ನ್ಯೂಸ್

ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?

Webdesk - Ravikanth

ನವದೆಹಲಿ: ಕರೊನಾ ಎರಡನೇ ಅಲೆ, ಮೂರನೇ ಅಲೆ ಜತೆಗೆ ಈಗ ಕರೊನಾ ಡೆಲ್ಟಾ ಪ್ಲಸ್​ ಎಂಬ ಹೊಸ ಆತಂಕವೂ ಕಾಡುತ್ತಿದೆ. ಇದು ಅಧಿಕ ಸೋಂಕುಕಾರಕ ಎನ್ನಲಾಗುತ್ತಿದ್ದರೂ ಈ ಒಂದು ವರ್ಗದವರಂತೂ ಇದಕ್ಕೆ ಅಷ್ಟೇನೂ ಹೆದರಬೇಕಾಗಿಲ್ಲ. ಏಕೆಂದರೆ ಈಗಾಗಲೇ ಲಸಿಕೆ ಪಡೆದವರಿಗಿಂತಲೂ ಇವರಲ್ಲಿ ಡೆಲ್ಟಾ ಪ್ಲಸ್​ ಸೋಂಕನ್ನು ಎದುರಿಸುವ ನಿಟ್ಟಿನಲ್ಲಿ ಹೆಚ್ಚಿನ ರೋಗನಿರೋಧಕ ಶಕ್ತಿ ಇರುತ್ತದೆ.

ಹೌದು.. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​ (ಐಸಿಎಂಆರ್​) ನಡೆಸಿದ ಅಧ್ಯಯನವೊಂದು ಈ ಅಂಶವನ್ನು ಕಂಡುಕೊಂಡಿದೆ. ಡೆಲ್ಟಾ ಪ್ಲಸ್​ ಈಗಾಗಲೇ ಆಗಿರುವ ಕೋವಿಡ್​ನ ಇತರ ರೂಪಾಂತರಗಳಿಗಿಂತಲೂ ಹೆಚ್ಚು ಹಾಗೂ ತೀವ್ರ ಸೋಂಕುಕಾರಕ. ಆದರೆ ಇದೊಂದು ಅಂಶ ಡೆಲ್ಟಾ ಪ್ಲಸ್ ವಿರುದ್ಧ ಹೆಚ್ಚಿನ ಸುರಕ್ಷೆ ನೀಡಲಿದೆ ಎಂದು ಅಧ್ಯಯನ ಹೇಳಿದೆ.

ಈ ಅಧ್ಯಯನದ ಫಲಿತಾಂಶ ಈಗಾಗಲೇ ಸೋಂಕಿಗೀಡಾಗಿ ಗುಣಮುಖರಾಗಿರುವವರಿಗೆ ಖುಷಿಯನ್ನು ನೀಡಲಿದೆ. ಏಕೆಂದರೆ ಒಂದು ಅಥವಾ ಎರಡೂ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದವರಿಗಿಂತಲೂ ಬರೀ ಒಂದು ಡೋಸ್ ಲಸಿಕೆ ಪಡೆದಿದ್ದರೂ ಈಗಾಗಲೇ ಒಮ್ಮೆ ಕೋವಿಡ್​ನಿಂದ ಬಳಸಿ ಗುಣಮುಖರಾದವರು ಡೆಲ್ಟಾ ಪ್ಲಸ್​ ಸೋಂಕನ್ನು ಹೆಚ್ಚು ಸಮರ್ಥವಾಗಿ ಎದುರಿಸಬಲ್ಲರು ಎಂಬುದನ್ನು ಈ ಅಧ್ಯಯನ ಕಂಡುಕೊಂಡಿದೆ. (ಏಜೆನ್ಸೀಸ್​)