ನ್ಯೂಸ್

Web Exclusive|ಟಿವಿ ಕೊರಗು ನೀಗಿಸಿದ ಶಾಲೆ - ಸಂವೇದಾ ಇ-ಕ್ಲಾಸ್​ನಿಂದ ವಂಚಿತರಾಗಲ್ಲ ವಿದ್ಯಾರ್ಥಿಗಳು

ಕಿರಣ್ ಮಾದರಹಳ್ಳಿ ಚಾಮರಾಜನಗರ

ಆನ್​ಲೈನ್ ಕ್ಲಾಸ್​ನಲ್ಲಿ ಭಾಗವಹಿಸಲು ಮೊಬೈಲ್ ಇಲ್ಲ. ಜಗುಲಿ ಮೇಲೆ ನಡೆಯುತ್ತಿದ್ದ ವಿದ್ಯಾಗಮ ಪಾಠ ನಿಂತು ಹೋಗಿದೆ. ಚಂದನಾ ಟಿವಿಯಲ್ಲಿ ಪ್ರಸಾರವಾಗಲಿರುವ ಪಾಠ ವೀಕ್ಷಿಸಲು ಮನೆಯಲ್ಲಿ ಟಿವಿಯೂ ಇಲ್ಲ ಎಂಬ ವಿದ್ಯಾರ್ಥಿಗಳ ಕೊರಗು ನೀಗಿಸಲು ಸರ್ಕಾರಿ ಶಾಲೆಯೊಂದು ಮುಂದಾಗಿದೆ...!

ನಮ್ಮ ಶಾಲೆಯ ಅನೇಕ ವಿದ್ಯಾರ್ಥಿಗಳ ಮನೆಯಲ್ಲಿ ಟಿವಿ ಇಲ್ಲ. ಇದರಿಂದ ನ.23ರಿಂದ ಪ್ರಾರಂಭವಾಗಲಿರá-ವ ಸಂವೇದಾ ಇ-ಕ್ಲಾಸ್​ನಿಂದ 5ರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳು ವಂಚಿತರಾಗಬಾರದೆಂದು ದಾನಿಗಳ ನೆರವಿನಿಂದ ಟಿವಿ ಪಡೆದುಕೊಂಡಿದ್ದೇವೆ. ಹಲವು ವರ್ಷಗಳ ಹಿಂದೆ 400 ರಿಂದ 500 ಇದ್ದ ನಮ್ಮ ಶಾಲೆಯ ದಾಖಲಾತಿ 150ಕ್ಕೆ ಇಳಿದಿದೆ. ಇದನ್ನು ಹೆಚ್ಚಿಸಲು ಮತ್ತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳನ್ನು ನೀಡಿ ಪಠ್ಯವಿಷಯವನ್ನು ಸಮರ್ಥವಾಗಿ ಅರ್ಥೈಸಲು ಸ್ನೇಹಿತರು, ಸಂಘ-ಸಂಸ್ಥೆಗಳ ನೆರವು ಪಡೆದು ಹೈಟೆಕ್ ಲ್ಯಾಬ್ ನಿರ್ವಿುಸಿದ್ದೇವೆ. | ಮಹೇಂದ್ರ, ಶಿಕ್ಷಕ ಮನೆಯಲ್ಲಿ ಟಿವಿ ಇಲ್ಲದ ಮಕ್ಕಳಿಗಾಗಿ ಸರ್ಕಾರಿ ಶಾಲೆಯೊಂದು ಟಿವಿ ವ್ಯವಸ್ಥೆ ಮಾಡಿರುವುದು ಉತ್ತಮ ವಿಚಾರ. ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕಾಗಿರುವುದರಿಂದ ಶಾಲೆಯಲ್ಲಿ ಮಕ್ಕಳನ್ನು ಗುಂಪು ಸೇರಿಸುವುದು ಸರಿಯಲ್ಲ. ಪ್ರತಿ ಒಂದು ಮಕ್ಕಳಿಗೆ ಟಿವಿ ನೋಡಲು ಸಮಯ ನಿಗದಿಪಡಿಸಿ ಅವಕಾಶ ಕಲ್ಪಿಸಿಕೊಡಬೇಕೆಂದು ಸೂಚನೆ ನೀಡುತ್ತೇನೆ. | ಜವರೇಗೌಡ, ಡಿಡಿಪಿಐ, ಚಾಮರಾಜನಗರ.

ಶಿಕ್ಷಣ ಇಲಾಖೆಯು ನ.23ರಿಂದ 5, 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಚಂದನ ವಾಹಿನಿಯಲ್ಲಿ ‘ಸಂವೇದಾ ಇ-ಕ್ಲಾಸ್’ ಕಲಿಕಾ ಕಾರ್ಯಕ್ರಮವನ್ನು ಆರಂಭಿಸಲಿದೆ. ಆದರೆ ಮನೆಯಲ್ಲಿ ಟಿವಿ ಇಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು ಈ ಕಾರ್ಯಕ್ರಮ ವೀಕ್ಷಣೆಯಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ, ಈ ಮಕ್ಕಳಿಗಾಗಿ ತಾಲೂಕಿನ ಕೆರೆಹಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯು ದಾನಿಗಳ ನೆರವು ಪಡೆದು 40 ಸಾವಿರ ರೂ. ಬೆಲೆಯ 55 ಇಂಚಿನ ಟಿವಿಯನ್ನು ಕೊಡುಗೆಯಾಗಿ ಪಡೆದುಕೊಂಡಿದೆ.

ಕೆರೆಹಳ್ಳಿ ಮಾತ್ರವಲ್ಲದೆ ಸಮೀಪದ ಹರಗನಪುರ, ಯಳವರಹುಂಡಿ ಗ್ರಾಮಗಳಿಂದಲೂ ಈ ಶಾಲೆಗೆ ಒಟ್ಟು 130 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇವರಲ್ಲಿ 5ನೇ ತರಗತಿ-6 ವಿದ್ಯಾರ್ಥಿಗಳು, 6ನೇ ತರಗತಿ-27, 7ನೇ ತರಗತಿ- 20 ಮಕ್ಕಳಿದ್ದಾರೆ. ಶಾಲೆಯ ಶಿಕ್ಷಕರು ಅಂದಾಜಿಸಿರುವಂತೆ 5ರಿಂದ 7ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 15ರಿಂದ 20 ಮಕ್ಕಳ ಮನೆಯಲ್ಲಿ ಟಿವಿ ಇಲ್ಲ. ಈ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮುಂದುವರಿಸಲು ಎದುರಾಗಿರುವ ತೊಡಕು ನಿವಾರಿಸಲು ಶಾಲೆಯ ಟಿವಿ ಸಹಕಾರಿಯಾಗಲಿದೆ.

ಮನೆಯಲ್ಲಿ ಟಿವಿ ಇಲ್ಲದ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಸಂವೇದಾ ಇ-ಕ್ಲಾಸ್​ನಲ್ಲಿ ಭಾಗವಹಿಸಬಹುದು. ಕರೊನಾ ಹಿನ್ನೆಲೆ ಮಾರ್ಗಸೂಚಿ ಪಾಲಿಸಬೇಕಾಗಿರುವುದರಿಂದ ಗರಿಷ್ಠ 5 ವಿದ್ಯಾರ್ಥಿಗಳಿಗೆ ಮಾತ್ರ ಟಿವಿ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿಕೊಡಲು ಚಿಂತನೆ ನಡೆದಿದೆ. ಕಲಿಕಾ ಕಾರ್ಯಕ್ರಮವನ್ನು ರೆಕಾರ್ಡಿಂಗ್ ಮಾಡಿ ಅವಶ್ಯಕತೆ ಇರುವ ಉಳಿದ ವಿದ್ಯಾರ್ಥಿಗಳಿಗೆ ತೋರಿಸಲು ಶಾಲೆಯ ಶಿಕ್ಷಕರು ಚಿಂತಿಸಿದ್ದಾರೆ.

ಹೈಟೆಕ್ ಪ್ರಯೋಗಶಾಲೆ ಇದೆ : ಟೆಲಿಸ್ಕೋಪ್, ಲ್ಯಾಪ್​ಟಾಪ್, ಪ್ರೊಜೆಕ್ಟರ್, ಗುಣಮಟ್ಟದ ಕುರ್ಚಿಗಳು ಸೇರಿ 3 ಲಕ್ಷ ರೂ.ಗಳವರೆಗಿನ ಕಲಿಕಾ ಸಾಮಗ್ರಿಗಳಿರುವ ಹೈಟೆಕ್ ಪ್ರಯೋಗಾಲಯ ಕೆರೆಹಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿದೆ. ಪ್ರಯೋಗಾಲಯ ಸ್ಥಾಪನೆಗೆ ರಾಷ್ಟ್ರೀಯ ಆವಿಷ್ಕಾರ ಅಭಿಯಾನದಡಿ 25 ಸಾವಿರ ರೂ. ಪಡೆದುಕೊಂಡಿರುವ ಈ ಶಾಲೆ, ಉಳಿದೆಲ್ಲವನ್ನೂ ದಾನಿಗಳ ನೆರವಿನಿಂದಲೇ ಪಡೆದುಕೊಂಡಿದೆ.

ದೀನಬಂಧು ಸಂಸ್ಥೆಯಿಂದ ಗಣಿತ, ವಿಜ್ಞಾನ ಕಲಿಕಾ ಸಾಮಗ್ರಿಗಳ ಖರೀದಿಗೆ 1 ಲಕ್ಷ ರೂ., ಪ್ರಯೋಗಾಲಯದ ಪೀಠೋಪಕರಣಕ್ಕಾಗಿ 25 ಸಾವಿರ ರೂ., ಮೈಸೂರು ಪೇಂಟ್ಸ್​ನಿಂದ ಟೆಲಿಸ್ಕೋಪ್, ಪ್ರೊಜೆಕ್ಟರ್, ಲ್ಯಾಪ್​ಟಾಪ್ ಪಡೆದುಕೊಂಡಿದೆ.  ಕರೊನಾ ಹರಡುವಿಕೆಗೂ ಮುನ್ನ ಶಾಲೆ ತೆರೆದಿದ್ದಾಗ ಈ ಸಾಮಗ್ರಿಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಪಾಠ ಬೋಧನೆ ಮಾಡಿ ವಿಷಯ ವಸ್ತುವನ್ನು ಶಿಕ್ಷಕರು ಮನಮುಟ್ಟಿಸುತ್ತಿದ್ದರು. ಕ್ಲಿಷ್ಟಕರ ವಿಷಯ ಎನಿಸಿರುವ ಗಣಿತ ಮತ್ತು ವಿಜ್ಞಾನ ಅರ್ಥೈಸುವಿಕೆಗಾಗಿ ಪ್ರಯೋಗಶಾಲೆಯನ್ನು ಹೆಚ್ಚಾಗಿ ಬಳಸಲಾಗಿದೆ. ಕೋವಿಡ್ ಬಂದ ಮೇಲೆ ಶಾಲೆ ಮುಚ್ಚಿರುವ ಸಂದರ್ಭದಲ್ಲಿ ದಾನಿಗಳಿಂದ ಟಿವಿಯನ್ನು ಕೊಡುಗೆಯಾಗಿ ಪಡೆದಿರುವುದು ಗಮನಾರ್ಹ ಸಂಗತಿ.