ಖ್ಯಾತ ಟಿಕ್​ಟಾಕರ್​ ಖ್ಯಾಬೆ ಲಾಮೆಯನ್ನು ಅಮೆರಿಕದಿಂದ ಹೊರ ಹಾಕಿದ ಅಧಿಕಾರಿಗಳು! ಕಾರಣ ಹೀಗಿದೆ... Khaby Lame

Khaby Lame
Published on

Khaby Lame : ವಿಶ್ವದಲ್ಲೇ ಅತಿ ಹೆಚ್ಚು ಟಿಕ್​ಟಾಕ್​ ಫಾಲೋವರ್ಸ್​ ಹೊಂದಿರುವ ಖ್ಯಾಬೆ ಲಾಮೆ ಅವರನ್ನು ಅಮೆರಿಕದಿಂದ ಹೊರ ಹಾಕಲಾಗಿದೆ. ತನ್ನ ವೀಸಾ ಅವಧಿ ಮುಗಿದ ನಂತರವೂ ಅಮೆರಿಕದಲ್ಲೇ ಉಳಿದುಕೊಂಡಿದ್ದಕ್ಕಾಗಿ ಲಾಸ್ ವೇಗಾಸ್‌ನಲ್ಲಿ ವಲಸೆ ಅಧಿಕಾರಿಗಳಿಂದ ಬಂಧನಕ್ಕೊಳಗಾದ ನಂತರ ಖ್ಯಾಬೆ ಲಾಮೆ ಅಮೆರಿಕವನ್ನು ತೊರೆದಿದ್ದಾರೆ.

ಇಟಾಲಿಯನ್ ಮೂಲದ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್ ಖ್ಯಾಬೆ ಲಾಮೆ ಅವರ ಪೂರ್ಣ ಹೆಸರು ಸೆರಿಂಜ್ ಖಬಾನೆ ಲ್ಯಾಮೆ. ಅಂದಹಾಗೆ, ಖ್ಯಾಬೆ ಲಾಮೆ ಅವರು ಆಫ್ರಿಕಾ ದೇಶವಾದ ಸೆನೆಗಲ್​ನಲ್ಲಿ ಜನಿಸಿದರು. ಒಂದು ವರ್ಷದ ಮಗುವಾಗಿದ್ದಾಗಲೇ ಅವರ ಕುಟುಂಬ ಇಟಲಿಗೆ ಸ್ಥಳಾಂತರವಾಯಿತು. ಹೀಗಾಗಿ, ಖ್ಯಾಬೆ ಇಟಾಲಿಯನ್​ ಪ್ರಜೆಯಾಗಿದ್ದಾರೆ.

ಒಂದೇ ಒಂದು ಮಾತನಾಡದೇ ಕೇವಲ ಕೈ ಸನ್ನೆಯಿಂದಲೇ ತ್ವರಿತವಾಗಿ ಮತ್ತು ಸುಲಭವಾಗಿ ಕೆಲಸಗಳನ್ನು ಹೇಗೆ ಮಾಡಬೇಕೆಂದು ತೋರಿಸುವುದರಲ್ಲಿ ಖ್ಯಾಬೆ ಲಾಮೆ ವಿಶ್ವಪ್ರಸಿದ್ಧರಾಗಿದ್ದಾರೆ. ಅವರ ಸಿಗ್ನೆಚರ್​ ಪೋಸ್ ಎಲ್ಲೆಡೆ ಖ್ಯಾತಿ ಪಡೆದಿದೆ. ಟಿ20 ವಿಶ್ವಕಪ್​ ಗೆದ್ದಾಗ ಹಾರ್ದಿಕ್​ ಪಾಂಡ್ಯ ಮತ್ತು ಆರ್​ಸಿಬಿ ಐಪಿಎಲ್​ ಟ್ರೋಫಿ ಜಯಿಸಿದಾಗ ಕೃನಾಲ್​ ಪಾಂಡ್ಯ ಈ ಸಿಗ್ನೇಚರ್​ ಪೋಸ್​ ಅನ್ನು ಮೈದಾನದಲ್ಲಿ ಪ್ರದರ್ಶಿಸಿದರು.

