ನವದೆಹಲಿ: ಬ್ರಿಟನ್ಗೆ ಕರೊನಾ ವೈರಾಣು ಆವರಿಸಿಕೊಂಡಿದ್ದು ಜನವರಿ ಅಂತ್ಯದಲ್ಲಿ. ಅಲ್ಲಿಂದ ಮೇ 22ರ ವೇಳೆಗೆ 254,195 ಕರೊನಾ ಕೇಸುಗಳು ದೃಢವಾಗಿವೆ. ಈ ನಡುವೆ 36,393 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸಾಯುತ್ತಿರುವವರಲ್ಲಿ ಶೇ. 90ಕ್ಕಿಂತ ಹೆಚ್ಚು ಜನರಲ್ಲಿ ಬೇರೆ ಬೇರೆ ಕಾಯಿಲೆಗಳಿದ್ದವು ಅಥವಾ ಅವರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರು.
ಸಾಮುದಾಯಿಕವಾಗಿ ಹಬ್ಬುವುದಕ್ಕಿಂತ ಹೆಚ್ಚು ಬ್ರಿಟನ್ನ ಆರೈಕೆ ಘಟಕಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಕರೊನಾ ಹರಡುವಿಕೆ ಪ್ರಮಾಣವೂ ಹೆಚ್ಚಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಅಧಿಕ ಸಾವಿನ ಪ್ರಮಾಣ ವರದಿಯಾಗಿದೆ. ಯುನೈಟೆಡ್ ಕಿಂಗ್ಡಮ್ ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಉತ್ತರ ಐರ್ಲೆಂಡ್ನಲ್ಲಿ ಸಾವಿನ ಪ್ರಮಾಣ ಅತಿ ಕಡಿಮೆ ದಾಖಲಾಗಿದೆ. ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಇಲಾಖೆಯು ವೈರಸ್ ಹರಡುವುದನ್ನು ಕಡಿಮೆಗೊಳಿಸಲು ಸಾರ್ವಜನಿಕ ಆರೋಗ್ಯ ಮಾಹಿತಿ ಅಭಿಯಾನ ಆರಂಭಿಸಿತ್ತು.
ಪ್ರಯೋಗ ಶುರು ಕ್ಲೋರೋಕ್ವಿನ್ ಮತ್ತು ಹೈಡ್ರೋಕ್ಲೋರೊಕ್ವಿನ್ ಕೋವಿಡ್ -19 ತಡೆಯಬಹುದೇ ಎಂಬುದನ್ನು ಪತ್ತೆಹಚ್ಚುವ ಕಾರ್ಯ ಬ್ರೖಟನ್, ಆಕ್ಸ್ಫರ್ಡ್ನಲ್ಲಿ ಪ್ರಾರಂಭವಾಗಿದೆ. ಈ ಅಧ್ಯಯನದಲ್ಲಿ ತೊಡಗಿಕೊಂಡಿರುವ ಆಕ್ಸ್ಫರ್ಡ್ ವಿವಿಯ ಪ್ರೊಫೆಸರ್ ನಿಕೋಲಸ್ ವೈಟ್, ಕ್ಲೋರೊಕ್ವಿನ್ ಅಥವಾ ಹೈಡ್ರಾಕ್ಸಿಕ್ಲೋರೊಕ್ವಿನ್ ಕೋವಿಡ್-19 ವಿರುದ್ಧ ಪ್ರಯೋಜನಕಾರಿಯೋ ಅಥವಾ ಹಾನಿಕಾರಕವೋ ಎಂಬುದು ಅಧ್ಯಯನ ಬಳಿಕವಷ್ಟೇ ಗೊತ್ತಾಗ ಲಿದೆ. ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಲಸಿಕೆ ಕಂಡು ಹಿಡಿಯಲು ಸಾಕಷ್ಟು ಸಮಯ ಬೇಕಾಗಬಹುದು ಎನ್ನುತ್ತಾರೆ.
ಕರೊನಾ ವೈರಸ್ ಕಾಯ್ದೆ: ಮಾ.20ರಂದು, ಯುಕೆ ವ್ಯಾಪ್ತಿಗೆ ಬರುವ ವೇಲ್ಸ್, ಉತ್ತರ ಐರ್ಲೆಂಡ್, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಸರ್ಕಾರಗಳು ಶಾಲೆ, ರೆಸ್ಟೋರೆಂಟ್, ಪಬ್, ಒಳಾಂಗಣ ಮನರಂಜನಾ ಸ್ಥಳ ಹಾಗೂ ವಿರಾಮ ಕೇಂದ್ರಗಳನ್ನು ಕೆಲವು ವಿನಾಯಿತಿಗಳೊಂದಿಗೆ ಮುಚ್ಚುವುದಾಗಿ ಘೊಷಿಸಿದವು. ಬಹುತೇಕ ಎಲ್ಲಾ ವ್ಯವಹಾರಗಳು, ಸೌಲಭ್ಯಗಳು ಮತ್ತು ಸ್ಥಳಗಳನ್ನೂ ಮುಚ್ಚಲಾಯಿತು. ಲಾಕ್ಡೌನ್ ಜಾರಿಗೊಳಿಸಲು ಪೊಲೀಸರಿಗೂ ಅಧಿಕಾರ ನೀಡಲಾಯಿತು. ಕರೊನಾ ವೈರಸ್ ಕಾಯ್ದೆ-2020 ಸರ್ಕಾರಕ್ಕೆ ತುರ್ತು ಅಧಿಕಾರವನ್ನು ನೀಡಿತು. ಎರಡನೆಯ ಮಹಾಯುದ್ಧದ ಬಳಿಕ ಇಂಥದ್ದೊಂದು ತುರ್ತು ಅಧಿಕಾರ ಬಳಸಿದ್ದು ಇದೇ ಮೊದಲು! ಸಹಜವಾಗಿಯೇ ಸುದೀರ್ಘ ಲಾಕ್ ಡೌನ್ ಯುಕೆ ಆರ್ಥಿಕತೆಯನ್ನು ಹಾನಿಗೊಳಿಸಿದೆ. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಮಾನಸಿಕ ಆರೋಗ್ಯ ಕೆಡುವುದರ ಜತೆಗೆ ಆತ್ಮಹತ್ಯೆ ಪ್ರಮಾಣವೂ ಹೆಚ್ಚಾಗಿದೆ. ಹೆಚ್ಚು ದುರ್ಬಲರನ್ನು ರಕ್ಷಿಸುವ ಮೂಲಕ ಮತ್ತು ಕರೊನಾ ಹರಡುವಿಕೆ-ಸಂಪರ್ಕ ಪತ್ತೆಹಚ್ಚುವಿಕೆ ತೀವ್ರಗೊಳಿಸಿ ಲಾಕ್ಡೌನ್ ಕೊನೆಗೊಳಿಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.
