ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜಕುಮಾರ್ ನೆನಪಿನಲ್ಲಿ ಆಯೋಜಿಸಲಾಗಿರುವ 'ಅಪ್ಪು ಕಪ್ ಸೀಸನ್-2 ಸ್ಯಾಂಡಲ್ವುಡ್ ಬ್ಯಾಡ್ಮಿಂಟನ್ ಲೀಗ್' ಲೋಗೋವನ್ನು ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಇಂದು ಅನಾವರಣಗೊಳಿಸಿದರು.
ನಗರದಲ್ಲಿರುವ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಭಾರತೀಯ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಲೋಗೋ ಅನಾವರಣ ಮಾಡಿ ಆಟಗಾರರಿಗೆ ಶುಭಾಶಯ ಕೋರಿದರು.
ಪುನೀತ್ ರಾಜಕುಮಾರ್ ನನಗೆ ವೈಯಕ್ತಿಕವಾಗಿ ಗೊತ್ತಿದ್ದರು, ತುಂಬಾ ಫ್ರೆಂಡ್ಲಿ ಆಗಿದ್ದವರು. ಐದಾರು ವರ್ಷಗಳ ಹಿಂದೆ ನಾವೊಂದು ಇವೆಂಟ್ ಮಾಡಿದ್ದೆವು. ಒಂದೇ ಒಂದು ಫೋನ್ ಕಾಲ್ಗೆ ಬಂದು ನಮ್ಮ ಜೊತೆ ಮ್ಯಾಚ್ ಆಡಿದ್ದರು. ಚಿತ್ರರಂಗದಲ್ಲಿ ತುಂಬಾ ಜನ ಬ್ಯಾಡ್ಮಿಂಟನ್ ಆಡುತ್ತಾರೆ ಎನ್ನುವುದನ್ನು ಕೇಳಿ ತುಂಬಾ ಖುಷಿಯಾಯ್ತು. ಅಪ್ಪು ಕಪ್ ಸ್ಯಾಂಡಲ್ವುಡ್ ಬ್ಯಾಡ್ಮಿಂಟನ್ ಹೀಗೇ ಮುಂದುವರಿಯಲಿ ಎಂದು ಪ್ರಕಾಶ್ ಪಡುಕೋಣೆ ಹಾರೈಸಿದರು.
ಕನ್ನಡ ಚಿತ್ರಕಲಾವಿದರು, ತಂತ್ರಜ್ಞರು ಹಾಗೂ ಮಾಧ್ಯಮದವರು ಆಡಲಿರುವ ಈ ಪಂದ್ಯಾವಳಿ ಆಗಸ್ಟ್ ತಿಂಗಳಾಂತ್ಯದಲ್ಲಿ ಶುರುವಾಗಲಿದೆ. ಕಳೆದ ಬಾರಿ ಒಟ್ಟು ಎಂಟು ತಂಡಗಳು ಭಾಗಿಯಾಗಿದ್ದವು. ಪ್ರಿಯಾಂಕಾ ಉಪೇಂದ್ರ, ದಿಗಂತ್, ಸೃಜನ್ ಲೋಕೇಶ್, ವಸಿಷ್ಠ ಸಿಂಹ, ರಾಗಿಣಿ, ಕವಿತಾ ಲಂಕೇಶ್, ಶ್ವೇತಾ ಶ್ರೀವಾಸ್ತವ್, ಮಾಸ್ಟರ್ ಆನಂದ್ ತಂಡದ ಪೈಕಿ ಸೃಜನ್ ಲೋಕೇಶ್ ನೇತೃತ್ವದ ರಾಜಕುಮಾರ್ ಕಿಂಗ್ಸ್ ಕಳೆದ ಬಾರಿ ಗೆಲುವು ಸಾಧಿಸಿತ್ತು. ಈ ಬಾರಿ ಮತ್ತಷ್ಟು ತಾರೆಯರು ಪಾಲ್ಗೊಳ್ಳುವ ಮೂಲಕ ಅಪ್ಪು ಕಪ್ ಸೀಸನ್-2 ಸ್ಯಾಂಡಲ್ವುಡ್ ಬ್ಯಾಡ್ಮಿಂಟನ್ ಲೀಗ್ ಮೆರುಗು ಹೆಚ್ಚಿಸಲಿದ್ದಾರೆ.
ಇದನ್ನೂ ಓದಿ: ‘ನನ್ನಪ್ಪ ಒಬ್ಬ ಬೆಪ್ಪ.. ನಾನೂ ಬೆಪ್ಪ..’: ಆತ್ಮಾವಲೋಕನ ರೀತಿಯಲ್ಲಿ ಹ್ಯಾಪಿ ಫಾದರ್ಸ್ ಡೇ ವಿಷ್ ಮಾಡಿದ ನಟ
ಲೋಗೋ ಅನಾವರಣ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ರಾಜೇಶ್ ರೆಡ್ಡಿ, ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ಅಧ್ಯಕ್ಷ ಭಾ.ಮಾ.ಹರೀಶ್, ಹಿರಿಯ ಸಿನಿಮಾ ಪತ್ರಕರ್ತ ಸದಾಶಿವ ಶೆಣೈ ಮುಂತಾದವರು ಉಪಸ್ಥಿತರಿದ್ದರು.