1999ರ ವಿಶ್ವಕಪ್ ಸೆಮಿಫೈನಲ್ ದೃಶ್ಯ 
ಕ್ರೀಡೆ

ವಿಶ್ವಕಪ್ ಕ್ರಿಕೆಟ್​: 1999ರ ಸೆಮಿಫೈನಲ್​ನಲ್ಲೂ ಇವೇ ತಂಡಗಳು, ಇದೇ ನಂಬರ್; ಈ ಸಲವೂ ಅದೇ ಫಲಿತಾಂಶ?

ಕೋಲ್ಕತ: ಏಕದಿನ ವಿಶ್ವಕಪ್ ಕ್ರಿಕೆಟ್​ನ ಎರಡನೇ ಸೆಮಿಫೈನಲ್ ಇಂದು ಕೋಲ್ಕತದ ಈಡನ್​ ಗಾರ್ಡನ್ ಮೈದಾನದಲ್ಲಿ ದಕ್ಷಿಣ ಆಫ್ರಿಕ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿದ್ದು, ಯಾರು ಗೆಲ್ಲುತ್ತಾರೆ ಎಂಬ ಕುತೂಹಲದ ಜತೆಗೇ ಫಲಿತಾಂಶದ ಕುರಿತು ಇನ್ನೊಂದು ಸಂಗತಿಯೂ ಕೇಳಿ ಬರುತ್ತಿದೆ.

ಈ ಪಂದ್ಯದಲ್ಲಿ 24 ವರ್ಷಗಳ ಹಿಂದಿನ ಫಲಿತಾಂಶವೇ ಮರುಕಳಿಸಬಹುದಾ ಎಂಬ ಚರ್ಚೆಯೊಂದು ಕ್ರಿಕೆಟ್ ಅಭಿಮಾನಿಗಳ ನಡುವೆ ಕಂಡುಬಂದಿದೆ. ಅಷ್ಟಕ್ಕೂ 24 ವರ್ಷಗಳ ಹಿಂದಿನ ಆಟ-ತಂಡಗಳಿಗೂ ಇರುವ ಸಾಮ್ಯತೆ ಈ ಸೆಮಿಫೈನಲ್ಸ್​ನಲ್ಲಿ ಕಂಡುಬಂದಿರುವುದೇ ಇಂಥದ್ದೊಂದು ಚರ್ಚೆಗೆ ಕಾರಣ.

ಇಂದಿನಂತೆ 1999ರ ವಿಶ್ವಕಪ್ ಕ್ರಿಕೆಟ್​ನ ಸೆಮಿಫೈನಲ್​ನಲ್ಲೂ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕ ತಂಡಗಳು ಸೆಣಸಾಡಿದ್ದವು. ಅಂದು ಆಸ್ಟ್ರೇಲಿಯಾ 49.2 ಓವರ್​ಗಳಲ್ಲಿ 213 ರನ್ ಗಳಿಸಿತ್ತು. ಬಳಿಕ ದಕ್ಷಿಣ ಆಫ್ರಿಕ ತಂಡ 49.4 ಓವರ್​ಗಳಲ್ಲಿ 213ಕ್ಕೆ ಆಲೌಟ್​ ಆಗಿದ್ದರಿಂದ ಆ ಪಂದ್ಯ ಟೈ ಆಗಿತ್ತು.

ಇಂದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಆಡಿರುವ ದಕ್ಷಿಣ ಆಫ್ರಿಕ ತಂಡ 212 ರನ್​ಗಳಿಗೆ ಆಲೌಟ್​ ಆಗಿದೆ. ಅಂದರೆ ಆಸ್ಟ್ರೇಲಿಯಾ ತಂಡ ಈ ಪಂದ್ಯದಲ್ಲಿ ಜಯ ಗಳಿಸಲು 213 ರನ್ ಗುರಿ ಸಾಧಿಸಬೇಕಿದೆ. 1999ರಲ್ಲಿ ಆಡಿದ್ದ ಇವೇ ತಂಡಗಳು ಇಂದೂ ಈ ಆಟದಲ್ಲೂ 213 ಗುರಿ ಹೊಂದಿರುವುದೇ ಕ್ರೀಡಾಭಿಮಾನಿಗಳಲ್ಲಿ ಇಂಥದ್ದೊಂದು ಲೆಕ್ಕಾಚಾರ ಹೊರಹೊಮ್ಮಲು ಕಾರಣ ಎನಿಸಿಕೊಂಡಿದೆ.