

ಬೆಂಗಳೂರು: ಉಡುಪಿ ಜಿಲ್ಲೆ ಕುಂದಾಪುರದ ಪ್ರಾದೇಶಿಕ ಭಾಷೆಯಾದ ಕುಂದಗನ್ನಡದ ಅಭಿಮಾನದಿಂದ ಸ್ಥಳೀಯರು ವರ್ಷಕ್ಕೊಮ್ಮೆ ಆಚರಿಸುವ ವಿಶ್ವ ಕುಂದಾಪ್ರ (ಕುಂದಾಪುರ) ಕನ್ನಡ ದಿನ ನಾಳೆ (ಜು. 17) ಆಚರಣೆ ಆಗಲಿದೆ.
ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯಲ್ಲಿ ಮುಖ್ಯಮಂತ್ರಿಯವರು ಇದೇ ಮೊದಲ ಸಲ ಭಾಗವಹಿಸಲಿದ್ದು, ಐದನೇ ವರ್ಷವಾದ ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಮುನ್ನಾ ದಿನವಾದ ಇಂದಿನಿಂದಲೇ ಕೆಲವೆಡೆ ಸಂಭ್ರಮ ಆರಂಭವಾಗಿದ್ದು, ನಾಳೆ ಕುಂದಾಪುರದ ಹಲವೆಡೆ ಹಾಗೂ ರಾಜ್ಯ-ದೇಶದ ವಿವಿಧೆಡೆ ಇರುವ ಕುಂದಗನ್ನಡಿಗರು ತಾವಿದ್ದಲ್ಲೇ ತಮ್ಮ ಭಾಷೆ-ಬದುಕಿನ ಸಂಭ್ರಮವನ್ನು ಆಚರಿಸಲಿದ್ದಾರೆ.
ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಈ ಕರ್ಕಾಟಕ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತಿದ್ದು, ಅದು ಈ ಸಲ ಜುಲೈ 17ರಂದು ಆಚರಣೆ ಆಗಲಿದೆ.
ಬೆಂಗಳೂರಿನಲ್ಲಿ ಇರುವ ಕುಂದಗನ್ನಡಿಗರು ಜು. 23ರಂದು ಬೆಂಗಳೂರಿನ ವಿಜಯನಗರದ ಬಂಟರ ಸಂಘದಲ್ಲಿ ಅದ್ಧೂರಿಯಾಗಿ ವಿಶ್ವ ಕುಂದಾಪುರ ಕನ್ನಡ ದಿನ ಆಚರಿಸಲಿದ್ದಾರೆ. ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ನಡೆಯಲಿರುವ ಈ ಸಮಾರಂಭದಲ್ಲಿ ಕುಂದಗನ್ನಡದ ಕಲರವ, ಕುಂದಗನ್ನಡ ಬದುಕಿನ ಸೊಗಡಿನ ಅನಾವರಣ ಆಗಲಿದೆ. ಈ ವಿಶೇಷ ಸಮಾರಂಭದಲ್ಲಿ ಇದೇ ಪ್ರಥಮ ಬಾರಿ ರಾಜ್ಯದ ಮುಖ್ಯಮಂತ್ರಿಯವರು ಭಾಗವಹಿಸಲಿದ್ದು, ಅಂದು ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಅಲ್ಲದೆ ಕನ್ನಡ ಚಿತ್ರರಂಗದ, ಕುಂದಾಪುರ ಮೂಲದ ಸ್ಟಾರ್ ನಟ-ನಿರ್ದೇಶಕರು ಕೂಡ ಈ ಸಮಾರಂಭದಲ್ಲಿ ಭಾಗಿಯಾಗಲಿದ್ದು, ಈ ಕುರಿತಂತೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಹೆಚ್ಚಿನ ವಿವರಣೆ ನೀಡಲಾಗುವುದು ಎಂದು ವಿಶ್ವ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಜಿತ್ ಶೆಟ್ಟಿ ಉಳ್ತೂರು ತಿಳಿಸಿದ್ದಾರೆ.