ದೃಢಸಂಕಲ್ಪದ ಕಾರ್ಯಯೋಜನೆಗಳ ವರ್ಷ

edt
Published on
ಪ್ರಧಾನಿ ಮೋದಿಯವರ 2ನೇ ಅವಧಿ ದೇಶದ ರೈತ, ಕೃಷಿಕಾರ್ವಿುಕ, ಬಡವರ ಕೇಂದ್ರೀಕೃತ ‘ಸರ್ವಜನ ಹಿತಾಯ ಸರ್ವಜನ ಸುಖಾಯ’ ಕಾರ್ಯಾರಂಭದ ಪರ್ವ. ಮೊದಲ ಸಚಿವಸಂಪುಟ ಸಭೆಯ ನಿರ್ಣಯಗಳೇ ಇದರ ದಿಕ್ಸೂಚಿ. ಬಡವರು, ರೈತರು, ಅಸಂಘಟಿತ ಕಾರ್ವಿುಕರ ಕಲ್ಯಾಣ ಯೋಜನೆಗಳಿಗೆ ಮಂಜೂರಾತಿ ದೊರೆತು, ಸಾಮಾಜಿಕ ಮತ್ತು ಆರ್ಥಿಕ ಸ್ತರದಲ್ಲಿ ದುರ್ಬಲವಾಗಿ ಇರುವವರ ಕಲ್ಯಾಣದ ಗುರಿಯನ್ನು ಸ್ಪಷ್ಟವಾಗಿಸಿತು.

‘ಪಿಎಂ ಕಿಸಾನ್ ನಿಧಿ’ಯಡಿ ಎಲ್ಲ ರೈತರಿಗೆ ವರ್ಷಕ್ಕೆ  6,000 ರೂ. ನೀಡುವ ನಿರ್ಣಯ. ಸಣ್ಣ, ಮಧ್ಯಮ ರೈತರಿಗೆ ಪಿಂಚಣಿ ಮತ್ತು ಸಣ್ಣ ವರ್ತಕರಿಗೆ ಪಿಂಚಣಿ ನೀಡುವ ಯೋಜನೆಗಳ ಜಾರಿ. 18.5 ಕೋಟಿ ರೈತರು ಮತ್ತು 5 ಕೋಟಿ ಸಣ್ಣ ವರ್ತಕರು ಇದರ ಫಲಾನುಭವಿಗಳಾಗಿದ್ದಾರೆ. ಪಿಎಂ ಕಿಸಾನ್ ಯೋಜನೆಯಡಿ 8 ಕೋಟಿ ರೈತರ ಖಾತೆಗೆ  43 ಸಾವಿರ ಕೋಟಿ ರೂ. ಸಂದಾಯವಾಗಿದೆ.

