

ದುಬೈ: ರಾಜ ಮನೆತನದಲ್ಲಿ ಏನೇ ಒಂದು ಸಣ್ಣ ವಿಚಾರವಾದರೂ ಅದು ದೊಡ್ಡ ಸುದ್ದಿಯಾಗಿಬಿಡುತ್ತದೆ. ಹಾಗಿದ್ದಾಗ ಈ ರಾಜಮನೆತನದ ರಾಜಕುಮಾರನ ಪತ್ನಿಗೆ ಆಕೆಯ ಬಾಡಿಗಾರ್ಡ್ನೊಂದಿಗೇ ಅಕ್ರಮ ಸಂಬಂಧ ಬೆಳೆದಿದೆ. ಈ ವಿಚಾರವನ್ನು ಮುಚ್ಚಿಡಲು ಆಕೆ ಮಾಡಿದ ಕಸರತ್ತು ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ.
ದುಬೈನ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರಿಗೆ ಆರು ಮದುವೆಯಾಗಿದೆ. ಅವರ ಆರನೇ ಪತ್ನಿ ಹಯಾ ಅವರಿಗೆ ರಸ್ಸೆಲ್ ಹೆಸರಿನ ಬಾಡಿಗಾರ್ಡ್ ಇದ್ದನಂತೆ. 2016ರಲ್ಲಿ ರಸ್ಸೆಲ್ ಮತ್ತು ಹಯಾ ನಡುವೆ ಅಕ್ರಮ ಸಂಬಂಧ ಶುರುವಾಗಿದೆ. ಈ ಸಂಬಂಧ ಸುಮಾರು ಎರಡು ವರ್ಷಗಳ ಕಾಲ ಮುಂದುವರಿದಿದೆ. ಅದಾದ ನಂತರ ರಸ್ಸೆಲ್ನೊಂದಿಗೆ ದುಬೈನಿಂದ ಲಂಡನ್ಗೆ ಹಾರಿದ ಹಯಾ ಅಲ್ಲಿಯೇ ಜೀವನ ನಡೆಸಲಾರಂಭಿಸಿದ್ದಾಳೆ.
ಈಗ ಈ ವಿಚಾರ ಸುದ್ದಿಗೆ ಬರಲು ಒಂದು ಕಾರಣವಿದೆ. ಹಯಾ ದುಬೈನಲ್ಲಿದ್ದಾಗ ಪತಿಗೆ ಅಕ್ರಮ ಸಂಬಂಧದ ವಿಚಾರ ತಿಳಿಯದಿರುವಂತೆ ಕಾಪಾಡಿಕೊಳ್ಳುವ ಸಲುವಾಗಿ ರಸ್ಸೆಲ್ಗೆ ಸುಮಾರು 12 ಕೋಟಿ ರೂಪಾಯಿ ನೀಡಿದ್ದಳಂತೆ. ಅಷ್ಟೇ ಅಲ್ಲದೆ ಇವರಿಬ್ಬರ ಬಗ್ಗೆ ಗೊತ್ತಿದ್ದ ಮೂರು ಇತರೆ ಕೆಲಸಗಾರರಿಗೂ ಕೋಟಿ ಕೋಟಿ ಹಣ ನೀಡಿದ್ದಳಂತೆ. ಒಂದು ಸೀಕ್ರೇಟ್ ಕಾಪಾಡಿಕೊಳ್ಳಬೇಕೆಂದು ರಸ್ಸೆಲ್ಗೆ ಕೋಟಿ ಕೋಟಿ ಬೆಲೆ ಬಾಳುವ ಉಡುಗೊರೆಯನ್ನು ಕೊಟ್ಟಿದ್ದಳಂತೆ. ಈ ಎಲ್ಲ ವಿಚಾರಗಳು ಇದೀಗ ಬೆಳಕಿಗೆ ಬಂದಿವೆ.
ಬಾಡಿಗಾರ್ಡ್ನೊಂದಿಗೆ ಸಂಬಂಧ ಬೆಳೆಸಿಕೊಂಡ ಪತ್ನಿಗೆ ರಾಜಕುಮಾರ 2019ರಲ್ಲಿಯೇ ವಿಚ್ಛೇದನ ನೀಡಿದ್ದಾನೆ. ಆಕೆಗೆ ಯಾವುದೇ ಮಾಹಿತಿ ನೀಡದಂತೆಯೇ ಷರಿಯಾ ಕಾನೂನಿನ ಪ್ರಕಾರ ವಿಚ್ಛೇದನ ನೀಡಲಾಗಿದೆ. (ಏಜೆನ್ಸೀಸ್)