ರಾಜ್ಯಗಳ ಬೊಕ್ಕಸಕ್ಕೆ ಶೇ. 15 ಆದಾಯ!: ಬಹುತೇಕ ರಾಜ್ಯಗಳ ಸ್ವಂತ ತೆರಿಗೆ ಆದಾಯದಲ್ಲಿ (ಓಟಿಆರ್) ಮದ್ಯದ ಮೇಲೆ ಹೇರುವ ಅಬಕಾರಿ ಸುಂಕವೇ ಶೇಕಡಾ 10ರಿಂದ 15ರಷ್ಟಿರುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ವರದಿಯೊಂದು ತಿಳಿಸಿದೆ. ಮಾರಾಟ ತೆರಿಗೆಯು (ಈಗ ಜಿಎಸ್ಟಿ) ರಾಜ್ಯಗಳ ಅತಿ ದೊಡ್ಡ ಆದಾಯ ಮೂಲವಾಗಿದ್ದರೆ ಅಬಕಾರಿ ಸುಂಕ ಎರಡು ಅಥವಾ ಮೂರನೇ ಸ್ಥಾನ ಗಳಿಸುತ್ತವೆ. ಈ ಕಾರಣಕ್ಕಾಗಿಯೇ ಮದ್ಯವನ್ನು ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿಡಬೇಕೆಂಬುದು ರಾಜ್ಯಗಳ ಬಯಕೆ.
ಗುಜರಾತ್, ಬಿಹಾರ ಅಪವಾದ: ಗುಜರಾತ್ ಮತ್ತು ಬಿಹಾರ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆದಾಯಕ್ಕೆ ಮದ್ಯ ಗಣನೀಯ ಕೊಡುಗೆ ನೀಡುತ್ತದೆ. ದೇಶದಲ್ಲಿ ಈ ಎರಡು ರಾಜ್ಯಗಳಲ್ಲಿ ಮದ್ಯ ನಿಷೇಧವಿದೆ. ಸಾಮಾನ್ಯವಾಗಿ, ಮದ್ಯ ತಯಾರಿಕೆ ಮತ್ತು ಮಾರಾಟದ ಮೇಲೆ ರಾಜ್ಯಗಳು ಅಬಕಾರಿ ಸುಂಕ ವಿಧಿಸುತ್ತವೆ. ತಮಿಳುನಾಡಿನಂಥ ಕೆಲವು ರಾಜ್ಯಗಳು ಮೌಲ್ಯಾಧಾರಿತ ತೆರಿಗೆಯನ್ನೂ (ವ್ಯಾಟ್) ವಿಧಿಸುತ್ತವೆ. ಆಮದು ಮಾಡಲಾದ ವಿದೇಶಿ ಮದ್ಯದ ಮೇಲೆ ರಾಜ್ಯಗಳು ವಿಶೇಷ ಶುಲ್ಕ, ಸಾಗಾಟ ಶುಲ್ಕ, ಲೇಬಲ್ ಮತ್ತು ಬ್ರಾಂಡ್ ನೋಂದಣಿ ಶುಲ್ಕ ಕೂಡ ವಿಧಿಸುತ್ತವೆ. ಉತ್ತರ ಪ್ರದೇಶದಂಥ ಕೆಲವು ರಾಜ್ಯಗಳು, ಬೀದಿ ದನಗಳ ನಿರ್ವಹಣೆ ಮುಂತಾದ ವಿಶೇಷ ಉದ್ದೇಶಗಳಿಗೆ ಹಣ ಸಂಗ್ರಹಿಸಲು ಮದ್ಯದ ಮೇಲೆ ‘ವಿಶೇಷ ಸುಂಕ’ ವಿಧಿಸಿವೆ.
ವಿಶೇಷ ಕರೊನಾ ಶುಲ್ಕ!: ದೆಹಲಿ ಸರ್ಕಾರ ಎಲ್ಲ ಬಗೆಯ ಮದ್ಯದ ಬೆಲೆಯನ್ನು ಶೇ. 70 ಏರಿಸಿದೆ. ಮದ್ಯದ ಮೇಲೆ ದೆಹಲಿ ಸರ್ಕಾರ ಹೇರಿದ ‘ವಿಶೇಷ ಕರೊನಾ ಶುಲ್ಕ’, ರಾಜ್ಯಗಳ ಆರ್ಥಿಕತೆಗಳಿಗೆ ಮದ್ಯ ಎಷ್ಟು ಮುಖ್ಯ ಎನ್ನುವುದನ್ನು ತೋರಿಸಿಕೊಟ್ಟಿದೆ. ಮದ್ಯ ತಯಾರಿಕೆ ಮತ್ತು ಮಾರಾಟ ರಾಜ್ಯಗಳ ಆದಾಯದ ಒಂದು ಪ್ರಮುಖ ಮೂಲ.
ಕರ್ನಾಟಕ 2ನೇ ರಾಂಕ್! : ರಾಜ್ಯಗಳ ಆದಾಯ ಸಂಗ್ರಹದ ಅಂಕಿಸಂಖ್ಯೆ ಕ್ರೋಡೀಕರಿಸುವಲ್ಲಿ ಸಮಯದ ವ್ಯತ್ಯಾಸವಿರುತ್ತದೆ. ಹೀಗಾಗಿ, 2018-19ರ ವರೆಗೆ ಮಾತ್ರ ಪೂರ್ಣ ವರ್ಷದ ಅಂಕಿಸಂಖ್ಯೆ ಲಭ್ಯವಿದೆ. ಅದರ ಆಧಾರದಲ್ಲಿ ಮದ್ಯದಿಂದ ಅತಿ ಹೆಚ್ಚು ಆದಾಯ ಗಳಿಸಿದ ಟಾಪ್ 5 ರಾಜ್ಯಗಳ ವಿವರ:
ಉತ್ತರ ಪ್ರದೇಶ - 25,100 ಕೋಟಿ ರೂ., ಕರ್ನಾಟಕ - 19,750 ಕೋಟಿ ರೂ. ಮಹಾರಾಷ್ಟ್ರ- 15,343 ಕೋಟಿ ರೂ. ಪಶ್ಚಿಮ ಬಂಗಾಳ - 10,554 ಕೋಟಿ ರೂ. ತೆಲಂಗಾಣ - 10,313 ಕೋಟಿ ರೂ.
ಉತ್ತರ ಪ್ರದೇಶ ಫಸ್ಟ್ !: ಕಳೆದ ಹಣಕಾಸು ವರ್ಷದಲ್ಲಿ ಉತ್ತರ ಪ್ರದೇಶ ಮದ್ಯದಿಂದ ಪ್ರತಿ ತಿಂಗಳು ಸರಾಸರಿ 2,500 ಕೋಟಿ ರೂಪಾಯಿ ಸಂಗ್ರಹಿಸಿದೆ. 2020-21 ಹಣಕಾಸು ವರ್ಷದಲ್ಲಿ ಇದು ಮಾಸಿಕ 3,000 ಕೋಟಿಗೆ ಏರುವ ಆಶಯವಿದೆ ಎಂದು ರಾಜ್ಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
2019-20ರಲ್ಲಿ 29 ರಾಜ್ಯಗಳು ಹಾಗೂ ದೆಹಲಿ, ಪುದುಚೇರಿ ಬಜೆಟ್ಗಳಲ್ಲಿನ ಒಟ್ಟು 1,75,501.42 ಕೋಟಿ ರೂಪಾಯಿ ಮದ್ಯದ ಮೇಲಿನ ಅಬಕಾರಿ ಸುಂಕದಿಂದಲೇ ಬಂದಿದೆ. 2018-19ರಲ್ಲಿ ಅವುಗಳು ಈ ಬಾಬತ್ತಿನಲ್ಲಿ ಸಂಗ್ರಹಿಸಿದ್ದು 1,50,657.95 ಕೋಟಿ ರೂಪಾಯಿ. 2018-19ರಲ್ಲಿ ಅಬಕಾರಿ ಸುಂಕದಿಂದ ರಾಜ್ಯಗಳು ಪ್ರತಿ ತಿಂಗಳು ಸಂಗ್ರಹಿಸಿದ ಸರಾಸರಿ ಮೊತ್ತ 12,500 ಕೋಟಿ ರೂ. ಇದು 2019-20ರಲ್ಲಿ 15,000 ಕೋಟಿಗೆ ಏರಿತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಇನ್ನೂ ಏರಿಕೆಯಾಗುವ ನಿರೀಕ್ಷೆಯಿದೆ.
ಕರ್ನಾಟಕದ ಆದಾಯ 3,700 ಕೋಟಿ ರೂಪಾಯಿ ಏರಿಕೆ: ಕರ್ನಾಟಕದಲ್ಲಿ ಈ ವರ್ಷ 22,700 ಕೋಟಿ ರೂ. ಅಬಕಾರಿ ಆದಾಯ ನಿರೀಕ್ಷಿಸಲಾಗಿತ್ತು. ಇದೀಗ ಶೇ.11 ಹೆಚ್ಚುವರಿ ತೆರಿಗೆ ನಿಗದಿ ಮಾಡಿದ್ದರಿಂದಾಗಿ 3700 ಕೋಟಿ ರೂ. ಆದಾಯ ಅಧಿಕವಾಗಬಹುದೆಂದು ಅಂದಾಜಿಸಲಾಗಿದೆ. ಒಟ್ಟಾರೆ 26,400 ಕೋಟಿ ರೂ.ಗಳ ಆದಾಯ ಗುರಿ ಹೊಂದಲಾಗಿದೆ.