ಮುಸ್ಲಿಂ ಮಹಿಳೆಯರ ಪಾಲಿಗೆ ಅಣಕವಾಗಿದ್ದ ‘ತ್ರಿವಳಿ ತಲಾಕ್’ ರದ್ದು, ಜಮ್ಮು-ಕಾಶ್ಮೀರದ 370ನೇ ವಿಧಿ, 35ಎ ಗಳ ರದ್ದತಿಯಿಂದ ದೇಶದ ಸಂವಿಧಾನದ ಎಲ್ಲ ನಿಬಂಧನೆಗಳೂ ಈಗ ಜಮ್ಮು-ಕಾಶ್ಮೀರಕ್ಕೂ ಅನ್ವಯ. ದೇಶದಲ್ಲಿ ಈ ಮೊದಲು ಬಹುತೇಕ ರಾಜ್ಯಗಳಲ್ಲಿ ಭಯೋತ್ಪಾದಕ ಕೃತ್ಯಗಳ ಹಾವಳಿ ವಿಪರೀತವಾಗಿತ್ತು. ರಾಷ್ಟ್ರೀಯ ಸುರಕ್ಷೆ ವಿಷಯದಲ್ಲಿ ಮೋದಿ ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ಒಮ್ಮೆ ನೆನಪಿಸಿಕೊಳ್ಳಿ. ಯುಪಿಎ ಕಾಲದಲ್ಲಿ ಮುಂಬೈ, ದೆಹಲಿ, ಪುಣೆ, ಹೈದರಾಬಾದ್, ಬೆಂಗಳೂರು, ವಾರಾಣಸಿ, ಜೈಪುರ ಮೊದಲಾದ ಕಡೆಗಳಲ್ಲಿ ಭಯೋತ್ಪಾದಕ ಸಂಘಟನೆಗಳಿಂದ ಸ್ಪೋಟ, ವಿಧ್ವಂಸಕ ಕೃತ್ಯಗಳು ನಡೆದು ಜನರು ಆತಂಕಿತರಾಗಿದ್ದರು. ಈಗ ಭಯೋತ್ಪಾದನೆ ವಿರುದ್ಧ ಶೂನ್ಯಸಹಿಷ್ಣುತೆ. ಇದಕ್ಕಾಗಿ ‘ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾನೂನು’ ಜಾರಿ, ಪರಿಣಾಮವಾಗಿ ಈವರೆಗೆ ಸಂಘಟನೆಗಳನ್ನು ಮಾತ್ರ ನಿಷೇಧ ಮಾಡುವ ಕಾನೂನು ಅವಕಾಶವನ್ನು ಇದೀಗ ವ್ಯಕ್ತಿಗಳಿಗೂ ವಿಸ್ತರಿಸಲಾಗಿದೆ. ಬೇರೆ ಬೇರೆ ಹೆಸರಿನ ಸಂಘಟನೆಗಳಡಿ ಕಾರ್ಯನಿರ್ವಹಿಸುತ್ತಿದ್ದ ಭಯೋತ್ಪಾದಕರನ್ನು ಸದೆಬಡಿಯಲು ಈ ಕಾನೂನು ಪ್ರಬಲ ಅಸ್ತ್ರವಾಗಿದೆ.

ಮಹಿಳೆಯರ ಸುರಕ್ಷೆ: ಮಹಿಳೆಯರ ಕಲ್ಯಾಣಕ್ಕಾಗಿ ಮೋದಿ ಸರ್ಕಾರ ಹಲವು ಸುಧಾರಣೆಗಳನ್ನು ತಂದಿದೆ. ರಾತ್ರಿ ಪಾಳಿಯಲ್ಲಿ ಮಹಿಳೆಯರು ಕೆಲಸ ಮಾಡಲು ಅವಕಾಶ, ವಾಯುಸೇನೆಯಲ್ಲಿ ಪೈಲೆಟ್ (ಫೈಟರ್) ವಿಭಾಗದಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಅವಕಾಶ, ಸೈನಿಕ ಶಾಲೆಗಳಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿನಿಯರಿಗೆ ಪ್ರವೇಶ. ಅತ್ಯಾಚಾರಿಗಳಿಗೆ ಮರಣದಂಡನೆ ಪ್ರಮುಖವಾದವು.

ನೆರೆರಾಷ್ಟ್ರಗಳಲ್ಲಿ (ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ) ಅಲ್ಪಸಂಖ್ಯಾತರಾಗಿ ಧಾರ್ವಿುಕ ಕಿರುಕುಳಕ್ಕೊಳಗಾದ ಹಿಂದುಗಳು, ಕ್ರೖೆಸ್ತರು, ಪಾರ್ಸಿಗಳು, ಸಿಖ್​ರು, ಜೈನರು, ಬೌದ್ಧರಿಗೆ ಈಗ ಭಾರತದ ನಾಗರಿಕತ್ವ ಪಡೆದುಕೊಳ್ಳುವ ಅವಕಾಶ. ನಾಗರಿಕತ್ವ ಕಾಯ್ದೆ ತಿದ್ದುಪಡಿಯಿಂದಾಗಿ ಇದು ಸಾಧ್ಯವಾಗಿದೆ.