ಒತ್ತಡದಲ್ಲಿ ಪ್ರಧಾನಿ: ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಪ್ತ ಹಾಗೂ ಸಲಹೆಗಾರ ಡೊಮನಿಕ್ ಕಮ್ಮಿಂಗ್ಸ್ರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಕಮ್ಮಿಂಗ್ಸ್ ಪೋಷಕರ ಮನೆಗೆ ಪ್ರಯಾಣಿಸುವ ಮೂಲಕ ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದರು. ಇದರಿಂದ ಬ್ರಿಟನ್ ಪ್ರಧಾನಿ ಭಾರೀ ಒತ್ತಡದಲ್ಲಿದ್ದಾರೆ. ಪ್ರಧಾನಿಗೆ ಕರೊನಾ ದೃಢವಾಗಿದ್ದ ಸಂದರ್ಭದಲ್ಲೇ ಕಮ್ಮಿಂಗ್ಸ್ರಲ್ಲೂ ರೋಗ ಲಕ್ಷಣಗಳು ಕಂಡುಬಂದಿದ್ದವು. ಆದರೆ ಅವರು ತಮ್ಮ ಪತ್ನಿ ಜತೆ ಈಶಾನ್ಯ ಇಂಗ್ಲೆಂಡ್ನ ಡರ್ಹಾಮ್ಲ್ಲಿರುವ ಹೆತ್ತವರ ಮನೆಗೆ ಪ್ರಯಾಣಿಸಿದ್ದರು.
ಸಮುದ್ರ ಬೀಚ್ನಲ್ಲಿ ಸೇರಿದ ಜನ: ಕರೊನಾ ವೈರಾಣುವಿನಿಂದ ತತ್ತರಿಸಿರುವ ಯುನೈಟೆಡ್ ಕಿಂಗ್ಡಂನಲ್ಲಿ ಬೇಸಗೆಯ ಆರಂಭಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಈ ನಡುವೆ ಲಾಕ್ಡೌನ್ ಸಡಿಲಗೊಳಿಸಿದ್ದೇ ತಡ, ನೂರಾರು ಮಂದಿ ಯಾವುದೇ ದೈಹಿಕ ಅಂತರ ಕಾಯ್ದುಕೊಳ್ಳದೆ ಸಮುದ್ರದ ಬೀಚ್ ನಲ್ಲಿ ಸಂಭ್ರಮಿಸುತ್ತಿದ್ದ ದೃಶ್ಯಗಳಿಲ್ಲಿ ಕಂಡುಬಂದಿವೆ. ಬ್ರೖೆಟನ್, ಬೋರ್ನ್ ಮೌತ್ ಮತ್ತು ಸೌತೆಂಡ್-ಆನ್-ಸೀ ಸೇರಿದಂತೆ ಜನಪ್ರಿಯ ಕಡಲತೀರದ ತಾಣಗಳು ಭಾರೀ ಜನಸಂದಣಿಗೆ ಸಾಕ್ಷಿಯಾಗಿದ್ದವು! ಇಂಗ್ಲೆಂಡ್ನಲ್ಲಿ ಹೊಸ ನಿಯಮಗಳ ಪ್ರಕಾರ, ವಿರಾಮ ತಾಣಗಳಿಗೆ ಪ್ರಯಾಣ ಬೆಳೆಸಲು ಮತ್ತು ಮನೆಯ ಹೊರಗೆ ಒಬ್ಬ ವ್ಯಕ್ತಿಯನ್ನು ಭೇಟಿ ಮಾಡಲು ಅವಕಾಶವಿದೆ. ಹಾಗಂತ ದೈಹಿಕ ಅಂತರ ಕಡ್ಡಾಯ. ಬೀಚ್ ಗಳಲ್ಲಿನ ದೃಶ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜನರಲ್ಲಿ ಆತಂಕ ಹೆಚ್ಚಿಸಿದ್ದು, ಮತ್ತೊಂದು ಸುತ್ತಿನ ಕರೊನಾಕ್ಕೆ ಸ್ವಾಗತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ.