

ಮುಂಬೈ: ಶಿವಸೇನಾ ಕಾರ್ಯಕರ್ತ 'ಕರಾಚಿ' ಸ್ವೀಟ್ಸ್ ಹೆಸರು ಬದಲಾಯಿಸಿ ಅಂತ ಬೇಡಿಕೆ ಇಟ್ಟರೆ, ಅದಕ್ಕೂ ತನಗೂ ಸಂಬಂಧ ಇಲ್ಲ ಅಂತ ಶಿವಸೇನೆ ಕೈ ಚೆಲ್ಲಿದೆ!
ಶಿವಸೇನಾ ಕಾರ್ಯಕರ್ತ ನಿತಿನ್ ನಂದಗಾಂವ್ಕರ್ ಎಂಬುವರು ತಮ್ಮ ಫೇಸ್ಬುಕ್ನಲ್ಲಿ ಒಂದು ವಿಡಿಯೋ ಅಪ್ಲೋಡ್ ಮಾಡಿದ್ದು, ಅದರಲ್ಲಿ 'ಕರಾಚಿ' ಸ್ವೀಟ್ಸ್ ಹೆಸರು ಬದಲಾಯಿಸಿ ಅನ್ನೋ ಬೇಡಿಕೆ ಇಟ್ಟಿದ್ದಾರೆ. ಬಾಂದ್ರಾ ಉಪನಗರದಲ್ಲಿ 'ಕರಾಚಿ' ಸ್ವೀಟ್ಸ್ ಇದೆ. ಕರಾಚಿ ಎಂಬುದು ಪಾಕಿಸ್ತಾನದ ನಗರ ಒಂದರ ಹೆಸರು. ಪಾಕಿಸ್ತಾನ ಉಗ್ರಗಾಮಿಗಳ ದೇಶ. ಆ ದೇಶದಲ್ಲಿರುವ ನಗರದ ಹೆಸರನ್ನು ಸ್ವೀಟ್ಗಳಿಗೇಕೆ ಇರಿಸಬೇಕು? ಆ ಬೇಕರಿಯವರ ತಂದೆಯವರದ್ದೋ, ತಾತನವರದ್ದೋ ಹೆಸರನ್ನು ಸ್ವೀಟ್ಸ್ಗೆ ಇಡಲಿ. ಗಡಿಯಲ್ಲಿ ದೇಶ ಕಾಯುವ ಯೋಧರನ್ನೊಮ್ಮೆ ನೆನಪಿಸಿಕೊಂಡು ಈ ಕೆಲಸ ಮಾಡಲಿ ಎಂದು ಹೇಳಿದ್ದಾರೆ.
ಇನ್ನೂ ಮುಂದುವರಿದು, ಮುಂಬೈ ಮಹಾನಗರದಲ್ಲಿ ಕಳೆದ 60ಕ್ಕೂ ಹೆಚ್ಚು ವರ್ಷಗಳಿಂದ ಎಲ್ಲೆಲ್ಲಿ ಕರಾಚಿ ಬೇಕರಿ, ಕರಾಚಿ ಸ್ವೀಟ್ಸ್ ಎಂದು ಹೆಸರಿಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದಾರೋ ಅವರೆಲ್ಲರೂ ಇನ್ನು 15 ದಿನದೊಳಗೆ ಹೆಸರು ಬದಲಾಯಿಸಿಕೊಳ್ಳಬೇಕು. ಹೊಸ ನೇಮ್ ಬೋರ್ಡ್ ಹಾಕಿಸಿಕೊಳ್ಳಬೇಕು ಎಂಬ ಬೆದರಿಕೆಯನ್ನೂ ಒಡ್ಡಿದ್ದಾರೆ. ಇದನ್ನು ಗಮನಿಸಿದ ಆಮ್ ಆದ್ಮಿ ಪಕ್ಷ ಕೂಡಲೇ ಶಿವಸೇನೆಯನ್ನು ತರಾಟೆಗೆ ತೆಗೆದುಕೊಂಡಿದ್ದು, ಟ್ವೀಟ್ ಮೂಲಕ ಬೆದರಿಕೆಯನ್ನು ಖಂಡಿಸಿದೆ. ಈ ನಡುವೆ, ಶಿವಸೇನಾ ನಾಯಕ ಸಂಜಯ್ ರಾವತ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ಪಕ್ಷಕ್ಕೂ ಆ ಬೇಡಿಕೆ, ಬೆದರಿಕೆಗೂ ಸಂಬಂಧ ಇಲ್ಲ. ಇಷ್ಟಕ್ಕೂ ಕರಾಚಿ ಸ್ವೀಟ್ಸ್, ಕರಾಚಿ ಬೇಕರಿಗೂ ಪಾಕಿಸ್ತಾನಕ್ಕೂ ಯಾವುದೇ ನಂಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)