ಯೋಜನೆಗಳ ಜಾರಿ: ನಾಯಕತ್ವ ಯಾವಾಗ ದೃಢ ಹಾಗೂ ಸ್ಪಷ್ಟವಾಗಿ ಇರುತ್ತದೋ ಅಲ್ಲಿ ಪರಿಣಾಮಕಾರಿಯಾದ ಕೆಲಸಗಳಾಗುತ್ತವೆ. ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆಯಿಂದ 1 ಕೋಟಿ ಫಲಾನುಭವಿಗಳು ಲಾಭಾನ್ವಿತರಾಗಿದ್ದಾರೆ. ‘ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ’ ಅಡಿ 20 ಸಾವಿರ ಆಸ್ಪತ್ರೆಗಳು ದ್ವಿತೀಯ ಮತ್ತು ತೃತಿಯ ಹಂತದ ನಗರಗಳ ಬಡವರಿಗೆ ಆರೋಗ್ಯ ರಕ್ಷಣೆಯ ಕವಚ ನೀಡಲಿವೆ. ದೇಶದ ಮೂಲಭೂತ ಸೌಕರ್ಯಗಳಿಗಾಗಿ 5 ವರ್ಷಗಳಲ್ಲಿ -ಠಿ; 100 ಲಕ್ಷ ಕೋಟಿ ಹೂಡಿಕೆ, ರೈಲ್ವೆ ಮೂಲಭೂತ ಸೌಕರ್ಯಗಳಿಗಾಗಿ -ಠಿ; 50 ಲಕ್ಷ ಕೋಟಿ ಹೂಡಿಕೆಯ ಮೂಲಕ ಉತ್ತೇಜನ ನೀಡಲಾಗಿದೆ.

1.25 ಲಕ್ಷ ಕಿ.ಮೀ. ರಸ್ತೆ ಅಭಿವೃದ್ಧಿ ಮೂಲಕ ಗ್ರಾಮೀಣ ಸಂಪರ್ಕ ಜಾಲಕ್ಕೆ ಬಲ ತುಂಬಲಾಗಿದೆ. ಶಾರದಾ ಚಿಟ್​ಫಂಡ್ ಹಗರಣ, ಐಎಂಎ ಹಗರಣಗಳನ್ನು ನೋಡಿದ್ದೇವೆ. ಇಂಥ ಮೋಸಕ್ಕೆ ಕೊನೆ ಹಾಡಲು ಅಕ್ರಮ ಡಿಪಾಸಿಟ್ ಸ್ಕೀಂಗಳ ಮೂಲಕ ಜನರಿಗಾಗುತ್ತಿದ್ದ ವಂಚನೆ ತಡೆಗೆ ‘ಅನಿಯಂತ್ರಿತ ಡಿಪಾಜಿಟ್ ಯೋಜನೆ ನಿಷೇಧ ಕಾಯ್ದೆ’ ಜಾರಿಗೊಳಿಸಲಾಗಿದೆ.

ವಿಶ್ವಾದಾದ್ಯಂತ ಭಾರತದ ಪ್ರತಿಷ್ಠೆ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಟ್ಟದ ವಿವಿಧ ಶ್ರೇಣಿಗಳ ರ್ಯಾಂಕಿಂಗ್​ನಲ್ಲಿ ಭಾರತದ ಸೂಚ್ಯಂಕದಲ್ಲಿ ಬೃಹತ್ ಸುಧಾರಣೆಯನ್ನು ಕಾಣುತ್ತಿದ್ದೇವೆ. ಮಾಜಿ ಪ್ರಧಾನಿ ರಾಜೀವ ಗಾಂಧಿ ಹೇಳಿದ್ದರು, ‘ಕೇಂದ್ರ ಸರ್ಕಾರ 1 ರೂ. ಬಿಡುಗಡೆ ಮಾಡಿದರೆ ಹಳ್ಳಿಗಳಿಗೆ ತಲುಪುವುದು ಕೇವಲ 15 ಪೈಸೆ’. ಎಷ್ಟೊಂದು ಸೋರಿಕೆ! ಈ ದುಸ್ಥಿತಿ ತೊಡೆದು ಹಾಕಲು ನೇರ ವರ್ಗಾವಣೆ ಜಾರಿ (ಡಿಬಿಟಿ). ಇದರಿಂದ ಮಧ್ಯವರ್ತಿ/ದಲ್ಲಾಳಿಗಳ ಪಾಲು ತಪ್ಪಿದೆ. ವಿವಿಧ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ಹಣಕಾಸು ವರ್ಗಾವಣೆ ಸಾಧ್ಯವಾಗಿದೆ. 9 ಲಕ್ಷ ಕೋಟಿ ರೂಪಾಯಿಗಳ ನೆರವು ಫಲಾನುಭವಿಗಳಿಗೆ ಸಂದಿದೆ. ಸೋರಿಹೋಗುತ್ತಿದ್ದ  1.7 ಲಕ್ಷ ಕೋಟಿ ರೂ. ಉಳಿತಾಯವಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಬಜೆಟ್​ನಲ್ಲಿ -ಠಿ; 1,26,887 ಕೋಟಿ ನಿಗದಿ ಮಾಡಲಾಗಿದೆ. ಮೊದಲ ಬಾರಿಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆೆಗಾಗಿ ಪ್ರತ್ಯೇಕ ಸಚಿವಾಲಯ, ಮತ್ಸ್ಯ ಸಂಪದ ಯೋಜನೆಗೆ ಒತ್ತು. ವರ್ಷಗಳಿಂದ ನಿರೀಕ್ಷಿಸುತ್ತಿದ್ದ ಮಹಾದಾಯಿ ಐತೀರ್ಪ ಅಧಿಸೂಚನೆ ಹೊರಡಿಸಲಾಗಿದೆ.

