ನವದೆಹಲಿ: ಐಪಿಎಲ್ 2024ರ ಆವೃತ್ತಿಯ ಮೊದಲ ಪಂದ್ಯದಲ್ಲೇ ಗೆಲುವು ದಾಖಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ಪಡೆ ಇದೀಗ ಈ ಸೀಸನ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡದೆ ಹೋದರು, ಒಂದು ಪಂದ್ಯ ಸೋತರು ಮತ್ತೊಂದು ಮ್ಯಾಚ್ನಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗುತ್ತಿದೆ. ಸದ್ಯ ಈ ಸ್ಥಾನವನ್ನು ಭದ್ರವಾಗಿ ಉಳಿಸಿಕೊಳ್ಳುವಲ್ಲಿ ಸಿಎಸ್ಕೆ ಹರಸಾಹಸ ಪಡುತ್ತಿರುವುದು ಇತ್ತೀಚಿನ ಪಂದ್ಯಗಳಲ್ಲಿ ಕಂಡುಬಂದಿದೆ. ಈ ವೇಳೆ ನಿನ್ನೆ (ಮೇ.05) ಧರ್ಮಶಾಲದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಸಿಎಸ್ಕೆ 28 ರನ್ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬೌಲಿಂಗ್ ಆಯ್ದುಕೊಳ್ಳುವ ಮೂಲಕ ಸಿಎಸ್ಕೆಗೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆಯೇ ಮೊದಲು ಬ್ಯಾಟ್ಗೆ ಬಂದ ಚೆನ್ನೈಗೆ ಆರಂಭಿಕ ಹಂತದಲ್ಲೇ ಭಾರೀ ಆಘಾತ ಎದುರಾಯಿತು. ಒಂದು ಹಂತದಲ್ಲಿ ಸಿಎಸ್ಕೆಯ ಬಲಿಷ್ಠ ಬ್ಯಾಟ್ಸ್ಮನ್ಗಳು ಬ್ಯಾಕ್ ಟು ಬ್ಯಾಕ್ ತಮ್ಮ ವಿಕೆಟ್ಗಳನ್ನು ಒಪ್ಪಿಸಿ, ಪೆವಿಲಿಯನ್ ಹಾದಿ ಹಿಡಿದದ್ದು ಅಭಿಮಾನಿಗಳನ್ನು ತೀವ್ರ ಅಚ್ಚರಿಗೆ ದೂಡಿತು. 4-5 ವಿಕೆಟ್ಗಳು ಉರುಳಿದಂತೆ ಎಲ್ಲರ ಚಿತ್ತ ಮಾಜಿ ಕ್ಯಾಪ್ಟನ್, ಮಹೇಂದ್ರ ಸಿಂಗ್ ಧೋನಿಯತ್ತ ಮೂಡಿದ್ದೇ ಆದರೂ ಮಾಹಿ ಮಾತ್ರ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿಲ್ಲ.
ಧೋನಿ ತಮ್ಮ ಬದಲಿಗೆ ದುಬೆ, ಶಾರ್ದೂಲ್ ಠಾಕೂರ್, ಜಡೇಜಾರನ್ನು ಕಣಕ್ಕೆ ಇಳಿಸಿದರು. ವಿಕೆಟ್ಗಳು ಪತನವಾದರೂ ಕ್ರೀಸ್ಗೆ ಯಾಕಿನ್ನು ಧೋನಿ ಬರುತ್ತಿಲ್ಲ ಎಂದು ತಲೆಕೆಡಿಸಿಕೊಂಡ ಕ್ರಿಕೆಟ್ ಅಭಿಮಾನಿಗಳು, 9ನೇ ಕ್ರಮಾಂಕದಲ್ಲಿ ಧೋನಿ ಕಣಕ್ಕಿಳಿದದ್ದು ಕಂಡು, ಭಾರೀ ಶಾಕ್ಗೆ ಒಳಗಾದರು. ತಡವಾಗಿ ಬಂದರೂ ಪರವಾಗಿಲ್ಲ, ಹೆಚ್ಚಿನ ರನ್ ಗಳಿಸುವಲ್ಲಿ ಸಹಾಯ ಮಾಡ್ತಾರೆ ಎಂದು ನಿರೀಕ್ಷಿಸಿದ್ದ ಅಪಾರ ಎಂ.ಎಸ್ಡಿ ಫ್ಯಾನ್ಸ್ಗೆ ಆಗಿದ್ದು ಮಾತ್ರ ಭಾರೀ ನಿರಾಸೆ. ಇದಕ್ಕೆ ಕಾರಣ, ಎದುರಿಸಿದ ಮೊದಲ ಬಾಲ್ನಲ್ಲೇ ಮಾಹಿ ಗೋಲ್ಡನ್ ಡಕ್ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು.
ಇದೇ ಪ್ರಥಮ ಬಾರಿಗೆ ತಮ್ಮ ಟಿ-20 ವೃತ್ತಿಯಲ್ಲಿ ಧೋನಿ 9ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದದ್ದು. ಅದರಲ್ಲೂ ಹರ್ಷಲ್ ಪಟೇಲ್ನಿಂದ ಬಂದ ಮಂದಗತಿಯ ಯಾರ್ಕರ್ಗೆ ವಿಕೆಟ್ ಕಳೆದುಕೊಂಡ ಎಂ.ಎಸ್. ಧೋನಿ, ಶಾಕಿಂಗ್ ರೀತಿಯಲ್ಲಿ ಗೋಲ್ಡನ್ ಡಕ್ ಔಟ್ ಆದರು. ಇದು ಸ್ಟೇಡಿಯಂನಲ್ಲಿ ನೆರೆದಿದ್ದ ಅಪಾರ ಧೋನಿ ಅಭಿಮಾನಿಗಳನ್ನು ಒಂದು ನಿಮಿಷ ಮೌನದಿಂದ ಕುಳಿತುಕೊಳ್ಳುವಂತೆ ಮಾಡಿತು. ಈ ಕುರಿತು ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).