ನ್ಯೂಸ್

ಮಾನವರ ನಡುವೆ ಮೊದಲ ಚುಂಬನ ನಡೆದಿದ್ದು ಯಾವಾಗ? ಬಹಿರಂಗವಾಯ್ತು ಅಚ್ಚರಿಯ ಉತ್ತರ!

ನವದೆಹಲಿ: ಮುತ್ತು, ಚುಂಬನ ಮತ್ತು ಪಪ್ಪಿ ಮುಂತಾದ ಹೆಸರಿನಿಂದ ಕರೆಯುವ ಮುತ್ತು ಪ್ರೇಮ ಸಂಬಂಧಗಳ ಬೆಸುಗೆ ಮಾತ್ರವಲ್ಲದೆ, ಪರಸ್ಪರ ಕಾಳಜಿ, ಅನ್ಯೋನ್ಯತೆ, ಆರೈಕೆ, ಆಪ್ತತೆ, ರಕ್ಷಣೆ ಹಾಗೂ ಭರವಸೆಯ ಸೂಚಕವಾಗಿದೆ. ಪ್ರೇಮಿಗಳ ನಡುವೆ ಪ್ರೀತಿಯ ಭಾವನೆ ವ್ಯಕ್ತಪಡಿಸಲು ಈ ಮುತ್ತು ಪ್ರಮುಖ ಅಂಶವಾಗಿದೆ. ಚುಂಬನದಿಂದ ಆರೋಗ್ಯದ ಲಾಭಗಳೂ ಇವೆ ಎನ್ನುತ್ತಾರೆ ಸಂಶೋಧಕರು.

ಆದರೆ, ಈ ಮುತ್ತಿನ ಹುಟ್ಟಿನ ಬಗ್ಗೆ ಯಾರಿಗಾದರೂ ತಿಳಿದೆದೆಯಾ? ಮಾನವರ ನಡುವೆ ಪ್ರಥಮ ಚುಂಬನ ಯಾವಾಗ ಆರಂಭವಾಯಿತು ಎಂಬುದು ಗೊತ್ತಿದೆಯಾ? ಇದೊಂದು ಉತ್ತರ ನೀಡಲಾಗದ ಪ್ರಶ್ನೆ ಎಂದು ನೀವು ಭಾವಿಸಬಹುದು. ಆದರೆ, ಸಂಶೋಧಕರು ಅದಕ್ಕೆ ಉತ್ತರವನ್ನು ಕಂಡುಕೊಂಡಿದ್ದಾರೆ.

ಮೆಸೊಪಟ್ಯಾಮಿಯಾ ಕಾಲದ್ದು

ಮಾನವನ ಮೊದಲ ಚುಂಬನ 4500 ವರ್ಷಗಳ ಹಿಂದೆ ನಡೆದಿದೆ ಎನ್ನುವುದಕ್ಕೆ ಪುರಾವೆ ಒಂದು ದೊರಕಿದೆ. ಈ ಪುರಾವೆ ಮೆಸೊಪಟ್ಯಾಮಿಯನ್ ಅವಧಿಯದ್ದು. ಸಂಶೋಧಕರು ಮೆಸೊಪಟ್ಯಾಮಿಯನ್ ಕಾಲದ ಮಣ್ಣಿನ ಶಿಲ್ಪದ ಮೇಲಿರುವ ಲಿಪಿಗಳಿಂದ ಚುಂಬನದ ರಹಸ್ಯವನ್ನು ಕಂಡುಹಿಡಿದಿದ್ದಾರೆ.

ಕ್ಯೂನಿಫಾರ್ಮ್ ಲಿಪಿ

ಮಣ್ಣಿನ ಶಿಲ್ಪದ ಮೇಲೆ ಕ್ಯೂನಿಫಾರ್ಮ್ ಲಿಪಿಯಲ್ಲಿ ಬರೆಯಲಾಗಿದೆ. ಈಗ ಇರಾಕ್​-ಸಿರಿಯಾ ಪ್ರದೇಶದಲ್ಲಿರುವ ಸ್ಥಳವೊಂದರಲ್ಲಿ ಈ ಮಣ್ಣಿನ ಶಿಲ್ಪವನ್ನು ಪತ್ತೆಹಚ್ಚಲಾಗಿದೆ. ಆ ಶಿಲ್ಪಕಲೆಯಲ್ಲಿ ಜೋಡಿಯೊಂದು ಪರಸ್ಪರ ಚುಂಬಿಸುತ್ತಿರುವ ದೃಶ್ಯವಿದ್ದು, ಇದೇ ಮಾನವನ ಮೊದಲ ಚುಂಬನ ಎಂದು ಹೇಳಲಾಗುತ್ತಿದೆ.

ಇಲಿಗಳಿಂದ ಕಲಿತಿದ್ದೇವೆ

ಅಂದಹಾಗೆ ಮುತ್ತು ನೀಡುವುದನ್ನು ಇಲಿಗಳಿಂದ ಕಲಿತಿದ್ದೇವೆ ಎಂದು ಹೇಳಲಾಗಿದೆ. ಸರಿ ಸುಮಾರು 75 ರಿಂದ 125 ದಶಲಕ್ಷ ವರ್ಷದ ಹಿಂದೆ ಇದ್ದ ಇಲಿಗಳಿಂದ ಚುಂಬಿಸುವ ಕಲೆ ಬಂದಿದೆ ಎಂದು ಟೋಕಿಯೋ ಯೂನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ. ಮನುಷ್ಯ ಮತ್ತು ಇಲಿಗಳ ಜೆನೆಟಿಕ್​ ಮೇಕಪ್​ ಒಂದೇ ರೀತಿಯಲ್ಲಿದ್ದು, ಇಯೋಮಯಾ ಎಂಬ ಪೂರ್ವಜ ಇಲಿಯು ತನ್ನ ಪ್ರೀತಿಯ ಬಯಕೆಯನ್ನು ವ್ಯಕ್ತಪಡಿಸಲು ತನ್ನ ಸಂಗಾತಿ ಇಲಿಯ ಮೂಗನ್ನು ಉಜ್ಜುತ್ತಿತ್ತು. ಅಲ್ಲಿಂದಲೇ ಮನುಷ್ಯನ ಜೀನ್ಸ್​ನಲ್ಲಿ ಮುತ್ತು ಕೊಟ್ಟು ಬಯಕೆ ವ್ಯಕ್ತಪಡಿಸುವ ಸ್ವಭಾವ ಬಂದಿದೆ ಎಂದು ಸಂಶೋಧಕರು ಪ್ರತಿಪಾದಿಸಿದ್ದಾರೆ. (ಏಜೆನ್ಸೀಸ್​)