ಸಾಕಾರಗೊಂಡ ಉಡಾನ್: ಜನಸಾಮಾನ್ಯರ ವಿಮಾನಯಾನದ ಕನಸು ನನಸಾಗಿದೆ. ‘ಉಡಾನ್’ ಯೋಜನೆಯಡಿ ಕರ್ನಾಟಕದಲ್ಲಿನ ಹುಬ್ಬಳ್ಳಿ, ಮೈಸೂರು, ಬೆಳಗಾವಿ, ಮಂಗಳೂರು, ತೋರಣಗಲ್, ಕಲಬುರ್ಗಿ ವಿಮಾನ ನಿಲ್ದಾಣಗಳಿಂದ ದೇಶದ ವಿವಿಧ ಪ್ರಮುಖ ನಗರಗಳಿಗೆ ಸಂಪರ್ಕ ಪ್ರಾರಂಭವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮತ್ತು ಹತ್ತಿರದ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು  18,600 ಕೋಟಿ ರೂ. ವೆಚ್ಚದ ಸಬರ್ಬನ್ ರೈಲು ಯೋಜನೆಯನ್ನು ಮುಂಗಡಪತ್ರದಲ್ಲಿ ಘೊಷಿಸ ಲಾಗಿದೆ. ಇದರಿಂದ, ಬೆಂಗಳೂರು ಮಹಾನಗರದ ಸಂಚಾರದಟ್ಟಣೆಯನ್ನು ನಿವಾರಿಸುವ ಬಹುದಿನಗಳ ಯೋಜನೆ ಸಾಕಾರವಾಗಲಿದೆ.

ಬಹು ವರ್ಷಗಳ ಬೇಡಿಕೆಯಾಗಿದ್ದ ಪರಿವಾರ, ತಳವಾರ ಮತ್ತು ಸಿದ್ದಿ ಸಮುದಾಯಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಸಮುದಾಯಗಳಿಗೆ ಸೇರಿದ ಲಕ್ಷಾಂತರ ಜನರಿಗೆ ಇದು ವರದಾನವಾಗಲಿದೆ. ಜಗತ್ತಿನಲ್ಲಿ ಹೆಚ್ಚಿನ ಕಲ್ಲಿದ್ದಲು ನಿಕ್ಷೇಪ ಹೊಂದಿರುವ 5ನೇ ರಾಷ್ಟ್ರ ಭಾರತ. ನಮ್ಮ ಕಲ್ಲಿದ್ದಲು ಸಂಪತ್ತನ್ನು ನಾವು ಪೂರ್ಣವಾಗಿ ಬಳಸಿಲ್ಲ, ಇನ್ನೂ 100 ವರ್ಷಗಳಿಗಾಗುವಷ್ಟು ಕಲ್ಲಿದ್ದಲು ಸಂಪತ್ತು ನಮ್ಮಲ್ಲಿದೆ. ಇಷ್ಟಾದರೂ ಕಲ್ಲಿದ್ದಲಿನ ಆಮದು ನಿಂತಿಲ್ಲ. ಮೋದಿ ನೇತೃತ್ವದ ಸರ್ಕಾರ ದೇಶದ ಇಂಧನ ಭದ್ರತೆ, ವಿದ್ಯುತ್ ಸುರಕ್ಷತೆಗೆ ದಿಟ್ಟ ಕ್ರಮ ಕೈಗೊಂಡಿದೆ. ಮುಂಬರುವ 5 ವರ್ಷಗಳಲ್ಲಿ ಕಲ್ಲಿದ್ದಲಿನ ಆಮದನ್ನು ಸಂಪೂರ್ಣ ನಿಲ್ಲಸಲಾಗುವುದು. ಆ ಮೂಲಕ ವಿದೇಶಿ ವಿನಿಮಯದಡಿ ಬೃಹತ್ ಸಂಪನ್ಮೂಲವನ್ನು ಉಳಿತಾಯ ಮಾಡಲಾಗುವುದು.

