ದೇಶದ ಎಲ್ಲೆಡೆ ಕರೊನಾ ಸೋಂಕು ತಂದಿರುವ ಸಂಕಷ್ಟ ದೂರ ವಾಗಲು ಇನ್ನೆಷ್ಟು ಕಾಲ ಬೇಕೋ ಭವಿಷ್ಯಕ್ಕೇ ಗೊತ್ತು. ಜನಜೀವನ ಎದುರಿಸುತ್ತಿರುವ ಎಲ್ಲ ತೊಂದರೆಗಳ ಹೊರತಾಗಿಯೂ, ನಿಸರ್ಗದಲ್ಲಿ ತೋರಿಬರುತ್ತಿರುವ ಕೆಲವು ವಿದ್ಯಮಾನಗಳು ಮಾತ್ರ ನಾಳೆಯ ಬದುಕಿನ ಕುರಿತು ಆಶಾವಾದಿಗಳಾಗುವಂತಿವೆ. ಮಲಿನವಾಗಿದ್ದ ನದಿಗಳು ಸ್ವಚ್ಛವಾಗುತ್ತಿವೆ; ನಗರಗಳ ವಾಯುಮಾಲಿನ್ಯ ತಗ್ಗುತ್ತಿದೆ. ಅಲ್ಲಲ್ಲಿ ಕಂಡು ಕೇಳರಿಯದ ವನ್ಯಪ್ರಾಣಿಗಳು ಗೋಚರಿಸುತ್ತಿವೆ! ಅಂದರೆ, ಇಷ್ಟು ಕಿರುಸಮಯದಲ್ಲಿಯೇ ಪ್ರಕೃತಿಗೆ ಅವಕಾಶ ನೀಡಿದರೆ ತನ್ನ ಲಯ ಕಾದುಕೊಳ್ಳುವ ಸ್ಥಿತಿಸ್ಥಾಪಕತ್ವ ಗುಣ ಅದಕ್ಕಿದೆ ಎಂದು ತೋರುತ್ತಿರುವಂತಿದೆ. ವೇಗದ ಅಭಿವೃದ್ಧಿ ಯುಗಕ್ಕೆ ಸಿಕ್ಕ ಆಧುನಿಕ ಸಮಾಜ ಹಿಂದೆ ತಿರುಗಿ ನೋಡುವುದಿಲ್ಲ ಎಂಬ ಭ್ರಮೆಯಲ್ಲಿದ್ದೆವು. ಆದರೆ, ದೇಶ-ಸಮಾಜಗಳು ಮನಸ್ಸು ಮಾಡಿದರೆ, ನೈಸರ್ಗಿಕ ಸಮತೋಲನ ಕಾಯ್ದು ಕೊಳ್ಳಬಲ್ಲ ಜೀವನವಿಧಾನಕ್ಕೆ ಮರಳಲು ಸಾಧ್ಯವಿದೆ ಎಂದು ನಿಸರ್ಗವು ಪಾಠ ಹೇಳುತ್ತಿರುವಂತಿದೆ, ಅಲ್ಲವೇ?
