

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಅವರ ಪತ್ನಿ ಮಹತ್ವದ ಅಪ್ಡೇಟ್ವೊಂದನ್ನು ನೀಡಿದ್ದಾರೆ. ಈ ಮೂಲಕ ಅವರು ಸ್ಪಷ್ಟನೆ ನೀಡುವ ಜತೆಗೆ ಮನವಿಯನ್ನೂ ಮಾಡಿಕೊಂಡಿದ್ದಾರೆ.
ಕುಮಾರಸ್ವಾಮಿ ಅವರನ್ನು ಇಂದು ಬೆಳಗಿನ ಜಾವ 3.40ರ ಸುಮಾರಿಗೆ ಜಯನಗರದ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ.ಸತೀಶ್ ಚಂದ್ರ ಮತ್ತು ಅವರ ತಂಡ ಚಿಕಿತ್ಸೆ ಅವರಿಗೆ ಚಿಕಿತ್ಸೆ ನೀಡುತ್ತಿದೆ.
ಕುಮಾರಸ್ವಾಮಿ ಅವರಿಗೆ ಲಘುವಾದ ಸ್ಟ್ರೋಕ್ ಆಗಿದ್ದು, ಮಿದುಳಿನ ಎಡಭಾಗದಲ್ಲಿ ತೊಂದರೆ ಉಂಟಾಗಿ ಶರೀರದ ಬಲಭಾಗಕ್ಕೆ ಸಮಸ್ಯೆ ಆಗಿತ್ತು. ಈಗ ಎಲ್ಲ ಸರಿಯಾಗಿದೆ. ಚಿಕಿತ್ಸೆ ಮುಂದುವರಿದಿದ್ದು, ಚೆನ್ನಾಗಿ ಮಾತು ಕೂಡ ಆಡುತ್ತಿದ್ದಾರೆ. ಹೃದಯ ಬಡಿತ, ರಕ್ತದೊತ್ತಡ ಎಲ್ಲವೂ ಉತ್ತಮವಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಡಾ.ಸತೀಶ್ಚಂದ್ರ ಸಂಜೆ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ.
ಈ ಎಲ್ಲದರ ನಡುವೆ ಮಾಜಿ ಸಿಎಂ ಎಚ್ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಕೂಡ ಹೇಳಿಕೆ ನೀಡಿದ್ದಾರೆ. ಕುಮಾರಸ್ವಾಮಿಯವರು ಆರಾಮಾಗಿದ್ದಾರೆ, ಊಹಾಪೋಹದ ಸುದ್ದಿಗಳನ್ನು ಹರಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ರಾಜ್ಯದ ಜನತೆ ಗಾಬರಿ ಆಗುವುದು ಬೇಡ, ಯಾರೂ ಆತಂಕ ಪಡಬೇಡಿ, ನಾಳೆಯೇ ಡಿಸ್ಚಾರ್ಜ್ ಮಾಡುವುದಾಗಿ ಆಸ್ಪತ್ರೆಯವರು ಹೇಳಿದ್ದರು, ನಾನೇ ಬೇಡ ಎಂದಿರುವುದಾಗಿಯೂ ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ.