

ಮಡಿಕೇರಿ: ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಸೂಚನೆಯನ್ವಯ ಮಡಿಕೇರಿಯ 100 ಖಾಸಗಿ ಬಸ್ ಚಾಲಕರು ಹಾಗೂ ಮಡಿಕೇರಿ ತಾಲೂಕು ವ್ಯಾಪ್ತಿಯ 77 ಅರ್ಚಕರಿಗೆ ಕಿಟ್ ವಿತರಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕಿಟ್ ವಿತರಿಸಲಾಯಿತು. ಲಾಕ್ಡೌನ್ ಹಿನ್ನೆಲೆಯಲ್ಲಿ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್ಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಖಾಸಗಿ ಬಸ್ ಚಾಲಕರು, ನಿರ್ವಾಹಕರಿಗೆ ಕಿಟ್ ನೀಡಿದ್ದು, ತಮಗೂ ನೀಡುವಂತೆ ಮಡಿಕೇರಿಯ ಬಸ್ ಕಾರ್ಮಿಕರು ಶಾಸಕರಲ್ಲಿ ಮನವಿ ಮಾಡಿದ್ದರು.
ದೇವಾಲಯಗಳಿಗೆ ಭಕ್ತರು ಬರಲು ಅವಕಾಶ ಇಲ್ಲದ್ದರಿಂದ ಅರ್ಚಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರ್ಚಕರ ಕೋರಿಕೆಯನ್ವಯ ಅರ್ಚಕರಿಗೂ ಕಿಟ್ ವಿತರಿಸಲಾಯಿತು.
ಮಡಿಕೇರಿ ತಹಸೀಲ್ದಾರ್ ಪಿ.ಎಸ್.ಮಹೇಶ್, ಮಡಿಕೇರಿ ತಾಪಂ ಇಒ ಲಕ್ಷ್ಮೀ ಚಂದ್ರಶೇಖರ್, ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯರಾದ ಕಾಂಗೀರ ಅಶ್ವಿನ್ ಸತೀಶ್, ಬೆಪ್ಪುರ ಮೇದಪ್ಪ ಮತ್ತಿತರರು ಇದ್ದರು.