ಮೇ 22ರಂದು ಆಚರಿಸುತ್ತಿರುವ ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯ ಈ ವರ್ಷದ ಘೋಷವಾಕ್ಯ ಇದನ್ನೇ ಹೇಳುತ್ತಿದೆ. ‘ಆಧುನಿಕ ಸಮಾಜವು ಎದುರಿಸುತ್ತಿರುವ ಎಲ್ಲ ಬಿಕ್ಕಟ್ಟುಗಳಿಗೂ ಪರಿಹಾರ ಇರುವುದು ಪ್ರಕೃತಿಯಲ್ಲಿ ಮಾತ್ರ’ ಎಂದು. ಅಂದರೆ ನಾವಿಂದು ಎದುರಿಸುತ್ತಿರುವ ನೆರೆ-ಬರ, ಮಾಲಿನ್ಯ, ಕುಡಿಯುವ ನೀರಿಗೂ ಕೊರತೆ, ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗಗಳು- ಯಾವುದೇ ಸವಾಲನ್ನು ತೆಗೆದುಕೊಳ್ಳಿ. ಅಂತಿಮವಾದ ಹಾಗೂ ಶಾಶ್ವತವಾದ ಪರಿಹಾರ ನಿಸರ್ಗದ ನಿಯಮಗಳಿಗೆ ತಲೆ ಬಾಗಿದರೆ ಮಾತ್ರ ಎಂಬುದನ್ನು ಸಾರುತ್ತಿದೆ ಇದು. ಮೋಡಬಿತ್ತನೆ ತಂತ್ರಜ್ಞಾನ ಔದ್ಯೋಗಿಕ ಕ್ಷೇತ್ರದ ಸಾಧನೆ ಇರಬಹುದು. ಆದರೆ ಜನಜೀವನವನ್ನು ಪೋಶಿಸುವ ನೀರನ್ನು ಸಮಸ್ತರಿಗೆ ಪೂರೈಸಲು ಮುಂಗಾರು ಮಳೆಯೇ ಬೇಕಲ್ಲವೇ?
ನಮ್ಮ ಕಾಡು-ಕಣವೆ, ನದಿ-ಕೆರೆ, ಗೋಮಾಳ, ಗದ್ದೆ-ತೋಟಗಳಲ್ಲಿ ಇರುವ ಅಸಂಖ್ಯ ಬಗೆಯ ಸಸ್ಯ ಹಾಗೂ ಪ್ರಾಣಿ ವೈವಿಧ್ಯಗಳ ಮಹತ್ವವಾದರೂ ಎಂಥದೆಂದು ಎರಡು ಉದಾಹರಣೆಗಳ ಮೂಲಕ ನೋಡೋಣ.
ಮೊದಲನೆಯದು, ನಾಡಿನ ಕರಾವಳಿಯಲ್ಲಿ ತೀವ್ರವಾಗಿ ಕಂಡುಬರುತ್ತಿರುವ ಮತ್ಸ್ಯಕ್ಷಾಮ. ಕಳೆದೊಂದು ದಶಕದಿಂದ ಕರಾವಳಿಯ ಮೀನುಗಾರರಿಗೆ ಸಮುದ್ರದಲ್ಲಿ ದೊರಕುವ ಮೀನು ತಳಿಗಳ ವೈವಿಧ್ಯ ಮತ್ತು ಇಳುವರಿ ಕಡಿಮೆಯಾಗುತ್ತ ಸಾಗಿತ್ತು. ಕಳೆದ ವರ್ಷದಿಂದ ಇದು ವಿಕೋಪಕ್ಕೆ ತಿರುಗಿ, ಸಮುದ್ರದಲ್ಲೇ ಮೀನಿಗೆ ಬರ ಬರುತ್ತಿದೆ! ಸಂಶೋಧನೆಗಳು ಈ ವಿದ್ಯಮಾನಕ್ಕೆ ಕಾರಣಗಳನ್ನು ಕಂಡುಹಿಡಿದಿವೆ. ಬೃಹತ್ ಯಾಂತ್ರೀಕೃತ ದೋಣಿಗಳನ್ನು ಬಳಸುವ ನವ ಮತ್ಸ್ಯ ಉದ್ಯಮಗಳು, ಮೀನಿನ ವಂಶಾಭಿವೃದ್ಧಿ ವೇಗವನ್ನೂ ಮೀರಿ ಮೀನನ್ನು ಹಿಡಿದು ತ್ವರಿತವಾಗಿ ಹಣ ಗಳಿಸಲು ಆರಂಭಿಸಿದ್ದು ಮೊದಲ ಕಾರಣ. ಇನ್ನೊಂದು ಕಾರಣವೆಂದರೆ, ಸಮುದ್ರಜೀವಿಗಳಿಗೆ ಸದಾ ಪೋಷಕಾಂಶಭರಿತ ಸಿಹಿನೀರನ್ನು ಉಣಿಸುವ ಸಹ್ಯಾದ್ರಿ ಘಟ್ಟದಿಂದ ಹರಿದು ಬರುವ ಕಾಳಿ, ಗಂಗಾವಳಿ, ಶರಾವತಿ, ವಾರಾಹಿ, ನೇತ್ರಾವತಿ ನದಿಗಳ ಕಣಿವೆ ನಾಶವಾಗಿ, ಅವುಗಳ ನಿರಂತರ ಹರಿವೇ ಕಡಿಮೆಯಾಗಿರುವುದು. ‘ಪಶ್ಚಿಮಘಟ್ಟದಲ್ಲಿನ ವಿವೇಕಹೀನ ಬೃಹತ್ ಅಭಿವೃದ್ಧಿ ಯೋಜನೆಗಳು ಹಾಗೂ ಮೀನುಗಾರಿಕೆಯ ಮಿತಿಯಿಲ್ಲದ ಖಾಸಗೀಕರಣ-ಇವೆರಡೂ ಸೇರಿ ನಾಡಿನ ಮೀನುಗಾರರನ್ನು ಬೀದಿಗೆ ತಳ್ಳುತ್ತಿವೆ...’ ಎನ್ನುತ್ತಾರೆ ಈ ಕುರಿತು ವಿವರವಾದ ಅಧ್ಯಯನ ಮಾಡಿರುವ ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಶುಭಸುದ್ದಿ: ಶೀಘ್ರವೇ ಏಕಕಾಲದಲ್ಲಿ 2 ಪದವಿ ವ್ಯಾಸಂಗ ಮಾಡುವ ಅವಕಾಶ ನಿಮ್ಮದಾಗಲಿದೆ...
ಎರಡನೆಯ ಉದಾಹರಣೆಯೆಂದರೆ, ವರ್ಷದಿಂದ ವರ್ಷಕ್ಕೆ ಮಲೆನಾಡು ಹಾಗೂ ಕರಾವಳಿಯಲ್ಲಿ ಹೆಚ್ಚುತ್ತಿರುವ ಭೂಕುಸಿತ. ಕಳೆದ ಮೂರು ವರ್ಷಗಳಲ್ಲಂತೂ ಹತ್ತಾರು ಬೃಹತ್ ಹಾಗೂ ಸಾವಿರಾರು ಸಣ್ಣ ಭೂಕುಸಿತಗಳು ಸಂಭವಿಸಿವೆ. ಮೇಲ್ನೋಟಕ್ಕೆ ಇದು ಭಾರಿ ಮಳೆಯಿಂದಾದ ಪರಿಣಾಮ ಎಂದು ತೋರಿದರೂ, ಹಿನ್ನೆಲೆಯಲ್ಲಿ ಕಾರಣಗಳು ಹಲವಾರಿವೆ ಎಂದು ತಜ್ಞರು ಗುರುತಿಸಿದ್ದಾರೆ. ಅವನ್ನು ಪ್ರಮುಖವಾಗಿ ಎರಡು ಗುಂಪುಗಳಾಗಿ ವಿಂಗಡಿಸಬಹುದು. ನೂರಾರು ಜಾತಿಯ ಮರ, ಗಿಡ, ಬಳ್ಳಿ ಪ್ರಬೇಧಗಳಿಂದ ಕೂಡಿದ ಪಶ್ಚಿಮಘಟ್ಟದ ಮಳೆಕಾಡನ್ನು ಕಡಿದು ಏಕಸಸ್ಯ ನೆಡುತೋಪಿಗೆ ದಾರಿ ಮಾಡಿಕೊಟ್ಟಿದ್ದು ಮೊದಲಿನದು. ವಿವಿಧ ಸಸ್ಯಗಳ ಬೇರಿನ ಸ್ವರೂಪ ಮತ್ತು ವಿಸ್ತರಣಾ ವೈವಿಧ್ಯದಿಂದಾಗಿ, ನೈಸರ್ಗಿಕ ಕಾಡಿನ ಮಣ್ಣು ಗಟ್ಟಿಯಾಗಿ ಬೆಸೆದುಕೊಂಡಿರುತ್ತದೆ. ಆದರೆ, ಕೃತಕ ನೆಡುತೋಪುಗಳ ಏಕ ಪ್ರಭೇದ ಬೇರುಗಳು ಮಣ್ಣನ್ನು ಹಿಡಿದಿಡಲು ಹಾಗೂ ಮಳೆನೀರನ್ನು ಇಂಗಿಸಲು ಸೋಲುತ್ತಿವೆ.