ಏಪ್ರಿಲ್ 30ರಂದು ಅಮೆರಿಕಕ್ಕೆ ಪ್ರವೇಶಿಸಿದ್ದ ಲ್ಯಾಮೆ, ತನ್ನ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ (ಜೂನ್​ 06) ಹ್ಯಾರಿ ರೀಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಿರುವುದಾಗಿ ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ದೃಢಪಡಿಸಿದೆ.

ಐಸಿಇ ಅವರಿಗೆ ಸ್ವಯಂಪ್ರೇರಿತ ನಿರ್ಗಮನದ ಅವಕಾಶವನ್ನು ನೀಡಿದೆ. ಔಪಚಾರಿಕ ಗಡೀಪಾರು ಆದೇಶವನ್ನು ಪಡೆಯದೆಯೇ ದೇಶವನ್ನು ತೊರೆಯಲು ಅವಕಾಶ ಮಾಡಿಕೊಟ್ಟದ್ದು, ಭವಿಷ್ಯದಲ್ಲಿ ಅಮೆರಿಕಕ್ಕೆ ಮರಳುವ ಅವಕಾಶವನ್ನು ಉಳಿಸಿಕೊಳ್ಳಲು ಇದು ನೆರವಾಗುತ್ತದೆ.

25 ವರ್ಷದ ಖ್ಯಾಬೆ ಲಾಮೆ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ನೀತಿಗಳು ವಿಶೇಷವಾಗಿ ಲಾಸ್ ಏಂಜಲೀಸ್‌ನಲ್ಲಿ ಪ್ರತಿಭಟನೆಗಳಿಗೆ ಕಾರಣವಾಗಿವೆ. ಅಮೆರಿಕಕ್ಕೆ ವಲಸೆ ಬಂದಿರುವವರನ್ನು ದೇಶದಿಂದ ಹೊರ ಹಾಕಲು ಟ್ರಂಪ್​ ಆದೇಶಿಸಿದ್ದಾರೆ. ಹೀಗಾಗಿ, ವಿವಿಧ ದೇಶ ಪ್ರಜೆಗಳನ್ನು ಹೊರ ಹಾಕುವ ಕೆಲಸ ಅಮೆರಿಕದಲ್ಲಿ ಸಾಗುತ್ತಿದೆ.

ಅಂದಹಾಗೆ, ಕರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಖ್ಯಾಬೆ ಲಾಮೆ ಅವರು "ಲೈಫ್ ಹ್ಯಾಕ್" ವಿಡಿಯೋಗಳ ಮೂಲಕ ಪ್ರಸಿದ್ಧಿ ಪಡೆದಿದರು. ಮೌನ, ​​ಹಾಸ್ಯಮಯ ಪ್ರತಿಕ್ರಿಯೆಗಳೊಂದಿಗೆ ಜಾಗತಿಕ ಖ್ಯಾತಿಯನ್ನು ಗಳಿಸಿದರು. ಪ್ರಸ್ತುತ 162 ಮಿಲಿಯನ್‌ಗಿಂತಲೂ ಹೆಚ್ಚು ಟಿಕ್‌ಟಾಕ್ ಫಾಲೋವರ್​ಗಳನ್ನು ಹೊಂದಿದ್ದಾರೆ ಮತ್ತು ಹ್ಯೂಗೋ ಬಾಸ್ ಜೊತೆಗಿನ ಪಾಲುದಾರಿಕೆ ಮತ್ತು ಯುನಿಸೆಫ್ ಸೌಹಾರ್ದ ರಾಯಭಾರಿಯಾಗಿ ಸೇರಿದಂತೆ ಪ್ರಮುಖ ಬ್ರ್ಯಾಂಡ್ ಡೀಲ್‌ಗಳಲ್ಲಿ ತಮ್ಮ ಖ್ಯಾತಿಯನ್ನು ಬಳಸಿಕೊಂಡಿದ್ದಾರೆ. ಬಂಧನಕ್ಕೆ ಕೆಲವೇ ವಾರಗಳ ಮೊದಲು, ಅವರು ನ್ಯೂಯಾರ್ಕ್‌ನ ಮೆಟ್ ಗಾಲಾದಲ್ಲಿ ಪ್ರದರ್ಶನ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net