

ರಾಂಚಿ: ಸರ್ಕಾರಿ ಸೌಲಭ್ಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವವರಿರುವಂತೆ ಅದನ್ನು ದುರುಪಯೋಗ ಮಾಡಿಕೊಳ್ಳುವವರೂ ಇದ್ದಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಸತ್ತು ನಾಲ್ಕು ವರ್ಷಗಳಾದ ನಂತರ ಆತನಿಗೆ ಸರ್ಕಾರದಿಂದ ಮನೆ ಬಂದಿದೆ. ವಿಶೇಷವೆಂದರೆ ಅವನ ಹೆಸರಿನಲ್ಲಿಯೇ ಮೊದಲ ಕಂತಿನ ಹಣ ವಿತ್ಡ್ರಾ ಕೂಡ ಮಾಡಲಾಗಿದೆ.
ಇಂತದ್ದೊಂದು ಘಟನೆ ನಡೆದಿರುವುದು ಜಾರ್ಖಂಡ್ನ ಗರ್ಹ್ವಾ ನಗರದಲ್ಲಿ. ಅಲ್ಲಿನ ಧನೇಸರ್ ರಾಮ್ ಹೆಸರಿನ ವ್ಯಕ್ತಿ ನಾಲ್ಕು ವರ್ಷದ ಹಿಂದೆಯೇ ಮೃತನಾಗಿದ್ದಾನೆ. ಆದರೆ ಆತನ ಹೆಸರಿಗೆ 2016-17ನೇ ಸಾಲಿನಲ್ಲಿ ಸರ್ಕಾರಿ ಮನೆ ಮಂಜೂರಾಗಿದೆ. ಅಂದು ಮಂಜೂರಾದ ಮನೆಗೆ 2020ರ ಅಕ್ಟೋಬರ್ನಲ್ಲಿ ಮೊದಲ ಕಂತಿನ ಹಣ ಬಂದಿದೆ. ನೇರವಾಗಿ ಧನೇಸರ್ ಖಾತೆಗೆ ಬಂದ ಹಣವನ್ನು ಯಾರೋ ಬಿಡಿಸಿಕೊಂಡಿದ್ದಾರೆ ಕೂಡ.
ಇದರಲ್ಲಿ ದೊಡ್ಡ ಅಚ್ಚರಿಯೆಂದರೆ ಹಣವನ್ನು ಪಡೆದಿರುವುದು ಆತನ ಕುಟುಂಬದ ಯಾರೊಬ್ಬರೂ ಅಲ್ಲ. ಮನೆಗೆ ಅರ್ಜಿಯನ್ನೂ ಸಹ ಕುಟುಂಬಸ್ಥರು ಹಾಕಿಲ್ಲ. ಹಾಗಿದ್ದರೂ ಆತನ ಹೆಸರಿಗೆ ಮನೆ ಮಂಜೂರಾಗಿ, ಹಣ ಬಿಡುಗಡೆಯಾಗಿದೆ. ಯಾರೋ ಅದನ್ನು ಬಳಸಿಕೊಂಡಿದ್ದಾರೆ. ಈ ವಿಚಾರವಾಗಿ ಧನೇಸರ್ ಅವರ ಮೊಮ್ಮಗ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದ್ದಾನೆ.
ಇದೀಗ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಪ್ರಕರಣದ ಕುರಿಯಾಗಿ ತೀವ್ರ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್)