ಭೂಕುಸಿತವಾಗಲು ಇನ್ನೊಂದು ಬಗೆಯ ಕಾರಣಗಳೆಂದರೆ, ಪಶ್ಚಿಮಘಟ್ಟದಲ್ಲಿ ನೆಲಬಳಕೆಗೊಂದು ನೀತಿಯೇ ಇಲ್ಲದಿರುವುದು. ಬೃಹತ್ ಯಂತ್ರಗಳನ್ನು ಬಳಸಿ ರಾತ್ರೋರಾತ್ರಿ ಗುಡ್ಡ ಕಡಿದು, ಕಣಿವೆ ಮುಚ್ಚಿ, ರೆಸಾರ್ಟ್ ನಿರ್ವಿುಸಿಯೋ ಅಥವಾ ಹೆದ್ದಾರಿಯನ್ನು ವಿಸ್ತರಿಸಿಯೋ ಅಭಿವೃದ್ಧಿಯ ಭ್ರಮೆ ಮೂಡಿಸುತ್ತಿರುವುದು. ಸಡಿಲ ಮಣ್ಣಿನ ಸಹ್ಯಾದ್ರಿಯ ಹಸಿರು ರಕ್ಷಣಾ ಕವಚವನ್ನು ಕತ್ತಿರಿಸುತ್ತಿದ್ದು ಆಧುನಿಕ ‘ಅಭಿವೃದ್ಧಿ ಉದ್ಯಮ’, ಕೋಟ್ಯಂತರ ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆ ಮಾಡುತ್ತಿದೆ!
ಜೀವವೈವಿಧ್ಯ ದಿನಾಚರಣೆಯ ಸಂದರ್ಭವು, ನಾವು ಹೊರಟಿರುವ ಈ ಮಾರ್ಗ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕಾದ ಕಾಲ. ನಾಗರಿಕರೆಲ್ಲರ ಸಹಜ ಅವಶ್ಯಕತೆಗಳನ್ನು ಸೂಕ್ತ ಅಭಿವೃದ್ಧಿ ವಿಧಾನಗಳ ಮೂಲಕ ಪೂರೈಸುವುದು ಸರ್ಕಾರದ ಕರ್ತವ್ಯ. ಆದರೆ, ಇದರ ಸೋಗಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಖಾಸಗಿ ಆಸ್ತಿಯನ್ನಾಗಿ ಪರಿವರ್ತಿಸಿಕೊಳ್ಳಲು ಮುಕ್ತ ಅವಕಾಶ ನೀಡುವಂತಾಗಬಾರದಲ್ಲವೇ? ಅಭಿವೃದ್ಧಿಯ ನೈಜಲಾಭ ಎಲ್ಲರಿಗೂ ಹಾಗೂ ಮತ್ತು ದೀರ್ಘಕಾಲಕ್ಕೂ ಬರುವಂತಾಗಲು- ಪ್ರಕೃತಿಯೊಳಗಣ ಅಸಂಖ್ಯ ಸಸ್ಯ-ಪ್ರಾಣಿ ಸಂಕುಲಗಳನ್ನು ಸಂರಕ್ಷಿಸಿಕೊಳ್ಳುವುದು ಅಗತ್ಯ ಎಂಬುದನ್ನು ವರ್ತಮಾನದ ಆಡಳಿತ ಜಗತ್ತು ಮನಸಾರೆ ಒಪ್ಪಿಕೊಳ್ಳಬೇಕಿದೆ.
(ಲೇಖಕರು ಸಂರಕ್ಷಣಾ ಜೀವಶಾಸ್ತ್ರಜ್ಞ)