5963 ಗ್ರಾಮಗಳಲ್ಲಿ; ಕಿರು ಉದ್ಯಮ

Unemployment
Published on

ಶ್ರೀಕಾಂತ ಶೇಷಾದ್ರಿ, ಬೆಂಗಳೂರು

ಕಳೆದ ಕೆಲವು ತಿಂಗಳಿಂದೀಚೆಗೆ ನಿರುದ್ಯೋಗ ಪ್ರಮಾಣ ನಿಧಾನವಾಗಿ ತಗ್ಗುತ್ತಿದ್ದರೂ, ಗಣನೀಯ ಪರಿಣಾಮವಾಗಿ ಇಳಿಕೆಯಾಗಿಲ್ಲ. ನಿರುದ್ಯೋಗ ಸಮಸ್ಯೆಗೆ ಸರ್ಕಾರ ಪರಿಹಾರ ನೀಡುತ್ತಿಲ್ಲ ಎಂಬ ಪ್ರತಿಪಕ್ಷ ಅಬ್ಬರಿಸುತ್ತಿರುವ ನಡುವೆ ಸರ್ಕಾರ, ರಾಜ್ಯದ 5963 ಗ್ರಾಮಗಳಲ್ಲಿ ಉದ್ಯೋಗ ಸೃಜನೆಗೆ ಹೊರಟಿದೆ. ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ 2022 ಜುಲೈ 28ರಂದು ಅಧಿಕೃತವಾಗಿ ಘೋಷಣೆಯಾಗಿತ್ತು. ಉದ್ಯೋಗ ಸೃಷ್ಟಿ ಇದರ ಪ್ರಮುಖ ಉದ್ದೇಶ. ಗ್ರಾಮಕ್ಕೊಂದು ಸ್ವಾಮಿ ವಿವೇಕಾನಂದ ಯುವಕರ ಸಂಘ ರಚಿಸುವ ಪ್ರಕ್ರಿಯೆ ಭರದಿಂದ ಸಾಗಿದೆ. ಭಾಗಶಃ ಜಿಲ್ಲೆಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ.

ಮುಂದೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಕೌಶಲ್ಯ ಅಭಿವೃದ್ಧಿ ಇಲಾಖೆ ಸಮನ್ವಯದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಸರಿಸುಮಾರು ಒಂದು ಲಕ್ಷ ಗ್ರಾಮೀಣ ಉದ್ಯೋಗ ಕನಿಷ್ಠ ಅವಧಿಯಲ್ಲಿ ಸೃಷ್ಟಿಯಾಗುತ್ತದೆ. ಪೂರಕವಾಗಿ ಆರ್ಥಿಕ ಚಟುವಟಿಕೆ ಕೂಡ ನಡೆಯುವುದು. ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಯೂನಿಟ್​ಗಳ ಮೂಲಕ ಗುಂಪಾಗಿ ದುಡಿಮೆಗೆ ಪ್ರೋತ್ಸಾಹ ನೀಡುವ ಕಲ್ಪನೆ ಇದ್ದು, ಇದನ್ನು ಪ್ರೋತ್ಸಾಹಿಸಲು ಸರ್ಕಾರ 500 ಕೋಟಿ ರೂ. ಮೀಸಲಿಟ್ಟಿದೆ. ಯೂನಿಟ್ ಸ್ಥಾಪನೆಗೆ ಕೌಶಲ್ಯಾಭಿವೃದ್ಧಿ ಇಲಾಖೆ ಮಾರ್ಗದರ್ಶನ ಮಾಡಿದರೆ, ಸಾಲ ಕೊಡಲು ಎಸ್​ಬಿಐಯನ್ನು ಆಂಕರ್ ಬ್ಯಾಂಕ್ ಆಗಿ ಸರ್ಕಾರ ನಿಗದಿ ಮಾಡಿದೆ.

ಸ್ವಾಮಿ ವಿವೇಕಾನಂದ ಯುವಕರ ಸಂಘ ರಚನೆಯಾಗುತ್ತಿದ್ದಂತೆ ಆರಂಭಿಕ ಪ್ರಕ್ರಿಯೆಯಾಗಿ ಸರ್ಕಾರವೇ 10 ಸಾವಿರ ರೂ. ನೀಡುತ್ತದೆ. ಸದ್ಯ ನೋಂದಣಿಯಾಗಿರುವ ಸಂಘಗಳ ಬ್ಯಾಂಕ್ ಖಾತೆಗೆ 10 ಸಾವಿರ ರೂ. ಜಮಾ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ಹಂತದಲ್ಲಿ ಅವರು ಯಾವ ಉದ್ದೇಶದ ಕಿರು ಉದ್ಯಮ ಮಾಡುತ್ತಾರೆಂದು ವರದಿ ಸಿದ್ಧಪಡಿಸಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಮಾರ್ಗದರ್ಶನ ಹಾಗೂ ತರಬೇತಿ ಸರ್ಕಾರದ ಕಡೆಯಿಂದ ನೀಡಲಾಗುತ್ತದೆ.

ಯಾವ ಜಿಲ್ಲೆಯಲ್ಲಿ ಎಷ್ಟು?

