

ಕೊಚ್ಚಿ: ಮೇಕಪ್ ಆರ್ಟಿಸ್ಟ್ ಒಬ್ಬಳು ಪ್ರಿಯಕರನಿಂದಲೇ ಬರ್ಬರ ಹತ್ಯೆಯಾಗಿರುವ ಘಟನೆ ಕೇರಳದ ಕಾಸರಗೋಡಿನ ಕನ್ಹಂಗಾಡ್ನಲ್ಲಿರುವ ಲಾಡ್ಜ್ ಒಂದರಲ್ಲಿ ಮಂಗಳವಾರ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಪಿ.ಬಿ. ದೇವಿಕಾ (34) ಎಂದು ಗುರುತಿಸಲಾಗಿದೆ. ಈಕೆ ಉದ್ಮಾ ಪಂಚಾಯಿತಿಯ ಮುಕ್ಕುನೋಥ್ ನಿವಾಸಿ. ಆಕೆಯ ಮಂಗಳವಾರ ಮಧ್ಯಾಹ್ನ 1.30ಕ್ಕೆ ಹತ್ಯೆ ಮಾಡಿದ ಬಳಿಕ ಪ್ರಿಯಕರ ಸತೀಶ್ (36) ಲಾಡ್ಜ್ ರೂಮ್ ಅನ್ನು ಲಾಕ್ ಮಾಡಿ ಸುಮಾರು 500 ಮೀಟರ್ ದೂರದಲ್ಲಿರುವ ಪೊಲೀಸ್ ಠಾಣೆಗೆ ಕಾಲ್ನಡಿಗೆಯಲ್ಲಿ ತೆರಳಿ ಪೊಲೀಸರ ಮುಂದೆ ಶರಣಾದನು ಎಂದು ಕನ್ಹಂಗಾಡ್ ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ತಿಳಿಸಿದ್ದಾರೆ.
ಸಂಜೆ 5 ಗಂಟೆ ಸುಮಾರಿಗೆ ಸತೀಶ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಬಳಿಕ ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿ ಲಾಡ್ಜ್ ರೂಮ್ ಅನ್ನು ತೆರೆದಾಗ ದೇವಿಕಾ ಕತ್ತು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದಳು ಎಂದು ಬಾಲಕೃಷ್ಣನ್ ನಾಯರ್ ಮಾಹಿತಿ ನೀಡಿದರು.
ಆರೋಪಿ ಸತೀಶ್ ಮುಲ್ಲಿಯಾರ್ ಗ್ರಾಮ ಪಂಚಾಯಿತಿಯ ಬೊವಿಕನಮ್ ಮೂಲದ ನಿವಾಸಿ. ಈತ ಕನ್ಹಂಗಾಡ್ ಪಟ್ಟಣದಲ್ಲಿ ಖಾಸಗಿ ಸೆಕ್ಯುರಿಟಿ ಏಜೆನ್ಸಿಯನ್ನು ನಡೆಸುತ್ತಿದ್ದಾರೆ. ಈಗಾಗಲೇ ಈತನಿಗೆ ಮದುವೆಯಾಗಿದ್ದು, ಒಂದು ಮಗು ಕೂಡ ಇದೆ. ದೇವಿಕಾಗೂ ಮದುವೆ ಆಗಿತ್ತು. ಆಕೆಗೆ ಇಬ್ಬರು ಮಕ್ಕಳಿದ್ದಾರೆ.
ಪತ್ನಿಗೆ ಡಿವೋರ್ಸ್ ನೀಡಿ ತನ್ನೊಂದಿಗೆ ಇರುವಂತೆ ದೇವಿಕಾ ಒತ್ತಾಯ ಮಾಡುತ್ತಿದ್ದಳು. ಹೀಗಾಗಿ ಆಕೆಯನ್ನು ಕೊಲೆ ಮಾಡಿದೆ ಎಂದು ಸತೀಶ್ ಪೊಲೀಸರ ಮುಂದೆ ಹೇಳಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ತನಿಖೆ ಆರಂಭಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಸತೀಶ್ ಲಾಡ್ಜ್ನಲ್ಲಿ ವಾಸವಿದ್ದನು. ಕನ್ಹಂಗಾಡ್ನಿಂದ 20 ಕಿಮೀ ದೂರದಲ್ಲಿರುವ ತನ್ನ ಊರಿನಿಂದ ದೇವಿಕಾ ಲಾಡ್ಜ್ಗೆ ಬಂದಿದ್ದಳು. CITU ಗೆ ಸಂಯೋಜಿತವಾಗಿರುವ ಕೇರಳ ಸ್ಟೇಟ್ ಬಾರ್ಬರ್-ಬ್ಯೂಟಿಷಿಯನ್ ವರ್ಕರ್ಸ್ ಯೂನಿಯನ್‌ನ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಲು ಕನ್ಹಂಗಾಡ್ಗೆ ಬಂದಿದ್ದಳು. ಸಮಾವೇಶ ಬಳಿಕ ಸತೀಶ್ನನ್ನು ಭೇಟಿ ಮಾಡಿ, ಆತನೊಂದಿಗೆ ಲಾಡ್ಜ್ಗೆ ತೆರಳಿದ್ದಳು. ಈ ವೇಳೆ ಆಕೆಯನ್ನು ಕೊಂದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ಏಜೆನ್ಸೀಸ್)