ನಟಿ ಶ್ರೀಲೀಲಾಗಾಗಿ ಸಚಿವರ ಭಾಷಣವನ್ನೇ ನಿಲ್ಲಿಸಿದ ನಿರೂಪಕಿ! ಮುಂದೇನಾಯ್ತು? ಇಲ್ಲಿದೆ ವೈರಲ್​ ವಿಡಿಯೋ... Sreeleela

Sreeleela
Published on

Sreeleela : ತೆಲಂಗಾಣದ ಐಟಿ ಮತ್ತು ಕೈಗಾರಿಕಾ ಸಚಿವ ದುಡ್ಡಿಲ್ಲಾ ಶ್ರೀಧರ್ ಬಾಬು ಅವರಿಗೆ ಕಹಿ ಅನುಭವವಾಗಿದೆ. ಸೀತಾ (ಅವಳು ಯಾವಾಗಲೂ ನಾಯಕಿ - ಸೀತಾ) ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದಾಗ, ಕಾರ್ಯಕ್ರಮದ ನಿರೂಪಕಿ ಝಾನ್ಸಿ ಸಚಿವರ ಭಾಷಣಕ್ಕೆ ಅಡ್ಡಿಪಡಿಸಿದರು. ಅದು ಕೂಡ ನಟಿ ಶ್ರೀಲೀಲಾ ಅವರಿಗಾಗಿ ಎಂಬುದು ಗಮನಾರ್ಹ.

ಸೀತಾ ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿದ್ದ ಶ್ರೀಲೀಲಾ ಅವರನ್ನು ವೇದಿಕೆ ಕರೆಯಲು ಸಚಿವರ ಭಾಷಣಕ್ಕೆ ಅಡ್ಡಿ ಮಾಡಲಾಯಿತು. ಪರಿಸ್ಥಿತಿಯನ್ನು ಅರಿತುಕೊಂಡ ಸಚಿವರು ಮೌನವಾಗಿ ವೇದಿಕೆಯಿಂದ ಹಿಂದೆ ಸರಿದರು.

ಸಚಿವರು ಭಾಷಣ ನಿಲ್ಲಿಸಿದಾಗ ನಿರೂಪಕಿ ಝಾನ್ಸಿ ಅವರು ಮೈಕ್ ಸ್ವೀಕರಿಸಿ, ಸಚಿವರು ಕ್ಷಮಿಸಬೇಕು ಎಂದು ಹೇಳಿ, ನಾಯಕಿ ಶ್ರೀಲೀಲಾ ಅವರನ್ನು ವೇದಿಕೆಗೆ ಕರೆದರು. ನಾವು 'ಅವಳು ಯಾವಾಗಲೂ ನಾಯಕಿ' ಎಂಬ ಅಪ್ಲಿಕೇಶನ್ ಅನ್ನು ಪ್ರಾರಂಭಿಸುತ್ತಿದ್ದೇವೆ. ಆದ್ದರಿಂದ, ನಾವು ಬೋಲ್ಡ್​ ಅಂಡ್​ ಬ್ಯೂಟಿಫುಲ್​ ನಾಯಕಿ ಮಾತ್ರವಲ್ಲದೆ, ಉದ್ಯಮಿಯೂ ಆಗಿರುವ ಶ್ರೀಲೀಲಾ ಅವರನ್ನು ವೇದಿಕೆಗೆ ಆಹ್ವಾನಿಸುತ್ತಿದ್ದೇವೆ ಎಂದು ಝಾನ್ಸಿ, ಶ್ರೀಲೀಲಾ ಪರಿಚಯ ಮುಗಿಸಿದರು. ಈ ವೇಳೆ ಶ್ರೀಲೀಲಾ, ವೇದಿಕೆಯನ್ನು ಹತ್ತಿದಾಗ, ಸಚಿವ ಶ್ರೀಧರ್​ ಬಾಬು ಸ್ವಲ್ಪವೂ ಕಿರಿಕಿರಿಗೊಳ್ಳದೆ ನಗುವಿನೊಂದಿಗೆ ಅವರನ್ನು ಸ್ವಾಗತಿಸಿದರು.

ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬಗೆ ಬಗೆಯ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ. ಶ್ರೀಲೀಲಾ ನಾಯಕಿಯಾಗಿರುವುದರಿಂದ ಸಚಿವರ ಭಾಷಣವನ್ನು ಮಧ್ಯದಲ್ಲಿ ಅಡ್ಡಿಪಡಿಸುವುದು ಅರ್ಥಹೀನ, ಅನುಭವಿ ನಿರೂಪಕಿ ಝಾನ್ಸಿ ಹೀಗೆ ಮಾಡುವುದು ಸರಿಯಲ್ಲ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ.

ಭಾಷಣಕಾರರು ಭಾಷಣ ಮಾಡುವಾಗ ಅಡ್ಡಿಪಡಿಸುವುದು ಅವಮಾನಕರ. ಶಿಷ್ಟಾಚಾರ ಪಾಲಿಸಿದ್ದರೆ ಚೆನ್ನಾಗಿರುತ್ತಿತ್ತು. ಶ್ರೀಧರ್ ಬಾಬು ಅವರು ಮೃಧು ಸ್ವಭಾವದ ವ್ಯಕ್ತಿ. ಹೀಗಾಗಿ ಆ ಪರಿಸ್ಥಿತಿಯನ್ನು ಅವರು ಒಪ್ಪಿಕೊಂಡರು. ಅವರನ್ನು ಹೊರತುಪಡಿಸಿ ಬೇರೆ ಯಾರಾದರೂ ಇದ್ದಿದ್ದರೆ ಅದರಲ್ಲೂ ಈಗೋ ಇರುವವರು ಯಾರಾದರೂ ಇದ್ದಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ನೆಟ್ಟಿಗರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net