ನ್ಯೂಸ್

ತಂದೆ-ತಾಯಿಯಿಂದ ದೂರ ಮಾಡಿದ್ದಕ್ಕೆ ಪತ್ನಿಯನ್ನೇ ಕೊಲೆ ಮಾಡಿಸಲು ಮುಂದಾದ ಪತಿ: ಆರು ತಿಂಗಳ ಬಳಿಕ ಆಗಿದ್ದೇನು?

ಬೆಂಗಳೂರು: ತಂದೆ-ತಾಯಿಯರಿಂದ ತನ್ನನ್ನು ದೂರ ಮಾಡಿದ್ದಕ್ಕೆ ಪತ್ನಿಯಿಂದ ದೂರವಾಗಲು ನಿರ್ಧರಿಸಿದ್ದಲ್ಲದೆ ಆಕೆಯನ್ನು ಕೊಲೆ ಮಾಡಿಸಲಿಕ್ಕೂ ಪತಿ ಪ್ರಯತ್ನ ಮಾಡಿದ ಪ್ರಕರಣವೊಂದು ನಡೆದಿದೆ. ಆದರೆ ಎಲ್ಲವೂ ಅಂದುಕೊಂಡಂತೆಯೇ ಆಗದ್ದರಿಂದ ಆರು ತಿಂಗಳ ಬಳಿಕ ಸಂಕಷ್ಟ ಎದುರಾಗಿದೆ.

ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅರವಿಂದ ಹಾಗೂ ಉದಯಕುಮಾರ್ ಬಂಧಿತರು. ಅರವಿಂದ ಹಾಗೂ ಚೈತನ್ಯ ಎಂಬ ದಂಪತಿಗೆ ಸಂಬಂಧಿತ ಪ್ರಕರಣ ಇದಾಗಿದೆ. ಅರವಿಂದ ಒಂದೂವರೆ ವರ್ಷದ ಹಿಂದೆ ಚೈತನ್ಯಳನ್ನು ಮದುವೆಯಾಗಿದ್ದ.

ಮದುವೆ ಬಳಿಕ ಅರವಿಂದ ತನ್ನ ತಂದೆ-ತಾಯಿಯಿಂದ ಬೇರೆ ಆಗುವಂತಾಗಿತ್ತು. ಇದೇ ಕಾರಣಕ್ಕೆ ಪತಿ-ಪತ್ನಿ ಮಧ್ಯೆ ಮನಸ್ತಾಪ ಉಂಟಾಗಿತ್ತು. ತಂದೆ-ತಾಯಿಯಿಂದ ಬೇರೆ ಮಾಡಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದ. ಆದರೆ ಪತಿಯನ್ನು ತೀವ್ರವಾಗಿ ಪ್ರೀತಿಸುತ್ತಿದ್ದ ಚೈತನ್ಯ ವಿಚ್ಛೇದನ ಕೊಡಲು ಸಿದ್ಧಳಿರಲಿಲ್ಲ.

ಹೀಗಾಗಿ ಜಗಳವಾಡಿ ತನ್ನನ್ನು ತಂದೆ-ತಾಯಿಯಿಂದ ದೂರ ಆಗುವಂತೆ ಮಾಡಿದ ಪತ್ನಿಯನ್ನು ಉಳಿಸಬಾರದು ಎಂದು ನಿರ್ಧರಿಸಿದ್ದ ಅರವಿಂದ, ಪತ್ನಿಯನ್ನೇ ಕೊಲೆ ಮಾಡಿಸಲು ತೀರ್ಮಾನಿಸಿದ್ದ. ಅದಕ್ಕಾಗಿ ಹಳೆಯದೊಂದು ಟಾಟಾ ಸುಮೋ ಖರೀದಿಸಿ, ಅದಕ್ಕೊಬ್ಬ ಚಾಲಕನನ್ನೂ ನೇಮಿಸಿದ್ದ. ಉದಯಕುಮಾರ್ ಎಂಬ ಆ ಚಾಲಕನಿಗೆ ಅಪಘಾತವಾದ ರೀತಿಯಲ್ಲಿ ಪತ್ನಿಯನ್ನು ಕೊಲೆ ಮಾಡಿಸುವಂತೆ ಹೇಳಿದ್ದ.

ಅರವಿಂದ್ ಸೂಚನೆಯಂತೆ ಉದಯ್​ಕುಮಾರ್ ಸಿಸಿಟಿವಿ ಇರದಂಥ ಜಾಗವೊಂದನ್ನು ಗುರುತಿಸಿ ಅಲ್ಲಿ ಚೈತನ್ಯಳನ್ನು ಆ್ಯಕ್ಸಿಡೆಂಟ್ ಮಾದರಿಯಲ್ಲಿ ಕೊಲೆ ಮಾಡಲು ಯತ್ನಿಸುತ್ತಾನೆ. ಆದರೆ ಆಕೆ ಸಣ್ಣಪುಟ್ಟ ಗಾಯಗಳಿಂದಾಗಿ ಬದುಕುಳಿಯುತ್ತಾಳೆ. ಈ ಸಂಬಂಧ ಅಪಘಾತ ಪ್ರಕರಣ ದಾಖಲಾದ್ದರಿಂದ, ಪೊಲೀಸರು ಕಾರು ಪತ್ತೆಗೆ ಮುಂದಾಗಿದ್ದರು. ಆಗ ಉದಯಕುಮಾರ್ ಜಾಡು ಪತ್ತೆ ಮಾಡಿದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ನಿಜಾಂಶ ಬಯಲಾಗಿದೆ. ಬಳಿಕ ಆರೋಪಿಗಳನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.