ಮಗ ಮದುವೆಗೆ ಹೋದಾಗ ಸೊಸೆಯನ್ನೇ ರೇಪ್​ ಮಾಡಿದ ಮಾವ! ಪ್ರಶ್ನಿಸಿದ ಮಗನ ಕಥೆಯೇ ಮುಗಿಸಿಬಿಟ್ಟ

rape
Published on

ಲಖನೌ: ಹುಟ್ಟಿದಾಗಿನಿಂದ ಹೆತ್ತು ಹೊತ್ತು ಸಾಕಿದ ತಂದೆ ತಾಯಿಯನ್ನು ಮದುವೆಯ ನಂತರ ಬಿಟ್ಟು ಬರುವ ಹೆಣ್ಣ ಮಕ್ಕಳು ತನ್ನ ಪತಿಯ ತಂದೆ ತಾಯಿಯನ್ನೇ ಅಪ್ಪ ಅಮ್ಮನ ರೂಪದಲ್ಲಿ ನೋಡಲು ಬಯಸುತ್ತಾರೆ. ಆದರೆ ಕೆಲವು ಪಾಪಿಗಳು ಸೊಸೆಯನ್ನು ಮಗಳ ರೂಪದಲ್ಲಿ ನೋಡುವುದನ್ನು ಬಿಟ್ಟು ಚಿತ್ರಹಿಂಸೆ ಕೊಡಲಾರಂಭಿಸುತ್ತಾರೆ. ಇಲ್ಲೊಬ್ಬ ಮಾವ, ಸೊಸೆಯನ್ನು ಅತ್ಯಾಚಾರ ಮಾಡಿದ್ದಷ್ಟೇ ಅಲ್ಲದೆ ಅದನ್ನು ಪ್ರಶ್ನಿಸಿದ ಮಗನನ್ನೂ ಕೊಂದು ಹಾಕಿದ್ದಾನೆ.

ಉತ್ತರ ಪ್ರದೇಶದ ಮೊರಾದಾಬಾದ್​ ಜಿಲ್ಲೆಯ ಮಜೋಲಾದ ಹನುಮಾನ್​ ನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಇತ್ತೀಚೆಗೆ ಮನೆಯವರೆಲ್ಲರು 56 ವರ್ಷದ ಮಾವ ಮತ್ತು ಸೊಸೆಯನ್ನು ಮನೆಯಲ್ಲೇ ಬಿಟ್ಟು ಮದುವೆಗೆ ಹೋಗಿದ್ದರು. ಈ ಸಮಯವನ್ನು ತನ್ನ ಕಾಮದಾಸೆಗೆ ಬಳಸಿಕೊಂಡ ಮಾವ ಸೊಸೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಮಾವನ ದುಷ್ಕೃತ್ಯದಿಂದಾಗಿ ಅಘಾತಕ್ಕೊಳಗಾಗಿದ್ದ ಸೊಸೆ ಶನಿವಾರದಂದು ತನ್ನ ಪತಿ ಮತ್ತು ಅತ್ತೆಯ ಎದುರು ಮಾವ ಮಾಡಿದ ಕೃತ್ಯವನ್ನು ಬಿಡಿಸಿ ಹೇಳಿದ್ದಾಳೆ. ಈ ವಿಚಾರವಾಗಿ ಅಪ್ಪ ಮಗನ ನಡುವೆ ಜಗಳ ಆರಂಭವಾಗಿದೆ. ತಪ್ಪು ಮಾಡಿರುವ ಅಪ್ಪನನ್ನು ಪೊಲೀಸರಿಗೆ ಒಪ್ಪಿಸುವುದಾಗಿ ಮಗ ಬೆದರಿಸಿದ್ದಾನೆ. ಜಗಳ ತಾರಕಕ್ಕೇರುವಷ್ಟರಲ್ಲಿ ಕಿರಿಯ ಮಗ ಬಂದಿದ್ದು ಆತ ತಂದೆಯ ಬೆಂಬಲಕ್ಕೆ ನಿಂತಿದ್ದಾನೆ. ಅಷ್ಟರಲ್ಲಾಗಲೇ ಸಿಟ್ಟು ನೆತ್ತಿಗೇರಿದ್ದ ತಂದೆ, ತನ್ನ ಬಳಿ ಇದ್ದ ಪಿಸ್ತೂಲಿನಿಂದ ಮಗನಿಗೆ ಗುಂಡು ಹಾರಿಸಿದ್ದಾನೆ. ತಪ್ಪೇ ಮಾಡದ ಮಗನ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಸದ್ಯ ಅಪ್ಪನ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿದೆ. ಸಹಾಯಕ್ಕೆ ನಿಂತ ಕಿರಿಯ ಮಗನ ಮೇಲೂ ಪ್ರಕರಣ ದಾಖಲಾಗಿದೆ. ಸೊಸೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅತ್ಯಾಚಾರದ ವರದಿ ಬಂದ ನಂತರ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net