ಬಾಗಲಕೋಟೆ- 196, ಬಳ್ಳಾರಿ- 100, ಬೆಳಗಾವಿ- 498, ಬೆಂಗಳೂರು- 88, ಬೆಂಗಳೂರು ಗ್ರಾಮಾಂತರ- 101, ಬೀದರ್- 185, ಚಾಮರಾಜನಗರ- 130, ಚಿಕ್ಕಬಳ್ಳಾಪುರ- 157, ಚಿಕ್ಕಮಗಳೂರು- 226, ಚಿತ್ರದುರ್ಗ- 189, ದಕ್ಷಿಣ ಕನ್ನಡ- 223, ದಾವಣಗೆರೆ- 196, ಧಾರವಾಡ- 144, ಗದಗ- 122, ಹಾಸನ- 267, ಹಾವೇರಿ- 223, ಕಲಬುರಗಿ- 261, ಕೊಡಗು- 104, ಕೋಲಾರ- 156, ಕೊಪ್ಪಳ- 153, ಮಂಡ್ಯ- 233, ಮೈಸೂರು- 257, ರಾಯಚೂರು- 178, ರಾಮನಗರ- 126, ಶಿವಮೊಗ್ಗ- 266, ತುಮಕೂರು- 330, ಉಡುಪಿ- 155, ಉತ್ತರ ಕನ್ನಡ- 229, ವಿಜಯನಗರ- 137, ವಿಜಯಪುರ- 211, ಯಾದಗಿರಿ- 122.

ಮುಖ್ಯಾಂಶ
  • 18-29 ವರ್ಷ ವಯಸ್ಸಿನ 10-20 ಸದಸ್ಯರನ್ನು ಹೊಂದಿರುವ ಸ್ವಸಹಾಯ ಗುಂಪು ರಚನೆ.
  • ಉದ್ಯಮ ಶೀಲತೆ ತರಬೇತಿಗೆ ವ್ಯವಸ್ಥೆ, ಪ್ರತಿ ಗುಂಪಿಗೆ ಗರಿಷ್ಠ 1.60 ಲಕ್ಷದವರೆಗೆ ಸಹಾಯಧನ
  • 10 ಲಕ್ಷದವರೆಗೆ ಕಿರು ಉದ್ಯಮ ಸ್ಥಾಪನೆಗಾಗಿ ಯೋಜನಾ ವರದಿ ಬ್ಯಾಂಕ್​ಗೆ ಸಲ್ಲಿಸಿದ ನಂತರ ತಿಂಗಳೊಳಗಾಗಿ ಬ್ಯಾಂಕ್ ಸಾಲ ವಿತರಣೆ
  • ಸಾಲದ ಮರುಪಾವತಿ ಅವಧಿ 5ರಿಂದ 7 ವರ್ಷದವರೆಗೆ ನಿಗದಿ, ಆರು ತಿಂಗಳವರೆಗೆ ಸಾಲ ಮರುಪಾವತಿ ಮಾಡಬೇಕಾಗಿಲ್ಲ.
  • ಡಿಜಿಟಲ್ ವೇದಿಕೆ ಮೂಲಕ ಪ್ರಾರಂಭದ ಹಂತದಿಂದ ಸಾಲ ಮರುಪಾವತಿ ಅವಧಿಯವರೆಗೆ ಪ್ರತಿ ಗುಂಪಿನ ಪ್ರಗತಿ ಟ್ರಾ್ಯಕಿಂಗ್ ಮತ್ತು ಮೇಲ್ವಿಚಾರಣೆ.
ರಾಜಕೀಯ ಲಾಭ

ನಿರುದ್ಯೋಗ ವಿಚಾರವನ್ನು ದೊಡ್ಡದು ಮಾಡಲು ಕಾಂಗ್ರೆಸ್ ಸಮೀಕ್ಷೆ ಮಾಡಿಸುತ್ತಿದೆ. ಕೋವಿಡ್ ಬಳಿಕ ಉದ್ಯೋಗ ಕಳೆದುಕೊಂಡ ವರು, ಶಿಕ್ಷಣ ಮುಗಿಸಿ ಉದ್ಯೋಗ ಅರಸುತ್ತಿರುವವರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ನಿರುದ್ಯೋಗಿಗಳ ಸಮಾವೇಶ ಮಾಡಲೂ ಬಯಸಿದೆ. ಹೀಗಾಗಿ ಪ್ರತಿ ಗ್ರಾಪಂ ಮಟ್ಟದಲ್ಲೂ ಉದ್ಯೋಗ ಸೃಷ್ಟಿ ಕಲ್ಪನೆಯಲ್ಲಿ ಸಂಘ ರಚಿಸಿ ಆರ್ಥಿಕ ಚಟುವಟಿಕೆ ಶುರುವಾದರೆ ರಾಜಕೀಯವಾಗಿಯೂ ಲಾಭ ವಾಗಲಿದೆ, ಆಡಳಿತ ಪಕ್ಷದ ಪರ ಸಕಾರಾತ್ಮಕ ಅಭಿಪ್ರಾಯ ಮೂಡುತ್ತದೆ ಎಂಬ ಅಭಿಪ್ರಾಯ ಬಿಜೆಪಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net