.
ಆಮ್ಲಜನಕ ಬಿಡುಗಡೆ: ಒಂದು ಬಿದಿರಿನ ಗಿಡ ವರ್ಷಕ್ಕೆ 300 ಕೆಜಿ ಆಕ್ಸಿಜನ್ ಬಿಡುಗಡೆ ಮಾಡುತ್ತದೆ. ಇದು ಒಬ್ಬ ಮನುಷ್ಯನಿಗೆ ಬೇಕಾಗುವಷ್ಟು ಆಕ್ಸಿಜನ್ ಪ್ರಮಾಣವಾಗಿದೆ. ಪರಿಸರದಲ್ಲಿರುವ ಕಾರ್ಬನ್ ಡೈಆಕ್ಸೆ ೖಡನ್ನು ಹೀರುತ್ತದೆ. ಆದ್ದರಿಂದ ಬಿದಿರು ಪರಿಸರ ಸಮತೋಲನ ಕಾಪಾಡುವುದಕ್ಕೂ ಅನುಕೂಲವಾಗಿದೆ. ಸಂಘ- ಸಂಸ್ಥೆಗಳು ಬಿದಿರು ನೆಡುವ ಮೂಲಕ ಆಕ್ಸಿಜನ್ ಪಾರ್ಕ್ಗಳಾಗಿ ಸಂರಕ್ಷಣೆ ಮಾಡಬಹುದಾಗಿದೆ.