ಕರೊನಾ ವಿಶ್ವವನ್ನು ಕಂಗಾಲಾಗಿಸಿದೆ. ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ಹೈರಾಣಾಗಿವೆ. ಮೋದಿಯವರ ನೇತೃತ್ವ ಭಾರತದ ಹೋರಾಟಕ್ಕೆ ಬಲ ನೀಡಿದೆ. ಈ ಸಂಕಷ್ಟದ ಸಂದರ್ಭದಲ್ಲಿ ದೇಶವನ್ನು ಸಜ್ಜುಗೊಳಿಸಿ ಎಲ್ಲರನ್ನೂ ಜೊತೆಗೂಡಿಸಿ ಮುನ್ನಡೆಸಿರುವುದು ಅವರ ದೃಢನಿರ್ಧಾರ, ಜನಪರ ಸಂಕಲ್ಪದ ದ್ಯೋತಕವಾಗಿದೆ.

ಪ್ರಧಾನಿ ಮೋದಿ ನೇತೃತ್ವದ ಎರಡನೇ ಅವಧಿಯ ಮೊದಲ ವರ್ಷದಲ್ಲಿ ಭಾರತ ವಿವಿಧ ರಂಗಗಳಲ್ಲಿ ವಿಶ್ವದ ಗಮನ ಸೆಳೆದದ್ದು ಮಾತ್ರವಲ್ಲ, ಶಕ್ತಿಯುತವಾಗಿ ಹೊರಹೊಮ್ಮುತ್ತಿರುವ ರಾಷ್ಟ್ರದ ಭೂಮಿಕೆ ನಮಗೆಲ್ಲ ಹೆಮ್ಮೆ. ಇದೇ ಉತ್ಸಾಹ, ಆಶಾವಾದದೊಂದಿಗೆ ಆತ್ಮನಿರ್ಭರ ಭಾರತ ನಿರ್ವಣದತ್ತ ನಾವೆಲ್ಲರೂ ಸಾಗೋಣ.

(ಲೇಖಕರು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರು)

ವಾಣಿಜ್ಯ ಗಣಿಗಾರಿಕೆ

ದೇಶದ ಇಂಧನ ಸುನಿಶ್ಚತತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕಲ್ಲಿದ್ದಲು ಮತ್ತು ಗಣಿ ಖಾತೆಗಳಲ್ಲಿ ಮಹತ್ವದ ಸುಧಾರಣೆಯನ್ನು ತರಲಾಗಿದೆ. ದೇಶದ ವಿದ್ಯುತ್ ಬೇಡಿಕೆಯ ಶೇಕಡ 70ರಷ್ಟು ಪೂರೈಕೆ ಕಲ್ಲಿದ್ದಲು ಆಧಾರಿತ ಥರ್ಮಲ್ ವಿದ್ಯುತ್​ನಿಂದ ಆಗುತ್ತಿದೆ. ಈ ಬಾರಿ ಕರೊನಾ ಸವಾಲಿನ ಮಧ್ಯೆಯೂ ದಾಖಲೆಯ ಕಲ್ಲಿದ್ದಲು ಉತ್ಪಾದನೆ ಮಾಡಲಾಗಿದೆ. ದೇಶದ ಖನಿಜ ಸಂಪತ್ತಿನ ಸೂಕ್ತ ಬಳಕೆಯ ಮೂಲಕ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕಾಗಿ ವಾಣಿಜ್ಯ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಕಲ್ಲಿದ್ದಲು ಮತ್ತು ಗಣಿ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ತರಲಾಗುತ್ತಿರುವ ಸುಧಾರಣೆಗಳು ‘ನ ಭೂತೋ ನ ಭವಿಷ್ಯತಿ’ ಎಂದರೆ ಉತ್ಪ್ರೇಕ್ಷೆ ಆಗಲಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net